ADVERTISEMENT

ಬಾಕ್ಸಿಂಗ್: ಫೈನಲ್ ಬೌಟ್‌ನಿಂದ ಸಾಕ್ಷಿ ಔಟ್‌!

ಕಜಕಸ್ತಾನ ತಂಡದಿಂದ ತೀರ್ಪು ಮರುಪರಿಶೀಲನೆ; ದೀನಾ ಜೊಲೊಮನ್ ಪ್ರಶಸ್ತಿ ಸುತ್ತಿಗೆ

ಪಿಟಿಐ
Published 28 ಮೇ 2021, 13:34 IST
Last Updated 28 ಮೇ 2021, 13:34 IST
ಸಾಕ್ಷಿ ಚೌಧರಿ (ಬಲ) ಅವರನ್ನು ವಿಜಯಿ ಎಂದು ಘೋಷಿಸಿದ್ದ ಸಂದರ್ಭ –ಟ್ವಿಟರ್ ಚಿತ್ರ
ಸಾಕ್ಷಿ ಚೌಧರಿ (ಬಲ) ಅವರನ್ನು ವಿಜಯಿ ಎಂದು ಘೋಷಿಸಿದ್ದ ಸಂದರ್ಭ –ಟ್ವಿಟರ್ ಚಿತ್ರ   

ದುಬೈ: ಎದುರಾಳಿ ತಂಡದವರು ತೀರ್ಪು ಮರುಪರಿಶೀಲನೆಗೆ ಮೊರೆ ಹೋದ ಕಾರಣ ಭಾರತದ ಸಾಕ್ಷಿ ಚೌಧರಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫೈನಲ್‌ನಿಂದ ಹೊರಬಿದ್ದಾರೆ. ಗುರುವಾರ ರಾತ್ರಿ ನಡೆದ 54 ಕೆಜಿ ವಿಭಾಗದ ಸೆಮಿಫೈನಲ್ ಬೌಟ್‌ನಲ್ಲಿ ಕಜಕಸ್ತಾನದ ದೀನಾ ಜೊಲೊಮನ್ ಅವರನ್ನು ಸಾಕ್ಷಿ 3–2ರಲ್ಲಿ ಮಣಿಸಿದ್ದರು.

ಸ್ಪರ್ಧೆ ಮುಗಿದ ನಂತರ ಕಜಕಸ್ತಾನ ತಂಡದವರು ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ಏಷ್ಯನ್ ಬಾಕ್ಸಿಂಗ್ ಕಾನ್ಫೆಡರೇಷನ್‌ನವರು ದೀನಾ ಜೊಲೊಮನ್ ವಿಜೇತೆ ಎಂದು ಘೋಷಿಸಿದರು.

ಮೂರನೇ ಸುತ್ತಿನಲ್ಲಿ ದೀನಾ ಉತ್ತಮ ಸಾಮರ್ಥ್ಯ ತೋರಿದ್ದರೂ ಪಾಯಿಂಟ್‌ಗಳು ಭಾರತದ ಬಾಕ್ಸರ್‌ ಪಾಲಾಗಿದ್ದವು ಎಂದು ದೂರಿ ಕಜಕಸ್ತಾನ ತಂಡ ಮರುಶೀಲನೆಗೆ ಕೋರಿತ್ತು. ಅವರ ಅನಿಸಿಕೆ ಸರಿಯಾಗಿದೆ ಎಂದು ನಿರ್ಣಾಯಕರು ತಿಳಿಸಿದರು.

ADVERTISEMENT

ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) 2019ರಲ್ಲಿ ಬೌಟ್ ರಿವ್ಯೂ ಪದ್ಧತಿಯನ್ನು ಜಾರಿಗೆ ತಂದಿತ್ತು. 5–0 ಅಥವಾ 4–1ರಲ್ಲಿ ಫಲಿತಾಂಶ ಬಂದರೆ ಈ ಪದ್ಧತಿ ಅನ್ವಯವಾಗುವುದಿಲ್ಲ.

ಸೋತ ಬಾಕ್ಸರ್‌ ತಂಡದ ಮ್ಯಾನೇಜರ್ ಅಥವಾ ಕೋಚ್‌ ಬೌಟ್ ಮುಗಿದ 15 ನಿಮಿಷಗಳ ಒಳಗೆ ಮನವಿ ಸಲ್ಲಿಸಬಹುದು. ಮುಂದಿನ 30 ನಿಮಿಷಗಳ ಒಳಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.