ಗುಕೇಶ್
ಸೇಂಟ್ ಲೂಯಿ (ಅಮೆರಿಕ): ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಸಿಂಕ್ವೆಫೀಲ್ಡ್ ಕಪ್ ಚೆಸ್ ಟೂರ್ನಿಯ ಐದನೇ ಸುತ್ತಿನಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಜೊತೆ ಸುಲಭ ಡ್ರಾ ಮಾಡಿಕೊಂಡರು. ಆದರೆ ವಿಶ್ವ ಚಾಂಪಿಉನ್ ಡಿ.ಗುಕೇಶ್, ಪೋಲೆಂಡ್‌ನ ಡೂಡಾ ಯಾನ್ ಕ್ರಿಸ್ಟೋಫ್ ವಿರುದ್ಧ ಡ್ರಾ ಮಾಡಿಕೊಳ್ಳುವ ಮೊದಲು ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು.
ಶುಕ್ರವಾರ ಐದನೇ ಸುತ್ತಿನಲ್ಲಿ ಎಲ್ಲಾ ಐದೂ ಪಂದ್ಯಗಳು ಡ್ರಾ ಆದವು. ಒಂಬತ್ತು ಸುತ್ತುಗಳ ಈ ಟೂರ್ನಿಯು ಅರ್ಧದಷ್ಟು ಮುಗಿದಿದ್ದು, ಫ್ಯಾಬಿಯಾನೊ ಕರುವಾನ ಅವರು 3.5 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಐದನೇ ಸುತ್ತಿನಲ್ಲಿ ಅಮೆರಿಕದ ವೆಸ್ಲಿ ಸೊ ಜೊತೆ ಡ್ರಾ ಮಾಡಿಕೊಂಡರು.
ಪ್ರಜ್ಞಾನಂದ ಮತ್ತು ಲಗ್ರಾವ್ ನಡುವಣ ಪಂದ್ಯ ಕೇವಲ 26 ನಡೆಗಳಲ್ಲಿ ಡ್ರಾ ಆಯಿತು. ಗುಕೇಶ್ ಮತ್ತು ಡೂಡಾ ಪಂದ್ಯ 45 ನಡೆಗಳವರೆಗೆ ನಡೆಯಿತು.
ಅಮೆರಿಕದ ಸಾಮ್ಯುಯೆಲ್ ಸೆವಿಯನ್ ಅವರು ಉತ್ತಮ ಪ್ರದರ್ಶನ ಮುಂದುವರಿಸಿ ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಜೊತೆ ಡ್ರಾ ಮಾಡಿಕೊಂಡರು. ಅಮೆರಿಕದ ಇನ್ನೊಬ್ಬ ಆಟಗಾರ ಲೆವೋನ್ ಅರೋನಿಯನ್, ಫ್ರಾನ್ಸ್‌ನ ಅಲಿರೇಜಾ ಫಿರೋಜ ಜೊತೆ ಪಾಯಿಂಟ್ ಹಂಚಿಕೊಂಡರು.
ಪ್ರಜ್ಞಾನಂದ ಮತ್ತು ಅರೋನಿಯನ್ ತಲಾ 3 ಪಾಯಿಂಟ್ಸ್ ಸಂಗ್ರಹಿಸಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಐದು ಮಂದಿ– ಗುಕೇಶ್, ಫಿರೋಜ, ವೆಸ್ಲಿ ಸೊ, ಸೆವಿಯನ್ ಮತ್ತು ವೇಷಿಯರ್ ಲಗ್ರಾವ್ ತಲಾ 2.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಡುಡಾ ಎರಡು ಪಾಯಿಂಟ್ ಮತ್ತು ನದಿರ್ಬೆಕ್ ಒಂದು ಪಾಯಿಂಟ್ಸ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.