ಪ್ರಜ್ಞಾನಂದ
ಸೇಂಟ್ ಲೂಯಿ: ವೈಲ್ಡ್ ಕಾರ್ಡ್ ಪಡೆದ ಏಕೈಕ ಆಟಗಾರ ಸಾಮ್ಯುಯೆಲ್ ಸೆವಿಯನ್ ಅವರು ಸಿಂಕ್ವೆಫೀಲ್ಡ್ ಕಪ್ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಜೊತೆ ಡ್ರಾ ಮಾಡಿಕೊಂಡರು.
ಭಾರತದ ಇನ್ನೊಬ್ಬ ಆಟಗಾರ ಆರ್.ಪ್ರಜ್ಞಾನಂದ ಅವರೂ ಬುಧವಾರ ಅರ್ಧ ಪಾಯಿಂಟ್ ಪಡೆದರು. ಅವರು ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಜೊತೆ ಡ್ರಾ ಮಾಡಿಕೊಂಡರು.
ಮೂರು ಸುತ್ತುಗಳ ನಂತರ ಎರಡು ಪಾಯಿಂಟ್ಸ್ ಪಡೆದಿರುವ ಪ್ರಜ್ಞಾನಂದ, ಅಮೆರಿಕದ ಫ್ಯಾಬಿಯಾನೊ ಕರುವಾನ, ಲೆವೋನ್ ಅರೋನಿಯನ್ ಜೊತೆ ಮುನ್ನಡೆ ಹಂಚಿಕೊಂಡಿದ್ದಾರೆ. ಒಟ್ಟು 10 ಆಟಗಾರರು 3.26 ಕೋಟಿ ಬಹುಮಾನದ ಟೂರ್ನಿಯ ಕಣದಲ್ಲಿದ್ದಾರೆ.
ಮೊದಲ ಸುತ್ತಿನಲ್ಲಿ ಪ್ರಜ್ಞಾನಂದ ಅವರಿಗೆ ಸೋತಿದ್ದ ಗುಕೇಶ್ 1.5 ಪಾಯಿಂಟ್ಸ್ ಗಳಿಸಿದ್ದಾರೆ. ಅಲಿರೇಜಾ, ವೆಸ್ಲಿ ಸೊ, ಲಗ್ರಾವ್, ಸೇವಿಯನ್ ಸಹ ಇಷ್ಟೇ ಪಾಯಿಂಟ್ಸ್ ಗಳಿಸಿದ್ದಾರೆ.
ಕರುವಾನಾ ಮೂರನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲಿರೇಜಾ ಫಿರೋಜ ಅವರಿಗೆ ಮೊದಲ ಸೋಲು ಕಾಣಿಸಿದರು. ಅರೋನಿಯನ್ ಅವರು ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಜೊತೆ ಡ್ರಾ ಮಾಡಿಕೊಂಡರೆ, ಅಮೆರಿಕದ ವೆಸ್ಲಿ ಸೊ, ಪೋಲೆಂಡ್‌ನ ಡೂಡಾ ಯಾನ್ ಕ್ರಿಸ್ಟೋಫ್ ಅವರ ಜೊತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು.
ಇನ್ನು ಆರು ಸುತ್ತುಗಳು ಉಳಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.