ADVERTISEMENT

ಸಿಂಕ್‌ಫೀಲ್ಡ್‌ ಕ‍ಪ್‌: ಪ್ರಜ್ಞಾನಂದ ಎದುರು ಸೋತ ಗುಕೇಶ್‌

ಲೈವ್ ರೇಟಿಂಗ್‌ನಲ್ಲಿ ಮೂರನೇ ಕ್ರಮಾಂಕಕ್ಕೆ

ಪಿಟಿಐ
Published 19 ಆಗಸ್ಟ್ 2025, 16:21 IST
Last Updated 19 ಆಗಸ್ಟ್ 2025, 16:21 IST
ಪ್ರಜ್ಞಾನಂದ
ಪ್ರಜ್ಞಾನಂದ   

ಸೇಂಟ್‌ ಲೂಯಿ, (ಅಮೆರಿಕ): ಗ್ರ್ಯಾಂಡ್‌ಮಾಸ್ಟರ್‌ ಆರ್.ಪ್ರಜ್ಞಾನಂದ ಅವರು ಸಿಂಕ್‌ಫೀಲ್ಡ್‌ ಕಪ್‌ ಚೆಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್‌ ಅವರನ್ನು ಸೋಲಿಸಿದರು. ಇದರೊಂದಿಗೆ ಫಿಡೆ ಲೈವ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅವರು ಮೂರನೇ ಸ್ಥಾನಕ್ಕೇರಿದರು.

ಅಮೋಘ ಲಯದಲ್ಲಿರುವ ಅಮೆರಿಕದ ಆಟಗಾರ ಲೆವೋನ್ ಅರೋನಿಯನ್‌ ಸೋಮವಾರ ನಡೆದ ಮೊದಲ ಸುತ್ತಿನಲ್ಲಿ ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಅವರನ್ನು  ಮಣಿಸಿದರು. 

ಸುಮಾರು ₹3 ಕೋಟಿ ಬಹುಮಾನದ ಈ ಟೂರ್ನಿ ಒಟ್ಟು 9 ಸುತ್ತುಗಳನ್ನು ಒಳಗೊಂಡಿದೆ.

ADVERTISEMENT

‘ಆರಂಭದಿಂದಲೇ ಗುಕೇಶ್‌ ಎಂದಿನ ಲಹರಿಯಲ್ಲಿ ಆಡಿದಂತೆ ಕಾಣಲಿಲ್ಲ. ಎಂಡ್‌ಗೇಮ್‌ ಅವರಿಗೆ ಸಮಾಧಾನದ ರೀತಿಯಲ್ಲಿರಲಿಲ್ಲ’ ಎಂದು ಟೂರ್ನಿಯಲ್ಲಿ ಶುಭಾರಂಭ ಮಾಡಿದ ಬಳಿಕ ಪ್ರಜ್ಞಾನಂದ ಪ್ರತಿಕ್ರಿಯಿಸಿದರು. ಅವರು 36 ನಡೆಗಳಲ್ಲಿ ಜಯಗಳಿಸಿದರು.

ಈ ಗೆಲುವಿನಿಂದ ಪ್ರಜ್ಞಾನಂದ ಮತ್ತು ಗುಕೇಶ್‌ ಕ್ಲಾಸಿಕಲ್‌ ಚೆಸ್‌ ಮುಖಾಮುಖಿಯಲ್ಲಿ ಸಮಬಲದ ಸಾಧಿಸಿದ್ದರು. ಇಬ್ಬರೂ ಆರು ಬಾರಿ ಎದುರಾಗಿದ್ದು ತಲಾ ಮೂರರಲ್ಲಿ ಜಯಗಳಿಸಿದ್ದಾರೆ.

ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನ ಅವರು ಪೋಲೆಂಡ್‌ನ ಡುಡಾ ಯಾನ್– ಕ್ರಿಸ್ಟೋಫ್ ಜೊತೆ ಡ್ರಾ ಮಾಡಿಕೊಂಡರು. ವೈಲ್ಡ್‌ ಕಾರ್ಡ್ ಪ್ರವೇಶ ಪಡೆದ ಸಾಮುಯೆಲ್‌ ಸಾವಿಯಾನ್, ಸ್ವದೇಶದ ವೆಸ್ಲಿ ಸೊ ಜೊತೆ ಡ್ರಾ ಮಾಡಿಕೊಂಡರು. ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್‌ ಮತ್ತು ಅದೇ ದೇಶದ ಅಲಿರೇಜಾ ಫೀರೋಜ ನಡುವಣ ಪಂದ್ಯವೂ ಡ್ರಾ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.