ಸ್ನೊಬೋರ್ಡಿಂಗ್
(ರಾಯಿಟರ್ಸ್ ಪ್ರಾತಿನಿಧಿಕ ಚಿತ್ರ)
ನವದೆಹಲಿ: ಇಟಲಿಯ ಟ್ಯೂರಿನ್‌ನಲ್ಲಿ ನಡೆಯುತ್ತಿರುವ ವಿಶೇಷ ಒಲಿಂಪಿಕ್ಸ್ ಚಳಿಗಾಲದ ವಿಶ್ವ ಕ್ರೀಡಾಕೂಟದ (Special Olympics World Winter Games) ಎರಡನೇ ದಿನದಲ್ಲಿ ಭಾರತೀಯ ಸ್ಪರ್ಧಾಳುಗಳು ತಲಾ ಎರಡು ಚಿನ್ನ ಹಾಗೂ ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಆ ಮೂಲಕ ಒಟ್ಟು ಪದಕಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಸ್ನೊಬೋರ್ಡಿಂಗ್‌ನಲ್ಲಿ ಮೊದಲ ದಿನ ನಾಲ್ಕು ಪದಕಗಳನ್ನು ಗೆದ್ದಿದ್ದ ಭಾರತೀಯ ಕ್ರೀಡಾಪಟುಗಳು, ಎರಡನೇ ದಿನದಲ್ಲೂ ಮತ್ತೆರಡು ಪದಕಗಳನ್ನು ಜಯಿಸಿದ್ದಾರೆ.
Novice Slalom ಫೈನಲ್‌ನಲ್ಲಿ ಭಾರ್ತಿ (ಡಿವಿಷನ್ ಎಫ್25) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಆ ಮೂಲಕ ಭಾರ್ತಿ ಕೂಟದಲ್ಲಿ ಎರಡನೇ ಚಿನ್ನದ ಪದಕ ಗೆದ್ದಿದ್ದಾರೆ.
ಇದೇ ವಿಭಾಗದಲ್ಲಿ ಹರ್ಷೀತಾ ಠಾಕೂರ್ (ಡಿವಿಷನ್ ಎಫ್26) ಕಂಚಿನ ಪದಕ ಜಯಿಸಿದ್ದಾರೆ. ಮೊದಲ ದಿನ ಹರ್ಷೀತಾ ಬೆಳ್ಳಿ ಪದಕ ಜಯಿಸಿದ್ದರು.
ಆಲ್ಪೈನ್ ಸ್ಕೀಯಿಂಗ್ ವಿಭಾಗದಲ್ಲಿ ಭಾರತೀಯ ಕ್ರೀಡಾಪಟುಗಳು ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.
Intermediate Giant Slalom ಫೈನಲ್‌ನಲ್ಲಿ ನಿರ್ಮಲಾ ದೇವಿ (ಡಿವಿಷನ್ ಎಫ್06) ಚಿನ್ನ ಹಾಗೂ ರಾಧಾ ದೇವಿ (ಡಿವಿಷನ್ ಎಫ್01) ಬೆಳ್ಳಿ ಪದಕ ಗೆದ್ದಿದ್ದಾರೆ.
ಬಳಿಕ Novice Giant Slalom ಫೈನಲ್‌ನಲ್ಲಿ ಅಭಿಷೇಕ್ ಕುಮಾರ್ (ಡಿವಿಷನ್ ಎಂ02) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ವಿಶೇಷಚೇತನರ ವಿಶ್ವ ಚಳಿಗಾಲದ ಒಲಿಂಪಿಕ್ ಕ್ರೀಡೆಯಲ್ಲಿ ಒಟ್ಟು ಎಂಟು ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಈ ಪೈಕಿ ಭಾರತವು ಆರು ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದೆ. ಸ್ನೊಬೋರ್ಡಿಂಗ್, ಸ್ನೊಶೂಯಿಂಗ್, ಆಲ್ಪೈನ್ ಸ್ಕೀಯಿಂಗ್, ಸ್ಪೀಡ್ ಸ್ಕೇಟಿಂಗ್, ಫ್ಲೋರ್‌ಬಾಲ್ ಮತ್ತು ಕ್ರಾಸ್ ಕಂಟ್ರಿ ಸ್ಕೀಯಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.