ADVERTISEMENT

Tokyo Olympics: ಸೆಮಿಫೈನಲ್‌ನಲ್ಲಿ ಸೋತು ಕಂಚು ಗೆದ್ದ ಬಾಕ್ಸರ್ ಲವ್ಲಿನಾ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 6:15 IST
Last Updated 4 ಆಗಸ್ಟ್ 2021, 6:15 IST
ಲವ್ಲಿನಾ ಬೋರ್ಗೊಹೈನ್ (ಬಲಭಾಗ)
ಲವ್ಲಿನಾ ಬೋರ್ಗೊಹೈನ್ (ಬಲಭಾಗ)   

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸುವ ಮೂಲಕ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.

ಈ ಮೂಲಕ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದಿರುವ ಪದಕಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಮಹಿಳಾ ಬಾಕ್ಸಿಂಗ್‌ನ 69 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಲವ್ಲಿನಾ, ಎದುರಾಳಿ ಅಗ್ರ ಶ್ರೇಯಾಂಕಿತೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ 0-5ರಿಂದಸೋಲು ಅನುಭವಿಸಿದರು.

ಆಗಲೇ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿರುವ ಲವ್ಲಿನಾ, ಚಿನ್ನದ ಪದಕ ಗುರಿಯನ್ನಿರಿಸಿದ್ದರು. ಆದರೆ ಅಂತಿಮ ನಾಲ್ಕರ ಘಟ್ಟದಲ್ಲಿ ಎಡವಿದ್ದಾರೆ.

ಹಾಗಿದ್ದರೂ ಮಾಜಿ ಬಾಕ್ಸರ್ ವಿಜೇಂದರ್ ಸಿಂಗ್ ಮತ್ತು ಎಂ.ಸಿ.ಮೇರಿ ಕೋಮ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.ಈ ಹಿಂದೆ 2008ರಲ್ಲಿ ವಿಜೇಂದರ್ ಹಾಗೂ 2012ರಲ್ಲಿ ಮೇರಿ ಕೋಮ್ ಕಂಚಿನ ಪದಕ ಗೆದಿದ್ದರು.

ಲವ್ಲಿನಾ ಬೋರ್ಗೊಹೈನ್ ಕಂಚಿನ ಪದಕದ ಹಾದಿ ಇಂತಿದೆ:
ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಅಪೆಜ್ ನಡೈನ್ ವಿರುದ್ಧ 3–2ರಲ್ಲಿ ಗೆಲುವು.
ಕ್ವಾರ್ಟರ್ ಫೈನಲ್‌ನಲ್ಲಿ ಚೀನಾ ತೈಪೆಯ ಚೆನ್‌ ನೀನ್ ಚಿನ್ ವಿರುದ್ಧ 4–1ರಲ್ಲಿ ಜಯ
ಸೆಮಿಫೈನಲ್‌ನಲ್ಲಿ ಸುರ್ಮೆನೆಲಿ ಬುಸೆನಜ್‌ ವಿರುದ್ಧ 0-5ರಲ್ಲಿ ಸೋಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.