ADVERTISEMENT

Tokyo Olympics | ನಂಬರ್ ಒನ್ ಜೋಡಿಗೆ ಚಿರಾಗ್‌–ಸಾತ್ವಿಕ್ ‘ಚಿತ್’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2021, 19:10 IST
Last Updated 26 ಜುಲೈ 2021, 19:10 IST
ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ
ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ   

ಟೋಕಿಯೊ: ವಿಶ್ವ ಕ್ರಮಾಂಕದಲ್ಲಿ ಮೊದಲನೇ ಸ್ಥಾದಲ್ಲಿರುವ ಜೋಡಿಯ ವೇಗ ಮತ್ತು ತಂತ್ರಗಳು ಭಾರತ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಅವರನ್ನು ಕಂಗೆಡಿಸಿದವು. ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನ ಪುರುಷರ ಡಬಲ್ಸ್ ವಿಭಾಗದ ಎರಡನೇ ಪಂದ್ಯದಲ್ಲಿ ಚಿರಾಗ್–ಸಾತ್ವಿಕ್ ನೇರ ಗೇಮ್‌ಗಳಿಂದ ಸೋತರು.

ಸೋಮವಾರ ನಡೆದ ‘ಎ’ ಗುಂಪಿನ ಎರಡನೇ ಸುತ್ತಿನ ಪಂದ್ಯದಲ್ಲಿ ಇಂಡೊನೇಷ್ಯಾದ ಮಾರ್ಕಸ್ ಜಿಡಿಯಾನ್ ಫೆರ್ನಾಲ್ಡಿ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಭಾರತದ ಆಟಗಾರರನ್ನು 21–13, 21–12ರಲ್ಲಿ ಮಣಿಸಿದರು. ಈ ಮೂಲಕ ಚಿರಾಗ್‌–ಸಾತ್ವಿಕ್ ಎದುರು ಈ ವರೆಗೆ ಆಡಿದ ಎಲ್ಲ ಒಂಬತ್ತು ಪಂದ್ಯಗಳನ್ನೂ ಗೆದ್ದ ಸಾಧನೆ ಮಾಡಿದರು.

ಸೋಮವಾರದ ಪಂದ್ಯದೊಂದಿಗೆ ಇಂಡೊನೇಷ್ಯಾ ಜೋಡಿ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸಿತು. ಭಾರತದ ಜೋಡಿ ಎರಡನೇ ಸ್ಥಾನದಲ್ಲಿದ್ದು ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಬೆನ್ ಲೇನ್ ಮತ್ತು ಸೀನ್ ವೆಂಡಿ ವಿರುದ್ಧ ಸೆಣಸಲಿದ್ದಾರೆ.

ADVERTISEMENT

ಪಂದ್ಯವು ಆರಂಭದಲ್ಲಿ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಲಘು ರ‍್ಯಾಲಿಗಳ ಮೂಲಕ ಪಾಯಿಂಟ್‌ಗಳನ್ನು ಗಳಿಸುತ್ತ ಸಾಗಿದ ಉಭಯ ಜೋಡಿ ಒಂದು ಹಂತದಲ್ಲಿ 6–6ರ ಸಮಬಲ ಸಾಧಿಸಿತ್ತು. ನಂತರ ಸತತ ಐದು ಪಾಯಿಂಟ್‌ಗಳನ್ನು ಕಲೆ ಹಾಕಿದ ಮಾರ್ಕಸ್ ಮತ್ತು ಕೆವಿನ್ ವೇಗವಾಗಿ ಮುನ್ನುಗ್ಗಿದರು. 9–13ರ ಹಿನ್ನಡೆಯಲ್ಲಿದ್ದಾಗ ಚಿರಾಗ್ ಕಾಲಿಗೆ ಗಾಯಗೊಂಡು ಚಿಕಿತ್ಸೆ ಪಡೆದರು.

ಎರಡನೇ ಗೇಮ್‌ನ ಆರಂಭದಲ್ಲಿ ಭಾರತದ ಜೋಡಿಗೆ 6–3ರ ಮುನ್ನಡೆ ಗಳಿಸಲು ಸಾಧ್ಯವಾಯಿತು. ಆದರೆ ತಿರುಗೇಟು ನೀಡಿದ ಎದುರಾಳಿಗಳು 9–7ರಲ್ಲಿ ಮುನ್ನಡೆದರು. ವಿರಾಮದ ನಂತರ ಚಿರಾಗ್‌–ಸಾತ್ವಿಕ್ ಸ್ವಯಂ ತಪ್ಪುಗಳನ್ನು ಎಸಗಿ ಪಾಯಿಂಟ್‌ಗಳನ್ನು ಕಳೆದುಕೊಂಡರು. ಇದು ಇಂಡೊನೇಷ್ಯಾ ಆಟಗಾರರ ಜಯಕ್ಕೆ ಇನ್ನಷ್ಟು ಸಹಕಾರಿಯಾಯಿತು.

ಸ್ಕೋರು

ಇಂಡೊನೇಷ್ಯಾ 2

ಭಾರತ 0

ಗೇಮ್‌ ವಿವರ

ಇಂಡೊನೇಷ್ಯಾ 21 21

ಭಾರತ 13 12

ಪಂದ್ಯದ ಅವಧಿ 32 ನಿಮಿಷ

ಮೊದಲ ಗೇಮ್‌ 17 ನಿಮಿಷ

ಎರಡನೇ ಗೇಮ್‌ 14 ನಿಮಿಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.