ADVERTISEMENT

Tokyo Olympics: ಮಹಿಳಾ ಹಾಕಿ ತಂಡದ ಬಗ್ಗೆ ಪ್ರಧಾನಿ ಮೋದಿ ಸೇರಿ ಗಣ್ಯರ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2021, 4:34 IST
Last Updated 6 ಆಗಸ್ಟ್ 2021, 4:34 IST
ಸೋಲಿನ ಆಘಾತ ತಡೆದುಕೊಳ್ಳಲಾಗದೇ ಮೈದಾನದಲ್ಲೇ ಕಣ್ಣೀರಿಟ್ಟ ಆಟಗಾರ್ತಿಯರು - ಏಜೆನ್ಸಿ ಚಿತ್ರ
ಸೋಲಿನ ಆಘಾತ ತಡೆದುಕೊಳ್ಳಲಾಗದೇ ಮೈದಾನದಲ್ಲೇ ಕಣ್ಣೀರಿಟ್ಟ ಆಟಗಾರ್ತಿಯರು - ಏಜೆನ್ಸಿ ಚಿತ್ರ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಹಾಕಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಭಾರತ ತಂಡವು 3-4 ಗೋಲುಗಳ ಅಂತರದ ಸೋಲನುಭವಿಸಿದೆ. ಆದರೆ, ತಂಡವು ಕ್ರೀಡಾಕೂಟದುದ್ದಕ್ಕೂ ನೀಡಿದ ಅತ್ಯುತ್ತಮ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಹಾಕಿಯಲ್ಲಿ ಸ್ವಲ್ಪದರಲ್ಲೇ ಪದಕ ನಮ್ಮ ಕೈತಪ್ಪಿತು. ಆದರೆ, ಮಹಿಳಾ ಹಾಕಿ ತಂಡವು ಭಾರತದ ಹೊಸ ಸ್ಫೂರ್ತಿಯನ್ನು ಬಿಂಬಿಸಿದೆ. ತಂಡವು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತನ್ನ ಎಲ್ಲೆಯನ್ನು ವಿಸ್ತರಿಸಿದೆ. ತಂಡದ ಯಶಸ್ಸು ಭಾರತದ ಯುವ ಹೆಣ್ಣುಮಕ್ಕಳು ಹಾಕಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಆ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರೇಪಿಸಲಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ADVERTISEMENT

ಈ ಬಾರಿ ಮಹಿಳಾ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದನ್ನು ನಾವು ಸದಾ ನೆನಪಿಟ್ಟುಕೊಳ್ಳಲಿದ್ದೇವೆ. ಇಡೀ ಕೂಟದಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ತಂಡದ ಪ್ರತಿಯೊಬ್ಬ ಸದಸ್ಯೆಯರೂ ಗಮನಾರ್ಹ ಧೈರ್ಯ, ಕೌಶಲ ಮತ್ತು ಸ್ಥಿರತೆ ಹೊಂದಿದ್ದಾರೆ. ಈ ತಂಡದ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡದವರು ಸಾಧನೆ ಮಾಡಿದರು. ಇಂದಿನ ಫಲಿತಾಂಶದಿಂದ ನಿರಾಸೆಗೊಳ್ಳಬೇಡಿ. ನಮ್ಮೆಲ್ಲರಲ್ಲಿ ಭರವಸೆಯನ್ನು ಮೂಡಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ಇದು ಪದಕ ಗಳಿಕೆಯ ಭವಿಷ್ಯದ ಆರಂಭ ಎಂಬ ಬಗ್ಗೆ ನನಗೆ ಖಾತರಿ ಇದೆ!’ ಎಂದು ಮಾಜಿ ಅಥ್ಲೀಟ್‌ ಪಿ.ಟಿ.ಉಷಾ ಟ್ವೀಟ್ ಮಾಡಿದ್ದಾರೆ.

‘ನೀವು ಅತ್ಯುತ್ತಮವಾಗಿ ಆಟವಾಡಿದ್ದೀರಿ, ಆ ಬಗ್ಗೆ ನನಗೆ ಹೆಮ್ಮೆಯಿದೆ. ನೀವು ಶತಕೋಟಿ ಹೃದಯಗಳನ್ನು ಗೆದ್ದಿದ್ದೀರಿ. ಇತಿಹಾಸ ರಚಿಸಿದ್ದೂ ಅಲ್ಲದೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದೀರಿ’ ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

ವೀರೇಂದ್ರ ಸೆಹ್ವಾಗ್ ಟ್ವೀಟ್

ಮನ್‌ಪ್ರೀತ್ ಸಿಂಗ್ ಟ್ವೀಟ್

ಕಿರಣ್ ರಿಜಿಜು ಟ್ವೀಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.