ಫಿಡೆ (FIDE) ಮಹಿಳಾ ಗ್ರ್ಯಾಂಡ್ ಸ್ವಿಸ್ ಟೂರ್ನಿ ಗೆದ್ದ ಗ್ರ್ಯಾಂಡ್ ಮಾಸ್ಟರ್ ವೈಶಾಲಿ ರಮೇಶ್‌ಬಾಬು
(ಪಿಟಿಐ)
ನವದೆಹಲಿ: ಫಿಡೆ (FIDE) ಮಹಿಳಾ ಗ್ರ್ಯಾಂಡ್ ಸ್ವಿಸ್ ಟೂರ್ನಿ ಗೆದ್ದ ಗ್ರ್ಯಾಂಡ್ ಮಾಸ್ಟರ್ ವೈಶಾಲಿ ರಮೇಶ್‌ಬಾಬು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಅವರ ಉತ್ಸಾಹ ಮತ್ತು ಸಮರ್ಪಣೆ ಅನುಕರಣೀಯ ಎಂದು ಹೇಳಿದ್ದಾರೆ. ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಸತತ ಎರಡನೇ ಬಾರಿಗೆ ಫಿಡೆ ಮಹಿಳಾ ಗ್ರ್ಯಾಂಡ್ ಸ್ವಿಸ್ ಗೆದ್ದು ದಾಖಲೆ ಬರೆದಿದ್ದಾರೆ.
ಸೋಮವಾರದಂದು ಉಜ್ಬೇಕಿಸ್ತಾನದ ಸಮರ್‌ಖಂಡ್‌ನಲ್ಲಿ ನಡೆದ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ಚೀನಾದ ಮಾಜಿ ವಿಶ್ವ ಚಾಂಪಿಯನ್ ಝೊಂಗಿ ಟಾನ್ ವಿರುದ್ಧ ನಡೆದ ಸೆಣೆಸಾಟದಲ್ಲಿ ಪಂದ್ಯ ಡ್ರಾಗೊಂಡ ಬಳಿಕ 8 ಅಂಕಗಳೊಂದಿಗೆ ವೈಶಾಲಿ ಚಾಂಪಿಯನ್ ಆದರು. ಆ ಮೂಲಕ 2026ರ ಮಹಿಳಾ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದುಕೊಂಡರು. ವೈಶಾಲಿ ಅವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದ ಭಾರತದ ಮೂರನೇ ಆಟಗಾರ್ತಿ. ಇದಕ್ಕೂ ಮೊದಲೇ ದಿವ್ಯಾ ದೇಶಮುಖ್ ಮತ್ತು ಕೋನೇರು ಹಂಪಿ ಅರ್ಹತೆ ಪಡೆದಿದ್ದರು.
ಮೋದಿ ಶುಭಾಶಯ:
ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ‘ಅತ್ಯುತ್ತಮ ಸಾಧನೆ. ವೈಶಾಲಿ ರಮೇಶ್‌ಬಾಬು ಅವರಿಗೆ ಅಭಿನಂದನೆಗಳು. ಅವರ ಉತ್ಸಾಹ ಮತ್ತು ಸಮರ್ಪಣೆ ಅನುಕರಣೀಯ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು‘ ಎಂದು ಹೇಳಿದ್ದಾರೆ.
ಹಾಗೂ ಮತ್ತೊಂದು ಪೋಸ್ಟ್‌ನಲ್ಲಿ, ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಶಿಪ್ 2025 ರ ಪುರುಷರ 1,000 ಮೀಟರ್ ಸ್ಪ್ರಿಂಟ್‌ನಲ್ಲಿ ಚಿನ್ನ ಗೆದ್ದ ಆನಂದ್‌ಕುಮಾರ್ ವೇಲ್‌ಕುಮಾರ್ ಬಗ್ಗೆ ಹೆಮ್ಮೆ ಇದೆ ಎಂದು ಮೋದಿ ಹೇಳಿದ್ದಾರೆ.
‘ಅವರ ಧೈರ್ಯ, ವೇಗ ಮತ್ತು ಚೈತನ್ಯ ಅವರನ್ನು ಸ್ಕೇಟಿಂಗ್‌ನಲ್ಲಿ ಭಾರತದ ಮೊದಲ ವಿಶ್ವ ಚಾಂಪಿಯನ್ ಆಗಿ ಮಾಡಿದೆ. ಅವರ ಸಾಧನೆ ಅಸಂಖ್ಯಾತ ಯುವಕರಿಗೆ ಸ್ಫೂರ್ತಿಯಾಗಿದೆ. ಅವರಿಗೆ ಅಭಿನಂದನೆಗಳು ಮತ್ತು ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ಶುಭಾಶಯಗಳು‘ ಎಂದು ಶ್ಲಾಘಿಸಿದ್ದಾರೆ.
ವೈಶಾಲಿ ರಮೇಶ್‌ಬಾಬು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.