ಕೋನೇರು
– ಪಿಟಿಐ ಚಿತ್ರ
ನ್ಯೂಯಾರ್ಕ್: ಭಾರತದ ಗ್ರ್ಯಾಂಡ್‌ಮಾಸ್ಟರ್ ಕೋನೇರು ಹಂಪಿ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಬಾರಿ ಚಿನ್ನ ಗೆದ್ದು ಒಂದು ದಿನ ಕಳೆದಿದೆ. ಈಗ ಅವರು ಮಂಗಳವಾರ ಆರಂಭವಾಗಲಿರುವ ಫಿಡೆ ವಿಶ್ವ ಬ್ಲಿಟ್ಜ್ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಗೆದ್ದು ಅವಳಿ ಚಾಂಪಿಯನ್ ಆಗುವತ್ತ ಚಿತ್ತ ನೆಟ್ಟಿದ್ದಾರೆ.
2019ರಲ್ಲಿ ಮೊದಲ ಬಾರಿ ಅವರು ವಿಶ್ವ ರ್‍ಯಾಪಿಡ್ ಚಾಂಪಿಯನ್ ಆಗಿದ್ದ ಹಂಪಿ, ಭಾನುವಾರ ಎರಡನೇ ಬಾರಿ ಚಿನ್ನ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ್ತಿ ಎನಿಸಿದ್ದಾರೆ. ಚೀನಾದ ಜು ವೆನ್‌ಜುನ್ ಮೊದಲನೆಯವರು.
ಬ್ಲಿಟ್ಜ್‌ನಲ್ಲೂ ಗೆದ್ದರೆ ಹೆಚ್ಚುವರಿಯಾಗಿ ₹50 ಲಕ್ಷ ಬಹುಮಾನ ಮೊತ್ತ ಅವರ ಪಾಲಾಗಲಿದೆ. ಎರಡೂ ಟೂರ್ನಿಗಳ ವಿಜೇತರಿಗೆ ಸಮಾನ ಬಹುಮಾನದ ಹಣ ನಿಗದಿಯಾಗಿದೆ.
ಬ್ಲಿಟ್ಜ್ ಚಾಂಪಿಯನ್‌ಷಿಪ್‌ನ ಓಪನ್ ವಿಭಾಗದಲ್ಲಿ 13 ಸುತ್ತುಗಳಿವೆ. ಮಹಿಳಾ ವಿಭಾಗದಲ್ಲಿ 11 ಸುತ್ತುಗಳು ಇರಲಿವೆ.
ದ್ರೋಣವಲ್ಲಿ ಹಾರಿಕಾ ಕೂಡ ಬ್ಲಿಟ್ಜ್‌ನಲ್ಲಿ ಉತ್ತಮ ಆಟಗಾರ್ತಿ. ಇವರ ಜೊತೆಗೆ ಗ್ರ್ಯಾಂಡ್‌ಮಾಸ್ಟರ್ ಆರ್.ವೈಶಾಲಿ, ಐಎಂ ದಿವ್ಯಾ ದೇಶಮುಖ್ ಕೂಡ ಉತ್ತಮ ಪ್ರದರ್ಶನದ ಹಂಬಲದಲ್ಲಿದ್ದಾರೆ.
ಓಪನ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತೊಮ್ಮೆ ಪ್ರಶಸ್ತಿಗೆ ಫೇವರೀಟ್ ಆಗಿದ್ದಾರೆ. ವಸ್ತ್ರಸಂಹಿತೆ ಉಲ್ಲಂಘನೆಗಾಗಿ ಅವರು ರ್‍ಯಾಪಿಡ್ ಚಾಂಪಿಯನ್‌ಷಿಪ್‌ನ ಅರ್ಧದಲ್ಲೇ ಅನರ್ಹಗೊಂಡಿದ್ದರು.
ಭಾರತದ ಆಟಗಾರರಲ್ಲಿ ಆರ್.ಪ್ರಜ್ಞಾನಂದ, ಅರ್ಜುನ್ ಇರಿಗೇಶಿ, ಫ್ರಾನ್ಸ್‌ನ ಅಲಿರೇಝಾ ಫಿರೋಝ್ ಮತ್ತು ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ಅವರೂ ಕಾರ್ಲ್‌ಸನ್ ಅವರಿಗೆ ಪೈಪೋಟಿ ನೀಡಬಲ್ಲರು. ರ್‍ಯಾಪಿಡ್ ವಿಭಾಗದಲ್ಲಿ ಇರಿಗೇಶಿ ಐದನೇ ಸ್ಥಾನ ಗಳಿಸಿದ್ದರು.
ಬ್ಲಿಟ್ಜ್ ವಿಶ್ವ ಚಾಂಪಿಯನ್‌ಷಿಪ್‌ಗೆ ಮರಳಿದ ಕಾರ್ಲ್‌ಸನ್
ನ್ಯೂಯಾರ್ಕ್: ಆಟಗಾರರಿಗೆ ಜೀನ್ಸ್ ಪ್ಯಾಂಟ್ ಧರಿಸಿ ಆಡಲು ಫಿಡೆ ಅವಕಾಶ ನೀಡಿರುವ ಕಾರಣ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರು ಮಂಗಳವಾರ ನಡೆಯುವ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಆಡಲಿದ್ದಾರೆ.
ಮೂರು ದಿನಗಳ ಹಿಂದೆ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನ ಎರಡನೇ ದಿನ ಜೀನ್ಸ್ ಧರಿಸಿ ಆಡಲು ಬಂದು ವಸ್ತ್ರಸಂಹಿತೆ ಉಲ್ಲಂಘಿಸಿದ್ದಕ್ಕೆ ಅವರಿಗೆ 200 ಡಾಲರ್ ದಂಡ ವಿಧಿಸಲಾಗಿತ್ತು.ಅಂದು ಎಂಟನೇ ಸುತ್ತಿಗೆ ಮೊದಲು, ಅರ್ಬಿಟರ್ ಮನವಿಯ ಹೊರತಾಗಿಯೂ ನಾರ್ವೆಯ ಆಟಗಾರ ಜೀನ್ಸ್ ಪ್ಯಾಂಟ್ ಬದಲಾಯಿಸಲು ನಿರಾಕರಿಸಿದ ಕಾರಣ ಅನರ್ಹಗೊಳಿಸಲಾಗಿತ್ತು.
ಉಡುಗೆಗೆ ಸಂಬಂಧಿಸಿ ಸ್ವಲ್ಪ ಉದಾರತೆ ತರುವ ದೃಷ್ಟಿಯಿಂದ ನಿಯಮದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಫಿಡೆ ಮುಖ್ಯಸ್ಥ ಅರ್ಕಾಡಿ ದ್ವೊರ್ಕೊವಿಚ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ಈಗ ಜಾಕೆಟ್‌ಗೆ ಹೊಂದುವಂತಹ ಜೀನ್ಸ್ ಧರಿಸಲು ಅವಕಾಶವಿದೆ.
‘ವಿಶ್ವ ಬ್ಲಿಟ್ಜ್ ಚಾಂಪಿಯನ್‌ಷಿಪ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಭಾಗವಹಿಸಲಿದ್ದಾರೆ ಎಂದು ತಿಳಿಸಲು ಫಿಡೆ ಸಂತಸಪಡುತ್ತಿದೆ’ ಎಂದು ಫಿಡೆ ತಿಳಿಸಿದೆ. ಭಾನುವಾರ ಕಾರ್ಲ್‌ಸನ್ ಅವರು ಫಿಡೆ ಅಧ್ಯಕ್ಷರ ಜೊತೆ ಉಪಾಧ್ಯಕ್ಷ ವಿಶ್ವನಾಥನ್ ಆನಂದ್ ಅವರನ್ನು ಭೇಟಿ ಮಾಡಿದ್ದರು.
ಆನಂದ್ ವಿರುದ್ಧ ಕಾರ್ಲ್‌ಸನ್ ಟೀಕೆ
ನ್ಯೂಯಾರ್ಕ್: ವಸ್ತ್ರಸಂಹಿತೆ ಉಲ್ಲಂಘನೆ ವಿಷಯವನ್ನು ನಿಭಾಯಿಸಿಲ್ಲ ಎಂದು ಫಿಡೆ ಉಪಾಧ್ಯಕ್ಷ ವಿಶ್ವನಾಥನ್ ಆನಂದ್ ಸೇರಿದಂತೆ ಉನ್ನತ ಅಧಿಕಾರಿಗಳನ್ನು ವಿಶ್ವದ ಅಗ್ರ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಸೋಮವಾರ ಟೀಕಿಸಿದ್ದಾರೆ. ಅವರು ಇನ್ನೂ ‘ಬೆಳೆಯಬೇಕಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಸದ್ಗುಣಗಳ ಹೊರತಾಗಿಯೂ ವಿಶ್ವನಾಥನ್ ಆನಂದ್ ಈ (ಉಪಾಧ್ಯಕ್ಷ) ಹುದ್ದೆಯನ್ನು ವಹಿಸಲು ‘ಇನ್ನೂ ಸಿದ್ಧರಾಗಿಲ್ಲ’ ಎಂದೂ ಹೇಳಿದ್ದಾರೆ. ಕಾರ್ಲ್‌ಸನ್ ಅವರನ್ನು ಅನರ್ಹಗೊಳಿಸಿದ ವಿಷಯ ವಿವಾದವಾದ ನಂತರ, ಫಿಡೆ ವಸ್ತ್ರಸಂಹಿತೆಯಲ್ಲಿ ಮಾರ್ಪಾಡು ಮಾಡಿದೆ.
ತಮ್ಮನ್ನು ಅನರ್ಹಗೊಳಿಸುವ ನಿರ್ಧಾರ ‘ಕ್ರೂರವಾದುದು’ ಎಂದು ನಾರ್ವೆಯ ಆಟಗಾರ ಹೇಳಿದ್ದಾರೆ. ಅಧಿಕಾರಿಗಳನ್ನು ‘ರೋಬೊ’ಗಳು ಎಂದು ಕರೆದ ಅವರು ಸ್ವಂತ ನಿರ್ಧಾರ ಕೈಗೊಳ್ಳಲು ಅಸಮರ್ಥರು ಎಂದು ಕಟುವಾಗಿ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.