ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಜೊಕೊವಿಚ್‌, ಸಿನ್ನರ್ ಗೆಲುವಿನ ಓಟ

ಏಜೆನ್ಸೀಸ್
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
<div class="paragraphs"><p>ವಾವ್ರಿಂಕಾ</p></div>

ವಾವ್ರಿಂಕಾ

   

ಮೆಲ್ಬರ್ನ್: ನೊವಾಕ್ ಜೊಕೊವಿಚ್‌ ಮತ್ತು ಯಾನಿಕ್ ಸಿನ್ನರ್ ಅವರು ಎದುರಾಳಿಗಳ ವಿರುದ್ಧ ನಿರಾಯಾಸ ಜಯಗಳಿಸಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. ಆದರೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಗುರುವಾರ ಗಮನಸೆಳೆದಿದ್ದು 40 ವರ್ಷ ವಯಸ್ಸಿನ ಸ್ಟಾನ್ ವಾವ್ರಿಂಕಾ ಅವರ ಆಟ. ಅರ್ಹತಾ ಸುತ್ತಿನಿಂದ ಬಂದ ಎದುರಾಳಿಯ ವಿರುದ್ಧ ನಾಲ್ಕೂವರೆ ಗಂಟೆಗೂ ಹೆಚ್ಚುಕಾಲ ಬೆವರುಹರಿಸಿ ಗೆದ್ದ ಸ್ವಿಜರ್ಲೆಂಡ್‌ನ ಆಟಗಾರ ಗ್ರ್ಯಾನ್‌ಸ್ಲಾಮ್ ಇತಿಹಾಸದಲ್ಲಿ ಹೆಸರು ದಾಖಲಿಸಿದರು.

ಮೆಲ್ಬರ್ನ್‌ ಪಾರ್ಕ್‌ನಲ್ಲಿ ಟೂರ್ನಿಯ ಐದನೇ ದಿನ ಎಳೆಬಿಸಿಲಿನ ವಾತಾವರಣ ವಿದ್ದು ಹಾಲಿ ಚಾಂಪಿಯನ್ ಮ್ಯಾಡಿಸನ್ ಕೀಸ್‌, ಎರಡನೇ ಶ್ರೇಯಾಂಕದ ಇಗಾ ಶ್ವಾಂಟೆಕ್ ಮತ್ತು ಅನುಭವಿ ನವೊಮಿ ಒಸಾಕಾ ಅವರೂ ಗೆಲುವಿನ ಓಟ ಮುಂದುವರಿಸಿದರು.

ADVERTISEMENT

ರಾಡ್‌ ಲೆವರ್ ಅರೇನಾದಲ್ಲಿ ನೊವಾಕ್ ಜೊಕೊವಿಚ್‌ ಅವರು 6–3, 6–2, 6–2 ರಿಂದ 141ನೇ ಕ್ರಮಾಂಕದ ಕ್ವಾಲಿಫೈಯರ್ ಫ್ರಾನ್ಸಿಸ್ಕೊ ಮಿಸ್ಟ್ರೆಲ್ಲಿ (ಇಟಲಿ) ಅವರನ್ನು ಮಣಿಸಿದರು. 38 ವರ್ಷ ವಯಸ್ಸಿನ ಜೊಕೊವಿಚ್‌ ಇಲ್ಲಿ 10 ಬಾರಿ ಚಾಂಪಿಯನ್ ಆಗಿದ್ದು ಇತಿಹಾಸ ಸ್ಥಾಪಿಸಿದ್ದಾರೆ.

ಎರಡು ಬಾರಿಯ ಚಾಂಪಿಯನ್ ಸಿನ್ನರ್ (ಇಟಲಿ) ಹೆಚ್ಚು ಸಮಯ ತೆಗೆದುಕೊಳ್ಳದೇ ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ಥ್ ಅವರನ್ನು 6–1, 6–4, 6–2 ರಿಂದ ಸದೆಬಡಿದರು.

ವಾವ್ರಿಂಕಾ ಸಾಹಸ: ಅನುಭವಿ ವಾವ್ರಿಂಕಾ, ತಮ್ಮ ವಿದಾಯದ ಆಸ್ಟ್ರೇಲಿಯಾ ಓಪನ್‌ನಲ್ಲಿ ಮ್ಯಾರಥಾನ್ ಪಂದ್ಯ ಆಡಿದರು. 4 ಗಂಟೆ 33 ನಿಮಿಷ ಆಡಿ 4–6, 6–3, 3–6, 7–5, 7–6 (10–3) ರಿಂದ ಫ್ರಾನ್ಸ್‌ನ ಕ್ವಾಲಿಫೈಯರ್ ಆರ್ಥರ್‌ ಜಿಯಾ ಅವರನ್ನು ಸೋಲಿಸಿದರು.

1978ರಲ್ಲಿ ಕೆನ್‌ ರೋಸ್‌ವಾಲ್ ಅವರ ನಂತರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಸುತ್ತು ತಲುಪಿದ 40 ವರ್ಷ ಮೇಲ್ಪಟ್ಟ ಮೊದಲ ಆಟಗಾರ ಎಂಬ ದಾಖಲೆ ವಾವ್ರಿಂಕಾ ಅವರದಾಯಿತು. ವಾವ್ರಿಂಕಾ ಮುಂದಿನ ಸುತ್ತಿನಲ್ಲಿ ಒಂಬತ್ತನೇ ಶ್ರೇಯಾಂಕದ ಟೇಲರ್ ಫ್ರಿಟ್ಝ್ (ಅಮೆರಿಕ) ಅವರನ್ನು ಎದುರಿಸಲಿದ್ದಾರೆ.

ಕೀಸ್ ಮುನ್ನಡೆ: ಹಾಲಿ ಚಾಂಪಿಯನ್, ಅಮೆರಿಕದ ಮ್ಯಾಡಿಸನ್ ಕೀಸ್ ಅವರು 6–1, 7–5 ರಿಂದ ಸ್ವದೇಶದ ಆಶ್ಲಿನ್ ಕ್ರುಜರ್ ಅವರನ್ನು ಸೋಲಿಸಿದರು. 2025ರ ಫೈನಲ್‌ನಲ್ಲಿ ಕೀಸ್ ಅವರು ಸಬಲೆಂಕಾ ಅವರಿಗೆ ಆಘಾತ ನೀಡಿದ್ದರು. ಮೊದಲ ಸೆಟ್ಟನ್ನು ನಿರಾಯಾಸವಾಗಿ ಗೆದ್ದಿದ್ದ 29 ವರ್ಷ ವಯಸ್ಸಿನ ಕೀಸ್‌, ಎರಡನೇ ಸೆಟ್‌ನಲ್ಲಿ 92ನೇ ಕ್ರಮಾಕದ ಆಶ್ಲಿನ್ ಎದುರು 2–5 ಹಿನ್ನಡೆಯಿಂದ ಚೇತರಿಸಿಕೊಂಡರು.

ಎರಡು ಬಾರಿಯ ಚಾಂಪಿಯನ್ ನವೊಮಿ ಒಸಾಕಾ 6–3, 4–6, 6–2 ರಿಂದ ರುಮೇನಿಯಾದ ಸೊರಾ ಸಿರ್ಸ್ಟಿಯಾ ಅವರನ್ನು ಸೋಲಿಸಿದರು.

ಯುಕಿ– ನಿಕೋಲ್‌ ಜೋಡಿಗೆ ಸೋಲು: ಭಾರತದ ಯುಕಿ ಭಾಂಬ್ರಿ ಮತ್ತು ಅಮೆರಿಕದ ಜೊತೆಗಾತಿ ನಿಕೋಲ್ ಮೆಲಿಚರ್ ಮಾರ್ಟಿನೆಜ್ ಅವರು ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ 4–6, 5–7 (3–7) ರಿಂದ ಚೀನಾದ ಟಿಮ್ ಪುಟ್ಝ್‌–ಝಾಂಗ್ ಶುವಾಯಿ ಜೋಡಿ ವಿರುದ್ಧ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.