
ಚೆಂಡನ್ನು ಹಿಂತಿರುಗಿಸುವ ಯತ್ನದಲ್ಲಿ ಕಾರ್ಲೋಸ್ ಅಲ್ಕರಾಜ್
ಎಎಫ್‌ಪಿ ಚಿತ್ರ
ಮೆಲ್ಬರ್ನ್: ಆಸ್ಟ್ರೇಲಿಯಾ ಓಪನ್‌ನಲ್ಲಿ ಮೊದಲ ಪ್ರಶಸ್ತಿ ಗೆಲುವಿನ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟ ಕಾರ್ಲೋಸ್ ಅಲ್ಕರಾಜ್ ಅವರು ‘ಶೋಮ್ಯಾನ್’ ಕೊರೆಂಟಿನ್ ಮೌಟೆಟ್ ಅವರನ್ನು ಸೋಲಿಸಿ 16ರ ಘಟ್ಟಕ್ಕೆ ದಾಪುಗಾಲಿಟ್ಟರು. ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಪ್ರಯಾಸದ ಗೆಲುವು ಸಾಧಿಸಿ ಸಂಭ್ರಮಿಸಿದರು.
ಮೂರು ಬಾರಿಯ ಫೈನಲ್ ತಲುಪಿರುವ ಡೇನಿಯಲ್ ಮೆಡ್ವೆಡೇವ್ ಅವರೂ, ಟೂರ್ನಿಯ ಆರನೇ ದಿನವಾದ ಶುಕ್ರವಾರ ಗೆಲುವಿಗೆ ಬೆವರು ಹರಿಸಬೇಕಾಯಿತು. ಮೂರನೇ ಶ್ರೇಯಾಂಕದ ಕೊಕೊ ಗಾಫ್ ಮತ್ತು ಅಲೆಕ್ಸಾಂಡರ್ ಜ್ವರೇವ್ ಅವರಿಗೂ ನೇರ ಸೆಟ್‌ಗಳಲ್ಲಿ ಗೆಲ್ಲಲಾಗಲಿಲ್ಲ.
ಆದರೆ ಅಗ್ರ ಶ್ರೇಯಾಂಕದ ಅಲ್ಕರಾಜ್ ಅವರು ರಾಡ್ ಲೇವರ್ ಅರೇನಾದಲ್ಲಿ 32ನೇ ಶ್ರೇಯಾಂಕದ ಮೌಟೆಟ್ ಅವರನ್ನು 6–2, 6–4, 6–1 ರಿಂದ ಆರಾಮವಾಗಿ ಸೋಲಿಸಿದರು. ಗೆಲುವಿಗೆ ಸ್ಪೇನ್‌ನ ಆಟಗಾರನಿಗೆ 2 ಗಂಟೆ 5 ನಿಮಿಷ ತಗಲಿತು.
ನೂರನೇ ಪಂದ್ಯ: ಇದು ಅಲ್ಕರಾಜ್ ಅವರಿಗೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ನೂರನೇ ಪಂದ್ಯವಾಗಿತ್ತು. ಅವರು 87–13 ಗೆಲುವಿನ ದಾಖಲೆ ಹೊಂದಿದ್ದಾರೆ. ಅವರು ಈ ಹಂತದಲ್ಲಿ ಸ್ವೀಡನ್‌ನ ದಂತಕತೆ ಬ್ಯೋನ್ ಬೋರ್ಗ್ ದಾಖಲೆ ಸರಿಗಟ್ಟಿದ್ದಾರೆ. ಅಲ್ಕರಾಜ್ ಅವರ ಪ್ರಶಸ್ತಿಗಳ ಕಪಾಟಿನಲ್ಲಿ ಆಸ್ಟ್ರೇಲಿಯಾ ಓಪನ್ ಟ್ರೋಫಿಯ ಜಾಗ ಖಾಲಿಯಿದೆ.
22 ವರ್ಷ ವಯಸ್ಸಿನ ಅಲ್ಕರಾಜ್ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 19ನೇ ಶ್ರೇಯಾಂಕದ ಟಾಮಿ ಪಾಲ್ (ಅಮೆರಿಕ) ಅವರನ್ನು ಎದುರಿಸಲಿದ್ದಾರೆ. ಪಾಲ್ ಅವರ ಎದುರಾಳಿ, ಸ್ಪೇನ್‌ನ ಅಲೆಕ್ಸಾಂಡ್ರೊ ಡೊವಿಡೊವಿಚ್ ಮೊಣಕಾಲಿನ ನೋವಿನಿಂದಾಗಿ ಅರ್ಧದಲ್ಲೇ ಪಂದ್ಯ ಬಿಟ್ಟುಕೊಟ್ಟರು.
ಮೌಟೆಟ್ ಅಂಡರ್‌ಆರ್ಮ್ ಸರ್ವ್‌ಗಳಿಂದ ಖ್ಯಾತಿ ಪಡೆದಿದ್ದು, ಊಹಿಸಲು ಆಗದ ಆಟದ ಶೈಲಿಯಿಂದ ಟೆನಿಸ್‌ನ ಶೋಮ್ಯಾನ್ ಎನಿಸಿದ್ದಾರೆ.
ಪ್ರಯಾಸದ ಜಯ: ಮಹಿಳೆಯರ ವಿಭಾಗ ದಲ್ಲಿ ಬೆಲರೂಸ್‌ನ ತಾರೆ ಸಬಲೆಂಕಾ ಅವರು ರಷ್ಯಾ ಸಂಜಾತೆಯಾದ ಆಸ್ಟ್ರಿಯಾದ ಆಟಗಾರ್ತಿ ಅನಸ್ತೇಸಿಯಾ ಪೊಟಪೋವಾ ಅವರನ್ನು 7–6 (7–4), 7–6 (9–7) ರಿಂದ ಸೋಲಿಸಿದರು. ಮೂರನೇ ಸುತ್ತಿನ ಈ ಪಂದ್ಯ ಮುಗಿಯಲು ಎರಡು ಗಂಟೆ ಹಿಡಿಯಿತು.
ನಾಲ್ಕು ವರ್ಷಗಳಲ್ಲಿ ಮೂರನೇ ಪ್ರಶಸ್ತಿಗೆ ಪ್ರಯತ್ನಿಸುತ್ತಿರುವ ಸಬಲೆಂಕಾ, 2025ರ ಫೈನಲ್‌ನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ಕೈಲಿ ಅನಿರೀಕ್ಷಿತ ಸೋಲುಂಡಿದ್ದರು.
‘ನಾನು ಒತ್ತಡದಲ್ಲೇ ಆಡಿದೆ. ಪ್ರತಿ ಪಾಯಿಂಟ್ ಪಡೆಯಲು ಪರದಾಡುತ್ತಿದ್ದ ಅಂದಿನ ದಿನಗಳ ನೆನಪಾಯಿತು. ಗೆದ್ದ ಖುಷಿಯಲ್ಲಿ ಏನು ಮಾಡಬೇಕೆಂದು ತಿಳಿಯಲಿಲ್ಲ’ ಎಂದು 27 ವರ್ಷ ವಯಸ್ಸಿನ ಅಗ್ರ ಕ್ರಮಾಂಕದ ಆಟಗಾರ್ತಿ ಪ್ರತಿಕ್ರಿಯಿಸಿದರು. 16ರ ಸುತ್ತಿನಲ್ಲಿ ಅವರ ಎದುರಾಳಿ ಕೆನಡಾದ ಪ್ರತಿಭಾನ್ವಿತ ಆಟಗಾರ್ತಿ ವಿಕ್ಟೋರಿಯಾ ಎಂಬೊಕೊ.
19 ವರ್ಷ ವಯಸ್ಸಿನ ಎಂಬೊಕೊ 7–6 (7–5), 5–7, 6–3 ರಿಂದ ಡೆನ್ಮಾರ್ಕ್‌ನ ಕ್ಲಾರಾ ಟಾಸನ್ ಅವರನ್ನು ಸೋಲಿಸಿದರು.
ಅಮೆರಿಕದ ಕೊಕೊ ಗಾಫ್ 3–6, 6–0, 6–3 ರಿಂದ ಸ್ವದೇಶದ ಹೇಯ್ಲಿ ಬ್ಯಾಪ್ಟಿಸ್ಟ್ ಸವಾಲನ್ನು ಬದಿಗೊತ್ತಿದರು. ಅವರು ಮುಂದಿನ ಸುತ್ತಿನಲ್ಲಿ 19ನೇ ಶ್ರೇಯಾಂಕದ ಕರೋಲಿನಾ ಮುಚೋವಾ ಅವರನ್ನು ಎದುರಿಸಲಿದ್ದಾರೆ. 21 ವರ್ಷ ವಯಸ್ಸಿನ ಗಾಫ್ ಅವರು ಅಮೆರಿಕ ಓಪನ್ ಮತ್ತು ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಆದರೆ ಇಲ್ಲಿ ಸೆಮಿಫೈನಲ್ ತಲುಪಿದ್ದು ಅವರ ಉತ್ತಮ ಸಾಧನೆ ಎನಿಸಿದೆ.
ಏಳನೇ ಶ್ರೇಯಾಂಕದ ಜಾಸ್ಮಿನ್ ಪಾವೊಲಿನಿ ಹೊರಬಿದ್ದರು. ಅಮೆರಿಕದ 18 ವರ್ಷ ವಯಸ್ಸಿನ ಇವಾ ಜೊವಿಕ್ 6–2, 7–6 (7/3) ರಿಂದ ಇಟಲಿಯ ಆಟಗಾರ್ತಿಯನ್ನು ಸೋಲಿಸಿ ಮೊದಲ ಸಲ ಪ್ರಮುಖ ಟೂರ್ನಿಯೊಂದರ ನಾಲ್ಕನೇ ಸುತ್ತಿಗೆ ಕಾಲಿಟ್ಟರು.
ಮೆಡ್ವೆಡೇವ್‌ಗೆ ಜಯ: 11ನೇ ಶ್ರೇಯಾಂಕದ ಡೇನಿಲ್ ಮೆಡ್ವೆಡೇವ್ ಅವರು 3 ಗಂಟೆ 43 ನಿಮಿಷ ಹೋರಾಡಿ ಹಂಗೆರಿಯ ಫೇಬಿಯನ್ ಮೊರೊಸಾನ್ ಅವರನ್ನು ಸೋಲಿಸಿದರು. 6–7 (5–7), 4–6, 7–5, 6–0, 6–3 ರಿಂದ ಗೆದ್ದ ರಷ್ಯದ ಆಟಗಾರ ಮುಂದಿನ ಪಂದ್ಯದಲ್ಲಿ ಅಮೆರಿಕದ ಲರ್ನರ್ ಟಿಯೆನ್ ಅವರನ್ನು ಎದುರಿಸಲಿದ್ದಾರೆ.
ಗೆಲುವಿನ ಮೂಲಕ ಮೆಡ್ವೆಡೇವ್ ಸೇಡು ತೀರಿಸಿದಂತಾಯಿತು. ಹೋದ ವರ್ಷ ಇಲ್ಲಿಯೇ ಇದೇ ರೀತಿಯ ಸುದೀರ್ಘ ಪಂದ್ಯದಲ್ಲಿ ಯುವೋತ್ಸಾಹಿ ಫೇಬಿಯನ್ ಅವರು ಮೆಡ್ವೆಡೇವ್ ಅವರನ್ನು ಸೋಲಿಸಿದ್ದರು.
ಜರ್ಮನಿಯ ಜ್ವರೇವ್ 7–5, 4–6, 6–3, 6–1 ರಿಂದ ಬ್ರಿಟನ್‌ನ ಕ್ಯಾಮೆರಾನ್ ನೋರಿ ಅವರನ್ನು ಮಣಿಸಿದರು. ಆಸ್ಟ್ರೇಲಿಯಾದ ಭರವಸೆ, ಆರನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೋರ್ 6–3, 6–4, 7–5 ರಿಂದ ಅಮೆರಿಕದ ಫ್ರಾನ್ಸಿಸ್ ಟಿಯೊಫೊ ಅವರನ್ನು ಸೋಲಿಸಿ ಸತತ ಐದನೇ ವರ್ಷ ನಾಲ್ಕನೇ ಸುತ್ತಿಗೆ ಮುನ್ನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.