ADVERTISEMENT

Australian Open: ಕಾರ್ಲೋಸ್‌ ಅಲ್ಕರಾಜ್‌ ಮುಡಿಗೆ ಕಿರೀಟ

ಕಿರಿಯ ವಯಸ್ಸಿನಲ್ಲಿ ‘ಕ್ಯಾರೀರ್‌ ಗ್ರ್ಯಾನ್‌ಸ್ಲಾಮ್‌’ ಸಾಧನೆ: ಜೊಕೊಗೆ ನಿರಾಸೆ

ಏಜೆನ್ಸೀಸ್
Published 1 ಫೆಬ್ರುವರಿ 2026, 23:38 IST
Last Updated 1 ಫೆಬ್ರುವರಿ 2026, 23:38 IST
<div class="paragraphs"><p> ಕಾರ್ಲೋಸ್‌ ಅಲ್ಕರಾಜ್ ಹಾಗೂ&nbsp;ನೊವಾಕ್‌ ಜೊಕೊವಿಚ್‌</p></div>

ಕಾರ್ಲೋಸ್‌ ಅಲ್ಕರಾಜ್ ಹಾಗೂ ನೊವಾಕ್‌ ಜೊಕೊವಿಚ್‌

   

ಚಿತ್ರ: X / @AustralianOpen

ಮೆಲ್ಬರ್ನ್: ಸರ್ಬಿಯಾದ ದಿಗ್ಗಜ ನೊವಾಕ್‌ ಜೊಕೊವಿಚ್‌ ಅವರ ಸವಾಲನ್ನು ಬದಿಗೊತ್ತಿದ ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲೋಸ್‌ ಅಲ್ಕರಾಜ್ ಅವರು ತಮ್ಮ ಮೊದಲ ಆಸ್ಟ್ರೇಲಿಯಾ ಓಪನ್‌ ಕಿರೀಟ ಮುಡಿಗೇರಿಸಿ ಕೊಂಡರು. ಇದರೊಂದಿಗೆ ಓಪನ್‌ ಯುಗದಲ್ಲಿ ‘ಕ್ಯಾರೀರ್‌ ಗ್ರ್ಯಾನ್‌ಸ್ಲಾಮ್‌’ ಸಾಧನೆ ಮಾಡಿದ ಅತಿ ಕಿರಿಯ ವಯಸ್ಸಿನ ಆಟಗಾರನೆಂಬ ಹೆಗ್ಗಳಿಕೆಯೂ ಅವರದಾಯಿತು.

ADVERTISEMENT

ವಿಂಬಲ್ಡನ್‌, ಅಮೆರಿಕ ಓಪನ್‌ ಮತ್ತು ಫ್ರೆಂಚ್‌ ಓಪನ್‌ಗಳಲ್ಲಿ ತಲಾ ಎರಡು ಬಾರಿ ಚಾಂಪಿಯನ್‌ ಆಗಿದ್ದ ಅಲ್ಕರಾಜ್‌ ಅವರಿಗೆ ಇದು ಏಳನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾಗಿದೆ. 22ನೇ ವರ್ಷದಲ್ಲಿ ನಾಲ್ಕೂ ಗ್ರ್ಯಾನ್‌ಸ್ಲಾಮ್‌ಗಳನ್ನು ಜಯಿ ಸುವ ಮೂಲಕ ತಮ್ಮದೇ ದೇಶದ ರಫೆಲ್‌ ನಡಾಲ್‌ (24ನೇ ವಯಸ್ಸಿನಲ್ಲಿ) ಹೆಸರಿ ನಲ್ಲಿದ್ದ ದಾಖಲೆಯನ್ನು ಮುರಿದರು. ವಿಶೇಷವೆಂದರೆ ಈ ಸಾಧನೆಗೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರೊಂದಿಗೆ ನಡಾಲ್‌ ಕೂಡ ಸಾಕ್ಷಿಯಾದರು.

ರಾಡ್‌ ಲೇವರ್‌ ಅರೇನಾದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಸ್ಪೇನ್‌ನ ಅಲ್ಕರಾಜ್‌ 2-6, 6-2, 6-3, 7-5ರಿಂದ ತಮಗಿಂತ 16 ವರ್ಷ ಹಿರಿಯ ಆಟಗಾರನನ್ನು ಹಿಮ್ಮೆಟ್ಟಿಸಿದರು. ಈ ಸೋಲಿ ನೊಂದಿಗೆ, ದಾಖಲೆಯ 25ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಜೊಕೊವಿಚ್ ಕನಸು ಮತ್ತೆ ಭಗ್ನಗೊಂಡಿತು.

‘ಪ್ರತಿ ವರ್ಷ ಮೆಲ್ಬರ್ನ್‌ಗೆ ಬರುವುದು ನನಗೆ ಗೌರವದ ಸಂಗತಿ. ಈಗ ಕೆಲಸ ಮುಗಿದಿದೆ. ನಾಲ್ಕರಲ್ಲಿ ನಾಲ್ಕು ಪೂರ್ಣಗೊಂಡಿದೆ. ಕಠಿಣ ಸಂದರ್ಭದಲ್ಲಿ ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಪಂದ್ಯದ ಬಳಿಕ ಅಲ್ಕರಾಜ್‌ ಪ್ರತಿಕ್ರಿಯಿಸಿದರು. ಜೊಕೊವಿಚ್‌ ಅವರನ್ನು ಕೊಂಡಾಡಿದ ಅವರು ‘ಟೆನಿಸ್‌ ಆಟಗಾರರಿಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇರುವ ಕ್ರೀಡಾಪಟುಗಳಿಗೆ ಅವರು ಸ್ಫೂರ್ತಿ’ ಎಂದು ಹೇಳಿದರು.

ಮೆಲ್ಬರ್ನ್‌ ಪಾರ್ಕ್‌ನ ಫೈನಲ್‌ನಲ್ಲಿ ಜೊಕೊವಿಚ್‌ ಅವರಿಗೆ ಇದು ಮೊದಲ ಸೋಲಾಗಿತ್ತು. ಈ ಹಿಂದೆ ದಾಖಲೆಯ 10 ಫೈನಲ್‌ನಲ್ಲಿಯೂ ಜಯ ಗಳಿಸಿದ್ದರು. 24 ಗ್ರ್ಯಾನ್‌ಸ್ಲಾಮ್‌ಗಳೊಂದಿಗೆ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್‌ ಅವರ ದಾಖಲೆಯನ್ನು ಹಂಚಿಕೊಂಡಿರುವ ಜೊಕೊವಿಚ್ ಇಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿ ಚಾರಿತ್ರಿಕ ದಾಖಲೆ ನಿರ್ಮಿಸುವ ಛಲದಲ್ಲಿದ್ದರು.

ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್ ಟ್ರೋಫಿಯನ್ನು ಗೆದ್ದ ಅತ್ಯಂತ ಹಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಲು ಶ್ರಮಿಸುತ್ತಿರುವ ಜೊಕೊವಿಚ್‌, 2023ರಲ್ಲಿ ಕೊನೆಯ ಬಾರಿ ಅಮೆರಿಕ ಓಪನ್ ಗೆದ್ದಿದ್ದರು. ಅಂದಿನಿಂದ ಅಲ್ಕರಾಜ್ ಮತ್ತು ಇಟಲಿಯ ಯಾನಿಕ್ ಸಿನ್ನರ್ ಪಾರಮ್ಯ ಮೆರೆಯುತ್ತಿದ್ದಾರೆ.

‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಮತ್ತೆ ಗ್ರ್ಯಾನ್‌ಸ್ಲಾಮ್‌ನ ಸಮಾರೋಪ ಸಮಾರಂಭದಲ್ಲಿ ನಿಲ್ಲುತ್ತೇನೆ ಎಂದು ಭಾವಿಸಿರಲಿಲ್ಲ. ಆದ್ದರಿಂದ ಕಳೆದ ಎರಡು ವಾರಗಳಲ್ಲಿ ನನ್ನನ್ನು ಬೆಂಬಲಿಸಿದ ನಿಮಗೆ ಕೃತಜ್ಞ ನಾಗಿದ್ದೇನೆ’ ಎಂದು ಜೊಕೊವಿಚ್ ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದರು. ಇದೇ ವೇಳೆ ಮೆಲ್ಬರ್ನ್ ಪಾರ್ಕ್‌ನಲ್ಲಿ ಇದು ಅವರ ಕೊನೆಯ ಟೂರ್ನಿಯಾಗಿರ ಬಹುದು ಎಂದು ಸುಳಿವು ನೀಡಿದರು. ‘ನಾಳೆ ಏನಾಗುತ್ತದೆಯೋ ದೇವರೇ ಬಲ್ಲ’ ಎಂದರು.

ಸ್ಟ್ಯಾಂಡ್‌ನಲ್ಲಿದ್ದ ನಡಾಲ್ ಅವರನ್ನು ಉದ್ದೇಶಿಸಿ, ‘ಇಲ್ಲಿ ಸ್ಪ್ಯಾನಿಷ್ ದಂತಕಥೆಗಳು ತುಂಬಾ ಇವೆ. ಇಂದು ನಾನು ಇಬ್ಬರು ಸ್ಪೇನ್‌ ದಿಗ್ಗಜರ ವಿರುದ್ಧ ಒಬ್ಬನೇ ಸೆಣಸಿದೆ ಎಂದು ಅನಿಸುತ್ತದೆ. ಇದು ನ್ಯಾಯಯುತವೇ’ ಎಂದು ಜೊಕೊ ಹಾಸ್ಯ ಚಟಾಕಿ ಹಾರಿಸಿದರು.

ನಾಲ್ಕನೇ ಶ್ರೇಯಾಂಕದ ಜೊಕೊವಿಚ್‌ ಅವರು ಹಾಲಿ ಚಾಂಪಿಯನ್‌ ಯಾನಿಕ್ ಸಿನ್ನರ್‌ ವಿರುದ್ಧ; ಅಲ್ಕರಾಜ್‌ ಅವರು ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವರೇವ್‌ ವಿರುದ್ಧ ತಮ್ಮ ಸೆಮಿಫೈನಲ್‌ಗಳಲ್ಲಿ ಐದು ದೀರ್ಘ ಸೆಟ್‌ಗಳಲ್ಲಿ ಹೋರಾಡಿ ಗೆದ್ದಿದ್ದರು. ಅಲ್ಕರಾಜ್ ಇಲ್ಲಿ ಇದೇ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ ಹಂತವನ್ನು ದಾಟಿ ಬಂದಿದ್ದರು.

  • ₹ 26 ಕೋಟಿ: ಚಾಂಪಿಯನ್‌ ಕಾರ್ಲೋಸ್‌ ಅಲ್ಕರಾಜ್ ಅವರಿಗೆ ಸಿಕ್ಕ ನಗದು ಬಹುಮಾನ

  • ₹ 14 ಕೋಟಿ: ರನ್ನರ್ ಅಪ್‌ ನೊವಾಕ್‌ ಜೊಕೊವಿಚ್‌ ಅವರಿಗೆ ಸಿಕ್ಕ ನಗದು ಬಹುಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.