ADVERTISEMENT

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ: ಮೀರಾಗೆ ಸೋಲುಣಿಸಿದ ಲೋಯಿಸ್‌

ಫ್ರಾನ್ಸ್‌ ಆಟಗಾರ್ತಿಗೆ ಸೆಮೀಸ್‌ನಲ್ಲಿ ಕೊಕೊ ಗಾಫ್ ಎದುರಾಳಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
<div class="paragraphs"><p>ಫ್ರಾನ್ಸ್‌ನ ಲೋಯಿಸ್‌ ವಸ್ಸೂನ್ ಅವರು ಮೀರಾ ಆಂಡ್ರೀವಾ ವಿರುದ್ಧ ಎಂಟರ ಘಟ್ಟದ ಪಂದ್ಯದಲ್ಲಿ ಹೊಡೆತವೊಂದಕ್ಕೆ ಯತ್ನಿಸಿದರು </p><p></p></div>

ಫ್ರಾನ್ಸ್‌ನ ಲೋಯಿಸ್‌ ವಸ್ಸೂನ್ ಅವರು ಮೀರಾ ಆಂಡ್ರೀವಾ ವಿರುದ್ಧ ಎಂಟರ ಘಟ್ಟದ ಪಂದ್ಯದಲ್ಲಿ ಹೊಡೆತವೊಂದಕ್ಕೆ ಯತ್ನಿಸಿದರು

   

 ಎಪಿ/ಪಿಟಿಐ ಚಿತ್ರ

ADVERTISEMENT

ಪ್ಯಾರಿಸ್‌: ಸ್ಫೂರ್ತಿಯುತ ಆಟವಾಡಿದ ಆತಿಥೇಯ ಫ್ರಾನ್ಸ್‌ನ ಲೋಯಿಸ್‌ ವಸ್ಸೂನ್ ಅವರು ನೇರ ಸೆಟ್‌ಗಳಿಂದ ಆರನೇ ಕ್ರಮಾಂಕದ ಮೀರಾ ಆಂಡ್ರೀವಾ ಅವರನ್ನು ಸೋಲಿಸಿ ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ಗೆ ದಾಪುಗಾಲಿಟ್ಟರು. ಸೆಮಿಫೈನಲ್‌ನಲ್ಲಿ ಅವರು ಎರಡನೇ ಶ್ರೇಯಾಂಕದ ಕೊಕೊ ಗಾಫ್ ಅವರನ್ನು ಎದುರಿಸಲಿದ್ದಾರೆ.

ಮೊದಲ ಸಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಆಡುತ್ತಿರುವ ವಸ್ಸೂನ್ ಬುಧವಾರ ಪ್ರೇಕ್ಷಕರ ಒಕ್ಕೊರಲಿನ ಬೆಂಬಲದ ನಡುವೆ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 7–6 (8–6), 6–3 ರಿಂದ ರಷ್ಯಾದ ಹದಿಹರೆಯದ ಆಟಗಾರ್ತಿ ಆಂಡ್ರೀವಾ ಅವರನ್ನು ಮಣಿಸಿದರು.

ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದ ವಸ್ಸೂನ್ 2011ರ ನಂತರ ಈ ಟೂರ್ನಿಯ ಸೆಮಿಫೈನಲ್ ತಲುಪಿದ ಫ್ರಾನ್ಸ್‌ನ ಮೊದಲ ಆಟಗಾರ್ತಿ ಎನಿಸಿ ದರು. ಆ ವರ್ಷ ಮೇರಿಯನ್ ಬರ್ತೊಲಿ ನಾಲ್ಕರ ಘಟ್ಟ ತಲುಪಿದ್ದರು.

22 ವರ್ಷದ ಲೋಯಿಸ್‌ ಕಳೆದ ವರ್ಷ ಇಲ್ಲಿ ಆಡಬೇಕಾಗಿತ್ತು. ಆದರೆ ಮೊಣಕಾಲು ನೋವಿನಿಂದ ಕಣಕ್ಕಿಳಿ
ದಿರಲಿಲ್ಲ. ವಿಶ್ವ ಕ್ರಮಾಂಕದಲ್ಲಿ 361ನೇ ಸ್ಥಾನದಲ್ಲಿರುವ ಲೋಯಿಸ್‌ ಅವರು 40 ವರ್ಷಗಳಲ್ಲಿ ಪ್ರಮುಖ ಟೂರ್ನಿಯೊಂದರ ಸೆಮಿಫೈನಲ್ ತಲುಪಿದ ಅತಿ ಕಡಿಮೆ ರ‍್ಯಾಂಕಿನ ಆಟಗಾರ್ತಿ ಎನಿಸಿದ್ದಾರೆ. 1989ರಲ್ಲಿ ಮೋನಿಕಾ ಸೆಲೆಸ್‌ ಮತ್ತು ಜೆನಿಫರ್ ಕೇಪ್ರಿಯಾಟಿ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿಯ ಪದಾರ್ಪಣೆ
ಯಲ್ಲೇ ಸೆಮಿಫೈನಲ್ ತಲುಪಿದ್ದರು. ಅವರ ನಂತರ ಲೋಯಿಸ್‌ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎನಿಸಿದರು.

‘ಇಷ್ಟೊಂದು ಜನರ ಮುಂದೆ ಆಡುವುದು ಮತ್ತು ಇಂಥ ಬೆಂಬಲದ ಅನುಭವ ಪಡೆಯುವುದು ರೋಚಕ ಎನಿಸುತ್ತದೆ’ ಎಂದು ವಸ್ಸೂನ್ ಹೇಳಿದರು.

ಅಮೆರಿಕದ ಕೊಕೊ ಗಾಫ್‌ ಅವರು ಎಂಟರ ಘಟ್ಟದ ಪಂದ್ಯದಲ್ಲಿ ಸ್ವದೇಶದ ಮ್ಯಾಡಿಸನ್ ಕೀಸ್‌ ಅವರನ್ನು 6–7 (6/8), 6–4, 6–1 ರಿಂದ ಸೋಲಿಸಿದರು. ಕೀಸ್ ಅವರು ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದಾರೆ.

ರೋಲಂಡ್‌ ಗ್ಯಾರೋಸ್‌ನಲ್ಲಿ ಸತತ ನಾಲ್ಕನೇ ಪ್ರಶಸ್ತಿಯ ಅಭಿಯಾನ ದಲ್ಲಿರುವ ಹಾಲಿ ಚಾಂಪಿಯನ್ ಇಗಾ ಶ್ವಾಂಟೆಕ್ ಗುರುವಾರ ನಡೆಯುವ ಇನ್ನೊಂದು ಸೆಮಿಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ (ಬೆಲರೂಸ್‌) ವಿರುದ್ಧ ಆಡಲಿದ್ದಾರೆ. ಗಾಫ್‌ 2022ರ ಟೂರ್ನಿಯಲ್ಲಿ ಇಲ್ಲಿ ಫೈನಲ್‌ನಲ್ಲಿ ಸೋತಿದ್ದರು.

ಸಿನ್ನರ್‌ಗೆ ಸುಲಭ ಜಯ: ಅಗ್ರ ಶ್ರೇಯಾಂಕದ ಯಾನಿಕ್ ಸಿನ್ನರ್ ಪುರುಷರ ವಿಭಾಗದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ ಅಲೆಕ್ಸಾಂಡರ್‌ ಬುಬ್ಲಿಕ್ ಅವರನ್ನು ನೇರ ಸೆಟ್‌ಗಳಿಂದ ಸದೆಬಡಿದು ಸತತ ಎರಡನೇ ಬಾರಿ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿದರು.

ಬುಧವಾರ ಒಂದು ಗಂಟೆ 49 ನಿಮಿಷಗಳ ಕಾಲ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಇಟಲಿಯ ಆಟಗಾರ 6–1, 7–5, 6–0 ಯಿಂದ ಕಜಕಸ್ತಾನದ ಆಟಗಾರನನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.