ಟ್ರೋಫಿಯೊಂದಿಗೆ ಜಾಕ್ ಡ್ರೇಪರ್
ಇಂಡಿಯನ್ಸ್ ವೆಲ್ಸ್: ಬ್ರಿಟನ್‌ನ ಜಾಕ್ ಡ್ರೇಪರ್ ಅವರು 6–2, 6–2 ರಿಂದ ಡೆನ್ಮಾರ್ಕ್‌ನ ಹೋಲ್ಗರ್ ರೂನ್ ಅವರನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿ ಭಾನುವಾರ ಬಿಎನ್‌ಪಿ ಪರಿಬಾಸ್ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಆ ಮೂಲಕ ಎರಡು ಮೈಲಿಗಲ್ಲುಗಳನ್ನೂ ಸಾಧಿಸಿದರು.
ಇದು, 23 ವರ್ಷ ವಯಸ್ಸಿನ ಡ್ರೇಪರ್ ಅವರಿಗೆ ‘ಮಾಸ್ಟರ್ಸ್ 1000’ ಮಟ್ಟದ ಮೊದಲ ಪ್ರಶಸ್ತಿ. ಇದರ ಜೊತೆಗೆ ಅವರು ಎಟಿಪಿ ರ್‍ಯಾಂಕಿಂಗ್‌ನಲ್ಲಿ ಮೊದಲ ಬಾರಿ ಅಗ್ರ 10ರ ಒಳಗೆ ಸ್ಥಾನ ಪಡೆದರು. ಅವರು ಹೊಸದಾಗಿ ಬಿಡುಗಡೆಯಾಗುವ ಕ್ರಮಾಂಕಪಟ್ಟಿಯಲ್ಲಿ 14ನೇ ಕ್ರಮಾಂಕದಿಂದ ಏಳನೇ ಕ್ರಮಾಂ ಕಕ್ಕೆ ಬಡ್ತಿ ಪಡೆಯಲಿದ್ದಾರೆ.
ಕ್ಯಾಲಿಫೋನಿಯಾದ ಈ ಹಾರ್ಡ್ ಕೋರ್ಟ್ ಟೂರ್ನಿಯಲ್ಲಿ ಡ್ರೇಪರ್ 13ನೇ ಶ್ರೇಯಾಂಕ ಪಡೆದಿದ್ದರು. ಸಿಡಿಸಿದ ವಿನ್ನರ್‌ಗಳ ಪ್ರಮಾಣ 21–7. ಡ್ರೇಪರ್ ಅವರಿಂದ ಸ್ವಯಂಕೃತ ತಪ್ಪುಗಳೂ ತುಂಬಾ ಕಡಿಮೆ ಇದ್ದವು. ಈ ಎಡಗೈ ಆಟಗಾರ 10 ಏಸ್‌ಗಳನ್ನು ಹಾಕಿದರು, ಅಷ್ಟೇ ಅಲ್ಲ, 21 ವರ್ಷ ವಯಸ್ಸಿನ ರೂನ್‌ಗೆ ಒಮ್ಮೆಯೂ ಬ್ರೇಕ್ ಪಾಯಿಂಟ್ ಪಡೆಯಲು ಅವಕಾಶ ನೀಡಲಿಲ್ಲ.
ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಅಮೆರಿಕ ಓಪನ್‌ನಲ್ಲಿ ಡ್ರೇಪರ್ ಸೆಮಿಫೈನಲ್ ತಲುಪಿದ್ದರು.
2009ರಲ್ಲಿ, ಆಗ 22 ವರ್ಷ ವಯಸ್ಸಿನ ರಫೆಲ್ ನಡಾಲ್ (ಸ್ಪೇನ್) ಫೈನಲ್‌ನಲ್ಲಿ ತಮಗಿಂತ ಒಂದು ವರ್ಷ ಕಿರಿಯರಾಗಿದ್ದ ಆ್ಯಂಡಿ ಮರ‍್ರೆ (ಬ್ರಿಟನ್) ಅವರನ್ನು ಸೋಲಿಸಿದ ನಂತರ, ಇದೇ ಮೊದಲ ಬಾರಿ 23 ವರ್ಷದೊಳಗಿನ ಆಟಗಾರರಿಬ್ಬರು ಫೈನಲ್‌ನಲ್ಲಿ ಎದುರಾಗಿದ್ದರು.
ಇದಕ್ಕೆ ಮೊದಲು, 17 ವರ್ಷ ವಯಸ್ಸಿನ ಮಿಯೆರಾ ಆಂಡ್ರೀವಾ ಅವರು ಮಹಿಳಾ ಸಿಂಗಲ್ಸ್ ಫೈನಲ್ ಗೆದ್ದು ಸತತ ಎರಡನೇ ಮಾಸ್ಟರ್ಸ್ 1000 ಕಿರೀಟ ಧರಿಸಿದರು. ರಷ್ಯದ ಆಟಗಾರ್ತಿ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ (ಬೆಲರೂಸ್) ಅವರನ್ನು 2–6, 6–4, 6–3 ರಿಂದ ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.