ರಷ್ಯಾದ ಮಿರಾ ಆ್ಯಂಡ್ರೀವಾ ಆಟದ ವೈಖರಿ
–ಎಎಫ್‌ಪಿ ಚಿತ್ರ
ಇಂಡಿಯನ್ ವೆಲ್ಸ್ (ಅಮೆರಿಕ): ರಷ್ಯಾದ ಯುವತಾರೆ ಮಿರಾ ಆ್ಯಂಡ್ರೀವಾ ಅವರು ಇಂಡಿಯನ್ ವೆಲ್ಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಇಗಾ ಶ್ವಾಂಟೆಕ್‌ಗೆ ಆಘಾತ ನೀಡಿ ಫೈನಲ್‌ಗೆ ಲಗ್ಗೆ ಹಾಕಿದರು.
ಶನಿವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ 17 ವರ್ಷ ವಯಸ್ಸಿನ ಆ್ಯಂಡ್ರೀವಾ 7-6 (1), 1-6, 6-3ರಿಂದ ಎರಡನೇ ಶ್ರೇಯಾಂಕದ ಶ್ವಾಂಟೆಕ್ ಅವರನ್ನು ಸೋಲಿಸಿದರು. ಇದರೊಂದಿಗೆ ಇಲ್ಲಿ ಮೂರನೇ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವ ಶ್ವಾಂಟೆಕ್ ಕನಸು ನನಸಾಗಲಿಲ್ಲ. ಅವರು 2022 ಮತ್ತು 2024ರಲ್ಲಿ ಚಾಂಪಿಯನ್ ಆಗಿದ್ದರು.
ಒಂಬತ್ತನೇ ಶ್ರೇಯಾಂಕದ ಆ್ಯಂಡ್ರೀವಾ 2001ರ ಬಳಿಕ ಇಲ್ಲಿ ಫೈನಲ್ ತಲುಪಿದ ಅತಿ ಕಿರಿಯ ವಯಸ್ಸಿನ ಸ್ಪರ್ಧಿ ಎಂಬ ಹಿರಿಮೆಗೆ ಪಾತ್ರರಾದರು. 24 ವರ್ಷಗಳ ಹಿಂದೆ ಕಿಮ್ ಕ್ಲಿಸ್ಟರ್ಸ್ (ಬೆಲ್ಜಿಯಂ) 17 ವರ್ಷ ವಯಸ್ಸಿನಲ್ಲೇ ಇಲ್ಲಿ ಫೈನಲ್ ಪ್ರವೇಶಿಸಿದ್ದರು. ಅವರು ಅಮೆರಿಕದ ಸೆರೆನಾ ವಿಲಿಯಮ್ಸ್ ವಿರುದ್ಧ ಸೋತಿದ್ದರು.
ಆ್ಯಂಡ್ರೀವಾ ಅವರು ಕಳೆದ ತಿಂಗಳು ದುಬೈನಲ್ಲಿ ತಮ್ಮ ಚೊಚ್ಚಲ ಡಬ್ಲ್ಯುಟಿಎ ಟೂರ್ ಪ್ರಶಸ್ತಿ ಗೆದ್ದು, 1000 ಶ್ರೇಣಿಯ ಕಿರೀಟ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಇದರೊಂದಿಗೆ ತನ್ನ ಪ್ರವಾಸದ ಗೆಲುವಿನ ಸರಣಿಯನ್ನು 11 ಪಂದ್ಯಗಳಿಗೆ ವಿಸ್ತರಿಸಿಕೊಂಡರು. ಮತ್ತೊಂದೆಡೆ ಕ್ಯಾಲಿಫೋರ್ನಿಯಾ ಮರುಭೂಮಿಯಲ್ಲಿ 23 ವರ್ಷ ವಯಸ್ಸಿನ ಶ್ವಾಂಟೆಕ್ ಅವರ 10 ಪಂದ್ಯಗಳ ಅಜೇಯ ಓಟಕ್ಕೆ ತಡೆಯೊಡ್ಡಿದರು.
ಆ್ಯಂಡ್ರೀವಾ ಭಾನುವಾರ ನಡೆಯುವ ಫೈನಲ್ ಹಣಾಹಣಿಯಲ್ಲಿ ಅಗ್ರಶ್ರೇಯಾಂಕದ ಅರಿನಾ ಸಬಲೆಂಕಾ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಬೆಲಾರಸ್‌ನ ಆಟಗಾರ್ತಿ 6-0, 6-1ರಿಂದ ಐದನೇ ಶ್ರೇಯಾಂಕದ ಮ್ಯಾಡಿಸನ್ ಕೀಸ್ ಅವರನ್ನು ನಿರಾಯಾಸವಾಗಿ ಹಿಮ್ಮೆಟ್ಟಿಸಿದರು. ವಿಶ್ವದ ಅಗ್ರಮಾನ್ಯ ತಾರೆ ಸಬಲೆಂಕಾ ಇಲ್ಲಿ ಮೊದಲ ಪ್ರಶಸ್ತಿ ಎದುರು ನೋಡುತ್ತಿದ್ದಾರೆ.
ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ಅಮೆರಿಕದ 30 ವರ್ಷ ವಯಸ್ಸಿನ ಕೀಸ್ ಅವರು ಮೂರು ಸೆಟ್‌ಗಳ ಹೋರಾಟದಲ್ಲಿ ಸಬಲೆಂಕಾ ಅವರನ್ನು ಮಣಿಸಿ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. ಆ ಸೋಲಿಗೆ ಬೆಲಾರಸ್‌ನ 26 ವರ್ಷ ವಯಸ್ಸಿನ ಆಟಗಾರ್ತಿ ಇಲ್ಲಿ ಮುಯ್ಯಿ ತೀರಿಸಿಕೊಂಡರು. ಅದರೊಂದಿಗೆ ಕೀಸ್ ಅವರ 16 ಪಂದ್ಯಗಳ ಗೆಲುವಿನ ಸರಣಿಯು ಕೊನೆಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.