ಯಾನಿಕ್ ಸಿನ್ನರ್ ಹಾಗೂ ಕಾರ್ಲೋಸ್ ಅಲ್ಕರಾಜ್
ಕೃಪೆ: ರಾಯಿಟರ್ಸ್
ನ್ಯೂಯಾರ್ಕ್: ಕಾರ್ಲೋಸ್ ಅಲ್ಕರಾಜ್ ಅವರು ನಾಲ್ಕು ಸೆಟ್‌ಗಳ ಫೈನಲ್ ಸೆಣಸಾಟದಲ್ಲಿ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಅಮೆರಿಕ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಬದ್ಧ ಎದುರಾಳಿಗಳ ಸೆಣಸಾಟದಲ್ಲಿ ಸ್ಪೇನ್‌ನ ಆಟಗಾರ ತಮ್ಮ ಪ್ರಭುತ್ವವನ್ನು ಮತ್ತೊಮ್ಮೆ ಸ್ಥಾಪಿಸಿದರು.
22 ವರ್ಷ ವಯಸ್ಸಿನ ಅಲ್ಕರಾಜ್ ಫೈನಲ್‌ನಲ್ಲಿ 6–2, 3–6, 6–1, 6–4 ರಿಂದ ಗೆಲುವು ಸಾಧಿಸಿ ಎರಡನೇ ಸಲ ಅಮೆರಿಕ ಓಪನ್ ಪ್ರಶಸ್ತಿ ಗೆದ್ದುಕೊಂಡರು. ಒಟ್ಟಾರೆ ಅವರಿಗೆ ಇದು ಆರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯಾಗಿದೆ.
ಜುಲೈ ತಿಂಗಳಲ್ಲಿ ವಿಂಬಲ್ಡನ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರನ ಕೈಲಿ ಅನುಭವಿಸಿದ ಸೋಲಿಗೆ ಅಲ್ಕರಾಜ್ ಇಲ್ಲಿ ಸೇಡು ತೀರಿಸಿಕೊಂಡರು. ಅದು ಪ್ರಮುಖ ಟೂರ್ನಿಗಳ ಫೈನಲ್‌ನಲ್ಲಿ ಅವರಿಗೆ ಮೊದಲ ಸೋಲಾಗಿತ್ತು.
‘ಇದು ಅಪೂರ್ವ ಅನುಭವ. ಈ ಟ್ರೋಫಿ ಎತ್ತಿಹಿಡಿಯಲು ಕಠಿಣ ಶ್ರಮ ಹಾಕಿದ್ದೆ. ಇದು ನನಗೆ ಇಲ್ಲಿ ಎರಡನೇ ಟ್ರೋಫಿ. ಆದರೆ ಕನಸು ನನಸಾದ ಹಾಗೆ ಅನಿಸುತ್ತಿದೆ’ ಎಂದು ಎರಡನೇ ಶ್ರೇಯಾಂಕದ ಅಲ್ಕರಾಜ್ ಪ್ರತಿಕ್ರಿಯಿಸಿದರು.
ಅಗ್ರಪಟ್ಟ: ಇಲ್ಲಿ ಪಡೆದ ಪ್ರಶಸ್ತಿಯೊಂದಿಗೆ ಅಲ್ಕರಾಜ್ ಅವರು ಸೆಪ್ಟೆಂಬರ್ 2023ರ ನಂತರ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಸಿನ್ನರ್ ಅವರನ್ನು ಹಿಂದೆಹಾಕಿ ಮರಳಿ ಅಗ್ರಸ್ಥಾನಕ್ಕೇರಿದರು. ಮಾತ್ರವಲ್ಲ, ಹಾರ್ಡ್‌ಕೋರ್ಟ್‌ನಲ್ಲಿ 25 ವರ್ಷದ ಸಿನ್ನರ್ ಅವರ ಸತತ 27 ಗೆಲುವುಗಳ ಸರಪಣಿಯನ್ನು ತುಂಡರಿಸಿದರು.
‘ಅಗ್ರಪಟ್ಟವನ್ನು (ವಿಶ್ವ ಕ್ರಮಾಂಕದಲ್ಲಿ) ಮರಳಿ ಪಡೆಯುವುದು ನನ್ನ ಗುರಿಗಳಲ್ಲಿ ಒಂದಾಗಿತ್ತು’ ಎಂದು ಅಲ್ಕರಾಜ್ ಹೇಳಿದರು.
ಅಲ್ಕರಾಜ್ ಅವರು ಸಿನ್ನರ್ ಎದುರಿನ ಈ ಹಿಂದಿನ ಎಂಟು ಮುಖಾಮುಖಿಗಳಲ್ಲಿ ಏಳನ್ನು ಗೆದ್ದಂತಾಗಿದೆ. ಒಟ್ಟಾರೆ ಸಿನ್ನರ್ ವಿರುದ್ಧ ಅವರು 10–5 ಗೆಲುವಿನ ದಾಖಲೆ ಹೊಂದಿದ್ದಾರೆ.
ಕಳೆದ ಎಂಟು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಇವರಿಬ್ಬರು ತಲಾ ನಾಲ್ಕನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ವಿಶ್ವ ಟೆನಿಸ್‌ನಲ್ಲಿ ಹಳೆಯ ಹುಲಿ ನೊವಾಕ್ ಜೊಕೊವಿಚ್ ಅವರನ್ನೂ ಸೇರಿದಂತೆ ಎಲ್ಲರ ಮೇಲೂ ಪ್ರಾಬಲ್ಯ ಮೆರೆದಿದ್ದಾರೆ.
ಫ್ಲಷಿಂಗ್ ಮಿಡೋಸ್‌ನಲ್ಲಿ ದಶಕಕ್ಕೂ ಹೆಚ್ಚು ಸಮಯದಿಂದ ಯಾರೂ ಪ್ರಶಸ್ತಿ ಉಳಿಸಿಕೊಂಡಿಲ್ಲ. ಕಳೆದ ಸಲದ ವಿಜೇತ ಸಿನ್ನರ್ ಸಹ ಆ ಸಾಲಿಗೆ ಸೇರಿದರು. ರೋಜರ್ ಫೆಡರರ್ ಅವರು 2004 ರಿಂದ 08ರವರೆಗೆ ಸತತ ಐದು ಸಲ ಪ್ರಶಸ್ತಿ ಗೆದ್ದಿದ್ದರು. ನಂತರ ಯಾರೂ ಇಲ್ಲಿ ಸತತವಾಗಿ ಚಾಂಪಿಯನ್ ಆಗಿಲ್ಲ.
ಮೊದಲ ಸೆಟ್‌ನಲ್ಲಿ ಎರಡು ಬಾರಿ ಸರ್ವ್ ಬ್ರೇಕ್ ಮಾಡಿ 5–2 ಮುನ್ನಡೆ ಪಡೆದ ಅಲ್ಕರಾಜ್, ಇಟಲಿಯ ಆಟಗಾರನನ್ನು ಒತ್ತಡಕ್ಕೆ ಸಿಲುಕಿಸಿದರು. ನಂತರ ಒಂದೂ ಪಾಯಿಂಟ್ ನೀಡದೇ ಎಂಟನೇ ಗೇಮ್ ಮತ್ತು ಸೆಟ್ ಕೈವಶ ಮಾಡಿಕೊಂಡರು.
ಎರಡನೇ ಗೇಮ್‌ನಲ್ಲಿ ಅಲ್ಕರಾಜ್ ಸರ್ವ್ ಬ್ರೇಕ್ ಮಾಡಿ ಸಿನ್ನರ್ 3–1 ಮುನ್ನಡೆ ಪಡೆದರು. ಸ್ಪೇನ್ ಆಟಗಾರ ಸರ್ವ್‌ಗಳು ತೀಕ್ಷತೆ ಕಳೆದುಕೊಂಡಂತೆ ಕಂಡಿತು. ಸೆಟ್ 1–1 ಸಮಬಲಗೊಂಡಿತು. ಆದರೆ ಮೂರನೇ ಸೆಟ್‌ನಲ್ಲಿ ಅಲ್ಕರಾಜ್ ಚೇತರಿಸಿಕೊಂಡರು. ಸೊಗಸಾದ ಬೇಸ್‌ಲೈನ್ ಸ್ಮ್ಯಾಶ್ ಮೂಲಕ ಅವರು 3–0 ಮುನ್ನಡೆ ಪಡೆದರು. ನಂತರ ಸೆಟ್ ಗೆಲ್ಲಲು ಕಷ್ಟಪಡಲಿಲ್ಲ. ಅಂತಿಮ ಸೆಟ್‌ನಲ್ಲಿ ಅಲ್ಕರಾಜ್ ಮೇಲುಗೈ ಮುಂದುವರಿಯಿತು.
ಪಂದ್ಯ ಅರ್ಧ ಗಂಟೆ ತಡವಾಗಿ ಆರಂಭ
ಟ್ರಂಪ್ ಅವರು ಫೈನಲ್ ಪಂದ್ಯ ವೀಕ್ಷಣೆಗೆ ಆಗಮಿಸಿದ ಕಾರಣ ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಯಿತು. ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಬರಲು ಹೆಚ್ಚುವರಿ 30 ನಿಮಿಷ ನೀಡಲಾಯಿತು. ಹೀಗಾಗಿ ಪಂದ್ಯ ತಡವಾಗಿ ಆರಂಭವಾಯಿತು.
ಮೊದಲ ಸೆಟ್‌ನ ಮೊದಲ ಗೇಮ್‌ನಲ್ಲಿ ಅಲ್ಕರಾಜ್ ಎದುರಾಳಿ ಸಿನ್ನರ್ ಸರ್ವ್ ಬ್ರೇಕ್ ಮಾಡಿದಾಗ ಕ್ರೀಡಾಂಗಣ ಮುಕ್ಕಾಲು ಪಾಲು ಸಹ ಭರ್ತಿಯಾಗಿರಲಿಲ್ಲ.
ಚಾಂಪಿಯನ್ ಅಲ್ಕರಾಜ್ ಪಡೆದ ಬಹುಮಾನ – ₹43.98 ಕೋಟಿ
ರನ್ನರ್ ಅಪ್ ಸಿನ್ನರ್ ಗಳಿಸಿದ ಬಹುಮಾನ – ₹21,99 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.