ADVERTISEMENT

Wimbledon 2025: ಇಗಾ ಶ್ವಾಂಟೆಕ್‌ಗೆ ವಿಂಬಲ್ಡನ್ ಕಿರೀಟ

ರಾಯಿಟರ್ಸ್
Published 12 ಜುಲೈ 2025, 19:18 IST
Last Updated 12 ಜುಲೈ 2025, 19:18 IST
<div class="paragraphs"><p>ಪೋಲೆಂಡ್‌ನ ಇಗಾ ಶ್ವಾಂಟೆಕ್‌ ವಿಂಬಲ್ಡನ್‌ ಟ್ರೋಫಿಯೊಂದಿಗೆ.</p><p><br></p></div>

ಪೋಲೆಂಡ್‌ನ ಇಗಾ ಶ್ವಾಂಟೆಕ್‌ ವಿಂಬಲ್ಡನ್‌ ಟ್ರೋಫಿಯೊಂದಿಗೆ.


   

ಲಂಡನ್‌: ನಿರೀಕ್ಷೆ ಮೀರಿ ಏಕಪಕ್ಷೀಯವಾದ ಫೈನಲ್‌ನಲ್ಲಿ ಎಂಟನೇ ಶ್ರೇಯಾಂಕದ ಇಗಾ ಶ್ವಾಂಟೆಕ್‌ 6–0, 6–0 ಯಿಂದ ಅಮೆರಿಕದ ಅಮಂಡಾ ಅನಿಸಿಮೋವಾ ಅವರನ್ನು ಬಗ್ಗುಬಡಿದು ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಈ ಪ್ರಶಸ್ತಿ ಗೆದ್ದ ಪೋಲೆಂಡ್‌ನ ಮೊದಲ ಆಟಗಾರ್ತಿ ಅವರು.

ADVERTISEMENT

ಅನುಭವಿ ಶ್ವಾಂಟೆಕ್‌, 13ನೇ ಶ್ರೇಯಾಂಕದ ಅನಿಸಿಮೋವಾ ಅವರನ್ನು ಶನಿವಾರ ಕೇವಲ 57 ನಿಮಿಷಗಳಲ್ಲಿ ಸೋಲಿಸಿದರು. ಸೆಂಟರ್‌ ಕೋರ್ಟ್‌ ಪ್ರೇಕ್ಷಕರು ಪಂದ್ಯ ಸಾಗಿದ ರೀತಿ ಕಂಡು ನಿಬ್ಬೆರಗಾದರು. ಸೆಮಿಫೈನಲ್‌ನಲ್ಲಿ ಅಗ್ರ ಕ್ರಮಾಂಕದ ಅರಿನಾ ಸಬಲೆಂಕಾ ಅವರಿಗೆ ಆಘಾತ ನೀಡಿ  ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಫೈನಲ್ ತಲುಪಿದ ಅನಿಸಿಮೋವಾ ಇಲ್ಲಿ ಹೋರಾಟ ತೋರ
ಬಹುದೆಂಬ ನಿರೀಕ್ಷೆಯಿತ್ತು. ಆದರೆ ಅವ ರಿಗೆ ಈ ಪಂದ್ಯ ದುಃಸ್ವಪ್ನದಂತೆ ಆಯಿತು.

1911ರ ನಂತರ ವಿಂಬಲ್ಡನ್‌ ಫೈನಲ್ ಪಂದ್ಯವನ್ನು 6–0, 6–0 ಯಿಂದ ಸೋತ ಮೊದಲ ಆಟಗಾರ್ತಿ ಎನ್ನುವ ಅನಪೇಕ್ಷಿತ ದಾಖಲೆ ಅನಿಸಿಮೋವಾ ಅವರದಾಯಿತು. 1988ರಲ್ಲಿ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಸ್ಟೆಫಿ ಗ್ರಾಫ್‌ ಅವರು ನತಾಶಾ ಜ್ವರೇವಾ ಅವರನ್ನು ಇದೇ ರೀತಿ ಸದೆಬಡಿದ ನಂತರ ಯಾವುದೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಈ ರೀತಿಯ ಸ್ಕೋರ್‌ಲೈನ್‌ ಕಂಡಿರಲಿಲ್ಲ.

ನಾಲ್ಕು ಬಾರಿ ಫ್ರೆಂಚ್‌ ಓಪನ್ ಮತ್ತು ಒಮ್ಮೆ ಅಮೆರಿಕ ಓಪನ್ ಗೆದ್ದು ಹಾರ್ಡ್‌ಕೋರ್ಟ್‌ ಆಟಗಾರ್ತಿ ಎಂಬ ಖ್ಯಾತಿ ಹೊಂದಿದ್ದ ಶ್ವಾಂಟೆಕ್‌ ಹುಲ್ಲುಹಾಸಿನ ಈ ಟೂರ್ನಿಯ ಅಂತಿಮ ಪಂದ್ಯವನ್ನು ಇಷ್ಟು ಸಲೀಸಾಗಿ ಜಯಿಸುತ್ತೇನೆಂದು ಕನಸಿನಲ್ಲೂ ಎಣಿಸಿರಲಿಕ್ಕಿಲ್ಲ. ಅವರು  ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಈ ಹಿಂದಿನ ಭೇಟಿಗಳಲ್ಲಿ ಎಂದೂ ಕ್ವಾರ್ಟರ್‌ಫೈನಲ್‌ ದಾಟಿರಲಿಲ್ಲ. 

ಸೆಮಿಫೈನಲ್‌ನಲ್ಲಿ ಬೆಲಿಂಡಾ ಬೆನ್ಸಿಕ್ ಅವರಿಗೆ ಕೇವಲ ಎರಡು ಗೇಮ್‌ ಬಿಟ್ಟುಕೊಟ್ಟಿದ್ದರು. ಫೈನಲ್‌ನಲ್ಲಿ ಇನ್ನೂ ನಿರ್ದಯ ಆಟವಾಡಿದರು. ಒಟ್ಟಾರೆ ಫೈನಲ್ ಹಾದಿಯಲ್ಲಿ ಪೋಲೆಂಡ್‌ ತಾರೆ ಬಿಟ್ಟುಕೊಟ್ಟಿದ್ದು ಒಂದು ಸೆಟ್‌ ಮಾತ್ರ.

ಈ ಮೂಲಕ ಅವರು ಇದುವರೆಗೆ ಆಡಿದ ಎಲ್ಲ ಆರೂ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗಳಲ್ಲಿ ಜಯಶಾಲಿ ಆದಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.