ರೋಹಿತ್ ಶರ್ಮಾ
(ರಾಯಿಟರ್ಸ್ ಚಿತ್ರ)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಮುಖಾಮುಖಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಈ ರೋಚಕ ಹಣಾಹಣಿ ಮುಂಬೈನ ವಾಂಖೆಡೆ ಮೈದಾನದಲ್ಲಿ ನವೆಂಬರ್ 15, ಬುಧವಾರದಂದು ನಡೆಯಲಿದೆ.
ಲೀಗ್ ಹಂತದಲ್ಲಿ ಆಡಿದ ಎಲ್ಲ ಒಂಬತ್ತು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಅಜೇಯ ಓಟ ಮುಂದುವರಿಸುವ ತವಕದಲ್ಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಾಯಕ ರೋಹಿತ್ ಶರ್ಮಾ, ಹಿಂದಿನ ಫಲಿತಾಂಶಗಳ ಬಗ್ಗೆ ಯೋಚಿಸದೇ ಸೆಮಿಫೈನಲ್ ಪಂದ್ಯದ ಮೇಲೆ ಗಮನ ಕೇಂದ್ರಿಕರಿಸಬೇಕಿದೆ ಎಂದು ಹೇಳಿದ್ದಾರೆ.
ನಾವು ಮೊದಲ ವಿಶ್ವಕಪ್ (1983) ಗೆದ್ದಾಗ ತಂಡದಲ್ಲಿರುವ ಹೆಚ್ಚಿನವರು ಹುಟ್ಟಿರಲಿಲ್ಲ. ಕಳೆದ ಬಾರಿ ಗೆದ್ದಾಗಲೂ (2011) ಹೆಚ್ಚಿನವರು ಕ್ರಿಕೆಟ್ ಆಡುತ್ತಿರಲಿಲ್ಲ. ಹಿಂದೆ ಏನಾಯಿತು ಎಂಬುದು ನಮಗೆಲ್ಲರಿಗೂ ಗೊತ್ತಿದೆ. 10 ವರ್ಷ ಅಥವಾ ಕಳೆದ ವಿಶ್ವಕಪ್‌ನಲ್ಲಿ ಏನಾಯಿತು ಎಂಬುದರ ಕುರಿತು ಚರ್ಚಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇನ್ನೊಂದು ತಂಡದಿಂದ ಉಂಟಾಗುವ ಒತ್ತಡ ಅಥವಾ ಸವಾಲುಗಳ ಬದಲು ಪಂದ್ಯದ ಮೇಲೆ ಗಮನ ಕೇಂದ್ರಿಕರಿಸುವುದು ಮುಖ್ಯವೆನಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಲೀಗ್ ಪಂದ್ಯವಾಗಿರಲಿ, ಸೆಮಿಫೈನಲ್ ಅಥವಾ ಫೈನಲ್ ಪಂದ್ಯವೇ ಆಗಿರಲಿ. ಒತ್ತಡ ಯಾವಾಗಲೂ ಇರುತ್ತದೆ. ಮೊದಲ ಪಂದ್ಯದಿಂದ ಕೊನೆಯವರೆಗೂ ನಾವು ಒತ್ತಡವನ್ನು ಚೆನ್ನಾಗಿ ನಿಭಾಯಿಸಿದ್ದೇವೆ ಎಂದು ಅವರು ಹೇಳಿದರು.
ನ್ಯೂಜಿಲೆಂಡ್ ಅತ್ಯಂತ ಶಿಸ್ತಿನ ತಂಡವಾಗಿದೆ. ಅವರು ಅತ್ಯುತ್ತಮ ಕ್ರಿಕೆಟ್ ಆಡುತ್ತಾರೆ. ಎದುರಾಳಿ ತಂಡದ ಬಲಾಬಲವನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಮನೋಸ್ಥಿತಿಯನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆ. ಐಸಿಸಿ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.
ನಾನು 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಅಂಗವಾಗಿರಲಿಲ್ಲ. 2015 ಹಾಗೂ 2019ರ ತಂಡಗಳ ಭಾಗಿವಾಗಿದ್ದೆ. ಆದರೆ ಯಾವ ತಂಡ ಉತ್ತಮ ಎಂದು ಹೇಳುವುದು ತುಂಬಾ ಕಷ್ಟ. 2019ಕ್ಕಿಂತ ಈಗಿನ ತಂಡ (2023) ಉತ್ತಮ ಎಂದು ನಾನು ಹೇಳಲಾರೆ. ಆದರೆ ಪ್ರತಿಯೊಬ್ಬ ಆಟಗಾರನ ಪಾತ್ರವು ಸ್ಪಷ್ಟವಾಗಿದೆ ಎಂದಷ್ಟೇ ಹೇಳಬಲ್ಲೆ. ಅದೃಷ್ಟವು ಸಾಥ್ ನೀಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ (2019) ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಭಾರತದ ಪ್ರಶಸ್ತಿ ಕನಸು ಭಗ್ನಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.