ADVERTISEMENT

T20 World Cup | ಅಬ್ಬರಿಸಿದ ಲಂಕಾ; ಒಮಾನ್ ತಂಡಕ್ಕೆ 105 ರನ್‌ ಸೋಲು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 13:02 IST
Last Updated 12 ಫೆಬ್ರುವರಿ 2026, 13:02 IST
<div class="paragraphs"><p>ಕುಸಲ್ ಮೆಂಡಿಸ್</p></div>

ಕುಸಲ್ ಮೆಂಡಿಸ್

   

ಕ್ಯಾಂಡಿ: ಕುಸಲ್ ಮೆಂಡಿಸ್‌, ಪವನ್ ರತ್ನಾಯಕೆ ಮತ್ತು ದಸುನ್ ಶನಕ ಅವರ ಬಿರುಸಿನ ಅರ್ಧ ಶತಕಗಳ ನೆರವಿನಿಂದ ಶ್ರೀಲಂಕಾ ತಂಡ, ಪೆಲ್ಲೆಕೆಲೆಯಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ ‘ಬಿ’ ಗುಂಪಿನ ಲೀಗ್‌ ಪಂದ್ಯದಲ್ಲಿ ದುರ್ಬಲ ಒಮಾನ್ ತಂಡವನ್ನು 105 ರನ್‌ಗಳಿಂದ ನಿರಾಯಾಸವಾಗಿ ಸೋಲಿಸಿತು.

ಈ ಮೂವರಲ್ಲಿ, ನಾಯಕ ಶನಕ ಕೇವಲ 19 ಎಸೆತಗಳಲ್ಲಿ 50 ರನ್ ಬಾರಿಸಿ, ಶ್ರೀಲಂಕಾ ಪರ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧ ಶತಕ ದಾಖಲಿಸಿದ ಗೌರವಕ್ಕೆ ಪಾತ್ರರಾದರು. ಜಂಟಿ ಆತಿಥೇಯ ತಂಡ 5 ವಿಕೆಟ್‌ಗೆ 225 ರನ್ ಹೊಡೆಯಿತು. ಇದು ಹಾಲಿ ಟಿ20 ವಿಶ್ವಕಪ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತವೆನಿಸಿತು. ಉತ್ತರವಾಗಿ ಒಮಾನ್ 9 ವಿಕೆಟ್‌ಗೆ 120 ರನ್ ಗಳಿಸಿ ಸುಲಭವಾಗಿ ಶರಣಾಯಿತು.

ADVERTISEMENT

ಶನಕ ಅವರು ಐದು ಭರ್ಜರಿ ಸಿಕ್ಸರ್‌ಗಳ ಜೊತೆ ಎರಡು ಬೌಂಡರಿಗಳನ್ನು ಬಾರಿಸಿದರು. ಅವರು ಮೂರು ವರ್ಷ ಹಿಂದೆ ಪುಣೆಯಲ್ಲಿ ಭಾರತದ ವಿರುದ್ಧ 29 ಎಸೆತಗಳಲ್ಲಿ 50 ರನ್ ಗಳಿಸಿದ್ದು ಇದುವರೆಗಿನ ವೇಗದ ಅರ್ಧಶತಕ ಎನಿಸಿತ್ತು. ಈ ಮೈಲಿಗಲ್ಲು ತಲುಪಿದ ತಕ್ಷಣ ಅವರು ಜಿತೇನ್ ರಾಮನಂದಿ ಬೌಲಿಂಗ್‌ನಲ್ಲಿ ಬೌಂಡರಿಗೆರೆಯ ಬಳಿ ಕ್ಯಾಚಿತ್ತರು.

ಪಥುಮ್ ನಿಸಾಂಕ (13) ಮತ್ತು ಕಮಿಲ್ ಮಿಶಾರ (8) ವಿಫಲರಾದರೂ ಲಂಕಾದ ರನ್‌ವೇಗ ತಗ್ಗಲಿಲ್ಲ. ಕುಸಲ್ ಮೆಂಡಿಸ್‌ 45 ಎಸೆತಗಳಲ್ಲಿ 7 ಬೌಂಡರಿಗಳಿದ್ದ 61 ರನ್ ಗಳಿಸಿದರೆ, ಪವನ್ ರತ್ನಾಯಕೆ ಕೇವಲ 28 ಎಸೆತಗಳಲ್ಲಿ 60 ರನ್ (4x8, 6x1) ಸಿಡಿಸಿದರು. ರತ್ನಾಯಕೆ ಮತ್ತು ಮೆಂಡಿಸ್‌ ಮೂರನೇ ವಿಕೆಟ್‌ಗೆ 94 ರನ್ ಜೊತೆಯಾಟದ ಉತ್ತಮ ಮೊತ್ತಕ್ಕೆ ಅಡಿಪಾಯ ಹಾಕಿಕೊಟ್ಟಿದ್ದರು.

ಪ್ರಮುಖ ಸ್ಪಿನ್ನರ್ ವನಿಂದ ಹಸರಂಗ ಗಾಯಾಳಾಗಿದ್ದರೂ, ಲಂಕನ್ನರ ಬೌಲಿಂಗ್ ಪಡೆ ಒಮಾನ್ ಆಟಗಾರರಿಗೆ ಹೋರಾಟದ ಅವಕಾಶ ನೀಡಲಿಲ್ಲ. ಒಮಾನ್‌ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ಮೊಹಮ್ಮದ್ ನದೀಂ ಅಜೇಯ 53 ರನ್ ಗಳಿಸಿದರು. 43 ವರ್ಷ ವಯಸ್ಸಿನ ನದೀಂ, ಟಿ20 ವಿಶ್ವಕಪ್‌ನಲ್ಲಿ ಅರ್ಧ ಶತಕ ಬಾರಿಸಿದ ಅತಿ ಹಿರಿಯ ಆಟಗಾರ ಎನಿಸಿದರು.

ಸಂಕ್ಷಿಪ್ತ ಸ್ಕೋರು...

ಶ್ರೀಲಂಕಾ: 20 ಓವರುಗಳಲ್ಲಿ 5 ವಿಕೆಟ್‌ಗೆ 225 (ಕುಸಲ್ ಮೆಂಡಿಸ್ 61, ಪವನ್ ರತ್ನಾಯಕೆ 60, ದಸುನ್ ಶನಕ 50; ಜಿತೆನ್ ರಾಮನಂದಿ 41ಕ್ಕೆ2);

ಒಮಾನ್: 20 ಓವರುಗಳಲ್ಲಿ 9 ವಿಕೆಟ್‌ಗೆ 120 (ಮೊಹಮ್ಮದ್ ನದೀಮ್ ಔಟಾಗದೇ 53, ವಸೀಂ ಅಲಿ 27; ದುಶ್ಮಂತ ಚಮೀರ 19ಕ್ಕೆ2, ಮಹೀಷ ತೀಕ್ಷಣ 11ಕ್ಕೆ2). ಪಂದ್ಯದ ಆಟಗಾರ: ಪವನ್ ರತ್ನಾಯಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.