
‘I don’t need a hard disk in my computer if I can get to the server faster… carrying around these non-connected computers is byzantine by comparison’. ಎನ್ನುವ ಮಾತನ್ನು 1997ರಲ್ಲಿ ಆ್ಯಪಲ್ ಕಂಪನಿಯ ಚೇರ್ಮನ್ ಆಗಿದ್ದ ಸ್ಟೀವ್ ಜಾಬ್ಸ್ ಹೇಳಿದಾಗ ಆಗಿನ್ನೂ ಡೇಟಾ ಸೆಂಟರ್ ಎನ್ನುವುದು ಮನೆ ಮನೆಯ ಮಾತಾಗಿರಲಿಲ್ಲ. ಇಂದು ನಾವು ಭಾಗವಹಿಸುವಿಕೆಯ (ಪಾರ್ಟಿಸಿಪೇಷನ್) ಯುಗದಲ್ಲಿದ್ದೇವೆ. ಒಂದು ಸಾಲನ್ನು ಬರೆದು ಅಥವಾ ಪಟವನ್ನು ಪಟಕ್ಕನೆ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆವು ಅಂದರೆ ಸಾಕು ನಮಗೆ ಹಾಗೂ ಡೇಟಾ ಸೆಂಟರ್‌ಗೆ ನಂಟು ಬೆಳೆದಂತೆ. ಇವತ್ತು ನಮ್ಮ ಎಲ್ಲಾ ಮಾಹಿತಿಗಳು ಇರುವುದು ಡೇಟಾ ಸೆಂಟರ್‌ಗಳಲ್ಲಿಯೇ.
ಭಾರತದಲ್ಲಿ 275ಕ್ಕೂ ಹೆಚ್ಚು ಡೇಟಾ ಸೆಂಟರ್‌ಗಳಿವೆ ಎಂಬುದಾಗಿ ಡೇಟಾ ಸೆಂಟರ್ ಮ್ಯಾಪ್ ಹೇಳುತ್ತದೆ. ಜಗತ್ತಿನಾದ್ಯಂತ 10,000-11,000 ಡೇಟಾ ಸೆಂಟರ್‌ಗಳಿವೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಸುಮಾರು 4,000ಕ್ಕೂ ಡೇಟಾ ಡಾಟಾ ಸೆಂಟರ್‌ಗಳು ಅಮೆರಿಕದಲ್ಲಿಯೆ ಇವೆ. ಇಂದು ಅಲ್ಲಿಯ ಶೇ 4ರಷ್ಟು ವಿದ್ಯುತ್ ಬಳಕೆಯು ಡೇಟಾ ಸೆಂಟರ್‌ಗಳಿಗೇ ವ್ಯಯವಾಗುತ್ತದೆ ಅಂದರೆ ಅಚ್ಚರಿ ಪಡಬೇಕಿಲ್ಲ, 2030ರೊಳಗೆ ಈ ಮಿತಿ ದುಪ್ಪಟ್ಟಾಗಲಿದೆಯಂತೆ. ಅಲ್ಲಿ ಅಷ್ಟೊಂದು ವಿದ್ಯುತ್ ಸರಬರಾಜು ಮಾಡುವುದು ಸಾಧ್ಯವಿಲ್ಲವೆಂದೇ ಅವರೆಲ್ಲ ಭಾರತವನ್ನು ಡೇಟಾ ಸೆಂಟರ್ ಕೇಂದ್ರವಾಗಿ ಮಾಡಲು ಹೆಜ್ಜೆಯಿಡುತ್ತಿರುವುದು.
ಈ ಡೇಟಾಸೆಂಟರ್ ಅಥವಾ ದತ್ತಾಂಶ ಕೇಂದ್ರವು ಇವತ್ತಿನ ತಂತ್ರಜ್ಞಾನವಲ್ಲ, ಎಂಬತ್ತು ವರ್ಷ ಹಳೆಯದು! ಜಗತ್ತಿನ ಮೊತ್ತ ಮೊದಲ ಡೇಟಾ ಸೆಂಟರ್ ನಿರ್ಮಾಣವಾಗಿದ್ದು 1945ರಲ್ಲಿ, ಎರಡನೆಯ ಮಹಾಯುದ್ಧದ ಸಮಯದಲ್ಲಿ. ಎರಡನೇಯ ಮಹಾಯುದ್ಧದ ಕಾಲದಲ್ಲಿ ಮಿಲಿಟರಿಗೆ ನೆರವಾಗಲು ಸಂಕೀರ್ಣ ಗಣಕಶಕ್ತಿಗೆ ಬೇಕು ಎನ್ನುವ ಉದ್ದೇಶದಿಂದ ಹಾಗೆಯೇ ಮ್ಯಾನ್ ಹ್ಯಾಟನ್ ಯೋಜನೆಯಲ್ಲಿ ಅಣು ಬಾಂಬ್ ಸಂಶೋಧನೆಯ ಕಾರಣದಿಂದಲೂ ಎಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟಿಗ್ರೇಟರ್ ಆ್ಯಂಡ್ ಕಂಪ್ಯೂಟರ್ (ENIAC)ನ್ನು ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಲ್ಲಿ ನಿರ್ಮಿಸಲಾಗಿತ್ತು.
ಅವತ್ತಿನದಕ್ಕೂ ಇವತ್ತಿನದಕ್ಕೂ ಹೋಲಿಸಿದರೆ ಇವತ್ತಿನದು ಹಿಮಾಲಯ ಪರ್ವತ ಆಗಿನ ಮೊದಲ ಡೇಟಾ ಸೆಂಟರ್ ರಸ್ತೆಯ ಬದಿ ಶೇಖರಿಸಿಟ್ಟ ಮಣ್ಣಿನ ಗುಡ್ಡೆ ಅಷ್ಟೇ. ಅಂದಿನ ಡೇಟಾ ಸೆಂಟರ್‌ನ್ನು 1,800 ಚದರಡಿ ವಿಸ್ತೀರ್ಣ ಅಂದರೆ ಪುಟ್ಟ ಅಪಾರ್ಟ್‌ಮೆಂಟ್ ಗಾತ್ರದ ಜಾಗದಲ್ಲಿ ನಿರ್ಮಿಸಲಾಗಿತ್ತು. ಇಂದು ಒಂದು ಸಾಮಾನ್ಯ ಡೇಟಾ ಸೆಂಟರ್ ಕೂಡ ಹತ್ತು ಲಕ್ಷ ಚದರಡಿ ವಿಸ್ತೀರ್ಣವನ್ನು ಹೊಂದಿರುತ್ತದೆ. ಈಗಂತೂ ಡೇಟಾ ಸೆಂಟರ್‌ಗಳಲ್ಲಿ ಒಂದೇ ಕಾಲಕ್ಕೆ ಕೋಟ್ಯಂತರ ಕೆಲಸಗಳು ನಡೆಯುತ್ತವೆ; ಆಗ ಒಂದು, ಎರಡು ಹೀಗಿತ್ತು ಲೆಕ್ಕಾಚಾರ. 150 ಕಿಲೋ ವ್ಯಾಟ್ ಬಳಸಿಕೊಂಡು 30 ಟನ್ ಭಾರದ ಮಷಿನ್‌ನಲ್ಲಿ ಕುದುರೆ ಲಾಳದಾಕಾರದ ನಲವತ್ತು ವೆಕ್ಯೂಮ್ ಟ್ಯೂಬ್‌ಗಳಿದ್ದವು. ಈ ಡೇಟಾ ಸೆಂಟರ್‌ನ್ನು ಒಂದು ಹವಾನಿಯಂತ್ರಿತ ಕೋಣೆಯಲ್ಲಿ ಇಟ್ಟಿದ್ದರು. ಇಂದು ತಂತ್ರಜ್ಞಾನವೇ ಬದಲಾಗಿದೆ. ಸಿಪಿಯು ಬದಲು ಜಿಪಿಯು ಬಳಸಲಾಗುತ್ತದೆ, ಗಣಕ ಶಕ್ತಿಯ ಜೊತೆಗೆ ಡೇಟಾವನ್ನು ಸಂಗ್ರಹಿಸಿಡಲು ಹಾಗೂ ಸಾವಿರಾರು ಇತರೆ ಉಪಯೋಗಕ್ಕೂ ಡೇಟಾ ಸೆಂಟರ್ ಬಳಕೆಯಾಗುತ್ತದೆ.
ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮೌಲ್ಯವನ್ನು ಹೊಂದಿರುವ ಕಂಪನಿ ಎನ್ವಿಡಿಯಾ, ಅದರ ಮುಖ್ಯ ಉತ್ಪನ್ನವೇ ಜಿಪಿಯು, ಆ ಜಿಪಿಯುವಿಗೆ ಇರುವ ಬೇಡಿಕೆಯ ಮುಕ್ಕಾಲು ಭಾಗ ಡಾಟಾ ಸೆಂಟರ್‌ಗಳು! ಅಂದು ಡೇಟಾ ಸೆಂಟರ್‌ಗಳ ಕ್ಷಮತೆಯನ್ನು MIPS ಅಂದರೆ ಮಿಲಿಯನ್ ಇನ್ಸ್ಟ್ರಕ್ಷನ್ಸ್ ಪರ್ ಸೆಕೆಂಡ್ ಮೂಲಕ ಅಳೆಯಲಾಗುತ್ತಿತ್ತು ಈಗ ಅದನ್ನು FLOPS ಅಂದರೆ ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್ ಮೂಲಕ ಅಳೆಯಲಾಗುತ್ತದೆ. ಹಾಗೆಯೇ ಡೇಟಾ ಸೆಂಟರ್ ಉಷ್ಣತೆಯು ಹೆಚ್ಚದಂತೆ ತಾಪಮಾನವನ್ನು ನಿಯಂತ್ರಿಸುವ ತಂತ್ರಜ್ಞಾನ ಕೂಡ ಸಂಪೂರ್ಣವಾಗಿ ಬದಲಾಗಿದೆ. ಇವೆಲ್ಲ ಒಂದೇ ರಾತ್ರಿಯಲ್ಲಿ ಆಗಿಲ್ಲ, ಹಂತ ಹಂತವಾಗಿ ಬೆಳೆದುಕೊಂಡು ಬಂದಿದೆ.
ENAIC ನಂತರ ಒಂದು ಉತ್ತಮವಾದ ಡೇಟಾ ಸೆಂಟರ್ ನಿರ್ಮಾಣವನ್ನು ಮಾಡಿದ್ದು ಐಬಿಎಮ್, ಅದು 1970ರಲ್ಲಿ. ಮೊತ್ತ ಮೊದಲ ಬಾರಿಗೆ ಅದೊಂದು ಕಮರ್ಷಿಯಲ್ ಡೇಟಾ ಸೆಂಟರ್ ಆಗಿ ಅವತಾರವನ್ನು ತಾಳಿತು ಅನ್ನೋಣ. 1980ರ ವೇಳೆಗೆ ಮೈಕ್ರೊಕಂಪ್ಯೂಟರ್ ಬಳಕೆಯು ಸ್ಪೋಟಗೊಂಡಿತ್ತು; ಆಗ ಡೇಟಾ ಸೆಂಟರ್ ಬಳಕೆಯೂ ಕೂಡ ಜನರಿಗೆ ಅಗತ್ಯವಾಗಲು ಶುರುವಾಯಿತು. ನಿಜವಾಗಿಯೂ ಡೇಟಾ ಸೆಂಟರ್‌ಗಳಿಗೆ ಬೇಡಿಕೆಯನ್ನು ಹೆಚ್ಚು ಮಾಡಿದ್ದು ಅಂತರ್ಜಾಲದ ಬಳಕೆ. ನಂತರ ಅಮೆಜಾನ್ ಕಂಪನಿಯು ಕ್ಲೌಡ್ ಕಂಪ್ಯೂಟಿಂಗ್ ಎನ್ನುವ ಒಂದು ಹೊಸ ವಿಚಾರವನ್ನು ಹೊರಗಡೆಗೆ ಬಿಟ್ಟಿತು, ಅಲ್ಲಿಂದಲೇ ಡೇಟಾ ಸೆಂಟರ್ ವ್ಯಾಪಾರವು ತೆರೆಯನ್ನು ಬಿಚ್ಚಿಕೊಂಡಿದ್ದು; ಅದು ಈ ಶತಮಾನದ ಆರಂಭ ಕಾಲ. 2010ರ ವೇಳೆಗೆ ಸ್ಮಾರ್ಟ್ ಮೊಬೈಲ್ ಬಳಕೆಯು ಕೈ ಕೈಯನ್ನು ಸ್ಪರ್ಶಿಸಿತ್ತು ಹೀಗಾಗಿ ಬಿಗ್ ಡೇಟಾ ಅನಲಿಟಿಕ್ಸ್, ಸ್ಟ್ರೀಮಿಂಗ್ ಇತ್ಯಾದಿ ಗಳಿಗೆ ಪೂರಕವಾಗಿ ಡಾಟಾ ಸೆಂಟರ್ ಇಲ್ಲದೆ ಗತಿಯಿರಲಿಲ್ಲ. ಅಲ್ಲಿಯವರೆಗೆ ಈ ಕ್ಲೌಡ್, ಡೇಟಾ ಸೆಂಟರ್ ಎಲ್ಲವೂ ಮುಖ್ಯವಾಹಿನಿಗೆ ಬಂದಿರಲಿಲ್ಲ. 2020ರ ನಂತರದಲ್ಲಿ ಯಾವಾಗ ಏಐ ಬೂಮ್ ಶುರುವಾಯಿತೋ ಅಲ್ಲಿಂದ ಡೇಟಾ ಸೆಂಟರ್ ಜಪ ಕೂಡ ತೀವ್ರವಾಗಿ ಹೆಚ್ಚಾಗಿದೆ. ಇಂದು ಡೇಟಾ ಸೆಂಟರ್ ಎನ್ನುವುದು ಕಚ್ಛಾ ತೈಲದ ಬಾವಿಯೇ. ಯಾರ ಹತ್ತಿರ ಡಾಟಾ ಸೆಂಟರ್ ಇದೆಯೋ ಅವರೇ ಬಲಾಢ್ಯರು.
ನಾಡಿನಲ್ಲಿ ಜಾಗವಿಲ್ಲವೆಂದು ಕಾಡುಗಳನ್ನು ಕಡಿದು ಡೇಟಾ ಸೆಂಟರ್ ಮಾಡಲು ಹೊರಟಿದ್ದಾರೆ. ಇಡೀ ನದಿಯ ನೀರನ್ನು ಹರಿಸಿದರೂ ಅದನ್ನು ತಣಿಸಲು ಸಾಧ್ಯವಾಗದಷ್ಟು ಬಿಸಿಯೇರುತ್ತಿದೆ. ಡೇಟಾ ಸೆಂಟರ್ ವಿದ್ಯುತ್ ಬಳಕೆಯಂತೂ ಜಗತ್ತಿಗೇ ಸವಾಲಾಗಿದೆ. ಎಲ್ಲರಿಗೂ ತಮ್ಮ ಡೇಟಾ ಸೆಂಟರ್ ಬೇಕು. ಜಿಪಿಯು ತಂತ್ರಜ್ಞಾನವು ಹೆಚ್ಚಿದಂತೆ ಡೇಟಾ ಸೆಂಟರ್ ಕ್ಷಮತೆಯೂ ಹೆಚ್ಚುತ್ತಿದೆ, ಕ್ಷಮತೆಗೆ ತಕ್ಕಂತೆ ಬಳಕೆ! ಈಗ ಎಲ್ಲರೆದರೂ ಇರುವ ದೊಡ್ಡ ಸವಾಲು - ಡೇಟಾ ಸೆಂಟರ್ ನಲ್ಲಿರುವ ಡೇಟಾ ಸುರಕ್ಷಿತವೇ? ಮುಂದೆ ನೋಡೋಣ!
-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.