ADVERTISEMENT

ಗೂಗಲ್‌ಗೆ 27 ವರ್ಷ: ಮೊದಲ ಲೋಗೊ ಡೂಡಲ್‌ನಲ್ಲಿ ಹಂಚಿ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2025, 11:13 IST
Last Updated 27 ಸೆಪ್ಟೆಂಬರ್ 2025, 11:13 IST
   

ಬೆಂಗಳೂರು: ಯಾವುದೇ ಕ್ಷೇತ್ರದ ಯಾವುದೇ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ತೆರೆದಿಡುವ ಟೆಕ್‌ ದೈತ್ಯ ‘ಗೂಗಲ್‌’ ತನ್ನ ಕಾರ್ಯಾಚರಣೆ ಪ್ರಾರಂಭಿಸಿ ಇಂದು 27 ವರ್ಷವನ್ನು ಪೂರೈಸಿದೆ. ‘ಹುಡುಕು’ ಪದಕ್ಕೆ ಪರ್ಯಾಯ ಪದವಾಗಿ ‘ಗೂಗಲ್‌’ ಬೆಳದು ನಿಂತಿದೆ.

ಸರ್ಚ್‌ ಇಂಜಿನ್ ಮಾಸ್ಟರ್‌ ‘ಗೂಗಲ್‌’ ತನ್ನ ದಿನವನ್ನು ವಿಶೇಷವಾಗಿ ಸಂಭ್ರಮಿಸಿದ್ದು, ತನ್ನ ಮೊದಲ ಲೋಗೊವನ್ನೇ ಡೂಡಲ್‌ ಆಗಿ ಹಂಚಿಕೊಂಡಿದೆ.

ಹುಡುಕು ತಾಣವಾಗಿ(ಸರ್ಚ್‌ ಎಂಜಿನ್‌) 1996ರಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ ಗೂಗಲ್‌, ಈ 27 ವರ್ಷಗಳಲ್ಲಿ ಅದನ್ನು ಮೀರಿ ಬೆಳೆದಿದೆ. ಭಾಷಾಂತರದಿಂದ ಹಿಡಿದು ಜಾಹೀರಾತು, ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌, ಗೂಗಲ್ ಡಾಕ್ಸ್‌, ಯೂಟ್ಯೂಬ್, ಗೂಗಲ್ ಮ್ಯಾಪ್‌, ಗೂಗಲ್‌ ಕ್ಲೌಡ್‌, ಗೂಗಲ್ ಪೇ, ಗೂಗಲ್‌ ಕ್ರೋಮ್, ಗೂಗಲ್‌ ಅಸಿಸ್ಟೆಂಟ್‌, ಗೂಗಲ್‌ ಜೆಮಿನಿ ಎಐ... ಹೀಗೆ ಅದರ ವ್ಯಾಪ್ತಿ ಮುಂದುವರಿದಿದೆ.

ADVERTISEMENT

ಮೊದಲ ಲೋಗೊ

ಭಾರತೀಯ ಮೂಲದ ಸುಂದರ್ ಪಿಚೈ ಗೂಗಲ್‌ನ ಸಿಇಒ ಆಗಿದ್ದಾರೆ. ಅವರ ನೇತೃತ್ವದಲ್ಲಿ ಕಂಪನಿಯು ಮೆಶಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಇ-ಕಾಮರ್ಸ್‌ನಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಮುಂದಡಿ ಇಟ್ಟಿದೆ.

ಗೂಗಲ್‌ನ ಹುಟ್ಟು:

ಅಮೆರಿಕದ ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್‌ಗೆ 1996ರಲ್ಲಿ ‘ಬ್ಯಾಕ್‍ರಬ್’ ಎಂಬ ಹುಡುಕು ತಾಣ (ಸರ್ಚ್ ಎಂಜಿನ್) ಆರಂಭಿಸಿದರು. ಮುಂದೆ ಇದೇ ಗೂಗಲ್ ಸರ್ಚ್‌ ಎಂಜಿನ್ ಆರಂಭಕ್ಕೆ ತಳಹದಿಯಾಯಿತು. 1998ರಲ್ಲಿ 1 ಲಕ್ಷ ಡಾಲರ್ ಹೂಡಿಕೆಯೊಂದಿಗೆ ‘ಗೂಗಲ್’ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಸರ್ಚ್ ಎಂಜಿನ್ ಕಾರ್ಯಾರಂಭಿಸಿತು.

ಇದಕ್ಕೂ ಮುನ್ನ ‘ಯಾಹೂ’ ಪ್ರಮುಖ ಸರ್ಚ್ ಎಂಜಿನ್ ಆಗಿತ್ತು. 2000ರಲ್ಲಿ ಗೂಗಲ್‍ ಅನ್ನು ಯಾಹೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿತು. 300 ಕೋಟಿ ಡಾಲರ್‌ಗಳಿಗೆ ಗೂಗಲ್ ತನ್ನದಾಗಿಸಿಕೊಳ್ಳುವ ಪ್ರಸ್ತಾಪ ಇಟ್ಟಿತ್ತಾದರೂ, ಅದಕ್ಕಿಂತ ಹೆಚ್ಚು ಮೌಲ್ಯ ಹೊಂದಿರುವ ಗೂಗಲ್, ಮಾರಾಟಕ್ಕೆ ಒಪ್ಪಲಿಲ್ಲ. ಅಲ್ಲಿಂದ ಮುಂದೆ ಗೂಗಲ್ ತನ್ನದೇ ಆದ ಹಲವು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ.

ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.