ಬೆಂಗಳೂರು: ಅಮೆರಿಕದ ಚಿಪ್ ತಯಾರಿಕಾ ಕಂಪನಿ ಇಂಟೆಲ್, ಶೇ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
ಸಮರ್ಪಕವಾಗಿ ಕೆಲಸ ನಿರ್ವಹಿಸದಿರುವ ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ಉದ್ದೇಶಿಸಿದೆ. ವಜಾಗೊಳಿಸುವಿಕೆ ಪ್ರಕ್ರಿಯೆ ಕಂಪನಿಯ ಕಾರ್ಯತಂತ್ರದ ಭಾಗವಾಗಿದ್ದು, ಎಂಜಿನಿಯರಿಂಗ್ ವಿಭಾಗದ ಪುನಾರಚನೆಯ ಉದ್ದೇಶ ಹೊಂದಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಈ ಕುರಿತು ರಾಯಿಟರ್ಸ್ ಕೇಳಿದ ಪ್ರಶ್ನೆಗೆ ಇಂಟೆಲ್ ಉತ್ತರಿಸಿಲ್ಲ.
ಕಳೆದ ತಿಂಗಳು ಲಿಪ್–ಬು–ಟ್ಯಾನ್ ಅವರು ಇಂಟೆಲ್‌ನ ಹೊಸ ಸಿಇಒ ಆಗಿ ನೇಮಕವಾಗಿದ್ದರು. ಈ ವೇಳೆ ಕಂಪನಿಯ ಎಂಜಿನಿಯರಿಂಗ್ ಘಟಕದ ಪುನಾರಚನೆ, ಬ್ಯಾಲೆನ್ಸ್ ಶೀಟ್ ಸುಧಾರಣೆ, ಗ್ರಾಹಕರ ಬೇಡಿಕೆಗೆ ತಕ್ಕಂತೆ ತಯಾರಿಕಾ ಚಟುವಟಿಕೆ ಅಗತ್ಯ ಎಂದು ಹೇಳಿದ್ದರು.
ಕಳೆದ ವರ್ಷ ಕಂಪನಿಯು ₹1.60 ಲಕ್ಷ ಕೋಟಿ ನಷ್ಟ ಕಂಡಿದೆ. ಅಲ್ಲದೆ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಮತ್ತೊಂದೆಡೆ ಜರ್ಮನಿ ಮತ್ತು ಪೋಲ್ಯಾಂಡ್‌ನಲ್ಲಿ ಬೃಹತ್ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಘಟಕ ಸ್ಥಾಪಿಸಲು ಮುಂದಾಗಿದೆ. ಆದರೆ, ಈ ಪ್ರಕ್ರಿಯೆ ವಿಳಂಬವಾಗಿದೆ. ಇದರಿಂದ ಕಾರ್ಯಾಚರಣೆಯ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.