ADVERTISEMENT

OPPO F29 ಸರಣಿ ಬಿಡುಗಡೆ: ಲಭ್ಯತೆ, ವೈಶಿಷ್ಟ್ಯಗಳು, ಬೆಲೆ ಮಾಹಿತಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮಾರ್ಚ್ 2025, 13:34 IST
Last Updated 21 ಮಾರ್ಚ್ 2025, 13:34 IST
<div class="paragraphs"><p>ಒಪ್ಪೊ ಎಫ್ 29 ಸರಣಿಯ ಫೋನ್‌ಗಳು</p></div>

ಒಪ್ಪೊ ಎಫ್ 29 ಸರಣಿಯ ಫೋನ್‌ಗಳು

   

ಬೆಂಗಳೂರು: ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ಒಪ್ಪೊ, ಕೇರಳದ ಬಿರುಸಾದ ಮಳೆ, ರಾಜಸ್ಥಾನದ ಉರಿಬಿಸಿಲೂ ಸೇರಿದಂತೆ ಭಾರತೀಯ ಹವಾಮಾನ ವೈವಿಧ್ಯಕ್ಕಾಗಿಯೇ ರೂಪಿಸಲಾಗಿರುವ ವಿನೂತನ ವೈಶಿಷ್ಟ್ಯಗಳುಳ್ಳ ಎಫ್ 29 ಸರಣಿಯ ಫೋನ್‌ಗಳನ್ನು ಗುರುವಾರ ಬಿಡುಗಡೆಗೊಳಿಸಿದೆ. ಈ ಸರಣಿಯಲ್ಲಿ OPPO F29 ಮತ್ತು OPPO F29 Pro ಸ್ಮಾರ್ಟ್‌ಫೋನ್‌ಗಳಿವೆ.

ಆಕರ್ಷಕ ವಿನ್ಯಾಸದಲ್ಲಿ ತೆಳುವಾದ ಫೋನ್ ಲಭ್ಯವಿದ್ದು, ಅತ್ಯಾಧುನಿಕ ಸಂಪರ್ಕತೆ ಮತ್ತು ದೀರ್ಘ ಬ್ಯಾಟರಿ ಬಾಳಿಕೆ ಇದರಲ್ಲಿದೆ ಎಂದು ಒಪ್ಪೊ ಹೇಳಿಕೊಂಡಿದೆ.

ADVERTISEMENT

ಭಾರತೀಯ ಹವಾಮಾನಕ್ಕೆ ಪೂರಕ

ಭಾರತದ ವಿವಿಧ ಭಾಗಗಳಲ್ಲಿ ಮಳೆ, ಚಳಿ, ದೂಳು, ತಾಪಮಾನ ಮುಂತಾದ ವೈವಿಧ್ಯಮಯ ಹವಾಮಾನ ಇರುತ್ತದೆ. ಇದನ್ನು ಅರಿತು, ಭಾರತೀಯ ಹವಾಮಾನ ವೈವಿಧ್ಯಗಳಿಗೆ ಅನುಗುಣವಾಗಿ ಇದನ್ನು ರೂಪಿಸಲಾಗಿದೆ. IP66, IP68, ಹಾಗೂ IP69 ಪ್ರಮಾಣಪತ್ರಗಳಿದ್ದು, ದೂಳು, ಮಳೆ, ನೀರಿನೊಳಗೆ ಮುಳುಗುವ ಸಂದರ್ಭದಲ್ಲಿಯೂ ಫೋನ್‌ಗೆ ರಕ್ಷಣೆ ಇರುತ್ತದೆ. ಸ್ಪಾಂಜ್ ಬಯೋನಿಕ್ ಕುಶನಿಂಗ್ ಮತ್ತು ಫೈಬರ್ ಗ್ಲಾಸ್ ಕವರ್ ಹಾಗೂ ಕ್ಯಾಮೆರಾ ಲೆನ್ಸ್ ರಕ್ಷಣಾತ್ಮಕ ರಿಂಗ್ ಇದರಲ್ಲಿದೆ. ಏರೋಸ್ಪೇಸ್ ಗುಣಮಟ್ಟದ ಅಲ್ಯೂಮಿನಿಯಂ ಫ್ರೇಮ್‌ಗಳು ಹೆಚ್ಚಿನ ಒತ್ತಡವನ್ನು ತಡೆದುಕೊಳ್ಳುವಲ್ಲಿ ನೆರವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ ಜೋರಾದ ಮಳೆ, ನದಿ ನೀರು, ಬಿಸಿನೀರು, ತಣ್ಣೀರು, ಸಾಂಬಾರ್, ಜ್ಯೂಸ್, ಹಾಲು, ಕಾಫಿ, ಬಿಯರ್ ಬಿದ್ದರೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಒಪ್ಪೊ ಇಂಡಿಯಾದ ಪ್ರಾಡಕ್ಟ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಸಾವಿಯೋ ಡಿಸೋಜ ತಿಳಿಸಿದ್ದಾರೆ.

ತೀರಾ ದುರ್ಗಮ ಪ್ರದೇಶಗಳಲ್ಲಿಯೂ ಸಂಪರ್ಕ ಲಭ್ಯವಾಗುವಂತೆ ಸಿಗ್ನಲ್ ಸಾಮರ್ಥ್ಯವನ್ನು ಹೆಚ್ಚಿಸುವ 'ಹಂಟರ್ ಆ್ಯಂಟೆನಾ ಆರ್ಕಿಟೆಕ್ಚರ್' ವೈಶಿಷ್ಟ್ಯ ಇದರಲ್ಲಿದೆ. ಇದು ಲಿಫ್ಟ್‌ನಲ್ಲಿ (ಎಸ್ಕಲೇಟರ್), ತಳಮಹಡಿಯಲ್ಲಿ ಅಥವಾ ಅಂಡರ್‌ಪಾಸ್‌ಗಳಲ್ಲಿ ಗರಿಷ್ಠ ಸಿಗ್ನಲ್ ಸಾಮರ್ಥ್ಯ ಇರುವಂತೆ ನೋಡಿಕೊಳ್ಳುತ್ತದೆ.

ದೊಡ್ಡ ಬ್ಯಾಟರಿ

OPPO F29 ಪ್ರೊ ಸಾಧನದಲ್ಲಿ 6000mAh ಬ್ಯಾಟರಿ ಸಾಮರ್ಥ್ಯದೊಂದಿಗೆ 80W ಸೂಪರ್‌ವೂಕ್ ವೇಗದ ಚಾರ್ಜಿಂಗ್ ವ್ಯವಸ್ಥೆಯಿದ್ದರೆ, OPPO F29 ಸಾಧನದಲ್ಲಿ ದೊಡ್ಡದಾದ, 6500mAh ಸಾಮರ್ಥ್ಯದ ಬ್ಯಾಟರಿ ಇದೆ ಮತ್ತು 45W ಸೂಪರ್‌ವೂಕ್ ಚಾರ್ಜಿಂಗ್ ವ್ಯವಸ್ಥೆಯಿದೆ. ಇವುಗಳು ರಿವರ್ಸ್ ಚಾರ್ಜಿಂಗನ್ನೂ ಬೆಂಬಲಿಸುವುದರಿಂದ, ಅಗತ್ಯ ಬಿದ್ದಾಗ ಈ ಫೋನ್‌ಗಳಿಂದ ಬೇರೆ ಸಾಧನಗಳನ್ನೂ ಚಾರ್ಜ್ ಮಾಡಬಹುದಾಗಿದೆ.

F29 ಪ್ರೊ ಸಾಧನವು 7.55ಮಿಮೀ ದಪ್ಪ, 180 ಗ್ರಾಂ ತೂಕವಿದ್ದರೆ, F29 ದಪ್ಪ 7.65ಮಿಮೀ ಹಾಗೂ 185ಗ್ರಾಂ ತೂಕವಿದೆ. ಎರಡೂ ಸಾಧನಗಳಲ್ಲಿ 6.7 ಇಂಚಿನ AMOLED ಡಿಸ್‌ಪ್ಲೇ ಇದ್ದು, 120Hz ರಿಫ್ರೆಶ್ ರೇಟ್ ಹೊಂದಿವೆ. ಗದ್ದಲದ ಪ್ರದೇಶಗಳಲ್ಲಿಯೂ ಕರೆಯ ಧ್ವನಿ ಸ್ಪಷ್ಟವಾಗಿ ಕೇಳಿಸುವಂತೆ ಮಾಡಲು ಅಲ್ಟ್ರಾ ವಾಲ್ಯೂಮ್ ಮೋಡ್ ಇದೆ.

OPPO F29 ಪ್ರೊ ಸಾಧನದಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಚಿಪ್‌ಸೆಟ್ ಇದ್ದು, ಗೇಮಿಂಗ್‌ಗೆ ಹೆಚ್ಚು ಅನುಕೂಲಕರವಾಗಿದ್ದರೆ, OPPO F29 ಸಾಧನದಲ್ಲಿ ಸ್ನ್ಯಾಪ್‌ಡ್ರ್ಯಾಗನ್ 6 ಜೆನ್ 1 ಪ್ರೊಸೆಸರ್ ಇದೆ. ಎರಡರಲ್ಲಿಯೂ ಕಲರ್‌ಒಎಸ್ 15 (ಆಂಡ್ರಾಯ್ಡ್ 15 ಆಧಾರಿತ) ಕಾರ್ಯಾಚರಣಾ ವ್ಯವಸ್ಥೆಯಿದ್ದು, ಎರಡು ವರ್ಷಗಳ ತಂತ್ರಾಂಶ ಅಪ್‌ಡೇಟ್ ಮತ್ತು ಮೂರು ವರ್ಷ ಭದ್ರತಾ ಅಪ್‌ಡೇಟ್‌ಗಳು ಲಭ್ಯವಾಗಲಿವೆ.

ಕ್ಯಾಮೆರಾ, ಎಐ ವೈಶಿಷ್ಟ್ಯ

ಒಪ್ಪೊ ಎಫ್29 ಸರಣಿಯ ಫೋನ್‌ಗಳಲ್ಲಿ 50 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಇದರಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತವಾದ ಎಐ ಲೈವ್‌ಫೋಟೊ, ಎಐ ಅನ್‌ಬ್ಲರ್, ಎಐ ರಿಫ್ಲೆಕ್ಷನ್ ರಿಮೂವರ್, ಎಐ ಇರೇಸರ್ ವೈಶಿಷ್ಟ್ಯಗಳಿವೆ ಮತ್ತು ನೀರಿನೊಳಗೆ ಛಾಯಾಗ್ರಹಣ ಮಾಡಲು ವಿಶಿಷ್ಟ ಮೋಡ್ ಕೂಡ ಇದೆ.

ಇಷ್ಟಲ್ಲದೆ, ಕೃತಕ ಬುದ್ಧಿಮತ್ತೆ ಆಧಾರಿತ ಎಐ ಸಮ್ಮರಿ, ಎಐ ರಿ-ರೈಟ್, ಎಐ ರೆಕಾರ್ಡಿಂಗ್ ಸಮ್ಮರಿ ಮತ್ತು ಎಐ ಲಿಂಕ್‌ಬೂಸ್ಟ್ ವೈಶಿಷ್ಟ್ಯಗಳಿದ್ದು, ಗೂಗಲ್‌ನ 'ಸರ್ಕಲ್ ಟು ಸರ್ಚ್' ವೈಶಿಷ್ಟ್ಯವನ್ನೂ ಸುಲಭವಾಗಿ ಬಳಸುವಂತೆ ವ್ಯವಸ್ಥೆಗೊಳಿಸಲಾಗಿದೆ.

ಎಫ್29 ಸರಣಿ ಬೆಲೆ, ಲಭ್ಯತೆ

OPPO F29 ಪ್ರೊ: ಏಪ್ರಿಲ್ 1ರಿಂದ ಲಭ್ಯವಾಗಲಿದ್ದು, ಬೆಲೆ ₹27,999 (8GB+128GB), ₹29,999 (8GB+256GB), ಹಾಗೂ ₹31,999 (12GB+256GB).

OPPO F29: ಮಾರ್ಚ್ 27ರಿಂದ ಲಭ್ಯವಾಗಲಿದ್ದು, ₹23,999 (8GB+128GB) ಹಾಗೂ ₹25,999 (8GB+256GB) ಬೆಲೆ ಇದೆ.

ಒಪ್ಪೊ ಇ-ಸ್ಟೋರ್, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿಯೂ ಈ ಫೋನ್‌ಗಳು ಲಭ್ಯ ಇರುತ್ತವೆ ಮತ್ತು ಮುಂಗಡ ಬುಕಿಂಗ್ ಮಾಡಬಹುದು. ಜೊತೆಗೆ, ಶೇ.10ರ ಕ್ಯಾಶ್‌ಬ್ಯಾಕ್, ಶುಲ್ಕರಹಿತ 6 ತಿಂಗಳ ಇಎಂಐ ಕೊಡುಗೆ ಮತ್ತು ವಿನಿಮಯ ಬೋನಸ್‌ಗಳು ಕೂಡ ದೊರೆಯಲಿವೆ.

ಒಪ್ಪೊ ಇಂಡಿಯಾದ ತಯಾರಿಕಾ ಘಟಕವು ಉತ್ತರ ಪ್ರದೇಶದ ಗ್ರೇಟರ್ ನೋಯಿಡಾದಲ್ಲಿದ್ದು, 110 ಎಕರೆ ವಿಸ್ತಾರವಾಗಿದೆ. ಇದನ್ನು ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್ 'ಸೂಪರ್ ಫ್ಯಾಕ್ಟರಿ' ಎಂದು ಬಣ್ಣಿಸಿದೆ. ಇದರಲ್ಲಿ 52 ಪ್ರೊಡಕ್ಷನ್ ಸಾಲುಗಳು, 37 ಬಿಡಿಭಾಗ ಜೋಡಣಾ ಸಾಲುಗಳು, 20 ಪರೀಕ್ಷಾ ಘಟಕಗಳಿದ್ದು, 10 ನಿಮಿಷಗಳೊಳಗೆ 200 ಸ್ಮಾರ್ಟ್‌ಫೋನ್‌ಗಳಿಗೆ ಬಿಡಿಭಾಗಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.

ಒಪ್ಪೊ ಎಫ್27 ಪ್ರೊ ಪ್ಲಸ್ ಸಾಧನಗಳು ಹಿಂದಿನ ಫೋನ್‌ಗಳಿಗೆ ಹೋಲಿಸಿದರೆ ಶೇ.30ರಷ್ಟು ಹೆಚ್ಚು ಮಾರಾಟ ಕಂಡಿದ್ದು, ಮಾರುಕಟ್ಟೆಯಲ್ಲಿ ಮಹಾರಾಷ್ಟ್ರ 87%, ರಾಜಸ್ಥಾನ 57%, ಮಧ್ಯಪ್ರದೇಶ 55%, ಕರ್ನಾಟಕ 28%, ಗುಜರಾತ್ 27% ಹಾಗೂ ಆಂಧ್ರ ಪ್ರದೇಶ 25% ಮಾರಾಟ ಕಂಡಿವೆ ಎಂದು ಒಪ್ಪೊ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.