ಯುರೇಕಾ ಫೋರ್ಬ್ಸ್ ಸ್ಮಾರ್ಟ್ ಕ್ಲೀನ್ - ವಾಕ್ಯೂಮ್ ಕ್ಲೀನರ್: ಹಿಂಭಾಗದಲ್ಲಿ ಚಾರ್ಜರ್ ಆಗಿಯೂ ಕೆಲಸ ಮಾಡುವ ಬಿನ್. ಮುಂಭಾಗದಲ್ಲಿ ಚಕ್ರಾಕಾರದ ರೋಬೊ (ಅದರ ತಳಭಾಗದಲ್ಲಿ ಬ್ರಶ್ ಗಮನಿಸಿ).
ಚಿತ್ರ: ಅವಿನಾಶ್ ಬಿ.
ಒಂದು ಮನೆಯಲ್ಲಿ ಎಲ್ಲರೂ ದುಡಿಯುವವರೇ, ಅಲ್ಲದೆ ಚಿಕ್ಕ, ಕೇಂದ್ರೀಕೃತ ಕುಟುಂಬ ವ್ಯವಸ್ಥೆ. ಕಚೇರಿ ಕೆಲಸದೊಂದಿಗೆ ಮನೆಯ ಕೆಲಸವೂ ಆಗಬೇಕು. ಗುಡಿಸಿ ಸಾರಿಸುವುದಕ್ಕೆ ಸಮಯ ಸಾಲುತ್ತಿಲ್ಲ. ಇಂಥವರಿಗಾಗಿಯೇ ಹಲವು ಸ್ಮಾರ್ಟ್ ಕ್ಲೀನಿಂಗ್ ರೋಬೊಗಳು ಮಾರುಕಟ್ಟೆಯಲ್ಲಿವೆ. ವಾಕ್ಯೂಮ್ ಕ್ಲೀನರ್‌ಗಳ ಮೂಲಕ ಮನೆಮಾತಾಗಿರುವ ಯುರೇಕಾ ಫೋರ್ಬ್ಸ್ ಕಂಪನಿಯು ಇತ್ತೀಚೆಗೆ 'ಸ್ಮಾರ್ಟ್ ಕ್ಲೀನ್ ವಿತ್ ಆಟೋ ಬಿನ್' ವಾಕ್ಯೂಮ್ ಕ್ಲೀನರನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದು ಹೇಗಿದೆ? ಇಲ್ಲಿದೆ ಮಾಹಿತಿ.
ವಿನ್ಯಾಸ ಮತ್ತು ಕಾರ್ಯಾಚರಣೆ
ಯುರೇಕಾ ಫೋರ್ಬ್ಸ್ ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್‌ನಲ್ಲಿ ಪ್ರಧಾನವಾಗಿ ಎರಡು ಸಾಧನಗಳಿವೆ. ಒಂದು ಕಸದಬುಟ್ಟಿಯಂತಿರುವ ದೊಡ್ಡ ಸಾಧನ. ಇದರಲ್ಲಿ 4 ಲೀಟರ್ ಸಾಮರ್ಥ್ಯದ ಚೀಲವಿದ್ದು, ಇದರಲ್ಲಿ ಕಸ, ದೂಳು ಸಂಗ್ರಹಿಸಬಹುದಾಗಿದೆ. ಪ್ರಬಲವಾದ ಹೀರಿಕೊಳ್ಳುವ (ಸಕ್ಷನ್) ವ್ಯವಸ್ಥೆ ಇದರಲ್ಲಿದ್ದು, ಮನೆಯನ್ನು ಗುಡಿಸುವ ಚಕ್ರಾಕಾರದ ರೋಬೋಗೆ ಚಾರ್ಜಿಂಗ್ ಪಾಯಿಂಟ್ ಆಗಿಯೂ ಕೆಲಸ ಮಾಡುತ್ತದೆ. ಮನೆಯ ನೆಲವಿಡೀ ಸುತ್ತಾಡಿ ಗುಡಿಸಿ ಒರೆಸುವ ಚಕ್ರಾಕಾರದ ರೋಬೊ ಎರಡನೇ ಸಾಧನ. ಅತ್ಯಾಧುನಿಕವಾದ ಲಿಡಾರ್ 3.0 ನೇವಿಗೇಶನ್ ತಂತ್ರಜ್ಞಾನ ಅಡಕವಾಗಿರುವ ಈ ಚಕ್ರಾಕಾರದ ರೋಬೊ, ನೆಲವನ್ನು ಸ್ವಚ್ಛಗೊಳಿಸುವುದಕ್ಕಾಗಿ ಆರಂಭದಲ್ಲಿ ತಾನೇ ಮನೆಯೊಳಗೆ ಸುತ್ತಾಡಿ ನಕ್ಷೆ ರಚಿಸಿಕೊಳ್ಳುತ್ತದೆ. ಮರ, ಟೈಲ್ಸ್, ಮಾರ್ಬಲ್ ಮತ್ತು ಕಾರ್ಪೆಟ್‌ಗಳನ್ನು ಕೂಡ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.
ಇದರ ಓಡಾಟವನ್ನು ರೂಪಿಸುವುದಕ್ಕೆ ಸ್ಮಾರ್ಟ್ ಲೈಫ್ ಆ್ಯಪ್ ನೆರವಿಗೆ ಬರುತ್ತದೆ. ಅದಲ್ಲದೆ, ಅಮೆಜಾನ್‌ನ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್ ಮೂಲಕ ಧ್ವನಿಯಿಂದಲೇ ನಿಯಂತ್ರಿಸಬಹುದು. (ಮೆಟ್ಟಿಲಿನಿಂದ) ಕೆಳಗೆ ಬೀಳದಂತೆ ಮತ್ತು (ಗೋಡೆಗೆ) ಡಿಕ್ಕಿಯಾಗದಂತೆ ಸೂಕ್ತ ಸಂವೇದಕಗಳು (ಸೆನ್ಸರ್) ಎಚ್ಚರ ವಹಿಸುತ್ತವೆ. ಮನೆ ಗುಡಿಸಿ ಒರೆಸುವ ಸ್ವಯಂಚಾಲಿತ ತಂತ್ರಜ್ಞಾನದಲ್ಲಿ ಇದೊಂದು ಹೊಸ ಕ್ರಾಂತಿ ಎನ್ನಬಹುದು.
ಹೇಗೆ ಕೆಲಸ ಮಾಡುತ್ತದೆ?
ಕಸ ಗುಡಿಸುವುದಷ್ಟೇ ಅಲ್ಲ, ಒದ್ದೆ ಬಟ್ಟೆಯಲ್ಲಿ ನೆಲ ಒರೆಸುವುದಕ್ಕೂ ಇದನ್ನು ಬಳಸಬಹುದು. ಒಟ್ಟಿನಲ್ಲಿ ಮೂರೂ ಕೆಲಸಗಳನ್ನು ಇದು ಮಾಡುತ್ತದೆ. ಗುಡಿಸುವುದು, ಸಂಗ್ರಹಿಸಿದ ದೂಳನ್ನು ಕಸದ ಬುಟ್ಟಿಗೆ ಸ್ವಯಂಚಾಲಿತವಾಗಿ ಸೇರಿಸುವುದು ಮತ್ತು ನಂತರ ಒದ್ದೆ ಬಟ್ಟೆಯಲ್ಲಿ ಒರೆಸುವುದು.
ಗುಡಿಸುವುದಕ್ಕೆ ನೆರವಾಗಲು ಚಕ್ರಾಕಾರದ ರೋಬೊದ ಅಡಿಯಲ್ಲಿ ಮಾಪ್ ಜೊತೆಗೆ, ಮೂಲೆ ಮೂಲೆಯಿಂದಲೂ ಗುಡಿಸಿ ತೆಗೆಯಲು ಒಂದು ಸದಾ ತಿರುಗುತ್ತಿರುವ ಬ್ರಶ್ ಇದೆ. ಈ ರೋಬೊದಲ್ಲಿರುವ ಸೆನ್ಸರ್‌ಗಳು ಗೋಡೆ, ಕುರ್ಚಿ ಅಥವಾ ಸೋಫಾದ ಕಾಲುಗಳು, ಅಡಚಣೆಗಳನ್ನೆಲ್ಲ ದೂರದಿಂದಲೇ ಗುರುತಿಸಬಲ್ಲದು ಮತ್ತು ನಿಧಾನಕ್ಕೆ ಸರಿದು, ಅದರ ಸುತ್ತಲೂ ಪರಿಭ್ರಮಿಸುತ್ತಾ ಸ್ವಚ್ಛಗೊಳಿಸಬಲ್ಲದು. ಡಿಕ್ಕಿ-ನಿರೋಧಕ ವ್ಯವಸ್ಥೆಯೂ ಇರುವುದರಿಂದ (ಶಾಕ್ ಅಬ್ಸಾರ್ಬರ್ ಮಾದರಿಯಲ್ಲಿ) ರೋಬೊಗೆ ಏನೂ ಆಗಲಾರದು.
ಆನ್ ಮಾಡಿದ ತಕ್ಷಣ ಅದು ಎಲ್ಲ ಕೊಠಡಿಗಳಿಗೂ ಚಲಿಸಿ, ತಾನಾಗಿಯೇ ಮ್ಯಾಪಿಂಗ್ ಮಾಡಿಕೊಳ್ಳುತ್ತದೆ. ಮರುದಿನವೂ ಇದೇ ಪಥದಲ್ಲಿ ಅದು ತಿರುಗಾಡುತ್ತಾ, ಸ್ವಚ್ಛಗೊಳಿಸುವ ಕಾರ್ಯ ಮಾಡುವುದಕ್ಕೆ ಇದು ಅನುಕೂಲ. ಆ್ಯಪ್ ಮೂಲಕ ಇದನ್ನು ಸೇವ್ ಮಾಡಿಟ್ಟುಕೊಂಡರೆ, ಮುಂದಿನ ಬಾರಿ ಹಾಲ್ ಗುಡಿಸು, ಕಿಚನ್ ಗುಡಿಸಿ ಒರೆಸು, ಬೆಡ್‌ರೂಮ್ ಸ್ವಚ್ಛಗೊಳಿಸು ಅಂತ ಆದೇಶವನ್ನೂ ನೀಡಬಹುದಾಗಿದೆ. ಅಥವಾ ಆ್ಯಪ್ ಮೂಲಕ ಕಂಡುಬರುವ ಮ್ಯಾಪ್‌ನಲ್ಲಿ ಕ್ಲಿಕ್ ಮಾಡಿ ನಿರ್ದಿಷ್ಟ ಕೊಠಡಿಯನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡಬಹುದು. ವಾಕ್ಯೂಮ್ ಕ್ಲೀನರ್ ಆಗಿಯೂ ಕೆಲಸ ಮಾಡುವುದರಿಂದ, ಸಣ್ಣ ಪುಟ್ಟ ಕಸ, ಧೂಳು, ಪುಟ್ಟ ಕಣಗಳನ್ನು ಹೀರಿಕೊಂಡು, ಕಸದ ತೊಟ್ಟಿಯ (ಸ್ಮಾರ್ಟ್ ಬಿನ್) ಬಳಿ ಸಾಗಿ, ಅದಕ್ಕೆ ಅಂಟಿಕೊಳ್ಳುತ್ತದೆ. ಸ್ಮಾರ್ಟ್ ಬಿನ್ ತನ್ನ ಹೀರಿಕೊಳ್ಳುವ (ಸಕ್ಷನ್) ವೈಶಿಷ್ಟ್ಯದ ಮೂಲಕ ಕಸವನ್ನೆಲ್ಲ ಬಲವಾದ ಗಾಳಿಯೊಂದಿಗೆ ಹೀರಿಕೊಂಡು, ತೊಟ್ಟಿಯೊಳಗೆ ಸೇರಿಸಿಕೊಳ್ಳುತ್ತದೆ.
ಇದು ಅತ್ತಿಂದಿತ್ತ ಚಲಿಸುವಾಗ ಗೋಡೆ ಅಥವಾ ಬೇರಾವುದೇ ವಸ್ತುಗಳಿಗೆ ಡಿಕ್ಕಿಯಾಗದಂತೆ ಸೆನ್ಸರ್ ಕೆಲಸ ಮಾಡುತ್ತದೆ. ಅದೇ ರೀತಿ, ಮೆಟ್ಟಿಲಿನಿಂದ ಕೆಳಗೆ ಬೀಳದಂತೆಯೂ ತಡೆಯಲು ಸೆನ್ಸರ್ ಇದೆ. ಸೋಫಾ, ಕುರ್ಚಿ ಅಥವಾ ಮಂಚದ ಅಡಿಗೆ ಹೋಗಿ, ಮೂಲೆ ಮೂಲೆಯಿಂದಲೂ ಕಸ ತೆಗೆಯುತ್ತದೆ.
ಗುಡಿಸಿದ ಬಳಿಕ ನೆಲ ಸಾರಿಸಲು, ರೋಬೊ ಅಡಿಯಲ್ಲಿ ನೀರಿನ ಪುಟ್ಟದಾದ ಟ್ಯಾಂಕ್ ಇದೆ. ಅದರಲ್ಲಿ ನೀರು ಸೇರಿಸಬೇಕು. ನಂತರ ಒದ್ದೆಯ ಪ್ರಮಾಣ ಎಷ್ಟಿರಬೇಕು ಎಂಬುದನ್ನು ಆ್ಯಪ್ ಮೂಲಕ ನಿಯಂತ್ರಿಸಬಹುದು. ಶುಷ್ಕ, ಕಡಿಮೆ ಒದ್ದೆ, ಮಧ್ಯಮ ಪ್ರಮಾಣದ ಒದ್ದೆ ಹಾಗೂ ಗರಿಷ್ಠ ಒದ್ದೆಯಾಗುವಂತೆ ಹೊಂದಿಸಬಹುದು.
ಬ್ಯಾಟರಿ
5000mAh ಸಾಮರ್ಥ್ಯದ ಬ್ಯಾಟರಿಯು ಚಕ್ರಾಕಾರದ ರೋಬೊದಲ್ಲಿದ್ದು, ಕೆಲಸ ಮುಗಿಸಿ ಮರಳಿದ ಬಳಿಕ, ಚಾರ್ಜರ್ ಆಗಿಯೂ ಕೆಲಸ ಮಾಡಬಲ್ಲ ಡಸ್ಟ್ ಬಿನ್‌ಗೆ ಜೋಡಣೆಯಾಗಿ ತಾನಾಗಿ ಚಾರ್ಜ್ ಮಾಡಿಕೊಳ್ಳುತ್ತದೆ. ನಿರಂತರವಾಗಿ ಬಳಸಿದರೆ ಸುಮಾರು 5 ಗಂಟೆ ಕೆಲಸ ಮಾಡಬಹುದು. ನಂತರ ರೀಚಾರ್ಜ್ ಮಾಡಿಕೊಳ್ಳಲು ಚಕ್ರಾಕಾರದ ರೋಬೊ ತಾನಾಗಿಯೇ ಬಂದು, ಚಾರ್ಜರ್‌ಗೆ (ಸ್ಮಾರ್ಟ್ ಡಸ್ಟ್ ಬಿನ್ ಸಾಧನ) ಸೇರಿಕೊಳ್ಳುತ್ತದೆ, ಚಾರ್ಜಿಂಗ್ ಆಗುತ್ತದೆ.
ಮಂಚದ ಮೇಲೆ ಮಲಗುವುದಿದ್ದರೆ ಮತ್ತು ಹಗಲು ಅದು ಸ್ವಚ್ಛಗೊಳಿಸುವಾಗ ಕಾಲಿಗೆ ತಾಕದಂತಾಗಲು, ಗುಡಿಸಿ-ಸಾರಿಸುವ ಕೆಲಸವನ್ನು ರಾತ್ರಿ ವೇಳೆಯೇ ಮುಗಿಸುವಂತೆ ಹೊಂದಿಸಿಕೊಳ್ಳುವ ಆಯ್ಕೆಯೂ ಇದೆ.
ಆ್ಯಪ್ ಮೂಲಕವೇ, ಯಾವ ಸಮಯ, ಯಾವ ಕೊಠಡಿಯಲ್ಲಿ ಯಾವ ರೀತಿಯಲ್ಲಿ (ಗುಡಿಸುವುದು ಅಥವಾ ಒರೆಸುವುದು) ಸ್ವಚ್ಛಗೊಳಿಸಬೇಕೆಂದು ಹೊಂದಿಸಬಹುದು. 4 ಲೀಟರ್ ಸಾಮರ್ಥ್ಯವಿರುವ ದೂಳಿನ ಚೀಲವನ್ನು ಉಪಯೋಗಿಸಿದ ಬಳಿಕ ಬದಲಾಯಿಸುವ ಆಯ್ಕೆಯೂ ಇದೆ. ಬಾಕ್ಸ್‌ನಲ್ಲಿ ಒಂದು ಚೀಲ ಹಾಗೂ ಒರೆಸುವ ಬಟ್ಟೆಯ ತುಣುಕನ್ನು ಹೆಚ್ಚುವರಿಯಾಗಿ ನೀಡಿದ್ದಾರೆ.
ಇದರ ಸದ್ಯದ ಮಾರುಕಟ್ಟೆ ಬೆಲೆ ₹34,999 ಆಗಿರುತ್ತದೆ.
ಒಟ್ಟಿನಲ್ಲಿ, ಮನೆಯಿಡೀ ಗುಡಿಸಿ ಒರೆಸಲು ಮಾತ್ರವಲ್ಲದೆ, ಕಸವನ್ನು ತೆಗೆದು ಕಸದಬುಟ್ಟಿಯಲ್ಲಿ ಶೇಖರಿಸಲು ಕೂಡ ನೆರವಾಗುತ್ತದೆ ಈ ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್. ಬೆಕ್ಕು-ನಾಯಿ ಸಾಕುವವರಿಗೆ ಹೆಚ್ಚುವರಿ ಸಮಸ್ಯೆ ಎಂದರೆ ನೆಲದಲ್ಲಿ ಅಥವಾ ಸೋಫಾ ಮೇಲೆ ಉದುರಿದ ಅವುಗಳ ರೋಮಗಳನ್ನು ಸ್ವಚ್ಛಗೊಳಿಸುವುದು. ಅದಕ್ಕೂ ಈ ಸ್ಮಾರ್ಟ್ ವಾಕ್ಯೂಮ್ ಕ್ಲೀನರ್ ಉಪಕರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.