ADVERTISEMENT

OnePlus Nord 5: ಗೇಮರ್‌ಗಳಿಗೂ ಇಷ್ಟವಾಗುವ ಪರದೆ, ಚಿಪ್‌ನ ವೇಗ, ಬ್ಯಾಟರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2025, 11:30 IST
Last Updated 28 ಜುಲೈ 2025, 11:30 IST
<div class="paragraphs"><p>ಒನ್‌ಪ್ಲಸ್‌ ನಾರ್ಡ್‌ 5</p></div>

ಒನ್‌ಪ್ಲಸ್‌ ನಾರ್ಡ್‌ 5

   

ಮೊಬೈಲ್ ತಯಾರಿಕಾ ಕಂಪನಿ ಒನ್‌ಪ್ಲಸ್‌ ತನ್ನ ಈ ವರ್ಷದ ಮಹತ್ವದ ಉತ್ಪನ್ನಗಳನ್ನು ತನ್ನ ಇತ್ತಿಚಿನ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದ್ದು, ನಾರ್ಡ್‌ 5 ಮತ್ತು ನಾರ್ಡ್‌ ಸಿಇ5 ಸರಣಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಮಾಡಿತು.

ವಿಲಾಸಿ ವಿನ್ಯಾಸ, ಗುಣಮಟ್ಟದ ಹಾರ್ಡ್‌ವೇರ್‌ ಹಾಗೂ ಆಧುನಿಕ ಸೌಲಭ್ಯಗಳನ್ನು ಬಳಸುವವರನ್ನೇ ಗುರಿಯಾಗಿಸಿಕೊಂಡು ಈ ಬಾರಿ ಬಿಡುಗಡೆ ಮಾಡಿದ ಮಧ್ಯಮ ಬೆಲೆಯ ಫೋನ್‌ ನಾರ್ಡ್‌ 5. 

ADVERTISEMENT

ವಿನ್ಯಾಸ ಮತ್ತು ಗುಣಮಟ್ಟ

ನಾರ್ಡ್‌ ಸರಣಿಯ ಈ ನೂತನ ಸ್ಮಾರ್ಟ್‌ಫೋನ್‌ನ ಪರದೆಗೆ ಗೋರಿಲ್ಲಾ ಗ್ಲಾಸ್ ಹಾಕಲಾಗಿದೆ. ಗಟ್ಟಿಮುಟ್ಟಾದ ಪ್ಲಾಸ್ಟಿಕ್‌ ಫ್ರೇಮ್‌ ಪ್ರೀಮಿಯಂ ಅನುಭವ ನೀಡುತ್ತದೆ. ಹಿಂಬದಿಯಲ್ಲಿ ಮಾರ್ಬಲ್‌ನ ವಿನ್ಯಾಸ ಫೋನ್‌ಗೆ ಹೊಸ ರೂಪ ನೀಡಿದೆ. 

ಹೀಗಿದ್ದರೂ ಇದು ಸ್ವಲ್ಪ ಭಾರ (211 ಗ್ರಾಂ) ಎನಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಇದರ ದೊಡ್ಡ ಬ್ಯಾಟರಿ. ಹಿಂದೆ ಸ್ಲೈಡರ್‌ ಕೀ ನೀಡಿದ್ದ ಜಾಗದಲ್ಲಿ ಈಗ ‘ಎಸೆನ್ಶಿಯಲ್‌ ಕೀ’ ಬಂದಿದೆ. IP65 ಮಾನ್ಯತೆ ಇದಕ್ಕಿದ್ದು ಧೂಳು ಮತ್ತು ನೀರು ನಿರೋಧಕ ಹೊಂದಿದೆ. ಸಂಪೂರ್ಣ ವಾಟರ್‌ಪ್ರೂಫ್ ಅಲ್ಲದಿದ್ದರೂ, ಸಣ್ಣಪುಟ್ಟ ಮಳೆ ಅಥವಾ ಚಿಮುಕಿಸಿದ ನೀರಿನಿಂದ ರಕ್ಷಣೆ ನೀಡುತ್ತದೆ.

ಒನ್‌ಪ್ಲಸ್‌ ನಾರ್ಡ್‌ 5ನಿಂದ ತೆಗೆದ ಚಿತ್ರ

ಕಣ್ಣಿಗೆ ಆನಂದ ನೀಡುವ ಡಿಸ್‌ಪ್ಲೇ

ನಾರ್ಡ್‌ 5 ಸರಣಿಯ ಫೋನ್‌ನ ಪರದೆ 6.83 ಇಂಚಿನಷ್ಟು ದೊಡ್ಡದು. 1.5ಕೆ ಸ್ಪಿಫ್ಟ್‌ ಅಮೊಲೆಡ್‌ ಡಿಸ್‌ಪ್ಲೇ ಹೊಂದಿದೆ. ಒನ್‌ಪ್ಲಸ್ ಸರಣಿಯಲ್ಲಿ 144 ಹರ್ಟ್ಜ್‌ನ ರಿಫ್ರೆಶ್ ರೇಟ್ ಹೊಂದಿರುವ ಮೊದಲ ಫೋನ್‌ ಇದು ಎಂಬುದು ಇದರ ಮತ್ತೊಂದು ವಿಶೇಷ. ಹೀಗಾಗಿ ಗೇಮಿಂಗ್ ಆಗಿರಲಿ ಅಥವಾ ಮೊಬೈಲ್ ಸ್ಕ್ರಾಲಿಂಗ್‌ ಬಳಕೆದಾರರಿಗೆ ಹಿತಾನುಭವ ನೀಡುತ್ತದೆ. ಜತೆಗೆ ಬಣ್ಣಗಳೂ ಕಣ್ಣಿಗೆ ಸಂಭ್ರಮ ನೀಡುವಷ್ಟು ಸ್ಪಷ್ಟ, ಗಾಢ ಮತ್ತು ಬ್ರೈಟ್‌ನೆಸ್‌ ಕೂಡಾ ಉತ್ತಮವಾಗಿದೆ. ಹೀಗಾಗಿ ‘ಬಿಂಜ್‌ ವಾಚರ್‌’ಗಳಿಗೆ ಮತ್ತು ಮೊಬೈಲ್ ಗೇಮಿಂಗ್‌ ಗೀಳಿರುವವರಿಗೆ ಇದು ಹೆಚ್ಚು ಇಷ್ಟವಾಗಬಹುದು. ಕೈ ಒದ್ದೆಯಾಗಿದ್ದರೂ ಪರದೆ ಬಳಕೆಗೆ ತೊಡಕಾಗದಂತೆ ‘ಆಕ್ವಾ ಟಚ್‌ 2.0’ ಅಳವಡಿಸಲಾಗಿದೆ.

ಸ್ನಾಪ್‌ಡ್ರಾಗನ್‌ 8ಎಸ್‌ 3ನೇ ತಲೆಮಾರಿನ ಚಿಪ್‌

ಕಾರ್ಯಕ್ಷಮತೆ: ಮಧ್ಯಮ ಶ್ರೇಣಿಯಲ್ಲಿ ಹೊಸ ತಂತ್ರಜ್ಞಾನ

ನಾರ್ಡ್‌ 5 ಸರಣಿಯ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 8ಎಸ್‌ 3ನೇ ತಲೆಮಾರಿನ ಚಿಪ್ ಅಳವಡಿಸಲಾಗಿದೆ. ನಾರ್ಡ್‌ ಸರಣಿಯಲ್ಲಿ ಈ ಚಿಪ್ ಬಳಕೆ ಇದೇ ಮೊದಲು. ಇದರೊಂದಿಗೆ 12ಜಿಬಿ ರ್‍ಯಾಮ್‌ ಅನ್ನು ಈ ಫೋನ್ ಹೊಂದಿದೆ. ಹೀಗಾಗಿ ಕಾರ್ಯಕ್ಷಮತೆ ಮತ್ತು ಪ್ರತಿಕ್ರಿಯೆ ವೇಗ ಹೆಚ್ಚಾಗಿದೆ. ಹಲವು ಕೆಲಸಗಳನ್ನು ಏಕಕಾಲಕ್ಕೆ ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. 4ಕೆ ವಿಡಿಯೊ ಎಡಿಟಿಂಗ್‌ಯಿಂದ ಹಿಡಿದು ಗೇಮಿಂಗ್‌ವರೆಗೂ ಈ ಫೋನ್ ಲೀಲಾಜಾಲವಾಗಿ ನಿರ್ವಹಿಸುತ್ತದೆ. ಹೆಚ್ಚು ಒತ್ತಡದ ಕಾರ್ಯದಲ್ಲೂ ಫೋನ್‌ ಬಿಸಿಯಾಗದೆ, ತಣ್ಣಗೆ ಕಾರ್ಯ ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. 

ಆಕ್ಸಿಜೆನ್ ಆಪರೇಟಿಂಗ್‌ ಸಿಸ್ಟಂ 15 (ಆ್ಯಂಡ್ರಾಯ್ಡ್‌ 15) ಇದ್ದು, ಹಿತಕರ ಅನುಭವ ನೀಡುತ್ತದೆ. ಮುಂದಿನ ನಾಲ್ಕು ಪ್ರಮುಖ ಅಪ್‌ಡೇಟ್‌ಗಳು ಹಾಗೂ 6 ವರ್ಷಗಳವರೆಗೆ ಭದ್ರತೆಯ ಪ್ಯಾಚ್‌ಗಳು ಉಚಿತವಾಗಿ ನೀಡುವ ಭರವಸೆಯನ್ನು ಒನ್‌ಪ್ಲಸ್ ನೀಡಿದೆ. ‘ಸರ್ಕಲ್‌ ಟು ಸರ್ಚ್‌’ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಸೌಕರ್ಯವನ್ನು ನೀಡಲಾಗಿದೆ.

ಒನ್‌ಪ್ಲಸ್‌ ನಾರ್ಡ್‌ 5ನ ಕ್ಯಾಮೆರಾ ಚಿತ್ರ

ಕ್ಯಾಮೆರಾ: ಕ್ಲಿಕ್‌ ಸುಲಭ, ಚಿತ್ರ ಸ್ಪಷ್ಟ

ನಾರ್ಡ್ 5 ಸ್ಮಾರ್ಟ್‌ಫೋನ್‌ನಲ್ಲಿ 50 ಮೆಗಾ ಪಿಕ್ಸೆಲ್‌ನ ಲೆನ್ಸ್‌ ಅನ್ನು ಒಐಎಸ್‌ ಜತೆ ಅಳವಡಿಸಲಾಗಿದೆ. ಹೀಗಾಗಿ ಹೆಚ್ಚು ಪ್ರಕರತೆ, ವಿಷಯದ ಆಳ ಮತ್ತು ಹೆಚ್ಚಿನ ಬಣ್ಣದೊಂದಿಗೆ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಹೊರಹೊಮ್ಮುತ್ತಿವೆ. ಸೆಲ್ಫಿ ಕ್ಯಾಮೆರಾ ಕೂಡಾ 50 ಮೆಗಾ ಪಿಕ್ಸೆಲ್‌ನ ಆಟೊಫೋಕಸ್‌ ಒಳಗೊಂಡಿದೆ. ಮುಂಭಾಗದ ಕ್ಯಾಮೆರ ಕೂಡಾ 4ಕೆ ವಿಡಿಯೊವನ್ನು 60ಎಫ್‌ಪಿಎಸ್‌ನಲ್ಲಿ ರೆಕಾರ್ಡ್ ಮಾಡಲಿದೆ. ಆದರೆ ಆಫ್ಟಿಕಲ್ ಝೂಮ್‌ 2ಎಕ್ಸ್‌ಗಿಂತ ಮೀರುವುದಿಲ್ಲ.

ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್‌

ನಾರ್ಡ್‌ 5 ಸರಣಿಯಲ್ಲೇ ಅತ್ಯುತ್ತಮವಾಗಿದೆ. 6,800 ಎಂಎಎಚ್‌ ಬ್ಯಾಟರಿ ಇದರದ್ದು. ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೂ ಅತಿಯಾಗಿ ಬಳಸಿಯೂ ಎರಡು ದಿನ ಬಳಸಬಹುದಾಗಿದೆ. 80 ವಾಟ್‌ನ ಸೂಪರ್‌ ವೋಕ್‌ ಚಾರ್ಜಿಂಗ್‌ ಚಾರ್ಜರ್‌ ಅನ್ನು ನೀಡಲಾಗಿದೆ. ಶೇ 0ಯಿಂದ ಶೇ 100ರವರೆಗೆ ಚಾರ್ಜ್ ಆಗಲು 42 ನಿಮಿಷಗಳು ಸಾಕು. ಬಿಂಜ್‌ ವೀವರ್‌ಗಳಿಗೆ, ಗೇಮರ್‌ಗಳಿಗೆ ಇದು ಹೆಚ್ಚು ಇಷ್ಟವಾಗಬಹುದು.

ಆಡಿಯೊ ಮತ್ತು ಸಂಪರ್ಕ: ಶಬ್ದ ಹೆಚ್ಚು ಸ್ಪಷ್ಟವಾಗಿದೆ, ಗಟ್ಟಿಯಾಗಿದೆ

ಒನ್‌ಪ್ಲಸ್‌ನ ಈ ನೂತನ ಸ್ಮಾರ್ಟ್‌ ಫೋನ್‌ನಿಂದ ಹೊರಹೊಮ್ಮುವ ಶಬ್ದವು ಹೆಚ್ಚು ಸ್ಪಷ್ಟವಾಗಿದೆ ಮತ್ತು ಶಬ್ದದ ಹೊರಹೊಮ್ಮಿಕೆಯೂ ಹೆಚ್ಚಿದೆ. ಇದರೊಂದಿಗೆ ಕನೆಕ್ಟಿವಿಟಿ ಕೂಡಾ ಉತ್ತಮವಾಗಿದೆ. ಶೇರಿಂಗ್‌ ಉತ್ತಮವಾಗಿದೆ. ಇ–ಸಿಮ್‌ ಬಳಕೆಯ ಆಯ್ಕೆ ಇದರಲ್ಲಿ ಇಲ್ಲ. ಜತೆಗೆ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ನಲ್ಲಿರುವ 3.5ಮಿ.ಮೀ. ಹೆಡ್‌ಫೋನ್ ಜಾಕ್‌ ಕೂಡಾ ಇದರಲ್ಲಿ ಇಲ್ಲ.

ಒನ್‌ಪ್ಲಸ್ ನಾರ್ಡ್‌ 5 ಸ್ಮಾರ್ಟ್‌ಫೋನ್‌ ಭಾರತದಲ್ಲಿ ₹31,999ಕ್ಕೆ ಲಭ್ಯ. 144 ಹರ್ಟ್ಚ್‌ ಅಮೊಲೆಡ್‌ ಡಿಸ್‌ಪ್ಲೇ, ಶಕ್ತಿಶಾಲಿ ಸ್ನಾಪ್‌ಡ್ರಾಗನ್‌ 8ಎಸ್‌ 3ನೇ ತಲೆಮಾರಿನ ಚಿಪ್‌ ಹಾಗೂ ಶಕ್ತಿಶಾಲಿ ಬ್ಯಾಟರಿಯು ಗೇಮರ್‌ಗಳನ್ನೂ ಒಳಗೊಂಡು ಅತಿ ಹೆಚ್ಚು ಕಾರ್ಯಕ್ಷಮತೆಯ ನಿರೀಕ್ಷೆಯಲ್ಲಿರುವವರಿಗೆ ಇಷ್ಟವಾಗಲಿದೆ. ಅದರ ನಡುವೆಯೂ, ಉತ್ತಮ ಐಪಿ ರೇಟಿಂಗ್‌ ಪಡೆಯಬಹುದಿತ್ತು ಅಥವಾ ವೈರ್‌ಲೆಸ್‌ ಚಾರ್ಜರ್‌ ನೀಡಬಹುದಿತ್ತು ಎಂಬ ಬೇಡಿಕೆಗಳೂ ಗ್ರಾಹಕ ವಲಯದಿಂದ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.