ADVERTISEMENT

ರೋಬಾಟ್ ಬಾಣಸಿಗ ಸಿದ್ಧ!

ನೇಸರ ಕಾಡನಕುಪ್ಪೆ
Published 14 ಜೂನ್ 2023, 0:31 IST
Last Updated 14 ಜೂನ್ 2023, 0:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ನೋಡಿ ಕಲಿ, ಮಾಡಿ ತಿಳಿ’ ಎನ್ನುವ ಮಾತು ಯಾರಿಗೆ ತಾನೇ ಗೊತ್ತಿಲ್ಲ? ವಿದ್ಯಾರ್ಥಿಗಳಿಗಾದಿಯಾಗಿ ಎಲ್ಲರಿಗೂ ಈ ಮಾತನ್ನು ಹೇಳುವುದುಂಟು. ಇನ್ನು ಮುಂದೆ ಈ ಮಾತನ್ನು ರೋಬಾಟ್‌ಗಳಿಗೂ ಹೇಳಬೇಕೋ ಏನೋ! ಏಕೆಂದರೆ, ಅಡುಗೆಯನ್ನು ಮಾಡುವ ವಿಡಿಯೊಗಳನ್ನು ನೋಡಿ, ಕಲಿತು ಪ್ರಯೋಗ, ಮಾಡುವ ರೋಬಾಟ್‌ ಅನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ!

ಹೌದು, ಇಂತಹ ಕಾಲವೂ ಬಂದಿದೆ. ಈಗೆಲ್ಲಾ ಯೂಟ್ಯೂಬ್‌ ವಿಡಿಯೊಗಳನ್ನು ನೋಡಿ ಅಡುಗೆ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಹಿಂದೆಲ್ಲಾ ಅಡುಗೆ ತಯಾರಿಗಾಗಿಯೇ ಜೊತೆಗೆ ಇರಿಸಿಕೊಳ್ಳುತ್ತಿದ್ದ ಅಡುಗೆ ಸಿದ್ಧತೆಯ ಪುಸ್ತಕ ಈಗ ಪ್ರಸ್ತುತವಾಗಿ ಉಳಿದೇ ಇಲ್ಲ. ಬೇಕಾಗುವ ಸಾಮಗ್ರಿ, ತಯಾರಿಯ ವಿಧಾನ ಇತ್ಯಾದಿಗಳನ್ನು ಬರೆದಿಟ್ಟುಕೊಳ್ಳಬೇಕಾದ ಗೋಜೇ ಇಲ್ಲ. ಏಕೆಂದರೆ, ಅಡುಗೆ ತಯಾರಿಯ ವಿಡಿಯೊಗಳು ಬಹು ದೊಡ್ಡ ಸಂಖ್ಯೆಯಲ್ಲಿ ಎಲ್ಲ ಭಾಷೆಗಳಲ್ಲೂ ಇಂಟರ್ನೆಟ್‌ನಲ್ಲಿ ಸಿಗುತ್ತವೆ.

ಆದರೆ, ಇಲ್ಲಿ ಹೇಳಲೊರಟಿರುವುದು ಕೊಂಚ ಭಿನ್ನವಾದುದು. ನಿಧಾನಗತಿಯಲ್ಲಿ ‘ಅಲೆಕ್ಸಾ’ದಂತಹ, ಮನೆಯನ್ನು ಶುಚಿಗೊಳಿಸುವ ಕೃತಕ ಬುದ್ಧಿಮತ್ತೆಯ ಸಾಧನಗಳು ಮನೆಗೆ ಪ್ರವೇಶ ನೀಡಿವೆ ಅಥವಾ ನೀಡುತ್ತಿವೆ ಅಲ್ಲವೇ? ಕೆಲವೇ ದಿನಗಳಲ್ಲಿ ಮನೆಕೆಲಸ ಮಾಡುವ ಮಾನವರೂಪದಲ್ಲೇ ಇರುವ ರೋಬಾಟ್‌ಗಳೂ ನಮ್ಮ ಮನೆಯನ್ನು ಪ್ರವೇಶ ಮಾಡಬಹುದು. ‘ಸೋಫಿಯಾ’ ಮಾದರಿಯ ಹೊಸ ವಿಚಾರಗಳನ್ನು ಕಲಿತುಕೊಳ್ಳುವ ರೋಬಾಟ್‌ಗಳ ಸಂಖ್ಯೆಯೂ ಹೆಚ್ಚಾಗಬಹುದು.

ADVERTISEMENT

ಪ್ರಸಿದ್ಧ ಕೇಂಬ್ರಿಜ್‌ ವಿಶ್ವವಿದ್ಯಾನಿಲಯದ ಎಂಜಿನಿಯರಿಂಗ್ ವಿಭಾಗದ ಸಂಶೋಧಕ ಗ್ಶೆಗೋಶ್ ಸೊಶಾಕಿ ಅವರ ತಂಡವು ಈ ವಿನೂತನ ರೋಬಾಟ್‌ ಅನ್ನು ರೂಪಿಸಿದ್ದಾರೆ. ಈ ರೋಬಾಟ್‌ಗೆ ಮಾನವರೂಪವನ್ನು ನೀಡುವ ಉದ್ದೇಶವೂ ಇವರಿಗಿದೆ. ಈ ರೋಬಾಟ್‌ನ ಕಾರ್ಯವೈಖರಿ ಬಹಳ ಸರಳವಾಗಿದೆ. ತನ್ನಲ್ಲಿರುವ ವಿಡಿಯೊ ಕ್ಯಾಮೆರಾಗಳ ಸಹಾಯದಿಂದ ಇಂಟರ್ನೆಟ್‌ನಲ್ಲಿರುವ ಅಡುಗೆತಯಾರಿಯ ವಿಡಿಯೊಗಳನ್ನು ನೋಡುವುದು. ಬಳಿಕ ಅಡುಗೆಗೆ ಬೇಕಾದ ಸಾಮಗ್ರಿಗಳಿಂದ ಮೆಕ್ಯಾನಿಕಲ್‌ ಕೈಗಳ ಸಹಾಯದಿಂದ ಅಡುಗೆ ತಯಾರಿಸುವುದು.

ಈ ಪ್ರಕ್ರಿಯೆ ಓದಲು ಬಹು ಸರಳವಾಗಿ ಕಂಡರೂ ಬಹು ಸಂಕೀರ್ಣವಾದುದು. ಏಕೆಂದರೆ, ಅಡುಗೆ ತಯಾರಿಗೆ ಕೇವಲ ಬೇಕಾಗುವ ಸಾಮಗ್ರಿಗಳಿದ್ದರೆ ಸಾಲದು. ವಾಸನೆಯ ಗ್ರಹಿಕೆ ಇರಬೇಕು. ಅಡುಗೆ ಬೇಯುವ ಹದದ ಬಗ್ಗೆ ಜ್ಞಾನವಿರಬೇಕು. ಅಡುಗೆಯ ಸ್ವರೂಪ ಹಾಗೂ ಅಂದದ ಬಗ್ಗೆ ತಿಳಿವಳಿಕೆ ಇರಬೇಕು. ಮೇಲಾಗಿ ಅಡುಗೆ ಮಾಡಲು ಅನುಭವವೂ ಇರಬೇಕು. ಇಷ್ಟೆಲ್ಲಾ ವಿಚಾರಗಳು ಅಡುಗೆ ಸಿದ್ಧಪಡಿಸುವ ವ್ಯಕ್ತಿಗೆ ತಿಳಿದಿದ್ದೂ ಅಡುಗೆ ಹಾಳಾಗುವ ಸಾಧ್ಯತೆ ಇರುತ್ತದೆ. ಇನ್ನು ಯಂತ್ರವೊಂದು ಅಡುಗೆ ಮಾಡಬೇಕು ಎಂದಾದರೆ, ಅದನ್ನು ಇನ್ನೆಷ್ಟು ಸಂಕೀರ್ಣ ಗುಣಗಳಿಂದ ಸಿದ್ಧಪಡಿಸಬೇಕಾಗುವುದು ಅಲ್ಲವೇ!?

‘ಇದೇ ನಮಗೆ ಸವಾಲಾಗಿದ್ದು, ಜ್ಞಾನಶೇಖರಣೆ, ದತ್ತಾಂಶ ವಿಶ್ಲೇಷಣೆ, ಕ್ಯಾಮೆರಾ, ದತ್ತಾಂಶ ರವಾನೆ ಈಗ ಸವಾಲಾಗೇ ಉಳಿದಿಲ್ಲ. ತಂತ್ರಜ್ಞಾನ ಆಗಲೇ ಸುಧಾರಿಸಿದೆ. ಅಡುಗೆ ತೀರಾ ಯಾಂತ್ರಿಕವಾಗಿರಬಾರದು. ಅಡುಗೆಯ ತಯಾರಿಯಲ್ಲಿ ಕೊಂಚ ದೋಷವೂ ಇರಬೇಕು. ಆಗಲೇ ಅಡುಗೆ ಚೆನ್ನಾಗಿ ಆಗುವುದು. ಅಲ್ಲದೇ, ಅಡುಗೆಯು ಪ್ರತಿ ಬಾರಿ ತಯಾರಿಸಿದಾಗಲೂ ಕೊಂಚ ವಿಭಿನ್ನವಾದ ರುಚಿಯನ್ನು ನೀಡಬೇಕು. ಅದು ಮಾನವಸಹಜವಾದುದು. ನಾವು ತಯಾರಿಸುವ ರೋಬಾಟ್‌ಗೆ ಈ ವಿಚಾರಗಳನ್ನು ಹೆಚ್ಚು ಕಲಿಸಲಾಯಿತು’ ಎಂದು ಸಂಶೋಧಕ ಸೊಶಾಕಿ ವಿಶ್ಲೇಷಿಸಿದ್ದಾರೆ.

ಸೊಶಾಕಿ ಅವರ ತಂಡವು ಮೊದಲು ಎಂಟು ಖಾದ್ಯಗಳ ಅಡುಗೆಯ ತಯಾರಿ ವಿಡಿಯೊಗಳನ್ನು ಸಿದ್ಧಪಡಿಸಿದೆ. ಬಳಿಕ ಅದನ್ನು ಇಂಟರ್ನೆಟ್‌ಗೆ ಅಪ್‌ಲೋಡ್‌ ಮಾಡಿದೆ. ಬ್ರೊಕೋಲಿ, ಕ್ಯಾರೆಟ್, ಸೇಬು, ಬಾಳೆ ಹಾಗೂ ಕಿತ್ತಲೆಹಣ್ಣುಗಳನ್ನು ಬಳಸಿಕೊಂಡು ಅಡುಗೆಯನ್ನು ಮಾಡಬಹುದಾದ ವಿಡಿಯೊಗಳಿವು. ಈ ವಿಡಿಯೊಗಳನ್ನು ರೋಬಾಟ್‌ಗೆ ತೋರಿಸಿದಾಗ ವಿಡಿಯೊದ ಪ್ರತಿ ದೃಶ್ಯಗಳನ್ನು (ಫ್ರೇಂ) ರೋಬಾಟ್‌ ಸೂಕ್ಷ್ಮವಾಗಿ ವಿಶ್ಲೇಷಿಸಿದೆ. ಹಣ್ಣು–ತರಕಾರಿಗಳನ್ನು ಕತ್ತರಿಸುವ ರೀತಿ, ಬೇಯಿಸುವ ವಿಧಾನ – ಒಟ್ಟಾರೆಯಾಗಿ ಅಡುಗೆಯ ಎಲ್ಲ ಹಂತಗಳನ್ನು ರೋಬಾಟ್‌ ಗಮನಿಸಿ ತನ್ನ ಸ್ಮರಣೆಯಲ್ಲಿ ಶೇಖರಿಸಿಕೊಟ್ಟುಕೊಂಡಿದೆ. ಬಳಿಕ, ತನ್ನ ಬಳಿ ಇರುವ ಅಡುಗೆ ಸಾಮಗ್ರಿಗಳನ್ನು ವಿಡಿಯೊದಲ್ಲಿರುವ ವಿಧಾನದಂತೆಯೇ ತಯಾರಿಸುತ್ತದೆ.

‘ಈ ರೋಬಾಟ್‌ಗೆ ಕಚ್ಚಾ ಸಾಮಗ್ರಿಗಳನ್ನು ಮನುಷ್ಯರೇ ಕೊಡಬೇಕಾದ್ದು ದೊಡ್ಡ ಮಿತಿ. ರೋಬಾಟ್‌ ಸ್ವತಃ ತಾನೇ ಸಾಮಗ್ರಿಗಳನ್ನು ಹೊಂದಿಸಿಕೊಳ್ಳುವುದು ಸದ್ಯಕ್ಕೆ ಸಾಧ್ಯವಿಲ್ಲ. ಏಕೆಂದರೆ, ಸಾರ್ವಜನಿಕ ಸ್ಥಳಗಳಲ್ಲಿ ರೋಬಾಟ್‌ ಸಂಚಾರಕ್ಕೆ ಕಾನೂನುಗಳ ತಯಾರಿ, ಸಮ್ಮತಿ ಅಗತ್ಯವಿದೆ. ಅದು ಭವಿಷ್ಯದ ಹೆಜ್ಜೆ. ಆದರೆ, ನಾವೀಗ ಯಂತ್ರವೊಂದು ಅಡುಗೆ ಮಾಡಬಲ್ಲದು ಎಂಬುದನ್ನು ಸಾಬೀತುಪಡಿಸಿದ್ದೇವೆ. ರೋಬಾಟ್‌ನಿಂದ ಉದ್ದೇಶಪೂರ್ವಕವಾಗಿಯೇ ಕೆಲವು ತಪ್ಪುಗಳನ್ನು ಮಾಡಿಸಿದ್ದೇವೆ. ಅದು ಅಡುಗೆಯ ಸ್ವಾದದ ಮೇಲೆ ಸಕಾರಾತ್ಮಕವಾಗಿಯೂ ನಕಾರಾತ್ಮಕವಾಗಿಯೂ ಪರಿಣಾಮ ಬೀರಬಲ್ಲದು’ ಎಂದು ಸೊಶಾಕಿ ವಿವರಿಸಿದ್ದಾರೆ.

ಹೋಟೆಲ್‌ ಉದ್ಯಮಕ್ಕೆ ಈ ರೋಬಾಟ್‌ ವರದಾನವಾಗಲಿದೆ. ದಣಿವಿಲ್ಲದೇ ಕೆಲಸ ಮಾಡುವ ಶಕ್ತಿ ಈ ರೋಬಾಟ್‌ಗೆ ಇರಲಿದೆ. ವಯೋವೃದ್ಧರು, ಅಂಗವಿಕಲರು ಅಥವಾ ಒಬ್ಬಂಟಿಗಳಿಗೆ ಈ ರೋಬಾಟ್‌ ಸಹಾಯಮಾಡಲಿದೆ ಎಂದು ಈ ವಿಜ್ಞಾನಿಗಳು ನಂಬಿದ್ದಾರೆ. ಅಮೆರಿಕದ ಮ್ಯಾನ್‌ಹಟನ್‌ನ ಪ್ರತಿಷ್ಠಿತ ‘ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್‌’ (ಐಇಇಇ) ಸಂಶೋಧನಾ ನಿಯತಕಾಲಿಕೆಯಲ್ಲಿ ಈ ಸಂಶೋಧನಾ ತಂಡವು ಈ ರೋಬಾಟ್‌ ಬಗ್ಗೆ ವೈಜ್ಞಾನಿಕ ಲೇಖನವನ್ನೂ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.