ADVERTISEMENT

ಮಂಗಳ ಗ್ರಹದ ಶಿಲೆ ಮಾರಾಟ; ₹17 ಕೋಟಿಯಿಂದ ₹34 ಕೋಟಿಗೆ ಹರಾಜು ಸಾಧ್ಯತೆ

ಏಜೆನ್ಸೀಸ್
Published 14 ಜುಲೈ 2025, 0:30 IST
Last Updated 14 ಜುಲೈ 2025, 0:30 IST
   

ನ್ಯೂಯಾರ್ಕ್‌: 25 ಕೆ.ಜಿ ತೂಕದ (54 ಪೌಂಡ್) ಶಿಲೆಯೊಂದನ್ನು ನ್ಯೂಯಾರ್ಕ್‌ನಲ್ಲಿ ಇದೇ ಬುಧವಾರ ಹರಾಜು ಹಾಕಲಾಗುತ್ತದೆ. ಈ ಶಿಲೆಯ ಬೆಲೆ ₹17 ಕೋಟಿಯಿಂದ ₹34 ಕೋಟಿಯಷ್ಟು ಆಗಲಿದೆ (2ರಿಂದ 4 ಮಿಲಿಯನ್ ಡಾಲರ್) ಎಂದು ಅಂದಾಜಿಸಲಾಗಿದೆ... 

ಈ ಶಿಲೆಗೆ ಇಷ್ಟೊಂದು ಬೆಲೆ ಏಕೆ ಎಂದು ಅಚ್ಚರಿಯಾಗುತ್ತಿದೆಯೇ? ಇದು ಭೂಮಿ ಮೇಲೆ ಈ ವರೆಗೆ ಕಂಡುಬಂದಿರುವ ಮಂಗಳ ಗ್ರಹದ ಶಿಲೆಯ ಅತ್ಯಂತ ದೊಡ್ಡ ತುಣುಕಾಗಿದೆ. ಈ ಕಾರಣಕ್ಕೆ ಈ ಶಿಲೆಗೆ ಅಷ್ಟೊಂದು ಬೆಲೆ!

ಇದನ್ನು ಉಲ್ಕಾಶಿಲೆ ಎಂದೂ ಕರೆಯಲಾಗುತ್ತದೆ. ವಿಶ್ವದ ದೊಡ್ಡ ಹರಾಜು ಸಂಸ್ಥೆ ಸೊದೆಬಿ, ‘ಪ್ರಾಕೃತಿಕ ಇತಿಹಾಸ’ ಧ್ಯೇಯವಾಕ್ಯದಡಿ ಈ ಶಿಲೆಯನ್ನು ಹರಾಜು ಹಾಕುತ್ತಿದೆ. ಮಂಗಳನ ಅಂಗಳದ ಈ ಶಿಲೆಗೆ ‘ಎನ್‌ಡಬ್ಲುಎ 16788’ ಎಂದು ಹೆಸರಿಲಾಗಿದೆ. 

ADVERTISEMENT

ಜೊತೆಗೆ, ಡೈನೊಸಾರ್‌ನ ಮರಿ ‘ಸೆರಾಟೊಸಾರಸ್‌’ನ ಅಸ್ಥಿಪಂಜರವನ್ನು ಕೂಡ ಹರಾಜು ಹಾಕಲಾಗುತ್ತದೆ. ಈ ಅಸ್ಥಿಪಂಜರವು 6 ಅಡಿಗಿಂತ ಎತ್ತರ ಇದ್ದು, 11 ಅಡಿಯಷ್ಟು ಉದ್ದ ಇದೆ.

ಈ ಮೊದಲು, ರೋಮ್‌ನಲ್ಲಿರುವ ಇಟಲಿಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಈ ಶಿಲೆಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಶಿಲೆಯ ಮಾಲೀಕತ್ವ ಯಾರದು ಎಂಬ ಮಾಹಿತಿಯನ್ನು ಸೊದೆಬಿ ಬಹಿರಂಗಪಡಿಸಿಲ್ಲ.

‘ಯಾವಾಗ ಈ ಶಿಲೆಯು ಭೂಮಿ ಮೇಲೆ ಬಿದ್ದಿದೆ ಎಂಬುದು ಖಚಿತಪಟ್ಟಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಿದ್ದಿರುವ ಸಾಧ್ಯತೆಯೇ ಹೆಚ್ಚು’ ಎಂದು ಸೊದೆಬಿ ಹೇಳಿದೆ.

ಈ ಶಿಲೆಯ ಚಿಕ್ಕ ತುಂಡೊಂದನ್ನು ವಿಶೇಷ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. 1976ರಲ್ಲಿ ಮಂಗಳ ಗ್ರಹದಲ್ಲಿ ಇಳಿದಿದ್ದ ವೈಕಿಂಗ್ ಗಗನನೌಕೆ ಕಳುಹಿಸಿದ್ದ ದತ್ತಾಂಶಗಳೊಂದಿಗೆ ಇದರ ರಾಸಾಯನಿಕ ಸಂರಚನೆಯ ವೈಜ್ಞಾನಿಕ ವಿಶ್ಲೇಷಣೆ ನಡೆಸದಾಗ ಇದು ಮಂಗಳ ಗ್ರಹದ ಶಿಲೆ ಎಂಬುದು ದೃಢಪಟ್ಟಿತು
ಕ್ಯಾಸಂಡ್ರ ಹ್ಯಾಟನ್ ಸೊದೆಬಿಯ ವಿಜ್ಞಾನ ಮತ್ತು ಪ್ರಾಕೃತಿಕ ಇತಿಹಾಸ ವಿಭಾಗದ ಉಪಾಧ್ಯಕ್ಷ

‘ಎನ್‌ಡಬ್ಲುಎ 16788’ ಕುರಿತ ವಿವರಗಳು

  • ಬೃಹತ್‌ ಕ್ಷುದ್ರಗ್ರಹವೊಂದು ಭೂಮಿಯತ್ತ ಬರುವ ವೇಳೆ ಮಂಗಳ ಗ್ರಹಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಈ ಉಲ್ಕಾಶಿಲೆಯು 14 ಕೋಟಿ ಮೈಲು ದೂರ ಕ್ರಮಿಸಿದ ಬಳಿಕ ನೈಜರ್‌ ದೇಶದ ಸಹರಾ ಮರಭೂಮಿಯಲ್ಲಿ ಬಿದ್ದಿದೆ. ಉಲ್ಕೆಗಳ ಕುರಿತು ಅಧ್ಯಯನ ಮಾಡುವವರು 2023ರ ನವೆಂಬರ್‌ನಲ್ಲಿ ಇದನ್ನು ಪತ್ತೆ ಹಚ್ಚಿದ್ದಾರೆ.

  • ಈ ಶಿಲೆಯು ಕೆಂಪು ಬೂದು ಹಾಗೂ ಕಂದು ಬಣ್ಣ ಹೊಂದಿದೆ. ಭೂಮಿ ಮೇಲೆ ಈ ವರೆಗೆ ಕಂಡುಬಂದಿರುವ ಮಂಗಳ ಗ್ರಹದ ಬೃಹತ್‌ ಶಿಲೆಗಿಂತ ಇದು ಶೇ 70ರಷ್ಟು ದೊಡ್ಡದಿದೆ .

  • ಇದರ ಉದ್ದ 15 ಇಂಚು ಇದ್ದು ಅಗಲ 11 ಹಾಗೂ ಎತ್ತರ 6 ಇಂಚು ಇದೆ.

  • ಭೂಮಿಯಲ್ಲಿ ಈ ವರೆಗೆ 77 ಸಾವಿರಕ್ಕೂ ಅಧಿಕ ಉಲ್ಕಾಶಿಲೆಗಳು ಪತ್ತೆಯಾಗಿವೆ. ಈ ಪೈಕಿ ಮಂಗಳ ಗ್ರಹದ ಶಿಲೆಗಳ ಸಂಖ್ಯೆ ಕೇವಲ 400.

  • ಇದು ಗಾಜಿನಂತಹ ಮೇಲ್ಮೈ ಹೊಂದಿದೆ. ಭೂಮಿಗೆ ಅಪ್ಪಳಿಸುವ ವೇಳೆ ಅಧಿಕ ಉಷ್ಣತೆಯಿಂದಾಗಿ ದಹನಗೊಂಡಿರುವುದು ಇಂತಹ ಮೇಲ್ಮೈಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂಬುದು ವಿಜ್ಞಾನಿಗಳ ವಿಶ್ಲೇಷಣೆ

ಈ ಶಿಲೆಯ ಚಿಕ್ಕ ತುಂಡೊಂದನ್ನು ವಿಶೇಷ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. 1976ರಲ್ಲಿ ಮಂಗಳ ಗ್ರಹದಲ್ಲಿ ಇಳಿದಿದ್ದ ವೈಕಿಂಗ್ ಗಗನನೌಕೆ ಕಳುಹಿಸಿದ್ದ ದತ್ತಾಂಶಗಳನ್ನು ಬಳಸಿ, ಇದರ ರಾಸಾಯನಿಕ ಸಂರಚನೆಯ ವೈಜ್ಞಾನಿಕ ವಿಶ್ಲೇಷಣೆ ನಡೆಸಿದಾಗ, ಇದು ಮಂಗಳ ಗ್ರಹದ ಶಿಲೆ ಎಂಬುದು ದೃಢಪಟ್ಟಿತು
ಕ್ಯಾಸಂಡ್ರ ಹ್ಯಾಟನ್, ಸೊದೆಬಿಯ ವಿಜ್ಞಾನ ಮತ್ತು ಪ್ರಾಕೃತಿಕ ಇತಿಹಾಸ ವಿಭಾಗದ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.