ಚೀನಾದ ಮಾನವ ಸಹಿತ ರಾಕೆಟ್ ಶೆನ್‌ಜೋ ಉಡ್ಡಯನದ ದೃಶ್ಯ
ರಾಯಿಟರ್ಸ್ ಚಿತ್ರ
ಬೀಜಿಂಗ್: ಏಳು ಗಗನಯಾನಿಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಚಿಮ್ಮುವ ಮುಂದಿನ ತಲೆಮಾರಿನ ನೌಕೆಯೊಂದನ್ನು ಚೀನಾ ಅಭಿವೃದ್ಧಿಪಡಿಸುತ್ತಿದ್ದು, 2027 ಹಾಗೂ 2028ರ ನಡುವೆ ಇದು ಉಡ್ಡಯನಗೊಳ್ಳುವ ನಿರೀಕ್ಷೆ ಇದೆ ಎಂದು ಚೀನಾದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಚೀನಾದ ಮಾನವ ಸಹಿತ ಗಗನಯಾನ ಯೋಜನೆಯು 2003ರಲ್ಲಿ ಆರಂಭಗೊಂಡಿತು. ಫೈಟರ್ ಜೆಟ್‌ನ ಮಾಜಿ ಪೈಲಟ್ ಯಾಂಗ್ ಲಿಯೂ ಅವರನ್ನು ಮೊದಲ ಬಾರಿಗೆ ಚೀನಾ ಬಹ್ಯಾಕಾಶಕ್ಕೆ ಕಳುಹಿಸಿತ್ತು. ’ಶೆನ್‌ಜೋ–5’ ಎಂಬ ಕಂಚಿನ ಬಣ್ಣದ ಕ್ಯಾಪ್ಸೂಲ್ ಅನ್ನು ಚೀನಾದ ಮೊದಲ ಮಾನವ ಸಹಿತ ಗಗನಯಾನದಲ್ಲಿ ಬಳಸಲಾಗಿತ್ತು. ಇವರು ಭೂಮಿಗೆ ಮರಳಿದಾಗ ಚೀನಾದಲ್ಲಿ ಸಂಭ್ರಮವೇ ಮನೆ ಮಾಡಿತ್ತು.
ಚೀನಾದ ಬಾಹ್ಯಾಕಾಶ ನಿಲ್ದಾಣವು 2024ರಲ್ಲಿ ಕಾರ್ಯಾರಂಭ ಮಾಡಿದೆ. ಇದರೊಂದಿಗೆ 2030ರ ಹೊತ್ತಿಗೆ ಗಗನಯಾನಿಗಳನ್ನು ಚಂದ್ರನಲ್ಲಿಗೆ ಕಳುಹಿಸುವ ಯೋಜನೆಯನ್ನು ಚೀನಾ ಹೊಂದಿದೆ. ಈ ನಿಟ್ಟಿನಲ್ಲಿ ನೌಕೆ ಮತ್ತು ಗಗನಯಾನಿಗಳು ಬಳಸುವ ವಸ್ತುಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸುವ ಸಂಶೋಧನೆಗಳು ನಡೆಯುತ್ತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಚೀನಾ ಬಳಿ ಇರುವ ಶೆನ್‌ಜೋ ನೌಕೆಯು ರಷ್ಯಾದ ಸೊಯುಜ್ ನೌಕೆಯ ತಂತ್ರಜ್ಞಾನವನ್ನು ಆಧರಿಸಿದೆ. ಇದು ಮೂವರು ಗಗನಯಾನಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಜೀವ ರಕ್ಷಕ ಸಾಧನ, ಮುನ್ನುಗ್ಗಲು ಅಗತ್ಯವಿರುವ ಪ್ರೊಪಲ್ಶನ್ ಮಾಡ್ಯೂಲ್, ಮನುಷ್ಯರು ಕೆಲಕಾಲ ತಂಗಲು ಕೋಣೆ, ಭೂಮಿಗೆ ಮರಳಲು ಬೇಕಿರುವ ಕ್ಯಾಪ್ಸೂಲ್ ಇದರಲ್ಲಿವೆ.
‘ಆದರೆ ಹೊಸ ತಲೆಮಾರಿನ ನೌಕೆಯಲ್ಲಿ ಪ್ರೊಪಲ್ಶನ್ ಮಾಡ್ಯೂಲ್ ಹಾಗೂ ಮರಳಿ ಬರುವ ಕ್ಯಾಪ್ಸೂಲ್‌ಗಳು ಎಂಬ ಎರಡೇ ಭಾಗಗಳಿವೆ. ಏಳು ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇದಕ್ಕಿದೆ’ ಎಂದು ಈ ಹೊಸ ತಲೆಮಾರಿನ ನೌಕೆಯ ಮುಖ್ಯ ವಿನ್ಯಾಸಕ ಝ್ಯಾಂಗ್ ಬೈನನ್ 2020ರಲ್ಲಿ ಹೇಳಿದ್ದರು.
‘ಭವಿಷ್ಯದಲ್ಲಿ ಕೈಗೊಳ್ಳಲಿರುವ ಚಂದ್ರಯಾನ, ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ, ಬಾಹ್ಯಾಕಾಶದ ಆಳಕ್ಕಿಳಿದು ಸಂಶೋಧನೆ ಕೈಗೊಳ್ಳಲು ಈ ಹೊಸ ತಲೆಮಾರಿನ ನೌಕೆಯನ್ನೇ ಬಳಸುವ ಯೋಜನೆ ಇದೆ’ ಎಂದು ಸರ್ಕಾರಿ ಸ್ವಾಮ್ಯದ ಗಾಂಗ್‌ಝೌ ಪತ್ರಿಕೆಯಲ್ಲಿ ಹೇಳಲಾಗಿದೆ.
‘2020ರಲ್ಲಿ ಮೊದಲ ಬಾರಿಗೆ ಹೊಸ ತಲೆಮಾರಿನ ನೌಕೆಯ ಪರೀಕ್ಷಾರ್ಥ ಪ್ರಯೋಗ ನಡೆದಿತ್ತು. ಪರಿಷ್ಕೃತ ನೌಕೆಯ ಪರೀಕ್ಷಾರ್ಥ ಪ್ರಯೋಗ ಇತ್ತೀಚೆಗೆ ಯಶಸ್ವಿಯಾಗಿ ನಡೆದಿದೆ. ಹೀಗಾಗಿ ಇದನ್ನು 2027 ಹಾಗೂ 2028ರ ನಡುವೆ ಪ್ರಯೋಗಿಸುವ ಯೋಜನೆ ಇದೆ’ ಎಂದು ಚೀನಾದ ಮಾನವ ಸಹಿತ ಬಾಹ್ಯಾಕಾಶ ನೌಕೆಯ ಉಪ ಮುಖ್ಯ ವಿನ್ಯಾಸಕಾರ ಯಾಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.