ನಭಕ್ಕೆ ಚಿಮ್ಮಿದ ಉಪಗ್ರಹ
(ಚಿತ್ರ ಕೃಪೆ X/@isro)
ಶ್ರೀಹರಿಕೋಟಾ: ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್-02 ಹೊತ್ತ ಜಿಎಸ್‌ಎಲ್‌ವಿ ಎಫ್-15 ರಾಕೆಟ್ ಇಂದು ಮುಂಜಾನೆ ನಭಕ್ಕೆ ಚಿಮ್ಮಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
ಇದು ಶ್ರೀಹರಿಕೋಟಾದಿಂದ ಇಸ್ರೊದ ಐತಿಹಾಸಿಕ 100ನೇ ಉಡ್ಡಯನ ಆಗಿದೆ. ಆ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲು ಸಾಧಿಸಿದೆ.
ಈ ಸಂಬಂಧ ಐತಿಹಾಸಿಕ ಸಾಧನೆಯ ವಿಡಿಯೊವನ್ನು ಇಸ್ರೊ ಹಂಚಿಕೊಂಡಿದೆ.
ಬಳಿಕ ಉಪಗ್ರಹ ನಿಗದಿತ ಕಕ್ಷೆಯನ್ನು ಸೇರಿತು ಎಂದು ಇಸ್ರೊ ಖಚಿತಪಡಿಸಿದೆ. ಈ ವರ್ಷದ ಮೊದಲ ಯೋಜನೆ ಇದಾಗಿದೆ.
ಈ ಉಡ್ಡಯನವು ಜ.13ರಂದು ಇಸ್ರೊದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ವಿ. ನಾರಾಯಣನ್ ಅವರಿಗೂ ಮೊದಲ ಬಾಹ್ಯಾಕಾಶ ಕಾರ್ಯಕ್ರಮವಾಗಿದೆ.
27 ತಾಸಿನ ಕ್ಷಣಗಣನೆಯ ಬಳಿಕ ಇಂದು (ಬುಧವಾರ) ಮುಂಜಾನೆ 6.23ಕ್ಕೆ ಸರಿಯಾಗಿ ಎರಡನೇ ಲ್ಯಾಂಚ್ ಪ್ಯಾಡ್‌ನಿಂದ ರಾಕೆಟ್ ನಭಕ್ಕೆ ಚಿಮ್ಮಿತು ಎಂದು ಇಸ್ರೊ ತಿಳಿಸಿದೆ.
ಈ ಸರಣಿಯ ಎರಡನೇ ಉಪಗ್ರಹ ಇದಾಗಿದೆ. 2023ರ ಮೇ 29ರಂದು ಎರಡನೇ ತಲೆಮಾರಿನ ಎನ್‌ವಿಎಸ್-01 ನ್ಯಾವಿಗೇಷನ್ ಉಪಗ್ರಹವನ್ನು ಉಡ್ಡಯನ ಮಾಡಲಾಗಿತ್ತು.
ಭೂ, ವಾಯುಪ್ರದೇಶ, ಕಡಲಯಾನ, ಕೃಷಿಗೆ ಸಂಬಂಧಿಸಿದ ನಿಖರ ಮಾಹಿತಿ ಒದಗಿಸಲು ಈ ಯೋಜನೆಯಿಂದ ಸಾಧ್ಯವಾಗಲಿದೆ. ಮೊಬೈಲ್ ಸಾಧನಗಳಲ್ಲಿ ಲೊಕೇಷನ್ ಆಧಾರಿತ ಸೇವೆ, ಉಪ್ರಗ್ರಹಗಳ ಕಕ್ಷೆಯ ನಿರ್ಣಯ, ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ತುರ್ತು ಸೇವೆಗಳಿಗೆ ನೆರವಾಗಲಿದೆ ಎಂದು ಇಸ್ರೊ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.