
ಚಳಿಯೋ ಸೆಖೆಯೋ, ಹಗಲಲ್ಲೂ ವಿದ್ಯುದ್ದೀಪಗಳನ್ನು, ಫ್ಯಾನ್, ಎ.ಸಿ., ಹೀಟರ್‌ಗಳನ್ನು ಉಪಯೋಗಿಸುವ ಪರಿಸ್ಥಿತಿ ಬೃಹತ್ ನಗರಗಳಲ್ಲಂತೂ ಬಂದುಬಿಟ್ಟಿದೆ. ವಿದ್ಯುತ್ ಉಪಕರಣಗಳ ಮೇಲೆಯೇ ಅವಲಂಬಿತರಾಗಿ ಮನೆಯೊಳಗಿನ, ಆಫೀಸಿನೊಳಗಿನ ತಾಪಮಾನ ನಿರ್ವಹಿಸುವ ಪರಿಸ್ಥಿತಿ ಖಂಡಿತ ಪರಿಸರಸ್ನೇಹಿಯಲ್ಲ.
ಪರಿಸರದೆಡೆಗಿನ ಜವಾಬ್ದಾರಿ ಮತ್ತು ಸಾಮಾನ್ಯಜ್ಞಾನ ಬಳಸಿ ಕಟ್ಟಡ ವಿನ್ಯಾಸಗೊಳಿಸಿದರೂ ಸಾಕು, ಕಟ್ಟಡದೊಳಗೆ ಬೆಳಕು-ಗಾಳಿ-ಬಿಸಿಲು ಬರುವ ಹಾಗೆ, ಬಂದು ಉಳಿಯುವ ಹಾಗೆ ಮಾಡಬಹುದು ಎಂಬುದನ್ನು ವಾಸ್ತುಶಿಲ್ಪಿಗಳು ಖಂಡಿತವಾಗಿ ಒಪ್ಪುತ್ತಾರೆ. ಹಳ್ಳಿಗಳ ಹಳೇಮನೆಗಳನ್ನು ಗಮನಿಸಿದರೆ ನಿಮಗಿದು ಸುಲಭವಾಗಿ ಗೋಚರಿಸುತ್ತದೆ. ಹೊರಗೆ ಬಿಸಿಲೇ ಇರಲಿ, ಚಳಿಯೇ ಇರಲಿ, ಮನೆಯೊಳಗೆ ಮಾತ್ರ ಹಿತವಾದ ತಾಪಮಾನ! ಹೊರಗಿನ ಚಳಿ ಅಥವಾ ಬೇಗೆ, ಮನೆಯೊಳಗೆ ತಲುಪದಂತೆ ದಪ್ಪವಾದ ಮಣ್ಣಿನ ಗೋಡೆಗಳು, ಗೋಡೆಯ ಮೇಲ್ತುದಿಯಲ್ಲಿ ಬಿಸಿಗಾಳಿ ಹೊರಹೋಗಿ ತಂಪುಗಾಳಿ ಒಳಬರಲು ಸಣ್ಣ ಕಿಂಡಿಗಳು, ಭೌಗೋಳಿಕವಾಗಿ ಸೂಕ್ತವೆನಿಸುವಂತಹ ಹೆಂಚು ಅಥವಾ ಸ್ಥಳೀಯ ವಸ್ತುಗಳ ಬಳಕೆಯಿಂದ ಮಾಡಿದ ತಾರಸಿ - ಹೀಗೆ ಅನುಭವವೇದ್ಯ ಸಂಗತಿಗಳೇ; ನಿಸರ್ಗದೊಡನೆ ಬದುಕನ್ನು ಸರಳವಾಗಿ ನಡೆಸಲು ಸಾಧ್ಯವಾಗಿಸುತ್ತಿತ್ತು.
ಬೆಂಗಳೂರಿನಂತಹ ಜನನಿಬಿಡ ಜಾಗದಲ್ಲಿ ಕಟ್ಟಲಾಗುವ ಗಗನಚುಂಬಿ ಕಟ್ಟಡಗಳಲ್ಲಿ ಇಷ್ಟು ದಪ್ಪದ ಗೋಡೆಗಳಾಗಲೀ ಕಿಂಡಿಗಳಾಗಲೀ ಇರುವುದು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ. ಬೃಹತ್ ಆಫೀಸು ಕಟ್ಟಡಗಳಲ್ಲಿ ಗಾಜಿನ ಗೋಡೆಗಳೇ! ಗಾಜು, ಬೆಳಕನ್ನು ಮಾತ್ರ ಒಳಬಿಡುತ್ತದೆಯೇ? ಜೊತೆಗೆ ಬಿಸಿಲಿನ ತಾಪವನ್ನೂ ಉಚಿತವಾಗಿ ಒಳಗೆ ಕಳುಹಿಸುತ್ತದೆ! ಚಳಿಗಾಲದ ಬೆಳಗ್ಗೆ ಮಾತ್ರ ಅದು ಹಿತವೆನ್ನಿಸಬಹುದು, ಆದರೆ, ಚಳಿಗಾಲದ ಮಧ್ಯಾಹ್ನ ಮತ್ತು ಬೇಸಿಗೆ ಕಾಲದಲ್ಲಿ ಪಾರದರ್ಶಕ ಗಾಜಿನ ಮೂಲಕ ಹರಿದುಬರುವ ಬಿಸಿಲನ್ನು ತಾಳಲು ಸಾಧ್ಯವೇ? ಇದೇ ಕಾರಣದಿಂದಾಗಿಯೇ ಗಾಜಿನ ಮೇಲೆ ಶಾಖವನ್ನು ಪ್ರತಿಫಲಿಸಿ ಹೊರಗಿರಿಸುವಂತಹ ಪದರವನ್ನು ಲೇಪಿಸಲಾಗುತ್ತದೆ; ಇಂತಹ ಗಾಜಿನಗೋಡೆಗಳಿಗೆ ಅಂಟಿಸುವ ‘ಬಿಸಿಲು ನಿರೋಧಕ’ ಪದರಗಳು - ಕಾರುಗಳ ಕಿಟಕಿಯ ಗಾಜಿಗೆ ಅಂಟಿಸುವ ಪಾಲಿಮರ್‌ಗಳ ಪದರದಂತಿರಬಹುದು ಅಥವಾ ಶಾಖನಿರೋಧಕ ರಾಸಾಯನಿಕಗಳ, ಲೋಹಗಳ ಅನೇಕ ಪದರಗಳ ಲೇಪನವಿರಬಹುದು – ಇವೆಲ್ಲವೂ ಈಗಾಗಲೇ ಬಳಕೆಯಲ್ಲಿದ್ದು, ತಕ್ಕಮಟ್ಟಿಗೆ ಬಿಸಿಲಿನ ತಾಪವನ್ನೂ ಕಟ್ಟಡದ ಹೊರಗೇ ಇರಿಸಲು ಯಶಸ್ವಿಯಾಗಿವೆ. ಆದರೆ, ಇವುಗಳಲ್ಲಿ ಹಲವು ವಸ್ತುಗಳು, ಗಾಜಿನ ಪಾರದರ್ಶಕತೆಯನ್ನು ಕಡಿಮೆಗೊಳಿಸುತ್ತವೆ. ಕಾರಿನ ಕಿಟಕಿಗಳಿಗೆ ಸೌರ ನಿಯಂತ್ರಕ ಪದರವನ್ನು ಲೇಪನ ಮಾಡಿದಾಗ, ಹೊರಗಿನ ಬಿಸಿಲೇನೋ ಕಡಿಮೆಯಾಗುತ್ತದೆ; ಆದರೆ ಹೊರಗಿನ ದೃಶ್ಯವೂ ಅಷ್ಟೇನೂ ನಿಖರವಾಗಿ ಕಾಣುವುದಿಲ್ಲ, ಅಲ್ಲವೇ? ಇನ್ನು, ಗಾಜು ಪಾರದರ್ಶಕವಾಗಿಯೇ ಇರಬೇಕು ಮತ್ತು ಶಾಖವನ್ನೂ ಹೊರಗಿಡಬೇಕೆಂದರೆ, ಅನೇಕ ಪದರಗಳ ದಪ್ಪಗಿನ ಗಾಜೇ ಬೇಕಾಗುತ್ತದೆ; ತೆಳುಗಾಜಿನ ಪಾರದರ್ಶಕತೆಯಲ್ಲಿ ಕೊಂಚವೂ ಕಡಿಮೆಯಾಗದಂತೆ, ಆದರೆ ಶಾಖವನ್ನೂ ಸಂಪೂರ್ಣವಾಗಿ ಹೊರಗಿಡಲು ಸಾಧ್ಯಮಾಡುವ ಹೊಸ ವಸ್ತುವೊಂದು ತಯಾರಾಗಿದೆ! ಅದೇ ‘ಮೋಚಿ’! ‘Mesoporous Optically Clear Heat Insulator’ ಎಂಬ ಉದ್ದನೆಯ ಹೆಸರಿನ ಹ್ರಸ್ವರೂಪವಾದ ‘MOCHI’ ಎಂಬ ಈ ಪಾರದರ್ಶಕ ವಸ್ತು; ಇದು ಕೇವಲ 5 ಮಿಲಿಮೀಟರ್ ದಪ್ಪವಿರುತ್ತದೆ ಎನ್ನುತ್ತಾ,ರೆ ಇದನ್ನು ತಯಾರಿಸಿದ ಸಂಶೋಧಕರು. ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಮ್ಮ ಇತ್ತೀಚಿನ ಪ್ರಯೋಗಗಳ ಮೊತ್ತವಾಗಿ ತಯಾರಿಸಲಾದ ‘ಮೋಚಿ’ಯಲ್ಲಿ 90% ಗಾಳಿಯೇ ಇದೆಯಂತೆ! ಸಿಲಿಕೋನ್ ಜೆಲ್ ಆಧಾರಿತ ವಸ್ತುವಾದ ‘ಮೋಚಿ’, ತನ್ನೊಳಗೆ ಸೆರೆಯಾಗಿರುವ ಗಾಳಿಯ ಅಣುಗಳನ್ನು ವೇಗವಾಗಿ ಚಲಿಸದಂತೆ ತಡೆಯಲು, ಸೂಕ್ಷ್ಮವಾದ ರಂಧ್ರಗಳ ಜಾಲವನ್ನು ಹೊಂದಿದೆ.
ಯಾವುದೇ ವಸ್ತುವಾಗಲೀ - ಅದು ಘನ, ದ್ರವ ಅಥವಾ ಅನಿಲ ರೂಪದಲ್ಲಿರಲಿ - ಅದರೊಳಗಿನ ಅಣುಗಳು ಸದಾ ಚಲನೆಯಲ್ಲಿರುತ್ತವೆ ಎಂಬುದನ್ನು ನಾವೆಲ್ಲಾ ಶಾಲೆಯಲ್ಲಿ ಕಲಿತಿರುತ್ತೇವಷ್ಟೇ! ಘನವಸ್ತುಗಳಲ್ಲಿ ಅಣುಗಳು ತಾವಿರುವ ಸ್ಥಳದಲ್ಲೇ ಅಲುಗಾಡುತ್ತಿರುತ್ತವೆ, ದ್ರವಗಳಲ್ಲಿ ಅಣುಗಳಿಗೆ ಹರಿದಾಡಲು ಕೊಂಚ ಸ್ವಾತಂತ್ರ್ಯವಿರುತ್ತದೆ; ಅನಿಲಗಳಲ್ಲಂತೂ ಅಣುಗಳ ನಡುವಿನ ಭೌತಿಕ ಆಕರ್ಷಣಶಕ್ತಿಯು ದುರ್ಬಲವಾಗಿರುವುದರಿಂದ ಮತ್ತು ಅಣುಗಳ ನಡುವೆ ಅತಿಹೆಚ್ಚು ಅಂತರವಿರುವುದರಿಂದ, ಅನಿಲಗಳ ಅಣುಗಳು ಬಿಡುಬೀಸಾಗಿ ಸ್ವತಂತ್ರವಾಗಿ ಅಲೆದಾಡುತ್ತಲೇ ಇರುತ್ತವೆ. ಹೀಗೆ ಚಲಿಸುವಾಗ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಾ, ತಮ್ಮಲ್ಲಿರುವ ಶಾಖವನ್ನು ಮತ್ತೊಂದು ಅಣುವಿಗೆ ಹಸ್ತಾಂತರ ಮಾಡುತ್ತಿರುತ್ತವೆ. ಇದೇ ಉಷ್ಣವಾಹಕತೆಯ ಮೂಲಭೂತ ವಿಜ್ಞಾನವಲ್ಲವೇ? ಹೀಗೆ, ಈ ಅನಿಲದ ಅಣುಗಳು ಒಂದಕ್ಕೊಂದು ಶಾಖವನ್ನು ಹಸ್ತಾಂತರಿಸುತ್ತಾ, ಹೆಚ್ಚೆಚ್ಚು ಶಾಖವನ್ನು ಹೀರಿಕೊಳ್ಳುತ್ತಾ, ಗಾಜೂ ಬಿಸಿಯಾಗಿ, ಕಟ್ಟಡದ ಒಳಾಂಗಣವೂ ಬಿಸಿಯಾಗುತ್ತದೆ; ಅದನ್ನು ತಡೆಯಲು ‘ಮೋಚಿ’ಯೆಂಬ ಈ ಹೊಸ ವಸ್ತುವಿನಲ್ಲಿ ‘ಏರೋಜೆಲ್’ಗೆ ಹೋಲಿಕೆಯಿರುವ ತಂತ್ರಜ್ಞಾನವನ್ನು ಬಳಸಲಾಗಿದೆ. ಇದರೊಳಗಿರುವ ಅನಿಲದ ಅಣುಗಳು ಚಲಿಸುವಾಗ, ಅದೆಷ್ಟು ಕಿರಿದಾದ ಸೂಕ್ಷ್ಮರಂಧ್ರಗಳ ದಾರಿಯಲ್ಲಿ ಸಾಗಬೇಕೆಂದರೆ, ತಮ್ಮ ನಡುವೆ ಶಾಖವನ್ನು ಹಸ್ತಾಂತರ ಮಾಡಿಕೊಳ್ಳಲು ಸಾಧ್ಯವಾಗದೇ, ಇಲ್ಲಿರುವ ಸೂಕ್ಷ್ಮರಂಧ್ರಗಳ ಗೋಡೆಗೆ ಗುದ್ದಿ ಶಾಖವನ್ನು ಹೊರಹಾಕುತ್ತವೆ. ‘ಏರೋಜೆಲ್’ಗೂ ‘ಮೋಚಿ’ಗೂ ಇರುವ ಮೂಲ ವ್ಯತ್ಯಾಸವೆಂದರೆ, ‘ಏರೋಜೆಲ್’ನಲ್ಲಿ ಅನಿಲದ ಕಣಗಳು ಯಾವುದೇ ನಿರ್ದಿಷ್ಟ ರೀತಿಯಲ್ಲಿ ಜೋಡಣೆಯಾಗಿರುವುದಿಲ್ಲ; ಅಲ್ಲಿ ಹೇಗೆಂದರೆ ಹಾಗೆ ಹರಡಿಕೊಂಡಿರುವ ಅನಿಲದ ಅಣುಗಳು, ಬೆಳಕನ್ನು ಚದುರಿಸುತ್ತಾ, ಮಬ್ಬುಮಬ್ಬಾಗಿ, ಪಾರದರ್ಶಕತೆಯನ್ನು ಕಡಿಮೆಗೊಳಿಸುತ್ತವೆ. ಆದರೆ, ‘ಮೋಚಿ’ಯಲ್ಲಿ ನಿರ್ದಿಷ್ಟ ರೀತಿಯಲ್ಲಿ ಜೋಡಿಸಲಾದ ಗಾಳಿಯ ಅಣುಗಳು ಮತ್ತು ಸೂಕ್ಷ್ಮರಂಧ್ರಗಳು, ಇದನ್ನು ತಪ್ಪಿಸಿ, ಪಾರದರ್ಶಕತೆಯನ್ನು ಮತ್ತು ಶಾಖವನ್ನು ಕಾಪಿಟ್ಟುಕೊಳ್ಳುತ್ತವೆ! ಇಲ್ಲಿ ಬಳಕೆಯಾದ ತಂತ್ರಜ್ಞಾನದ ಕಾರಣದಿಂದಲೇ ‘ಮೋಚಿ’ಯನ್ನು ಕೇವಲ ಗಾಜಿನಗೋಡೆಗಳಲ್ಲಿ, ಕಿಟಕಿಗಳಲ್ಲಿ ಮಾತ್ರವಲ್ಲ, ಹೊಸ ಬಗೆಯ ನೀರಿನ ಹೀಟರ್‌ಗಳಲ್ಲಿ, ಬಿಸಿಲಿನ ಶಾಖವನ್ನು ಹಿಡಿದಿಟ್ಟುಕೊಂಡು ಇತರ ಸಮರ್ಥನೀಯ ಬಗೆಯ ಶಕ್ತಿಯನ್ನಾಗಿ ಪರಿವರ್ತಿಸಲೂ ಬಳಸಬಹುದಾಗಿದೆ. ಈಗಾಗಲೇ ಖಾಲಿಯಾಗುತ್ತಿರುವ ಪಳೆಯುಳಿಕೆ ಇಂಧನಗಳ ಮೇಲೆ, ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹೆಚ್ಚಿರುವ ಹೊರೆಯನ್ನು, ‘ಮೋಚಿ’ಯಂತಹ ಪದಾರ್ಥಗಳ ಬಳಕೆಯಂತಹ ಪರಿಸರಸ್ನೇಹಿ ನಡೆಗಳಿಂದ ಇಳಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.