ಫ್ಲಾರಿಡಾ: ‘ಆಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾನಿ ಶುಭಾಂಶು ಶುಕ್ಲಾ, ಹಂಗರಿ, ಪೋಲೆಂಡ್‌ನ ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ದತ್ತ (ಐಎಸ್‌ಎಸ್) ಬುಧವಾರ ಯಶಸ್ವಿಯಾಗಿ ಪ್ರಯಾಣ ಬೆಳೆಸಿದರು.
ಗಗನಯಾತ್ರಿಗಳಿರುವ ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶವನ್ನು ಹೊತ್ತ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್–9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಯಶಸ್ವಿಯಾಗಿ ಚಿಮ್ಮಿತು. ಅದು ಸುಮಾರು 28 ಗಂಟೆಗಳ ಬಳಿಕ, ಅಂದರೆ ಗುರುವಾರ ಸಂಜೆ 4.30ಕ್ಕೆ ಐಎಸ್‌ಎಸ್‌ನೊಂದಿಗೆ ಜೋಡಣೆಯಾಗುವ (ಡಾಕಿಂಗ್) ನಿರೀಕ್ಷೆಯಿದೆ.
ಶುಕ್ಲಾ ಅವರೊಂದಿಗೆ, ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿರ್ಬೊ ಕಾಪು ಹಾಗೂ ಪೋಲೆಂಡ್‌ನ ಸ್ವವೋಶ್ ಓಜ್ನೈನ್‌ಸ್ಕಿ ವೀಶ್ನೀವುಫ್‌ಸ್ಕಿ ಪ್ರಯಾಣ ಕೈಗೊಂಡಿದ್ದಾರೆ. 14 ದಿನಗಳವರೆಗೆ ಐಎಸ್‌ಎಸ್‌ನಲ್ಲಿರುವ ಈ ಗಗನಯಾನಿಗಳು ವಿಜ್ಞಾನದ ಕುರಿತು 60ಕ್ಕೂ ಹೆಚ್ಚು ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ. ವಿವಿಧ ತಾಂತ್ರಿಕ ಕಾರಣಗಳಿಂದ ಈ ಯೋಜನೆಯ ಉಡ್ಡಯನ ಆರು ಬಾರಿ ಮುಂದಕ್ಕೆ ಹೋಗಿತ್ತು.
ಅಮೆರಿಕದ ವಾಣಿಜ್ಯ ಯೋಜನೆಯಾದ ಇದನ್ನು, ‘ನಾಸಾ’, ‘ಆಕ್ಸಿಯಂ ಸ್ಪೇಸ್’ ಹಾಗೂ ಇಲಾನ್ ಮಸ್ಕ್ ಒಡೆತನದ ‘ಸ್ಪೇಸ್‌ಎಕ್ಸ್’ ಜಂಟಿಯಾಗಿ ರೂಪಿಸಿವೆ. ಭಾರತ, ಪೋಲೆಂಡ್, ಹಂಗರಿಯ ಗಗನಯಾನಿಗಳು ನಾಲ್ಕು ದಶಕಗಳ ಬಳಿಕ ಕೈಗೊಂಡಿರುವ ಬಾಹ್ಯಾಕಾಶ ಯಾನ ಇದಾಗಿದೆ. ಇದು ಮೂರೂ ದೇಶಗಳ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು,ಎರಡನೇ ಮಾನವ ಸಹಿತ ಬಾಹ್ಯಾಕಾಶ ಯಾನವೂ ಆಗಿದೆ.
41 ವರ್ಷಗಳ ಬಳಿಕ ಇತಿಹಾಸ ಸೃಷ್ಟಿ:
ಭಾರತದ ರಾಕೇಶ್ ಶರ್ಮಾ ಅವರು ಗಗನಯಾನ ಕೈಗೊಂಡ 41 ವರ್ಷಗಳ ಬಳಿಕ ಭಾರತದ ಮತ್ತೊಬ್ಬ ಗಗನಯಾನಿ ಶುಭಾಂಶು ಶುಕ್ಲಾ ಅವರು ಅಂತರಿಕ್ಷ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಭಾರತದ ಚೊಚ್ಚಲ ಮಾನವಸಹಿತ ಗಗನಯಾನ ಬಾಹ್ಯಾಕಾಶ ಕಾರ್ಯಕ್ರಮವನ್ನು 2027ರಲ್ಲಿ ಕಾರ್ಯಗತಗೊಳಿಸಲು ಭಾರತದ ಬಾಹ್ಯಾಕಾಶ ಸಂಸ್ಥೆ ‘ಇಸ್ರೊ’ ನಿರ್ಧರಿಸಿದೆ. ಹೀಗಾಗಿ ಶುಕ್ಲಾ ಅವರ ಗಗನಯಾನವು ಭಾರತದ ಮಟ್ಟಿಗೆ ಮಹತ್ವದ್ದಾಗಿದೆ.
ಶುಕ್ಲಾ ತವರಲ್ಲಿ ಸಂಭ್ರಮ
ಶುಕ್ಲಾ ಅವರ ತವರಾದ ಲಖನೌನಲ್ಲಿ ಸಂಭ್ರಮ ಆವರಿಸಿತ್ತು. ಇಲ್ಲಿನ ‘ಸಿಟಿ ಮಾಂಟೆಸರಿ ಸ್ಕೂಲ್’ನಲ್ಲಿ ಅವರ ಪೋಷಕರು ಟಿ.ವಿ ಪರದೆಯಲ್ಲಿ ಉಡ್ಡಯನದ ಕ್ಷಣಗಳನ್ನು ಕಣ್ತುಂಬಿಕೊಂಡರು. ಈ ವೇಳೆ ಅಲ್ಲಿ ಸೇರಿದ್ದವರ ಹರ್ಷೋದ್ಗಾರಗಳು ಮೊಳಗಿದವು.
‘ಕಮಾಲ್ ಕಿ ರೈಡ್’: ಶುಕ್ಲಾ ಸಂದೇಶ
‘ಕ್ಯಾ ಕಮಾಲ್ ಕಿ ರೈಡ್ ಥಿ’... (ಇದು ಉತ್ತಮ ಸವಾರಿಯಾಗಿತ್ತು), ಇದು ನಭಕ್ಕೆ ಉಡಾವಣೆಯಾದ 10 ನಿಮಿಷದಲ್ಲಿ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು ಕಳುಹಿಸಿದ ಸಂದೇಶ.
ಬಾಹ್ಯಾಕಾಶ ನೌಕೆಯು ಭೂಮಿಯಿಂದ 200 ಕಿ.ಮೀ ಎತ್ತರದಲ್ಲಿನ ಕಕ್ಷೆ ತಲುಪಿದ ಬಳಿಕ ಮಾತನಾಡಿರುವ ಅವರು, ‘ನನ್ನ ಆತ್ಮೀಯ ದೇಶವಾಸಿಗಳಿಗೆ ನಮಸ್ಕಾರ. ಕ್ಯಾ ಕಮಾಲ್ ಕಿ ರೈಡ್ ಥಿ... 41 ವರ್ಷಗಳ ಬಳಿಕ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತ ಮರಳಿದೆ’ ಎಂದು ಹೇಳಿದ್ದಾರೆ. ‘ಭೂಮಿಯನ್ನು ನಾವು ಸೆಕೆಂಡಿಗೆ 7.5 ಕಿ.ಮೀ ವೇಗದಲ್ಲಿ ಸುತ್ತುತ್ತಿದ್ದೇವೆ. ಭಾರತದ ತ್ರಿವರ್ಣ ಧ್ವಜ ನನ್ನ ಭುಜದ ಮೇಲಿದೆ. ನಿಮ್ಮೆಲ್ಲರ ಪರವಾಗಿ ನಾನಿಲ್ಲಿದ್ದೇನೆ’ ಎಂದಿದ್ದಾರೆ.
‘ಈಗ ಐಎಸ್‌ಎಸ್‌ಗೆ ನನ್ನ ಪ್ರಯಾಣದ ಅರಂಭದ ಜತೆಗೆ, ಭಾರತದ ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಆರಂಭವೂ ಆಗಿದೆ. ಭಾರತೀಯರೆಲ್ಲರೂ ಈ ಪ್ರಯಾಣದ ಭಾಗವಾಗಬೇಕು ಎಂದು ನಾನು ಬಯಸುತ್ತೇನೆ. ನಾವೆಲ್ಲರೂ ಒಟ್ಟಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣ’ ಎಂದು ಅವರು ಹೇಳಿದ್ದಾರೆ.
ಕಕ್ಷೆ ಪ್ರವೇಶಿಸಿದ ಕ್ಯಾಪ್ಸೂಲ್‌ಗೆ ಗಗನಯಾನಿಗಳು ‘ಗ್ರೇಸ್’ ಎಂದು ಹೆಸರಿಟ್ಟಿದ್ದಾರೆ ಎಂಬುದಾಗಿ ‘ಸ್ಪೇಸ್‌ಎಕ್ಸ್’ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
140 ಕೋಟಿ ಭಾರತೀಯರ ಆಕಾಂಕ್ಷೆಗಳಿವೆ: ಪ್ರಧಾನಿ
‘ಆಕ್ಸಿಯಂ–4’ ಯಶಸ್ವಿಯಾಗಿ ಉಡಾವಣೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಗಗನಯಾನಿ ಶುಭಾಂಶು ಶುಕ್ಲಾ ಅವರು ಭಾರತದ 140 ಕೋಟಿ ಜನರ ಆಶಯ, ಆಕಾಂಕ್ಷೆ ಮತ್ತು ಭರವಸೆಗಳನ್ನು ಹೊತ್ತು ತೆರಳಿದ್ದಾರೆ. ಭಾರತ, ಹಂಗರಿ, ಪೋಲೆಂಡ್‌ನ ಗಗನಯಾನಿಗಳು ಕೈಗೊಂಡಿರುವ ಈ ಪ್ರಯಾಣ ಯಶಸ್ವಿಯಾಗಲಿ’ ಎಂದು ಹಾರೈಸಿದ್ದಾರೆ.
‘ತಂಡದ ಕ್ಯಾಪ್ಟನ್ ಶುಕ್ಲಾ ಅವರು ಐಎಸ್‌ಎಸ್‌ಗೆ ತೆರಳುತ್ತಿರುವ ಮೊದಲ ಭಾರತೀಯರಾಗುವ ಹಾದಿಯಲ್ಲಿ ಇದ್ದಾರೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೇಂದ್ರ ಸಂಪುಟ ಸಹ ಶುಭ ಕೋರಿದೆ.
ಮೊಳಕೆ ಸಂಶೋಧನೆಗೆ ಕೃಷಿ ವಿ.ವಿ ಹೆಸರು, ಮೆಂತ್ಯೆ ಬೀಜ ರವಾನೆ
ಧಾರವಾಡ: ‘ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ‘ಹೆಸರು’ ಮತ್ತು ‘ಮೆಂತ್ಯೆ' ಬೀಜಗಳನ್ನು ‘ಆಕ್ಸಿಯಂ–4’ ಬಾಹ್ಯಾಕಾಶ ಯೋಜನೆಗಾಗಿ ಬುಧವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರವಾನಿಸಲಾಗಿದೆ. ‘ಬಾಹ್ಯಾಕಾಶದಲ್ಲಿ ಸಲಾಡ್ ಬೀಜಗಳ ಮೊಳಕೆ;ಗಗನಯಾತ್ರಿಗಳ ಆಹಾರ ಪೋಷಣೆ’ ಸಂಶೋಧನೆ ನಿಟ್ಟಿನಲ್ಲಿ ಪರೀಕ್ಷಾರ್ಥವಾಗಿ ರವಾನಿಸಲಾಗಿದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ತಿಳಿಸಿದರು.
‘ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಈ ಬೀಜಗಳಿಗೆ ನೀರು ಹಾಕುತ್ತಾರೆ. ಎರಡರಿಂದ ನಾಲ್ಕು ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಮೊಳಕೆ ಕಾಳುಗಳನ್ನು ಬಾಹ್ಯಾಕಾಶದಲ್ಲಿ ಶೈತ್ಯ ಘಟಕದಲ್ಲಿ ಇಟ್ಟು ನಂತರ ಭೂಮಿಗೆ ಹಿಂದಿರುಗಿಸುತ್ತಾರೆ’ ಎಂದರು.
‘ಮೊಳಕೆ ಕಾಳುಗಳನ್ನು ವಾಪಸ್ ಭೂಮಿಗೆ ತಂದ ನಂತರ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲಾಗುವುದು. ಮೊಳಕೆ ಪ್ರಮಾಣ, ಅವುಗಳ ಪೋಷಕಾಂಶ ಗುಣಮಟ್ಟ, ಫೈಟೋಹಾರ್ಮೊನ್‌ಗಳ ಚಟುವಟಿಕೆ, ಜೀವಸೂತ್ರ (ಟ್ರಾನ್ಸ್ ಕ್ರಿಪ್ಟೋಮ್) ಪರೀಕ್ಷಿಸಿ ವಿಶ್ಲೇಷಿಸಲಾಗುವುದು. ಮೊಳಕೆಯ ಮೇಲೆ ಮೈಕ್ರೋಬಿಯಲ್ ಬೆಳವಣಿಗೆ ಅಧ್ಯಯನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
‘ಈ ಸಂಶೋಧನಯು ಭವಿಷ್ಯದಲ್ಲಿ ಅಂತರಿಕ್ಷಯಾನದಲ್ಲಿ ಭಾರತೀಯರ ಆಹಾರದ ಭಾಗವಾಗಬಲ್ಲ ಆರೋಗ್ಯಕರ ಸಲಾಡ್ ತರಕಾರಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮೊಳಕೆಯೊಡೆಯುವ ಬೀಜಗಳನ್ನು ಬೆಳೆಸಲು ಕೇವಲ ಕಂಟೇನರ್, ನೀರು ಇದ್ದರೆ ಸಾಕು. ಮೊಳಕೆ ಕಾಳುಗಳು ಪೋಷಕಾಂಶ ಭರಿತವಾಗಿರುತ್ತವೆ. ಗಗನಯಾನ ಮಿಷನ್ ಭವಿಷ್ಯದ ಯಾತ್ರಿಕರ ಆಹಾರ ಗಮನದಲ್ಲಿಟ್ಟುಕೊಂಡು ಈ ಸಂಶೋಧನೆಗೆ ಹೆಸರು, ಮೆಂತ್ಯೆ ಬೀಜಗಳ ಮೊಳಕೆ ಅಧ್ಯಯನ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.
‘ಮೆಂತ್ಯೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಎಲುಬಿನ ಆರೋಗ್ಯ ಉತ್ತಮಗೊಳಿಸುತ್ತದೆ. ಮೂತ್ರಕೋಶದಲ್ಲಿ ಕಲ್ಲು ರಚನೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗಗನಯಾತ್ರಿಗಳ ಅರೋಗ್ಯದ ದೃಷ್ಟಿಯಿಂದ ಸಂಶೋಧನೆಗೆ ಈ ಬೀಜಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.
ಆಕ್ಸಿಯಂ–4 ಬಾಹ್ಯಾಕಾಶ ಯೋಜನೆಯ ಮೂಲಕ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಗೆ ಭಾರತವು ಮರು ಪ್ರವೇಶ ಪಡೆದಂತಾಗಿದೆ. ಇದರಿಂದ ನಮ್ಮ ಗಗನಯಾನ ಮಿಷನ್, ಭಾರತೀಯ ಬಾಹ್ಯಾಕಾಶ ಕೇಂದ್ರ ಸ್ಥಾಪನೆ, ಚಂದ್ರನಲ್ಲಿಗೆ ಮಾನವನನ್ನು ಕಳುಹಿಸುವ ಯೋಜನೆಗೆ ವೇದಿಕೆ ಸಿದ್ಧ ಮಾಡಿದಂತಾಗಿದೆ..ಸೋಮಕ್ ರಾಯ್‌ಚೌಧರಿ, ಖಭೌತ ವಿಜ್ಞಾನಿ
ನಾವು ಈಗ ಯಾರದ್ದೋ ಅನುಯಾಯಿ ಅಲ್ಲ. ಶುಕ್ಲಾ ಅವರು ಈ ಮಿಷನ್‌ನ ಪ್ರಮುಖ ಭಾಗವಾಗಲಿದ್ದಾರೆಜಿತೇಂದ್ರ ಸಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಶುಕ್ಲಾ ಅವರು ತೆರಳಿದ್ದು ಐತಿಹಾಸಿಕವಾದುದು. ನಮಗಿದು ಹೆಮ್ಮೆ. ಬಾಹ್ಯಾಕಾಶಕ್ಕೆ ಸಂಬಂಧಿಸಿ ಭಾರತದ ಮಹಾತ್ವಾಕಾಂಕ್ಷೆಗಳಿಗೆ ಇದೊಂದು ಮೈಲಿಗಲ್ಲುಪವನ್ ಕುಮಾರ್ ಗೋಯೆಂಕಾ, ಅಧ್ಯಕ್ಷ, ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಮತ್ತು ಆಥರೈಸೇಷನ್ ಸೆಂಟರ್
ನಭಕ್ಕೆ ಚಿಮ್ಮಿದ ಸ್ಪೇಸ್‌ಎಕ್ಸ್‌ನ 'ಫಾಲ್ಕನ್–9' ರಾಕೆಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.