ನಮ್ಮ ಮನಸ್ಸಿನ ಎಲ್ಲ ಆಲೋಚನೆಗಳನ್ನೂ ಭಾವನೆಗಳನ್ನೂ ಮಾತಿನಲ್ಲಿ ಹೇಳಲಾಗುವುದಿಲ್ಲ. ಎಲ್ಲ ಭಾವನೆಗಳನ್ನು ಮುಖದಲ್ಲಿ ತೋರಿಸಲೂ ಆಗುವುದಿಲ್ಲ. ಎಷ್ಟೋ ಸಂದರ್ಭಗಳ ಪರಿಸ್ಥಿತಿಗಳಿಗೆ ಹಿಂಜರಿದು ಭಾವನೆಗಳನ್ನು ನಮ್ಮ ಮನಸ್ಸಿನಲ್ಲೇ ಅದುಮಿಟ್ಟುಕೊಳ್ಳಬೇಕಾಗುತ್ತದೆ. ಆದರೆ, ಈ ರೀತಿ ಮಾಡುವುದರಿಂದ ಒತ್ತಡ ಹೆಚ್ಚಾಗಿ ಹೃದಯಕ್ಕೆ ಸಂಬಂಧಿಸಿದ, ಮನಸ್ಸಿನ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಎದುರಾಗಬಹುದು. ಇದಕ್ಕೇನಾದರೂ ಪರಿಹಾರವಿದೆಯೇ?
ಮನೋವಿಜ್ಞಾನಿಗಳು ಮನಸ್ಸಿನ ಕಸರತ್ತು ಮುಂತಾದ ಪರಿಹಾರಗಳನ್ನೇನೋ ಹೇಳುತ್ತಾರೆ. ವಿಜ್ಞಾನಿಗಳು ಈ ಸಮಸ್ಯೆಗೆ ಮತ್ತೊಂದು ಪರ್ಯಾಯ ಪರಿಹಾರವನ್ನು ಕಂಡುಹಿಡಿದಿದ್ದಾರಂತೆ. ಚರ್ಮಕ್ಕೆ ಅಂಟಿಸಬಹುದಾದ ಈ ಸ್ಟಿಕರ್, ಮನಸ್ಸನ್ನು ಅರ್ಥ ಮಾಡಿಕೊಳ್ಳಬಲ್ಲದಂತೆ. ಹೀಗೆ ಅರ್ಥಮಾಡಿಕೊಂಡು ನಿರಂತರವಾಗಿ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ಗೆ ಅದು ದತ್ತಾಂಶವನ್ನೂ ರವಾನೆ ಮಾಡುತ್ತಿರುತ್ತದೆ. ನಾವು ಅದುಮಿಟ್ಟಕೊಂಡ ಭಾವನೆಗಳು ಯಾವುದು ಎಂಬುದು ಈ ಮೂಲಕ ತಿಳಿಯಲಿದೆಯಂತೆ!
ಅಮೆರಿಕದ ಪೆನ್ಸಿಲ್ವೇನಿಯಾ ಸ್ಟೇಟ್ ವಿಶ್ವವಿದ್ಯಾನಿಲಯದ ಎಂಜಿನಿಯರಿಂಗ್ ವಿಜ್ಞಾನ ಮತ್ತು ಮೆಕ್ಯಾನಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ಜಾನ್ಯೂ ಲ್ಯಾರಿ ಶೆಂಗ್ ಅವರ ತಂಡವು ಈ ಸಂಶೋಧನೆಯನ್ನು ನಡೆಸಿದೆ. ಇವರು ಸಂಶೋಧಿಸಿರುವ ಈ ಸ್ಟಿಕರನ್ನು ದೇಹದ ಯಾವುದೇ ಭಾಗದ ಚರ್ಮದ ಮೇಲೆ ಅಂಟಿಸಬಹುದಾಗಿದೆ. ಬ್ಯಾಟರಿಯ ಮೂಲಕ ಕೆಲಸಮಾಡುವ ಈ ಸ್ಟಿಕರ್‌ನ ಬ್ಯಾಟರಿಯನ್ನು ರೀಚಾರ್ಜ್ ಕೂಡ ಮಾಡಬಹುದಂತೆ.
ಕಾರ್ಯಾಚರಣೆ:
ಮಿದುಳಿನಲ್ಲಿ ದೇಹದ ಎಲ್ಲ ಅಂಗಗಳ ಕಾರ್ಯಾಚರಣೆಯ ಸಂಜ್ಞೆಗಳು ಮೊದಲು ರೂಪುಗೊಳ್ಳುತ್ತವೆ. ಬಳಿಕ ಅವು, ನರಮಂಡಲದ ಮೂಲಕ ದೇಹದ ವಿವಿಧ ಭಾಗಗಳಿಗೆ ಸಂಜ್ಞಾನುಸಾರವಾಗಿ ಸಂಚರಿಸುತ್ತವೆ. ದೇಹದ ಎಲ್ಲ ಸ್ನಾಯು, ಅಂಗಗಳು ಪ್ರತಿಕ್ಷಣವೂ ಈ ಸಂಜ್ಞೆಗಳನ್ನು ಸ್ವೀಕರಿಸಿಯೇ ಕಾರ್ಯನಿರ್ವಹಿಸುವುದು. ಅಂತೆಯೇ, ನಮ್ಮ ಮಿದುಳಿನಲ್ಲಿ ನಡೆಯುವ ಎಲ್ಲ ಆಲೋಚನೆ, ಲೆಕ್ಕಾಚಾರ, ಭಾವನೆಗಳು ಗಣಿತದ ಲೆಕ್ಕಾಚಾರಗಳ ಭಾಗವೇ ಆಗಿರುತ್ತವೆ. ಪ್ರತಿಯೊಂದು ಆಲೋಚನೆಯೂ ಅಂಕಿ–ಸಂಖ್ಯೆಗಳ ಲೆಕ್ಕಾಚಾರದಲ್ಲಿ ನಡೆದು, ಬಳಿಕ ಅವು ಮುಖಭಾವನೆಗಳಾಗಿ, ಮಾತುಗಳಾಗಿ, ದೇಹಭಾಷೆಯಾಗಿ ಪರಿವರ್ತನೆಯಾಗುತ್ತವೆ. ಮಾನವ ಬುದ್ಧಿಶಕ್ತಿಗೆ ಕೆಲವು ಭಾವನೆಗಳನ್ನು ತಡೆದಿಟ್ಟುಕೊಳ್ಳಬಹುದಾದ ಸಾಮರ್ಥ್ಯವಿರುತ್ತದೆ. ಈ ಭಾವನೆಗಳನ್ನು ವ್ಯಕ್ತಪಡಿಸದಿರುವ ಶಕ್ತಿಯೂ ಮನುಷ್ಯನಿಗೆ ಇದೆ.
ವೈಯಕ್ತಿಕ ಪರಿಸ್ಥಿತಿಗಳಲ್ಲಿ, ವೃತ್ತಿಯ ಸಂದರ್ಭಗಳಲ್ಲಿ ಹಲವೊಮ್ಮೆ ಅಂದುಕೊಂಡಿದ್ದನ್ನೆಲ್ಲಾ ಹೇಳುವ, ಅಥವಾ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ಸಿಗದೇ ಇರಬಹುದು. ಆದರೆ, ಈ ವರ್ತನೆಯಿಂದ ಮನಸ್ಸಿನ ಮೇಲೆ, ದೇಹದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಆಗುತ್ತವೆ ಎಂಬುದನ್ನು ಮನೋವಿಜ್ಞಾನಿಗಳು ಹಾಗೂ ಮನೋವೈದ್ಯರು ಬಹುಕಾಲದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಈ ಭಾವನೆಗಳನ್ನು ಅರಿತುಕೊಳ್ಳುವುದೇ ಇದಕ್ಕೆ ಪರಿಹಾರ ಎನ್ನುವುದು ಈ ತಜ್ಞರ ಲೆಕ್ಕಾಚಾರ. ಅದರಂತೆ ಈ ಸ್ಟಿಕರ್ ಕಾರ್ಯನಿರ್ವಹಿಸುತ್ತದೆ.
ಮಿದುಳಿನಲ್ಲಿ ನಡೆಯುವ ಪ್ರತಿಯೊಂದು ಲೆಕ್ಕಾಚಾರಕ್ಕೂ ಒಂದು ಸಂಜ್ಞೆಯು ವಿದ್ಯುತ್ತಿನ ರೂಪದಲ್ಲಿ ದೇಹದಲ್ಲಿ ಸಂಚರಿಸುತ್ತದೆ ಎಂದು ನರವಿಜ್ಞಾನಿಗಳು ಬಹಳ ಹಿಂದೆಯೇ ಕಂಡುಹಿಡಿದಿದ್ದಾರೆ. ವಿದ್ಯುತ್ ಸ್ವರೂಪದ ಈ ಸಂಜ್ಞೆಗಳನ್ನು ಈ ಸ್ಟಿಕರ್ ಗುರುತಿಸಿ ಓದಬಲ್ಲ ಶಕ್ತಿಯನ್ನು ಹೊಂದಿದೆ. ಪ್ರತಿ ವಿದ್ಯುತ್ ಸಂಜ್ಞೆಯ ಒಳಗೂ ಒಂದು ಸಂದೇಶ ಅಡಕವಾಗಿರುತ್ತದೆ. ಅದು ದೇಹದ ಅಂಗಗಳ ಕಾರ್ಯನಿರ್ವಹಣೆಯ ಕುರಿತು ಆಗಿರಬಹುದು; ಅಥವಾ ಭಾವನೆಯೊಂದಕ್ಕೆ ಸಂಬಂಧಪಟ್ಟಿರಬಹುದು. ಸ್ಟಿಕರ್‌ನಲ್ಲಿ ಅಡಕಗೊಳಿಸಿರುವ ಸೆನ್ಸರ್‌ಗಳು ಈ ವಿದ್ಯುತ್ ಸಂಜ್ಞೆಗಳನ್ನು ಗುರುತಿಸಿ, ಅವುಗಳಲ್ಲಿರುವ ಸಂದೇಶವನ್ನು ಅರ್ಥ ಮಾಡಿಕೊಳ್ಳುತ್ತವೆ.
ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಾಗಿರುವ ಈ ಸ್ಟಿಕರ್‌ನಲ್ಲಿ ಕೃತಕಬುದ್ಧಿಮತ್ತೆಯ ಆಧಾರಿತ ರೇಡಿಯೋ ಟ್ರಾನ್ಸ್ ಮಿಟರ್ ಮತ್ತು ನ್ಯಾನೋ ಬ್ಯಾಟರಿಗಳು ಇರುತ್ತವೆ. ದೇಹದ ಉಷ್ಣಾಂಶ ಹಾಗೂ ನರಮಂಡಲದ ವಿದ್ಯುತ್ತನ್ನು ಬಳಸಿಕೊಂಡು ಬ್ಯಾಟರಿ ರೀಚಾರ್ಜ್ ಆಗುತ್ತದೆ. ನಮ್ಮ ಚರ್ಮದಂತೆಯೇ ಹಿಗ್ಗುವ ಮತ್ತು ಕುಗ್ಗುವ ಗುಣಗಳನ್ನು ಈ ಸ್ಟಿಕರ್ ಹೊಂದಿದೆ. ಹಾಗಾಗಿ,
ಚರ್ಮದ ಹಿಗ್ಗು–ಕುಗ್ಗುವಿಕೆಗಳಿಗೆ ಇದು ಹರಿದು ಹೋಗುವುದಿಲ್ಲ. ಅಲ್ಲದೇ, ಇದು ಮಾನವಚರ್ಮದಂತಹ ಸಂರಚನೆಯನ್ನೇ ಹೋಲುವುದರಿಂದ, ನೀರಿನಿಂದಲೂ ಹಾಳಾಗುವ ಸಾಧ್ಯತೆಗಳು ಕಡಿಮೆ.
ಬಳಕೆ:
ಎಷ್ಟೋ ವೈದ್ಯಕೀಯ ಅಗತ್ಯಗಳಲ್ಲಿ ಈ ಸ್ಟಿಕರನ್ನು ಬಳಸಬಹುದಾಗಿದೆ. ಮನೋವಿಜ್ಞಾನಕ್ಷೇತ್ರಕ್ಕಂತೂ ಇದು ವರದಾನವಾಗಲಿದೆ. ವೈದ್ಯರಿಗೆ ಮನೋರೋಗಿಗಳ ಕಾಯಿಲೆಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ರೋಗಿಗಳು ಹೇಳುವ ವಿಚಾರಗಳನ್ನು ಆಧರಿಸಿಯೇ ಅವರು ಚಿಕಿತ್ಸೆಯನ್ನು ನೀಡಬೇಕು. ಕೆಲವೊಮ್ಮೆ ಮನೋರೋಗಿಗಳು ನಿಖರವಾದ ಮಾಹಿತಿಯನ್ನು ನೀಡದಿರುವ ಸಾಧ್ಯತೆ ಇರುತ್ತದೆ. ಆಗ ವೈದ್ಯರು ನೀಡುವ ಚಿಕಿತ್ಸೆಯೂ ತಪ್ಪಾಗಬಹುದು. ಆದರೆ, ಈ ಸ್ಟಿಕರ್‌ನಲ್ಲಿ ಎಲ್ಲ ಭಾವನೆಗಳಿಗೆ ಸಂಬಂಧಿಸಿದ ಮಾಹಿತಿಯು ಅಡಕವಾಗಿರುವ ಕಾರಣ, ಅಥವಾ ಇದು ಕಂಪ್ಯೂಟರ್‌ಗೆ ಎಲ್ಲ ದತ್ತಾಂಶವನ್ನು ನೀಡುವ ಕಾರಣ, ವೈದ್ಯರಿಗೆ ರೋಗಿಯ ನಿಖರವಾದ ಮಾಹಿತಿ ಮತ್ತು ಪರಿಸ್ಥಿತಿಗಳು ಅರ್ಥವಾಗುತ್ತವೆ. ಆದ್ದರಿಂದ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗುತ್ತದೆ ಎನ್ನುತ್ತಾರೆ, ವಿಜ್ಞಾನಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.