ADVERTISEMENT

ಬಿಜೆಪಿಗೆ ಸಚಿನ್ ತೆಂಡೂಲ್ಕರ್?: ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ !

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 14:44 IST
Last Updated 8 ಡಿಸೆಂಬರ್ 2018, 14:44 IST
   

ಬೆಂಗಳೂರು: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಬಿಜೆಪಿಗೆ ಸೇರಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಕೇಸರಿ ಜುಬ್ಬಾ ಧರಿಸಿರುವ ಸಚಿನ್ ಫೋಟೊ ಬಿಜೆಪಿ, ಆರ್‌ಎಸ್ಎಸ್ ಬೆಂಬಲಿಗರ ಫೇಸ್‍ಬುಕ್‍ ಪುಟದಲ್ಲಿ ಶೇರ್ ಆಗಿದ್ದು, ಸಚಿನ್ ತೆಂಡೂಲ್ಕರ್ ಬಿಜೆಪಿಗೆ ಸೇರಿದ್ದಾರೆ ಎಂಬ ಶೀರ್ಷಿಕೆ ನೀಡಲಾಗಿದೆ.ಆದರೆ ಈ ಸುದ್ದಿ ಸುಳ್ಳು ಎಂದು ಸಚಿನ್‍ನ ಆಪ್ತಮೂಲಗಳು ಹೇಳಿದ್ದು, ಸುದ್ದಿ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿದೆ.

ಡಿಸೆಂಬರ್ 5 ರಂದು India with NaMo ಎಂಬ ಫೇಸ್‍ಬುಕ್ ಪುಟದಲ್ಲಿ ಸಚಿನ್ ತೆಂಡೂಲ್ಕರ್ ಬಿಜೆಪಿ ಸೇರಿದ್ದಾರೆ ಎಂಬ ಪೋಸ್ಟ್ ಶೇರ್ ಆಗಿದೆ.ಈ ಪೋಸ್ಟ್ 2,586 ಬಾರಿ ಶೇರ್ ಆಗಿದ್ದು, 9300 ಮಂದಿ ಲೈಕ್ ಒತ್ತಿದ್ದಾರೆ.ಸಚಿನ್ ತೆಂಡೂಲ್ಕರ್ ಬಿಜೆಪಿ ಸೇರುವ ತೀರ್ಮಾನ ಸ್ವಾಗತಾರ್ಹ ಎಂದು ಹಲವರು ಕಾಮೆಂಟಿಸಿದ್ದಾರೆ.


ಆರ್‌ಎಸ್‌ಎಸ್‌ ಬೆಂಬಲಿಗರ ಪುಟದಲ್ಲಿಯೂ ಇದೇ ಸಂಗತಿ ಶೇರ್ ಆಗಿದೆ.

ADVERTISEMENT


ಇತ್ತ ಟ್ವಿಟರ್‌ನಲ್ಲಿ सचिन तेंडुलकर भाजपा में शामिल हो गए ಎಂಬ ವಾಕ್ಯ ಸರ್ಚ್ ಮಾಡಿದರೆ ಹಲವಾರು ಟ್ವೀಟ್‌‍ಗಳು ಕಾಣಿಸುತ್ತವೆ.

ಸಚಿನ್ ಕೇಸರಿ ಕುರ್ತಾ ತೊಟ್ಟಿದ್ದು ಹುಟ್ಟುಹಬ್ಬಕ್ಕೆ !
ಸಚಿನ್ ಬಿಜೆಪಿ ಸೇರಿದ್ದಾರೆ ಎಂದು ಪ್ರಚಾರ ಮಾಡುವ ಪೋಸ್ಟ್ ನಲ್ಲಿ ಕೇಸರಿ ಕುರ್ತಾ ತೊಟ್ಟಿರುವ ಸಚಿನ್ ಫೋಟೊ ಬಳಸಲಾಗಿದೆ.ಅಂದಹಾಗೆ ಈ ಫೋಟೊ 2015ರಲ್ಲಿ ಹುಟ್ಟುಹಬ್ಬದ ಆಚರಣೆ ವೇಳೆ ತೆಗೆದ ಫೋಟೊ.

2015 ಏಪ್ರಿಲ್ 24ರಂದು ಸಚಿನ್ ಕೇಸರಿ ಕುರ್ತಾ ತೊಟ್ಟು ಕುಟುಂಬ ಸಮೇತರಾಗಿ ಮುಂಬೈಯಸಿದ್ದಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದರು. ದೇವಾಲಯದ ಹೊರಗೆ ಸಚಿನ್ ತೆಗೆಸಿಕೊಂಡಿರುವ ಫೋಟೊ ಇದು.ಸಿದ್ದಿವಿನಾಯಕ ದೇವಾಲಯದ ವೆಬ್‌ಸೈಟ್‍ನಲ್ಲಿ Visitor Of the Day – 24th April 2015 ಎಂಬ ಆಲ್ಬಂನಲ್ಲಿ ಈ ಫೋಟೊ ಇದೆ.

ಸಚಿನ್ ಬಿಜೆಪಿ ಸೇರಿಲ್ಲ
ಸಚಿನ್ ಬಿಜೆಪಿಗೆ ಸೇರಿಲ್ಲ ಎಂದು ಅವರ ಆಪ್ತ ವಲಯದವರು ಪ್ರತಿಕ್ರಿಯಿಸಿರುವುದಾಗಿ ಬೂಮ್ ವರದಿಯಲ್ಲಿ ಹೇಳಿದೆ, ಸಚಿನ್ ಬಿಜೆಪಿ ಅಥವಾ ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎಂದು ಸಚಿನ್ ಆಪ್ತ ಪಲಯದಲ್ಲಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಬೂಮ್ ತಂಡ ಮಹಾರಾಷ್ಟ್ರ ಮತ್ತು ಮುಂಬೈಯ ಬಿಜೆಪಿ ಘಟಕದ ಹಿರಿಯರನ್ನು ಸಂಪರ್ಕಿಸಿ ಈ ವಿಷಯದ ಬಗ್ಗೆ ಕೇಳಿದಾಗ ಅದರ ಬಗ್ಗೆ ತಮಗೇನೂ ಗೊತ್ತಿಲ್ಲ ಎಂಬುದಾಗಿತ್ತು ಅವರ ಪ್ರತಿಕ್ರಿಯೆ.
ಮಹಾರಾಷ್ಟ್ರದಲ್ಲಿರುವ ನಮಗೆ ಈ ಸುದ್ದಿ ಬಗ್ಗೆ ಗೊತ್ತಿಲ್ಲ. ಕೇಂದ್ರ ನಾಯಕರು ಸಚಿನ್ ಜತೆ ಈ ವಿಷಯ ಮಾತನಾಡಿದ್ದಾರೋ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಆದರೆ ಇಲ್ಲಿಯವರೆ ಸಚಿನ್ ಬಿಜೆಪಿ ಸೇರಿದ್ದಾರೆ ಎಂಬ ವಿಷಯ ನಮಗೆ ಗೊತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.