ADVERTISEMENT

ಕೊರೊನಾ ವೇಳೆ ಜಾಗಟೆ ಬಡಿಯುವ ಐಡಿಯಾ ನೀಡಿದ್ದು ಈಗ ರೋಬೊ ವಿವಾದ ಮಾಡಿಕೊಂಡ ವಿವಿಯೇ?

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 13:42 IST
Last Updated 18 ಫೆಬ್ರುವರಿ 2026, 13:42 IST
   

ಬೆಂಗಳೂರು: ಚೀನಾದಲ್ಲಿ ತಯಾರಿಸಲಾಗಿರುವ ‘ರೋಬೊ ನಾಯಿ’ಯನ್ನು ತಮ್ಮದೇ ಎಂದು AI Impact Summit ಮೇಳದಲ್ಲಿ ಪ್ರದರ್ಶನಕ್ಕಿಟ್ಟು ಮುಜುಗರಕ್ಕೀಡಾಗಿರುವ ಗಾಲ್ಗೋಟಿಯಾಸ್‌ ವಿಶ್ವವಿದ್ಯಾಲಯವು ಇದೀಗ ಕ್ಷಮೆಯಾಚಿಸಿದೆ. ಆದರೆ, ಈ ವಿವಿಯು ಈ ಹಿಂದೆಯೂ ಇಂತಹದ್ದೇ ಪ್ರಮಾದಗಳನ್ನು ಮಾಡಿತ್ತು.

ರೋಬೊ ನಾಯಿ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಮೇಳದಿಂದ ಮಳಿಗೆ ತೆರವು ಮಾಡುವಂತೆ ವಿವಿ ಪ್ರತಿನಿಧಿಗಳಿಗೆ ಸೂಚಿಸಿದ್ದರು. ಅದರಂತೆ, ಮಳಿಗೆಯನ್ನು ವಿವಿ ಸಿಬ್ಬಂದಿ ಖಾಲಿ ಮಾಡಿದ್ದಾರೆ.

ಇದೀಗ, ಇದೇ ವಿಚಾರವನ್ನು ಮುಂದಿಟ್ಟುಕೊಂಡು, ಹಳೇ ಪ್ರಮಾದವನ್ನೂ ಕೆದಕಿರುವ ನೆಟ್ಟಿಗರು ವಿವಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ.

ADVERTISEMENT

ಈ ಹಿಂದೆ ಏನಾಗಿತ್ತು?
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಗಾಲ್ಗೋಟಿಯಾಸ್‌ ವಿಶ್ವವಿದ್ಯಾಲಯದ ಧರ್ಮೇಂದ್ರ ಕುಮಾರ್‌ ಎಂಬ ಸಂಶೋಧಕರು ‌ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಶೋಧನಾ ಪ್ರಬಂಧವೊಂದನ್ನು ಮಂಡಿಸಿದ್ದರು. ಗಂಟೆ, ತಟ್ಟೆ ಮುಂತಾದವುಗಳನ್ನು ಬಡಿಯುವುದರಿಂದ ಸೃಷ್ಟಿಯಾಗುವ ಧ್ವನಿತರಂಗಗಳು ವೈರಸ್‌ ಅನ್ನು ನಾಶಮಾಡಬಲ್ಲವು ಎಂದು ಅದರಲ್ಲಿ ಪ್ರತಿಪಾದಿಸಿದ್ದರು ಎನ್ನಲಾಗಿದೆ.

‘ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ, ಜಾಗಟೆ ಬಾರಿಸುವಂತೆ ಕರೆ ನೀಡಿದ್ದರು. ಅವರಿಗೂ ವಿವಿಯ ಸಂಶೋಧನೆಯೇ ಪ್ರೇರಣೆಯಾಗಿತ್ತೇ?’ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

ಮೋದಿ ಕರೆಯಂತೆ, ಸಿನಿಮಾ ತಾರೆಯರಾದಿಯಾಗಿ ಜನಸಾಮಾನ್ಯರೂ ತಮ್ಮ ಮನೆಗಳ ಮುಂದೆ, ಸಾರ್ವಜನಿಕವಾಗಿ ತಟ್ಟೆ–ಜಾಗಟೆ ಭಾರಿಸಿ ಕೊರೊನಾ ವಿರುದ್ಧ 'ಸದ್ದು' ಮಾಡಿದ್ದರು.

ಇದೀಗ, ಆ ಸಂದರ್ಭದಲ್ಲಿ ಹರಿದಾಡಿದ್ದ ಚಿತ್ರಗಳು, ವಿಡಿಯೊಗಳು, ಪ್ರಕಟಣೆಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಗಾಲ್ಗೋಟಿಯಾಸ್‌ ವಿಶ್ವವಿದ್ಯಾಲಯದ ವಿರುದ್ಧ ಟೀಕೆ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.