ಲಲಿತ್ ಮೋದಿ ಹಾಗೂ ರಿಮಾ ಬೌರಿ
ಮುಂಬೈ: ದೇಶ ತೊರೆದಿರುವ ಉದ್ಯಮಿ ಹಾಗೂ ಇಂಡಿಯನ್ ಪ್ರೀಮಿರ್ ಲೀಗ್ (IPL) ಮಾಜಿ ಸಂಸ್ಥಾಪಕ ಅಧ್ಯಕ್ಷ ಲಲಿತ್ ಮೋದಿ ಅವರು ಮತ್ತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಪ್ರೇಮಿಗಳ ದಿನದಂದು ಘೋಷಿಸಿಕೊಂಡಿದ್ದಾರೆ.
ವ್ಯಾಲೆಂಟೈನ್ ದಿನದಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೊಸ ಪ್ರೇಮ ಕಥೆಯನ್ನು ಲಲಿತ್ ಮೋದಿ ಹೇಳಿದ್ದಾರೆ. ಈ ಹೊಸ ಪ್ರೇಮ ಕಥೆಯೊಂದಿಗೆ ರೂಪದರ್ಶಿ ಹಾಗೂ ನಟಿ ಸುಷ್ಮಿತಾ ಸೇನ್ ಜೊತೆಗಿನ ಸಂಬಂಧ ಕೊನೆಗೊಂಡಿತೇ ಎಂಬ ಪ್ರಶ್ನೆಯನ್ನೂ ನೆಟ್ಟಿಗರು ಕೇಳಿದ್ದಾರೆ.
ಲಲಿತ್ ಮೋದಿ ಅವರು ಖ್ಯಾತನಾಮರೊಂದಿಗಿರುವ ವಿಡಿಯೊವನ್ನು ಆಗಾಗ್ಗ ಹಂಚಿಕೊಳ್ಳುವುದು ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ತಮ್ಮ 25 ವರ್ಷಗಳ ಗೆಳತಿಯ ರಿಮಾ ಬೌರಿ ಅವರನ್ನು ಪ್ರೇಮಿಸುತ್ತಿರುವುದಾಗಿ ಮೋದಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಐಪಿಎಲ್‌ನ ರೂವಾರಿ ಲಲಿತ್ ಮೋದಿ ಅವರು ಮೊದಲು ಮಿನಾಲ್ ಮೋದಿ ಅವರನ್ನು ವರಿಸಿದ್ದರು. ಆದರೆ ಕ್ಯಾನ್ಸರ್‌ನಿಂದ 2018ರಲ್ಲಿ ಮಿನಾಲ್ ನಿಧನರಾದರು. ನಂತರ ಹಲವು ಪ್ರಸಿದ್ಧ ಮಹಿಳೆಯರೊಂದಿಗಿನ ಚಿತ್ರಗಳು ಆಗಾಗ್ಗ ಹರಿದಾಡುತ್ತಲೇ ಇದ್ದವು. ಆದರೆ ಮಾಲ್ದೀವ್ಸ್‌ನ ಗೇಟ್‌ವೇಯಲ್ಲಿ ನಟಿ ಸುಷ್ಮಿತಾ ಸೇನ್ ಜೊತೆಗಿನ ಚಿತ್ರವನ್ನು ಹಂಚಿಕೊಂಡ ನಂತರ ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಸುದ್ದಿಯಾಯಿತು.
‘ಒಂದು ಬಾರಿ ಅದೃಷ್ಟವಂತನಾಗಿದ್ದೆ. ಆದರೆ ಎರಡನೇ ಬಾರಿ ಅದೃಷ್ಟ ಖುಲಾಯಿಸಿದೆ. 25 ವರ್ಷಗಳ ಸ್ನೇಹ ಈಗ ಪ್ರೀತಿಯಾಗಿ ಬದಲಾಗಿದೆ. ಇಂಥದ್ದೊಂದು ಸಂಗತಿ ನನ್ನೊಂದಿಗೆ ನಡೆದಿದೆ. ನಿಮಗೂ ಇಂಥ ಅನುಭವವಾಗಿರಬಹುದು. ನಿಮ್ಮೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು’ ಎಂಬ ಒಕ್ಕಣೆಯೊಂದಿಗೆ ಲಲಿತ್ ಮೋದಿ ವಿಡಿಯೊ ಹಂಚಿಕೊಂಡಿದ್ದಾರೆ.
2022ರಲ್ಲಿ ಸುಷ್ಮಿತಾ ಸೇನ್ ಅವರೊಂದಿಗಿನ ಭಾವಚಿತ್ರದೊಂದಿಗೆ ಪೋಸ್ಟ್ ಹಂಚಿಕೊಂಡಿದ್ದ ಲಲಿತ್, ‘ಜಾಗತಿಕ ಪ್ರವಾಸ ಮುಗಿಸಿ, ನನ್ನ ಅರ್ಧಾಂಗಿ ಸುಷ್ಮಿತಾ ಸೇನ್ ಅವರೊಂದಿಗೆ ಮಾಲ್ದೀವ್ಸ್‌ಗೆ ಕೌಟುಂಬಿಕ ಪ್ರವಾಸಕ್ಕಾಗಿ ಬಂದಿದ್ದೇನೆ. ಇದು ಹೊಸ ಆರಂಭ, ಹೊಸ ಬದುಕು. ಸಂತಸವಾಗುತ್ತಿದೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.