ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ್ದ ರಾನು ಮಂಡಲ್‌ ಈಗ ಹೇಗಿದ್ದಾರೆ...?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 9:28 IST
Last Updated 9 ಫೆಬ್ರುವರಿ 2026, 9:28 IST
<div class="paragraphs"><p>ರಾನು ಮಡಂಲ್‌</p></div>

ರಾನು ಮಡಂಲ್‌

   

ಈಗ ಸಾಮಾಜಿಕ ಮಾಧ್ಯಮ ಅತ್ಯಂತ ಪ್ರಭಾವಿ ಮಾಧ್ಯಮವಾಗಿದೆ. ಯಾರನ್ನು ಬೇಕಾದರೂ ರಾತ್ರೋರಾತ್ರಿ ಸ್ಟಾರ್‌ ಮಾಡುವ ಅಥವಾ ಸ್ಟಾರ್‌ ಆದವರನ್ನು ಬೀದಿಗೆ ತರುವ ಸಾಮಾರ್ಥ್ಯ ಸಾಮಾಜಿಕ ಜಾಲತಾಣಗಳಿಗಿದೆ. ತನ್ನ ಧ್ವನಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮನ್ನಣೆ ಪಡೆದ ರಾನು ಮಂಡಲ್ ಇದೀಗ ಏನು ಮಾಡುತ್ತಿದ್ದಾರೆ ಎಂಬುದು ಕುತೂಹಲವಾಗಿದೆ.

2019ರ ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ರಾನು ಮಂಡಲ್ ಲತಾ ಮಂಗೇಶ್ವರ್ ಅವರ ‘ಏಕ್ ಪ್ಯಾರ್ ಕಾ ನಗ್ಮಾ ಹೈ’ ಹಾಡನ್ನು ಹಾಡುತ್ತಿದ್ದರು. ಈ ವಿಡಿಯೊವನ್ನು ಫೇಸ್‌ಬುಕ್‌ ಬಳಕೆದಾರರೊಬ್ಬರು ಹಂಚಿಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು.

ಆ ಒಂದು ವಿಡಿಯೊದಿಂದ ರಾನು ಮಂಡಲ್ ಬದುಕು ಬದಲಾಯಿತು. ಚಿಂದಿ ಬಟ್ಟೆ ತೊಡುತ್ತಿದ್ದ ರಾನು ಐಷಾರಾಮಿ ಬದುಕನ್ನು ಅನುಭವಿಸಿದರು. ಅವರಿಗೆ ದೇಶದಾದ್ಯಂತ ಲಕ್ಷ ಲಕ್ಷ ಅಭಿಮಾನಿಗಳು ಹುಟ್ಟಿಕೊಂಡರು. ಬಾಲಿವುಡ್‌ ಚಿತ್ರಗಳ ಹಾಡುಗಳಿಗೆ ಧ್ವನಿಯಾದರು. ವಿವಿಧ ರಿಯಾಲಿಟಿ ಶೋಗಳಿಗೆ ಕಾಲಿಟ್ಟರು. ಆದರೆ 4 ವರ್ಷಗಳಲ್ಲಿ ಆಕೆ ಸಾಮಾಜಿಕ ಮಾಧ್ಯಮ ಮಾತ್ರವಲ್ಲದೆ,  ಜನರ ಮನಸ್ಸಿನಿಂದಲೂ ದೂರ ಸರಿದರು. ಹೀಗ ಅವರು ಹೇಗಿದ್ದಾರೆ, ಏನು ಮಾಡುತ್ತಿದ್ದಾರೆ?

ಪ್ರಸಿದ್ಧ ಹಿನ್ನೆಲೆ ಗಾಯಕ ಹಿಮೇಶ್, ಸಿನಿಮಾವೊಂದರಲ್ಲಿ ಹಾಡು ಹಾಡಲು ಅವಕಾಶ ನೀಡಿದ್ದರು. ಅಲ್ಲಿಂದ ರಾನು ಸೆಲಿಬ್ರೆಟಿಯಾಗಿ ಬದಲಾದರು. ‘ಹ್ಯಾಪಿ ಹಾರ್ಡಿ’ ಮತ್ತು ‘ಹರೇ’ ಚಿತ್ರದಲ್ಲಿ ‘ತೇರಿ ಮೇರಿ ಕಹಾನಿ’ ಹಾಡನ್ನು ಹಾಡಿದ್ದರು. ಜೊತೆಗೆ ಇನ್ನೂ  3 ಹಾಡುಗಳನ್ನು ಹಾಡಿದ್ದಾರೆ. 2019ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲಾದ ಹಾಡಿನಲ್ಲಿ ಇವರ ‘ತೇರಿ ಮೇರಿ ಕಹಾನಿ’ 2ನೇ ಸ್ಥಾನದಲ್ಲಿತ್ತು.

ಏಕಾಏಕಿ ದೊರೆತ ಜನಪ್ರಿಯತೆಯನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕೆನ್ನುವ ತಿಳಿವಳಿಕೆ ರಾನು ಅವರಿಗೆ ಇರಲಿಲ್ಲ. ಒಮ್ಮೆಗೆ ಬಂದ ಖ್ಯಾತಿಯಿಂದಾಗಿ ಅವರ ಮಾತು, ವರ್ತನೆ, ವ್ಯಕ್ತಿತ್ವದಲ್ಲಿ ದುರಂಹಕಾರ ಹುಟ್ಟಿಕೊಂಡಿತ್ತು. ಇದರಿಂದಾಗಿ ನಿಧಾನವಾಗಿ ಜನರು ಕೂಡ ರಾನು ಮಂಡಲ್ ಅವರನ್ನು ಮರೆಯಲು ಶುರು ಮಾಡಿದರು. ಇಂದಿಗೆ ಆಕೆ ಸಂಪೂರ್ಣವಾಗಿ ಜನರ ಮನಸ್ಸಿನಿಂದ ಕಾಣೆಯಾಗಿದ್ದಾರೆ. ಇದರಿಂದ ಅವರು ಮತ್ತೆ ತಮ್ಮ ಬಡತನದಿಂದ ತುಂಬಿದ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ.

ಇತ್ತೀಚೆಗೆ ನಿಶಾ ತಿವಾರಿ ಎಂಬ ಯೂಟ್ಯೂಬರ್ ಒಬ್ಬರು ರಾನು ಮಂಡಲ್ ಅವರ ಮನೆಗೆ  ಭೇಟಿ ನೀಡಿದ್ದು, ಪ‍್ರಸ್ತುತ ರಾನು ಅವರ ಪರಿಸ್ಥಿತಿಯನ್ನು ತೋರಿಸಿದ್ದಾರೆ. ವಿಡಿಯೊದಲ್ಲಿ ರಾನು ಅವರ ಮನೆ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಮನೆಯಲ್ಲಿ ಸ್ವಚ್ಛತೆಯಿಲ್ಲ, ಸರಿಯಾದ ವ್ಯವಸ್ಥೆಗಳಿಲ್ಲ ಎಂಬುದು ತಿಳಿದು ಬಂದಿದೆ. 

ಅಲ್ಲದೇ ರಾನು ಅವರ ಮಾನಸಿಕ ಸ್ಥಿತಿ ಕೂಡಾ ಗಂಭೀರವಾಗಿದೆ. ಅವರಿಗೆ ಮರೆವಿನ ಕಾಯಿಲೆಯಿದೆ. ಈಗ ಮಾತನಾಡಿದ್ದು, ಮತ್ತೊಂದು ಕ್ಷಣಕ್ಕೆ ನೆನಪಿರುವುದಿಲ್ಲ. ಕೆಲವೊಮ್ಮೆ ಬಹಳಷ್ಟು ಹಣ ಸಂಪಾದಿಸಿದ್ದೇನೆ ಎಂದು ಹೇಳುತ್ತಾರೆ. ಕೆಲವೊಮ್ಮೆ ಅವರು ಮೋಸ ಹೋದೆ ಎಂದು ಹೇಳುತ್ತಾರೆ. ಅವರು ಇದ್ದಕ್ಕಿದ್ದಂತೆ ನಗಲು ಪ್ರಾರಂಭಿಸುತ್ತಾರೆ. ಕೋಪಗೊಳ್ಳುತ್ತಾಳೆ ಎಂದು ಯೂಟ್ಯೂಬರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ರಾನು ಇಂದಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅವರಿಗೆ ಊಟವನ್ನು ಬೇರೆಯವರು ಕೊಡುತ್ತಾರೆ. ಅವರನ್ನು ನೋಡಲು ಬರುವವರು ಊಟವನ್ನು ತೆಗೆದುಕೊಂಡು ಬರುತ್ತಾರೆ. ಅದೇ ಸಮಯದಲ್ಲಿ ಕೆಲವರು ಅವರ ಕೈಗೆ ಹಣ ಕೊಟ್ಟು ಹೋಗುತ್ತಾರೆ ಎಂದು ವಿಡಿಯೊದಲ್ಲಿ ನಿಶಾ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.