ADVERTISEMENT

ಕ್ಯಾನ್ಸರ್ ಪೀಡಿತ ಮಗನ ಆರೈಕೆಗೆ ರಜೆಯಲ್ಲಿದ್ದ ಉದ್ಯೋಗಿಯನ್ನೂ ವಜಾ ಮಾಡಿದ ಟ್ವಿಟರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2022, 10:00 IST
Last Updated 6 ನವೆಂಬರ್ 2022, 10:00 IST
   

ನವದೆಹಲಿ: ಕ್ಯಾನ್ಸರ್‌ ಪೀಡಿತ ಮಗನ ಆರೈಕೆಗಾಗಿ ರಜೆಯಲ್ಲಿದ್ದ ಉದ್ಯೋಗಿಯನ್ನೂ ಟ್ವಿಟರ್‌ ವಜಾಗೊಳಿಸಿದೆ.

ವಜಾಗೊಂಡಿರುವ ಸಿಬ್ಬಂದಿ ಹೆರ್ನಾನ್ ಅಲ್ವಾರೆಜ್ ಎಂಬುವವರು ಈ ಬಗ್ಗೆ ವ್ಯಾಪಾರ ಮತ್ತು ಉದ್ಯೋಗ-ಆಧಾರಿತ ಆನ್‌ಲೈನ್ ಸೇವಾ ತಾಣ ‘ಲಿಂಕ್ಡ್‌ ಇನ್‌’ನಲ್ಲಿ ಶನಿವಾರ ಪೋಸ್ಟ್‌ ಪ್ರಕಟಿಸಿದ್ದಾರೆ.

‘ ನನಗೆ ಹೆಚ್ಚು ಅಗತ್ಯ ಇರುವ ಸನ್ನಿವೇಶದಲ್ಲೇ ‘ಹೊಸ ಟ್ವಿಟರ್' ನನ್ನನ್ನು ನಿರಾಸೆಗೊಳಿಸಿದೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ನನ್ನ ಮಗನನ್ನು ನೋಡಿಕೊಳ್ಳಲೆಂದು ರಜೆಯಲ್ಲಿರುವಾಗಲೇ ಕಂಪನಿ ನನ್ನನ್ನು ತೆಗೆದಿದೆ. ಮುಂದಿನ ಅವಕಾಶಕ್ಕಾಗಿ ಎದುರುನೋಡುತ್ತಿದ್ದೇನೆ. ಮುಖ್ಯವಾಗಿ ಸಾಧ್ಯವಾದಷ್ಟು ಬೇಗ ವೈದ್ಯಕೀಯ ವಿಮೆಯನ್ನು ಪಡೆಯುವ ನಿರೀಕ್ಷೆಯಲ್ಲಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
ಲಿಂಕ್ಡ್‌ ಇನ್‌ನಲ್ಲಿ ಈ ಪೋಸ್ಟ್‌ ಭಾರಿ ಸದ್ದು ಮಾಡುತ್ತಿದ್ದು, ಸಾವಿರಾರು ಮಂದಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಹೆರ್ನಾನ್ ಅಲ್ವಾರೆಜ್ ಅವರು ಅಟ್ಲಾಂಟದಲ್ಲಿ ನೆಲೆಸಿದ್ದು, ಟ್ವಿಟರ್‌ನಲ್ಲಿ ಎಂಜಿನಿಯರಿಂಗ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಅವರ ಲಿಂಕ್ಡ್‌ ಇನ್‌ ಪ್ರೊಫೈಲ್‌ನಲ್ಲಿ ಈ ಕುರಿತು ಉಲ್ಲೇಖವಿದೆ.

ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್‌ ಅನ್ನು ಖರೀದಿ ಮಾಡಿದ ಬಳಿಕ ಅಮೂಲಾಗ್ರ ಬದಲಾವಣೆಗೆ ಮುಂದಾಗಿರುವ ವಿಶ್ವದ ನಂಬರ್‌ 1 ಶ್ರೀಮಂತ ಇಲಾನ್‌‌ ಮಸ್ಕ್‌, ಶೇ 50 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದಾರೆ.

ವಿಶ್ವದಾದ್ಯಂತ ಟ್ವಿಟರ್‌ನಲ್ಲಿ ಸುಮಾರು 7500 ಉದ್ಯೋಗಿಗಳು ಇದ್ದು, ಈ ಪೈಕಿ ಶೇ 50 ಮಂದಿಯನ್ನು ಮನೆಗೆ ಕಳುಹಿಸಲಾಗಿದೆ. ಈಗಾಗಲೇ 4000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.