ADVERTISEMENT

Cyber Crime: ಫೇಸ್‌ಬುಕ್‌ನಲ್ಲಿ ‘ಕಾಪಿರೈಟ್’ ವಂಚನೆಯ ಜಾಲ

ಅವಿನಾಶ್ ಬಿ.
Published 27 ಆಗಸ್ಟ್ 2025, 0:30 IST
Last Updated 27 ಆಗಸ್ಟ್ 2025, 0:30 IST
ಫೇಕ್ ಹೆಸರಿನ ಫೇಸ್‌ಬುಕ್ ಪ್ರೊಫೈಲ್‌ಗಳ ಬಗ್ಗೆ ಎಚ್ಚರ
ಫೇಕ್ ಹೆಸರಿನ ಫೇಸ್‌ಬುಕ್ ಪ್ರೊಫೈಲ್‌ಗಳ ಬಗ್ಗೆ ಎಚ್ಚರ   

ಕೈಗೊಂದು ಸ್ಮಾರ್ಟ್ ಫೋನ್, ಅದಕ್ಕೆ ಇಂಟರ್‌ನೆಟ್ ಸಂಪರ್ಕ - ಇಷ್ಟಿದ್ದರೆ ಲೋಕವನ್ನೇ ಮರೆತುಬಿಡುವವರು ಮತ್ತು ರೀಲ್ಸ್, ಸ್ಟೋರೀಸ್ ಎಂದು ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವವರನ್ನೇ ಗುರಿಯಾಗಿರಿಸಿಕೊಂಡು ಈಗ ವಂಚಕರು ತಮ್ಮ ಕಾರ್ಯವಿಧಾನವನ್ನೂ ‘ಅಪ್‌ಗ್ರೇಡ್’ ಮಾಡಿಕೊಂಡಿದ್ದಾರೆ! ಇಂಟರ್‌ನೆಟ್-ವ್ಯಸನಿಗಳಿಂದಾಗಿ ದುಡ್ಡು ಮಾಡುವ ವಿಧಾನವಂತೂ ಈಗ ವಂಚಕರಿಗೆ ಸರಳವಾಗಿಬಿಟ್ಟಿದೆ. ಇದಕ್ಕೆ ಕಾರಣ, ಸೈಬರ್ ವಂಚನೆಯ ಕುರಿತು ಮಾಧ್ಯಮಗಳು, ಪೊಲೀಸರು ಸಾಕಷ್ಟು ಎಚ್ಚರಿಸಿದರೂ, ಮಾರ್ಗಸೂಚಿಗಳನ್ನೆಲ್ಲಾ ಅನುಸರಿಸಲು ವ್ಯವಧಾನವಿಲ್ಲ ಎಂದುಕೊಳ್ಳುತ್ತಾ ಸ್ಮಾರ್ಟ್‌ಫೋನ್ ಪರದೆಯ ಮೇಲೆ ಬೆರಳಾಡಿಸುವವರ ಸಂಖ್ಯೆ ಹೆಚ್ಚಾಗಿರುವುದು.

ಈಗಾಗಲೇ ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದಲೇ ಚಿತ್ರ, ಮಾಹಿತಿ ಕದ್ದು, ಅದನ್ನೇ ಅಳವಡಿಸಿ ಮತ್ತೊಂದು ಫೇಕ್ ಪ್ರೊಫೈಲ್ ಸೃಷ್ಟಿಸಿ, ನಮ್ಮ ಸ್ನೇಹಿತರಲ್ಲಿ ‘ತೀರಾ ಅನಿವಾರ್ಯವಿದೆ, ಒಂದ್ಹತ್ತು ಸಾವಿರ ದುಡ್ಡು ಬೇಕಿತ್ತು, ನಾಳೆನೇ ಕೊಡ್ತೇನೆ, ಗೂಗಲ್ ಪೇ ಮಾಡಿ’ ಎಂದು ಯಾಚಿಸುವವರ ಜಾಲಕ್ಕೆ ಬಲಿಯಾಗಿ ಅದೆಷ್ಟೋ ಮಂದಿ ದುಡ್ಡನ್ನು ಕಳೆದುಕೊಂಡಿದ್ದಾರೆ. ಇದು ನೇರವಾದ ಸುಲಿಗೆ. ಆದರೆ ಇತ್ತೀಚೆಗೆ ಮತ್ತೊಂದು ಜಾಲ ಸಕ್ರಿಯವಾಗಿದೆ. ಅದೆಂದರೆ, ಕೃತಿಸ್ವಾಮ್ಯ (ಕಾಪಿರೈಟ್) ಉಲ್ಲಂಘನೆಯ ಬೆದರಿಕೆಯೊಡ್ಡಿ ಹಣ ಸುಲಿಯುವ ತಂತ್ರ. ‘ನೀವು ಕೃತಿಸ್ವಾಮ್ಯ ಉಲ್ಲಂಘಿಸಿ ಕಂಟೆಂಟ್ ಅಪ್‌ಲೋಡ್ ಮಾಡಿದ್ದೀರಿ, ತಕ್ಷಣ ಸರಿಪಡಿಸಿಕೊಳ್ಳಿ’ ಎಂಬ ಬೆದರಿಕೆಯ ಸಂದೇಶ ನೇರವಾಗಿ ನಮ್ಮ ಇನ್‌ಬಾಕ್ಸ್‌ನೊಳಗೇ ಬಂದಿರುತ್ತದೆ.

ವಂಚನೆ ಹೇಗೆ?

ADVERTISEMENT


ಫೇಸ್‌ಬುಕ್ ಜನಪ್ರಿಯ ಪುಟ ಅಥವಾ ಪ್ರೊಫೈಲ್ ಇದ್ದಲ್ಲಿ ಮತ್ತು ಅದರಲ್ಲಿ ಹೆಚ್ಚು ವಿಡಿಯೊ, ಚಿತ್ರ, ಮಾಹಿತಿ ಶೇರ್ ಆಗುತ್ತಿದ್ದಲ್ಲಿ, ಅಂಥವರನ್ನೇ ಟಾರ್ಗೆಟ್ ಮಾಡುತ್ತಾರೆ ವಂಚಕರು. ಇದಕ್ಕಾಗಿ, ಜನರನ್ನು ಸುಲಭವಾಗಿ ಆತಂಕಕ್ಕೀಡು ಮಾಡಲು ಅವರು ಕಂಡುಕೊಂಡ ಉಪಾಯವೆಂದರೆ, ಫೇಸ್‌ಬುಕ್ ಲೋಗೊವನ್ನು ಪ್ರೊಫೈಲ್ ಚಿತ್ರವಾಗಿ ಬಳಸಿರುವ ಒಂದು ಫೇಸ್‌ಬುಕ್ ಪ್ರೊಫೈಲ್ ಮತ್ತು ಅದರ ಹೆಸರೇ 'Facebook Copyright Violation' ಎಂಬ ಮಾದರಿಯಲ್ಲಿರುತ್ತದೆ. ಈ ಪ್ರೊಫೈಲ್ ಮೂಲಕ ನಮ್ಮ ಯಾವುದಾದರೂ ಪೋಸ್ಟ್‌ಗೆ ಕಾಮೆಂಟ್ ಮಾಡುವಾಗ ನಾವಂತೂ ಬೆಚ್ಚಿ ಬೀಳುತ್ತೇವೆ. ವಿಶೇಷವಾಗಿ ಯೋಚಿಸುವ ವ್ಯವಧಾನ ಇಲ್ಲದಿರುವ ಫೇಸ್‌ಬುಕ್ ಪುಟದ ಮಾಲೀಕರು ಮತ್ತು ಆ್ಯಡ್ಮಿನ್‌ಗಳಿಗೆ ಇದೊಂದು ಸಂಕಷ್ಟ. ಅದರಲ್ಲಿ, ‘ನಿಮ್ಮ ಪುಟವನ್ನು ಬ್ಲಾಕ್ ಮಾಡಲಾಗುತ್ತದೆ, ತಕ್ಷಣವೇ ಕ್ರಮ ಕೈಗೊಳ್ಳಿ’ ಎಂಬ ಸೂಚನೆಯೊಂದಿಗೆ ಲಿಂಕ್ ಕೂಡ ನೀಡಲಾಗಿರುತ್ತದೆ.

ಫೇಸ್‌ಬುಕ್‌ನಿಂದ ಬಂದಿರುವ ಅಧಿಕೃತ ಸಂದೇಶದಂತೆಯೂ, ಲೀಗಲ್ ನೋಟಿಸ್ ಮಾದರಿಯಲ್ಲೂ ಇರಬಹುದಾದ ಈ ಸಂದೇಶಗಳನ್ನು ನಾವು ನಂಬುತ್ತೇವೆ. ಸರಿಪಡಿಸಲು ಅಥವಾ ಬ್ಲಾಕ್ ಮಾಡಿದ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅದರಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡುತ್ತೇವೆ. ಈ ಲಿಂಕ್ ವಂಚಕರ ಜಾಲತಾಣಕ್ಕೆ (ಫೀಶಿಂಗ್ ತಾಣ) ನಮ್ಮನ್ನು ಕರೆದೊಯ್ಯುತ್ತದೆ. ರೀಲ್ಸ್ ನೋಡುತ್ತಾ ಕಾಲ ಕಳೆಯುತ್ತಿದ್ದ ನಾವು, ಒಮ್ಮೆ ಪಾರಾದರೆ ಸಾಕು ಎಂಬ ಧಾವಂತದಲ್ಲಿ ವ್ಯವಧಾನವಿಲ್ಲದಿದ್ದರೂ ಎಂದಿನಂತೆಯೇ, ಮರುಪರಿಶೀಲಿಸುವ ಗೋಜಿಗೆ ಹೋಗದೆ ಈ ಲಿಂಕ್ ಕ್ಲಿಕ್ ಮಾಡುತ್ತೇವೆ; ಮಾಹಿತಿ ಸಂಗ್ರಹಕ್ಕಾಗಿಯೇ ವಿನ್ಯಾಸಪಡಿಸಲಾದ ಈ ಜಾಲತಾಣದಲ್ಲಿ ಕೇಳಿದ ಮಾಹಿತಿಯನ್ನು ನೀಡುತ್ತೇವೆ. ಇವುಗಳಲ್ಲಿ ನಮ್ಮ ಲಾಗಿನ್ ಕ್ರೆಡೆನ್ಷಿಯಲ್‌ಗಳು, ಫೋನ್ ನಂಬರ್, ಇಮೇಲ್ ವಿಳಾಸ ಸಹಿತ ವೈಯಕ್ತಿಕ ಮಾಹಿತಿಯೂ ಸೇರಿರುತ್ತವೆ. ಬಿಜಿನೆಸ್ ಅಥವಾ ಜನಪ್ರಿಯ ಸಮುದಾಯ ಪುಟಗಳನ್ನು ನಿರ್ವಹಿಸುತ್ತಿರುವ ಆ್ಯಡ್ಮಿನ್‌ಗಳೇ ಈ ವಂಚಕರ ಟಾರ್ಗೆಟ್.

ಏನು ಸಮಸ್ಯೆಯಾಗಬಹುದು?


ಈ ರೀತಿ ವಂಚಕರೊಂದಿಗೆ ನಾವು ಹಂಚಿಕೊಂಡ ಮಾಹಿತಿ ಆಧಾರದಲ್ಲಿ, ಈ ಪುಟವನ್ನೇ ವಂಚಕರು ಸ್ವಾಧೀನಪಡಿಸಿಕೊಳ್ಳಬಹುದು, ಅದರಲ್ಲಿರುವ ಸೂಕ್ಷ್ಮವಾದ ಬಿಜಿನೆಸ್ ಸಂಬಂಧಿತ ಮಾಹಿತಿಗಳನ್ನು ಪಡೆದುಕೊಳ್ಳಬಹುದು, ನಮ್ಮ ಫೋನ್ ನಂಬರ್, ಆಧಾರ್ ಸಂಖ್ಯೆ ಮುಂತಾದವುಗಳ ಮಾಹಿತಿ ಪಡೆದು ಬ್ಯಾಂಕಿಂಗ್ ವಿವರಗಳನ್ನೂ ಪಡೆದುಕೊಳ್ಳಬಹುದು ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಸಾಧ್ಯತೆಯೂ ಇರುತ್ತದೆ. ಜೊತೆಗೆ, ಸ್ನೇಹಿತರಿಂದ ಹಣ ಸುಲಿಗೆ ಮಾಡುವ ಅಪಾಯವೂ ಇರುತ್ತದೆ. ತಮ್ಮ ದಂಧೆ ಇಲ್ಲವೇ ಬೇರಾವುದೇ ಉತ್ಪನ್ನಗಳ ಪ್ರಚಾರಕ್ಕಾಗಿ, ಅಕ್ರಮ, ಅಶ್ಲೀಲ ವಿಚಾರಗಳನ್ನು ಹಂಚಿಕೊಳ್ಳುವುದಕ್ಕಾಗಿ ಅವರು ಅದನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಇದರಿಂದ ಜನಪ್ರಿಯವಾಗಿರುವ ಪುಟಕ್ಕೆ ಕಳಂಕ ತಟ್ಟಬಹುದು, ಫೇಸ್‌ಬುಕ್ ಸಮುದಾಯ ಪುಟದ ವಿಶ್ವಾಸಾರ್ಹತೆಗೆ ಧಕ್ಕೆಯಾಗಬಹುದು.

ಏನು ಮಾಡಬೇಕು?


ಸುಲಭ ದಾರಿ ಎಂದರೆ, ವಿವೇಚನೆ ಉಪಯೋಗಿಸಿ ಇಂಟರ್‌ನೆಟ್ ಅನ್ನು ಬಳಸುವುದು. ಸಮಸ್ಯೆಯಾದ ತಕ್ಷಣ ಅಥವಾ ಇಂಥ ಸಂದೇಶಗಳು ಕಂಡುಬಂದ ತಕ್ಷಣ ಫೇಸ್‌ಬುಕ್ ಸಪೋರ್ಟ್ ವಿಭಾಗವನ್ನು ಅಥವಾ ಅದರ ಸಹಾಯ ಕೇಂದ್ರವನ್ನು ಸಂಪರ್ಕಿಸಿ, ಈ ಬಗ್ಗೆ ಕ್ರಮಕ್ಕೆ ವಿನಂತಿಸುವುದು ಸೂಕ್ತ. ಯಾವುದೇ ಲಿಂಕ್‌ನ URL ಗಮನಿಸಿ, ವಿಶ್ವಾಸಾರ್ಹ ಪುಟವೇ ಎಂದು ದೃಢೀಕರಿಸಿಕೊಳ್ಳುವುದು ಅತ್ಯಂತ ಮುಖ್ಯ. ಶಂಕಾರ್ಹ ಲಿಂಕ್‌ಗಳನ್ನು ಕ್ಲಿಕ್ ಮಾಡಲೇಬಾರದು ಎಂಬ ನಿಯಮ ಪಾಲಿಸಲೇಬೇಕು. ಮತ್ತು, ಈ ರೀತಿ ಶಂಕಾರ್ಹ ಪ್ರೊಫೈಲ್ ಅನ್ನು ಫೇಸ್‌ಬುಕ್ (ಮೆಟಾ) ತಂಡಕ್ಕೆ ರಿಪೋರ್ಟ್ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.