ADVERTISEMENT

ನಿಮ್ಮ ಸ್ಮಾರ್ಟ್ ಫೋನ್‌ನ ಬ್ಯಾಟರಿ ಉಳಿತಾಯ, ಬಾಳಿಕೆ ಹೆಚ್ಚಿಸುವುದು ಹೇಗೆ?

ಸ್ಮಾರ್ಟ್‌ಫೋನ್ ಬ್ಯಾಟರಿ ಮಿಥ್ಯ-ತಥ್ಯಗಳು

ಅವಿನಾಶ್ ಬಿ.
Published 8 ಜನವರಿ 2025, 1:10 IST
Last Updated 8 ಜನವರಿ 2025, 1:10 IST
<div class="paragraphs"><p>ಫೋನ್ ಬ್ಯಾಟರಿ ಬಳಕೆ ಟಿಪ್ಸ್. </p></div>

ಫೋನ್ ಬ್ಯಾಟರಿ ಬಳಕೆ ಟಿಪ್ಸ್.

   

ಪ್ರಾತಿನಿಧಿಕ ಚಿತ್ರ: ಐಸ್ಟಾಕ್

ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುವುದು ಗ್ಯಾಜೆಟ್ ತಯಾರಕರಿಗಿರುವ ದೊಡ್ಡ ಸವಾಲು. ಇದಕ್ಕಾಗಿ ಅದೆಷ್ಟೋ ಸಂಶೋಧನೆಗಳು ನಡೆದರೂ, ಹೆಚ್ಚು ಸಾಮರ್ಥ್ಯದ ಬ್ಯಾಟರಿಗಾಗಿ ಫೋನ್ ಗಾತ್ರವನ್ನೇ ಹಿಗ್ಗಿಸಬೇಕಾದ ಅನಿವಾರ್ಯತೆಯಿದೆ. ಚೀನಾದ ‘ಬೀಟಾವೋಲ್ಟ್’ ಎಂಬ ಸ್ಟಾರ್ಟಪ್ ಕಂಪೆನಿಯೊಂದು ನ್ಯೂಕ್ಲಿಯಾರ್ ಸೆಲ್ ಬ್ಯಾಟರಿ ತಂತ್ರಜ್ಞಾನವೊಂದನ್ನು ಕಂಡುಹುಡುಕಿದೆ. ಈ ತಂತ್ರಜ್ಞಾನ ಸಾಕಾರಗೊಂಡರೆ ಸುಮಾರು 50 ವರ್ಷಗಳ ಕಾಲ ಚಾರ್ಜ್ ಮಾಡಬೇಕಾಗಿರುವುದಿಲ್ಲ ಎಂಬ ಸುದ್ದಿಯೂ ಇತ್ತೀಚೆಗೆ ದೊಡ್ಡ ಸದ್ದು ಮಾಡಿದ್ದರೂ, ಈ ತಂತ್ರಜ್ಞಾನವು ಸಾಕಾರಗೊಳ್ಳಲು ಹಲವು ವರ್ಷಗಳು ಬೇಕಾಗಬಹುದು.

ADVERTISEMENT

ಫೋನ್‌ಗಳ ಬ್ಯಾಟರಿ ಚಾರ್ಜ್ ಹೆಚ್ಚು ಕಾಲ ಉಳಿಯದಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಸಾಧನಗಳ ಗಾತ್ರ, ತೀಕ್ಷ್ಣ ಪ್ರಖರತೆಯಿರುವ ಸ್ಕ್ರೀನ್, ವೇಗದ ಪ್ರೊಸೆಸರ್‌ಗಳು, ಹಿನ್ನೆಲೆಯಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್‌ಗಳು, ವೇಗದ ಇಂಟರ್‌ನೆಟ್, ಹೆಚ್ಚಿನ ಪ್ರಮಾಣದ ಗೇಮಿಂಗ್, ವೇಗದ ಚಾರ್ಜಿಂಗ್ ಮತ್ತು ವಿವಿಧ ಕಾರಣಗಳಿಂದಾಗಿ ಬ್ಯಾಟರಿಯು ಬಿಸಿಯಾಗುತ್ತದೆ. ಇವೆಲ್ಲವೂ ಬ್ಯಾಟರಿ ಬಾಳಿಕೆ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲ ಅಂಶಗಳು.

ಇದರ ಫಲವಾಗಿ, ವಾಹನಗಳು, ಲ್ಯಾಪ್‌ಟಾಪ್, ಮೊಬೈಲ್ ಫೋನ್ ಮತ್ತು ಇತರ ಗ್ಯಾಜೆಟ್‌ಗಳಲ್ಲಿ ಬ್ಯಾಟರಿ ಚಾರ್ಜ್ ಹೆಚ್ಚು ಕಾಲ ಉಳಿಯುವಂತೆ ಮಾಡುವ ಕುರಿತು ವಿಜ್ಞಾನಿಗಳು ಸಂಶೋಧನೆಯನ್ನು ಮುಂದುವರಿಸುತ್ತಲೇ ಇದ್ದಾರೆ. ಆದರೆ ಇದರ ಪ್ರಗತಿಯು ಎಐ ಮುಂತಾದ ಬೇರೆ ತಂತ್ರಜ್ಞಾನಗಳಿಗೆ ಹೋಲಿಸಿದರೆ, ಒಂದಿಷ್ಟು ನಿಧಾನಗತಿಯಲ್ಲೇ ಸಾಗುತ್ತಿದೆ ಎನ್ನಬಹುದು. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ, ಬ್ಯಾಟರಿಯನ್ನು ನಿರಂತರ ಚಾರ್ಜಿಂಗ್ ಮಾಡಬಾರದು, ಪೂರ್ತಿ (ಶೇ.100) ಚಾರ್ಜ್ ಮಾಡಬಾರದು ಎಂಬಿತ್ಯಾದಿ ಸಲಹೆ ಸೇರಿದಂತೆ, ಬ್ಯಾಟರಿ ನಿರ್ವಹಣೆಯ ಬಗ್ಗೆ ಸಾಕಷ್ಟು ಮಿಥ್ಯೆಗಳೂ, ಒಂದಷ್ಟು ತಥ್ಯಗಳೂ ಸಾಮಾಜಿಕ ಮಾಧ್ಯಮಗಳಿಂದಾಗಿ ‘ಫಾರ್ವರ್ಡ್’ ಆಗಿ ಜನರಲ್ಲಿ ಗೊಂದಲವನ್ನು ಮೂಡಿಸಿದೆ.

ಸ್ಮಾರ್ಟ್‌ಫೋನ್ ಅಥವಾ ಯಾವುದೇ ಗ್ಯಾಜೆಟ್ಟನ್ನು ರಾತ್ರಿಯಿಡೀ ಚಾರ್ಜ್‌ಗೆ ಇಡಬಹುದೇ? ಶೇ.100ರಷ್ಟು ಚಾರ್ಜ್ ಮಾಡಬಾರದೇ?  ಕೆಲವೇ ವರ್ಷಗಳ ಹಿಂದೆ, ಚಾರ್ಜ್ ಮಾಡಲು ಇರಿಸಿದ ಮೊಬೈಲ್ ಫೋನ್ ಸ್ಫೋಟವಾದ ವರದಿಗಳು, ಜನರಲ್ಲಿ ಮೊಬೈಲ್ ಬಳಕೆಯ ಬಗ್ಗೆ ಆತಂಕ ಮೂಡಿಸಿದ್ದವು. ಇದಕ್ಕೆ ಕಾರಣ ಅದರಲ್ಲಿರುವ ಬ್ಯಾಟರಿಯೇ ಆಗಿತ್ತು. ಓವರ್ ಚಾರ್ಜಿಂಗ್ ಮಾಡಬಾರದು ಎಂಬ ಸಲಹೆಗಳನ್ನು ಅಂದೇ ಕೇಳಿದ್ದೆವು. ಅಂದಿನ ತಂತ್ರಜ್ಞಾನಕ್ಕೆ ಆ ಸಲಹೆ ಸೂಕ್ತವೇ ಆಗಿದ್ದರೂ, ಈಗ ಸ್ಮಾರ್ಟ್‌ಫೋನ್ ಬ್ಯಾಟರಿಗಳಿಗೆ ಬಳಕೆಯಾಗುವ ಲೀಥಿಯಂ ಅಯಾನ್ ಕೋಶಗಳಿಗೆ ಸಂಬಂಧಿಸಿದಂತೆ, ಸೂಕ್ತವಾದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಮತ್ತು ಮೊಬೈಲ್ ಫೋನ್‌ಗಳಲ್ಲಿ ಬಳಕೆಯಾಗುವ ಪ್ರೊಸೆಸರ್‌ಗಳ ತಂತ್ರಜ್ಞಾನಗಳಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಹೀಗಾಗಿ, ರಾತ್ರಿಯಿಡೀ ಚಾರ್ಜಿಂಗ್ ಪ್ಲಗ್‌ಗೆ ಮೊಬೈಲನ್ನು ಸಿಕ್ಕಿಸಿಟ್ಟರೂ, ಏನೂ ಆಗದಂತಹ ತಂತ್ರಜ್ಞಾನವನ್ನು ಬಹುತೇಕ ಮೊಬೈಲ್ ಫೋನ್ ತಯಾರಕ ಸಂಸ್ಥೆಗಳು ಅಳವಡಿಸಿವೆ. ಅಂದರೆ, ಶೇ. 100ರಷ್ಟು ಚಾರ್ಜ್ ಆದ ಬಳಿಕ, ವಿದ್ಯುತ್ ಪ್ರವಾಹವು ಕಡಿತವಾಗುವ ತಂತ್ರಜ್ಞಾನ ಬಂದಿದೆ.

ಇಷ್ಟೇ ಅಲ್ಲದೆ, ಫೋನ್ ಬ್ಯಾಟರಿಯು ದೀರ್ಘ ಕಾಲ ಬಾಳಿಕೆ ಬರುವಂತಾಗಲು, ನಿರ್ದಿಷ್ಟ ಪ್ರಮಾಣದಲ್ಲಿ (ಶೇ.80ರಿಂದ ಶೇ.95ರವರೆಗೆ) ಚಾರ್ಜ್ ಆದಾಗ, ವಿದ್ಯುತ್ ಸಂಪರ್ಕ ಕಡಿತವಾಗುವ 'ಆಪ್ಟಿಮೈಸ್ಡ್ ಬ್ಯಾಟರಿ ಚಾರ್ಜಿಂಗ್' ತಂತ್ರಜ್ಞಾನವು ಇತ್ತೀಚಿನ ಬಹುತೇಕ ಫೋನ್‌ಗಳ ಸೆಟ್ಟಿಂಗ್‌ನಲ್ಲಿ ಇದೆ. ಇದರ ಅರ್ಥ, ಫೋನನ್ನು ಶೇ.100ರಷ್ಟು ಚಾರ್ಜ್ ಮಾಡುವುದು ಕೂಡ ಬ್ಯಾಟರಿ ಬಾಳಿಕೆ ದೃಷ್ಟಿಯಿಂದ ಹಿತಕರವಲ್ಲ. ಹಳೆಯ ಫೋನ್‌ಗಳಲ್ಲಿ ಈ ರೀತಿಯ ವೈಶಿಷ್ಟ್ಯ ಇರುವುದಿಲ್ಲ ಎಂಬುದನ್ನು ಗಮನಿಸಬೇಕು.

ಹೀಗಾಗಿ, ಇತ್ತೀಚೆಗಿನ ಫೋನ್‌ಗಳಿಗೆ (ನಿಮ್ಮ ಫೋನ್‌ನಲ್ಲಿಯೂ ಈ ವೈಶಿಷ್ಟ್ಯ ಇದೆಯೇ ಎಂದು ಖಚಿತಪಡಿಸಿಕೊಂಡು) ರಾತ್ರಿಯಿಡೀ ಫೋನ್ ಚಾರ್ಜ್‌ಗಿಟ್ಟರೂ ಸಮಸ್ಯೆಯಾಗದು. ಸ್ವಲ್ಪ ಹಳೆಯ ಫೋನ್‌ಗಳಲ್ಲಿ, ಶೇ.100 ಚಾರ್ಜ್ ಆಗಿ, ಸಹಜವಾಗಿ ಸ್ವಲ್ಪ ಹೊತ್ತಿನ ಬಳಿಕ ಶೇ.99ಕ್ಕೆ ಇಳಿದಾಗ, ಚಾರ್ಜಿಂಗ್ ಪ್ರಕ್ರಿಯೆ ಮತ್ತೆ ಆರಂಭವಾಗುವುದರಿಂದ ಬ್ಯಾಟರಿ ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಅದೇ ರೀತಿ, ಚಾರ್ಜ್ ತೀರಾ ಕಡಿಮೆ ಆಗುವುದು ಅಥವಾ ಶೂನ್ಯಕ್ಕೆ ತಲುಪುವುದು ಕೂಡ ಬ್ಯಾಟರಿ ಬಾಳಿಕೆಗೆ ಪೂರಕವಲ್ಲ. ಬ್ಯಾಟರಿ ಚಾರ್ಜ್ ಶೇ.20ಕ್ಕಿಂತ ಕಡಿಮೆಯಾಗದಂತೆ ನೋಡಿಕೊಳ್ಳುವುದು ಶ್ರೇಯಸ್ಕರ. ಅಂದರೆ, 'ಲೋ ಪವರ್' ಮೋಡ್‌ಗೆ ಸ್ವಯಂಚಾಲಿತವಾಗಿ ಹೋಗುವುದರ ಮೊದಲೇ ನಾವು ಚಾರ್ಜ್ ಮಾಡಬೇಕು.

ಇನ್ನು, ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ವೇಗದ (ಫಾಸ್ಟ್) ಚಾರ್ಜಿಂಗ್ ಅಡಾಪ್ಟರ್‌ಗಳು ಈಗ ಮಾರುಕಟ್ಟೆಯಲ್ಲಿವೆ. ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ನಿಮ್ಮ ಫೋನ್ ಬೆಂಬಲಿಸದಿದ್ದರೆ ಅಂಥ ಚಾರ್ಜರ್‌ಗಳನ್ನು ಬಳಸಲೇಬಾರದು. ಇದರಿಂದ ಬ್ಯಾಟರಿಯ ಮೇಲೆ ಹೊರೆಯಾಗುತ್ತದೆ ಎಂದು ಎಚ್ಚರಿಸುತ್ತಾರೆ ತಜ್ಞರು. ವೇಗದ ಚಾರ್ಜಿಂಗ್ ಮಾಡಿದರೆ ಸಾಧನವು ಬಿಸಿಯಾಗುತ್ತದೆ. ಇದಕ್ಕಾಗಿಯೇ ಇತ್ತೀಚಿನ ಐಫೋನ್‌ಗಳನ್ನೇ ಗಮನಿಸಿದರೆ, ಶೇ.80ರಷ್ಟು ವೇಗವಾಗಿಯೇ ಚಾರ್ಜ್ ಆಗುತ್ತದೆ. ನಂತರ, ಬಿಸಿಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಚಾರ್ಜಿಂಗ್ ನಿಧಾನಗೊಳ್ಳುವ ತಂತ್ರಜ್ಞಾನವನ್ನು ಬಳಸಲಾಗಿದೆ.

ಒಂದಷ್ಟು ಟಿಪ್ಸ್

  • ಚಾರ್ಜ್ ಮಾಡುತ್ತಿರುವಾಗ ಸಾಧನದ ಮೇಲೆ ಪುಸ್ತಕ ಮುಂತಾದವನ್ನು ಇರಿಸಬೇಡಿ. ಗಾಳಿಯಾಡದಿದ್ದರೆ ಫೋನ್ ಬಿಸಿಯಾಗಿ, ಬ್ಯಾಟರಿಯ ಮೇಲೆ ಪರಿಣಾಮ ಬೀರಬಹುದು.

  • ಶೇ. 100ರಷ್ಟು ಚಾರ್ಜ್ ಮಾಡಬೇಡಿ ಅಥವಾ ಚಾರ್ಜ್ ಪೂರ್ತಿಯಾಗಿ ಖಾಲಿ (ಶೇ. 0) ಆಗದಂತೆ ನೋಡಿಕೊಳ್ಳಿ. ಪದೇ ಪದೇ ಚಾರ್ಜ್ ಮಾಡಬಹುದು; ಆದರೆ ಗರಿಷ್ಠ ಶೇ.80ರಿಂದ ಶೇ.90ರಷ್ಟೇ ಚಾರ್ಜ್ ಮಾಡಿಕೊಳ್ಳಿ.

  • ಸಾಮಾನ್ಯ ಬಳಕೆಯಲ್ಲಿ ಸ್ಕ್ರೀನ್ ಪ್ರಖರತೆ (ಬ್ರೈಟ್‌ನೆಸ್) ಎಷ್ಟು ಬೇಕೋ ಅಷ್ಟೇ ಇರಿಸಿಕೊಳ್ಳಿ. ಪ್ರಖರತೆಯನ್ನು ಕಡಿಮೆ ಮಾಡಿದರೆ ಕಣ್ಣಿಗೂ ಹಿತಕರ. ಫೋನ್‌ಗಳಲ್ಲಿರುವ ‘ಅಡಾಪ್ಟಿವ್ ಬ್ರೈಟ್‌ನೆಸ್’ ಎಂಬ ವೈಶಿಷ್ಟ್ಯವನ್ನು ಬಳಸಿಕೊಳ್ಳಿ.

  • ಯಾವುದೇ ಕೆಲಸ ಮಾಡದಿರುವಾಗ ಫೋನ್‌ನ ಸ್ಕ್ರೀನ್ ಆಫ್ ಆಗಲು (ಸ್ಕ್ರೀನ್ ಟೈಮ್ಔಟ್) ಸಮಯವನ್ನು ಹೊಂದಿಸಿಕೊಳ್ಳಿ.

  • ಲೊಕೇಶನ್, ವೈರ್‌ಲೆಸ್, ಬ್ಲೂಟೂತ್ ಸೇವೆಗಳು ಮತ್ತು ಇಂಟರ್ನೆಟ್ (ಮೊಬೈಲ್ ಡೇಟಾ), ವೈಫೈ ಕೂಡ ಸದಾ ಕಾಲ ಆನ್ ಇದ್ದರೆ, ಒಂದಿಷ್ಟು ಬ್ಯಾಟರಿ ಚಾರ್ಜ್ ಖರ್ಚಾಗುತ್ತದೆ. ಇದಕ್ಕಾಗಿ, ಅಗತ್ಯವಿದ್ದಾಗಲಷ್ಟೇ ಅವುಗಳನ್ನು ಆನ್ ಮಾಡಿಕೊಳ್ಳಿ.

  • ಬಳಕೆಯಾಗದೇ ಇರುವ ಆ್ಯಪ್‌ಗಳು ಹಿನ್ನೆಲೆಯಲ್ಲಿಯೂ ಕೆಲಸ ಮಾಡದಂತೆ ಇರಿಸಬೇಕು. ಅವುಗಳನ್ನು ‘ಸ್ಲೀಪ್’ ಮೋಡ್‌ನಲ್ಲಿ ಇರಿಸುವ ಆಯ್ಕೆಯು ‘ಸೆಟ್ಟಿಂಗ್ಸ್’ನಲ್ಲಿರುತ್ತದೆ.

  • ವಾಯ್ಸ್ ಅಸಿಸ್ಟೆಂಟ್ ಆ್ಯಪ್‌ಗಳನ್ನು (ಸಿರಿ, ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ ಇತ್ಯಾದಿ) ಅಗತ್ಯವಿದ್ದಾಗ ಮಾತ್ರ ಆನ್ ಮಾಡಬೇಕು.

  • ಹೆಚ್ಚು ಸಮಯ ಬ್ಯಾಟರಿ ಅಗತ್ಯವಿದೆ, ಚಾರ್ಜಿಂಗ್ ಅವಕಾಶ ಇಲ್ಲ ಎಂಬುದು ತಿಳಿದಿದ್ದಾಗ, ಸಾಧನದಲ್ಲಿರುವ ‘ಪವರ್ ಸೇವಿಂಗ್’ ಅಥವಾ ‘ಬ್ಯಾಟರಿ ಸೇವರ್’ ಮೋಡ್ ಆನ್ ಮಾಡಿಕೊಳ್ಳಿ.

  • ಚಾರ್ಜಿಂಗ್ ಮಾಡುತ್ತಿರುವಾಗಲೇ, ಫೋನ್ ಬಿಸಿ ಆಗಲು ಕಾರಣವಾಗುವ ಗೇಮಿಂಗ್, ಸೋಷಿಯಲ್ ಮೀಡಿಯಾ ಇತ್ಯಾದಿ ಬಳಸಬೇಡಿ. ಫೋನ್ (ಬ್ಯಾಟರಿಯೂ) ಬಿಸಿಯಾಗುವುದು ಎಂದರೆ ಬ್ಯಾಟರಿಯ ಬಾಳಿಕೆಗೆ ದೊಡ್ಡ ಹೊಡೆತ ಎಂಬುದು ನೆನಪಿನಲ್ಲಿರಲಿ. 35 ಡಿಗ್ರಿ ಸೆಂಟಿಗ್ರೇಡ್ ತಾಪಮಾನಕ್ಕಿಂತ ಹೆಚ್ಚು ಬಿಸಿ ಇರುವ ಪ್ರದೇಶದಲ್ಲಿ ಫೋನ್ ಬಳಸಬಾರದು ಎಂದು ಆ್ಯಪಲ್ ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ. ವೇಗದ ಚಾರ್ಜಿಂಗ್ ಅಥವಾ ಕಾರ್ ಚಾರ್ಜರ್ ಇಲ್ಲವೇ ಪೋರ್ಟೆಬಲ್ ಬ್ಯಾಟರಿ ಮೂಲಕ ಚಾರ್ಜ್ ಮಾಡಬಾರದು ಎನ್ನುವುದು ಇದೇ ಕಾರಣಕ್ಕೆ. ತೀರಾ ಅಗತ್ಯವೆನಿಸಿದರೆ ಮಾತ್ರ ಇವನ್ನು ಬಳಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.