ADVERTISEMENT

ಡಿಜಿಟಲ್‌ ಉಪವಾಸ: ಊಟ–ತಿಂಡಿ ಬಿಡೋ ತರ ಮೊಬೈಲ್‌ ಬಿಡಿ ಎಂದ ಸನ್ಯಾಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2025, 4:15 IST
Last Updated 9 ಜೂನ್ 2025, 4:15 IST
   

ಸಾಮಾಜಿಕ ಜಾಲತಾಣದ ಜಾಯಮಾನದಲ್ಲಿ ಏನು ಬೇಕಾದರೂ ಹರಿದಾಡುತ್ತದೆ. ದಿನಕ್ಕೊಂದು ಹೊಸ ಹೊಸ ಟ್ರೆಂಡ್‌ಗಳು ಇಂಟರ್‌ನೆಟ್‌ನಲ್ಲಿ ಹುಟ್ಟುಕೊಳ್ಳುತ್ತಿವೆ. ಇದೀಗ ‘ಡಿಜಿಟಲ್‌ ಫಾಸ್ಟಿಂಗ್‌’ ಅಥವಾ ‘ಡಿಜಿಟಲ್‌ ಉಪವಾಸ’ ಎನ್ನುವ ಹೊಸ ಟ್ರೆಂಡ್‌ ಒಂದು ಶುರುವಾಗಿದೆ.

ಬದಲಾದ ಜೀವನ ಶೈಲಿಯಿಂದ ಜನರು ಅಗತ್ಯಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣ, ಮೊಬೈಲ್‌ ಹಾಗೂ ಡಿಜಿಟಲ್‌ ಡಿವೈಸ್‌ಗಳ ಮೊರೆ ಹೋಗಿದ್ದಾರೆ. ಅದನ್ನು ಕಡಿಮೆ ಮಾಡುವುದು ಈ ಟ್ರೆಂಡ್‌ನ ಪ್ರಮುಖ ಉದ್ದೇಶವಾಗಿದೆ.

‘ಡಿಜಿಟಲ್‌ ಉಪವಾಸ’ ಬೋಧನೆ ಮಾಡಿದ ಸನ್ಯಾಸಿ:

ADVERTISEMENT

ಇದ್ದಕ್ಕಿಂದಂತೆ ಡಿಜಿಟಲ್‌ ಫಾಸ್ಟಿಂಗ್‌ ಎನ್ನುವ ಟ್ರೆಂಡ್‌ ಶುರುವಾಗಲು ಕಾರಣವಾಗಿದ್ದು ಗುರ್ಮೀತ್‌ ರಾಮ್‌ ರಹೀಮ್ ಸಿಂಗ್ ಎನ್ನುವ ಸನ್ಯಾಸಿ. ಎಂಎಸ್‌ಜಿ ಎಂದೇ ಭಕ್ತ ಗಣದಲ್ಲಿ ಪ್ರಸಿದ್ದಿ ಪಡೆದಿರುವ ಈ ಸನ್ಯಾಸಿ, ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ. ಸಿರ್ಸಾ ಆಶ್ರಮದಲ್ಲಿ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಕೂಡ ಒಳಗಾಗಿದ್ದರು. ಅವರು ಸಾಮಾಜಿಕ ಜಾಲತಾಣಗಳ ಮೂಲಕವೇ ‘ಡಿಜಿಟಲ್‌ ಫಾಸ್ಟಿಂಗ್’ ಎನ್ನುವ ವಿನೂತನ ಕಲ್ಪನೆಯನ್ನು ಹರಿಬಿಟ್ಟಿದ್ದಾರೆ. ಎಂಎಸ್‌ಜಿ ಅವರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಅವರ ಅನುಯಾಯಿಗಳು ಸೇರಿದಂತೆ ಹಲವರು ಈ ಟ್ರೆಂಡ್‌ನ ಹಿಂದೆ ಬಿದ್ದಿದ್ದಾರೆ.

ಏನಿದು ‘ಡಿಜಿಟಲ್‌ ಫಾಸ್ಟಿಂಗ್’:

ಇಂಟರ್‌ನೆಟ್‌ ಜಮಾನದಲ್ಲಿ ಮೊಬೈಲ್‌ ಕೈ ಬಿಟ್ಟು ಮನೆ–ಮಕ್ಕಳಿಗೂ ಕೂಡ ನಿಮ್ಮ ಸಮಯ ಮೀಸಲಿಡಿ ಎನ್ನುವ ಕಲ್ಪನೆಯೇ ‘ಡಿಜಿಟಲ್‌ ಫಾಸ್ಟಿಂಗ್’. ಹಬ್ಬ ಹರಿದಿನಗಳಲ್ಲಿ ಇಂತಿಷ್ಟು ಸಮಯ ಊಟ ಮಾಡದೇ ಇರುವ ತರಹ, ಪ್ರತಿ ದಿನವೂ ಸಾಯಂಕಾಲ 7ರಿಂದ 9ಗಂಟೆಯ ತನಕ ಡಿಜಿಟಲ್‌ ಉಪಕರಣಗಳನ್ನು ಕೈಬಿಟ್ಟು, ಆ ಸಮಯವನ್ನು ಕುಟುಂಬದೊಂದಿಗೆ, ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯಬೇಕು ಎನ್ನುವುದೇ ಡಿಜಿಟಲ್‌ ಫಾಸ್ಟಿಂಗ್‌ನ ಪ್ರಮುಖ ಉದ್ದೇಶ. ಡಿಜಿಟಲ್‌ ಉಪಕರಣಗಳ ಬಳಕೆ ಕಡಿಮೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಸಂಬಂಧಗಳು ಇನ್ನೂ ಉತ್ತಮವಾಗುತ್ತವೆ. ಸಾಮಾಜಿಕ ಒಳಗೊಳ್ಳುವಿಕೆಗೆ ಇದು ಕಾರಣವಾಗುತ್ತದೆ ಎನ್ನುವ ತತ್ವವನ್ನು ಎಂಎಸ್‌ಜಿ ಅವರು ಅವರ ಭಕ್ತರಿಗೆ ಬೋಧಿಸುತ್ತಿದ್ದಾರೆ.

ಡಿಜಿಟಲ್‌ ಫಾಸ್ಟಿಂಗ್‌ನ ಮೂಲ ಮಂತ್ರವೇ ‘ಎಸ್‌ಇಇಡಿ’:

ಡಿಜಿಟಲ್‌ ಫಾಸ್ಟಿಂಗ್‌ ಮಾಡುವವರಿಗಾಗಿ ‘ಎಸ್‌ಇಇಡಿ’ಎನ್ನುವ ಮಂತ್ರವನ್ನು ಕೂಡ ಎಂಎಸ್‌ಜಿ ಹೇಳಿದ್ದಾರೆ. 'ಡಿಜಿಟಲ್ ಉಪವಾಸದೊಂದಿಗೆ ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನ ವರ್ಧನೆ ಮತ್ತು ಪುಷ್ಟೀಕರಣ' ಎನ್ನುವುದರ ಸಂಕ್ಷಿಪ್ತ ರೂಪವೇ ಎಸ್‌ಇಇಡಿ. ಡಿಜಿಟಲ್‌ ಉಪಕರಣಗಳನ್ನು ಕೈಬಿಟ್ಟು ಆ ಸಮಯವನ್ನು ಸಾಮಾಜಿಕ ಜೀವನ ಮತ್ತು ಆಧ್ಯಾತ್ಮಿಕ ಜೀವನದ ಸುಧಾರಣೆಗೆ ಉಪಯೋಗಿಸಿಕೊಳ್ಳಿ ಎನ್ನುವುದೇ ಈ ಮೂಲ ಮಂತ್ರದ ಉದ್ದೇಶವಾಗಿದೆ.

ಈಗಾಗಲೇ ಸಾವಿರಾರು ಜನರು ತಾವು ಕೂಡ ‘ಡಿಜಿಟಲ್‌ ಫಾಸ್ಟಿಂಗ್‌’ ಮಾಡುತ್ತಿರುವುದಾಗಿ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.