
ಸಾಂದರ್ಭಿಕ ಚಿತ್ರ;
ಕೃಪೆ: ಎಐ
ಅನಾರೋಗ್ಯದ (Sick Leave) ರಜೆ ನೀಡಲು ಕಂಪನಿಯೊಂದರ ವ್ಯವಸ್ಥಾಪಕರೊಬ್ಬರು (Manager) ಉದ್ಯೋಗಿಯ ನೈಜ ಸ್ಥಳದ ವಿವರ (Live Location) ಕೇಳಿರುವ ಸ್ಕ್ರೀನ್‌ಶಾಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಕಾರ್ಪೊರೇಟ್ ವಲಯದಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳ ಸ್ವಾತಂತ್ರ್ಯದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಉದ್ಯೋಗಿಯ ನೈಜ ಸ್ಥಳದ ಮಾಹಿತಿ ಕೇಳುವುದು ಎಷ್ಟು ಸರಿ ಎಂಬ ಶೀರ್ಷಿಕೆಯ ಪೋಸ್ಟ್ ಅನ್ನು ಉದ್ಯೋಗಿಯೊಬ್ಬರು ಹಂಚಿಕೊಂಡಿದ್ದಾರೆ. ಅವರು ತೀವ್ರ ತಲೆ ನೋವಿನಿಂದಾಗಿ ಅನಾರೋಗ್ಯ ರಜೆ ಕೇಳಿದ್ದಾರೆ. ಆ ಸಂದರ್ಭದಲ್ಲಿ, ವ್ಯವಸ್ಥಾಪಕರ ಜೊತೆ ನಡೆದ ಅಹಿತಕರ ಸಂಭಾಷಣೆಯನ್ನು ಸ್ಕ್ರೀನ್‌ಶಾಟ್ ಸಮೇತ ವಿವರಿಸಿದ್ದಾರೆ.
ಸಾಮಾಜಿಕ ಮಾದ್ಯಮದಲ್ಲಿ ಹರಿದಾಡುತ್ತಿರುವ ಸಂಭಾಷಣೆಯ ಪ್ರಕಾರ, ಉದ್ಯೋಗಿಯು ತನ್ನ ಮ್ಯಾನೇಜರ್ ಬಳಿ ಅನಾರೋಗ್ಯದ ಕುರಿತು ತುರ್ತು ರಜೆ ಕೇಳಿದ್ದಾರೆ. ಅದಕ್ಕೆ ಮ್ಯಾನೇಜರ್, ನಿಮ್ಮ ವೈದ್ಯರು ನೀಡಿರುವ ಚೀಟಿಯನ್ನು ಕಳಿಸುವಂತೆ ಕೇಳಿದ್ದಾರೆ. ಮಾತ್ರವಲ್ಲ, ನಿಮ್ಮ ನೈಜ ಸ್ಥಳದ ವಿವರವನ್ನು (Live Location) ಕಳಿಸುವಂತೆ ಆಗ್ರಹಿಸಿದ್ದಾರೆ. ಇದು ಇಬ್ಬರ ನಡುವಿನ ಚರ್ಚೆಗೆ ಕಾರಣವಾಗಿದೆ.
ನೈಜ ಸ್ಥಳದ ವಿವರ ಕೇಳಿದ್ದಕ್ಕೆ ಉದ್ಯೋಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಯಾವ ಕಾರಣಕ್ಕೆ ಲೈವ್ ಲೊಕೇಷನ್ ಕಳಿಸಬೇಕೆಂದು ಕೇಳಿದ್ದಾರೆ. ಬಳಿಕ ಮ್ಯಾನೇಜರ್ ಲೊಕೇಷನ್ ಕೇಳಲು ಹೇಳಿರುವುದು ಎಚ್‌ಆರ್ ಎಂದು ತಿಳಿಸುತ್ತಾರೆ. ಅಷ್ಟಕ್ಕೆ ಸುಮ್ಮನಾಗದ ಉದ್ಯೋಗಿ, ನನ್ನ ನೈಜ ಸ್ಥಳದ ಮಾಹಿತಿ ಯಾಕೆ ಕೊಡಬೇಕು? ಎಂದು ಪ್ರಶ್ನಿಸಿರುವುದು ಪೋಸ್ಟ್‌ನಲ್ಲಿದೆ.
ಮ್ಯಾನೇಜರ್ ಕೂಡ ನೈಜ ಸ್ಥಳದ ಲೊಕೇಷನ್ ಕಳಿಸುವುದರಿಂದ ಸಮಸ್ಯೆ ಏನು? ಅದನ್ನು ಕಳಿಸಿ ಎಂದು ಕೇಳಿದ್ದಾರೆ. ಸದ್ಯ, ಈ ಪೋಸ್ಟ್ ರೆಡ್ಡಿಟ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ.
ಈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದು, ಅನೇಕ ಬಳಕೆದಾರರು ಈ ಬೇಡಿಕೆಯ ವೈಯಕ್ತಿಕ ಗೋಪ್ಯತೆಯ ಸ್ಪಷ್ಟ ಉಲ್ಲಂಘನೆ ಎಂದು ಕರೆದ್ದಾರೆ. ಇನ್ನೂ ಕೆಲವರು ನೈಜ ಸ್ಥಳದ ಹಂಚಿಕೆಗೂ ವೈದ್ಯಕೀಯ ರಜೆಗೂ ಏನು ಸಂಬಂಧ? ಎಂದು ಪ್ರಶ್ನಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.