
3ನೇ ಮದುವೆಯಾದ ಐಎಎಸ್ ಅಧಿಕಾರಿ: ವಿಚ್ಛೇದಿತ ಪತ್ನಿಯರು ಈಗ ಜಿಲ್ಲಾಧಿಕಾರಿಗಳು!
ಚಿತ್ರ: ಎಕ್ಸ್
ಮಧ್ಯಪ್ರದೇಶ ಉದ್ಯೋಗ ಗ್ಯಾರಂಟಿ ಕೌನ್ಸಿಲ್‌ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಅವಿ ಪ್ರಸಾದ್ ಸದ್ಯ ಚರ್ಚೆಯ ವಿಷಯವಾಗಿದ್ದಾರೆ. ಅದು ಕೆಲಸ ಕಾರಣದಿಂದಲ್ಲ ಬದಲಾಗಿ ಮೂರನೇ ಮದುವೆಯಿಂದಾಗಿ.
ಅವಿ ಪ್ರಸಾದ್ ಫೆಬ್ರುವರಿ 11ರಂದು ಅಂಕಿತಾ ಧಾಕ್ರೆ ಅವರೊಂದಿಗೆ ಮದುವೆಯಾಗಿದ್ದಾರೆ. ಅಂಕಿತಾ 2017ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಸದ್ಯ ಅವರು ರಾಜ್ಯ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಕಿತಾ ಅವರ ತಂದೆ ರವೀಂದ್ರ ಸಿಂಗ್ ಧಾಕ್ರೆ ನಿವೃತ್ತ ಆಹಾರ ಅಧಿಕಾರಿ.
ಅಚ್ಚರಿ ಎಂದರೆ ಅವಿ ಪ್ರಸಾದ್ ಈ ಹಿಂದೆ ಮದುವೆಯಾಗಿರುವ ಇಬ್ಬರೂ ಐಎಎಸ್ ಅಧಿಕಾರಿಯಾಗಿದ್ದರು. ಇವರ ಮೊದಲ ಹೆಂಡತಿ ರಿಜು ಬಫ್ನಾ 2014ರ ಬ್ಯಾಚ್ ಅಧಿಕಾರಿಯಾಗಿದ್ದರು. ಈಗ ಇವರು ಶಾಜಾಪುರ ಜಿಲ್ಲಾಧಿಕಾರಿಯಾಗಿದ್ದಾರೆ. ಎರಡನೇ ಹೆಂಡತಿ ಮಿಶಾ ಸಿಂಗ್ ಅವರು 2016ರ ಬ್ಯಾಚ್‌ನವರಾಗಿದ್ದು, ಈಗ ಇವರು ರತ್ಲಮ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ. ಮದುವೆಯಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ಇವರುಗಳೊಂದಿಗಿನ ಸಂಬಂಧಕ್ಕೆ ಅವಿ ಪ್ರಸಾದ್ ಅಂತ್ಯ ಹಾಡಿದ್ದರು. ಈಗ ಮೂರನೇ ಬಾರಿಯೂ ಐಎಎಸ್ ಅಧಿಕಾರಿಯನ್ನು ಮದುವೆಯಾಗಿದ್ದಾರೆ.
ಉತ್ತರ ಪ್ರದೇಶದ ಸೀತಾಪುರದ ಅವಿ ಪ್ರಸಾದ್ 2014ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 13ನೇ ರ‍್ಯಾಂಕ್ ಪಡೆದು ಪಾಸಾಗಿದ್ದರು. ನಾಗರಿಕ ಸೇವೆಗಳಿಗೆ ಸೇರುವ ಮೊದಲು ಇವರು ರಿಸರ್ವ್ ಬ್ಯಾಂಕ್‌ನಲ್ಲಿ ಕಲೆಕ್ಟರ್ ಆಗಿ ಕೆಲಸ ಮಾಡಿದ್ದರು. ಅಪೌಷ್ಟಿಕತೆ ನಿವಾರಣೆಗೆ ಸಲಹೆ ಮತ್ತು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಇವರು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.