
ಪುಣೆ: ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಮುಂಬೈ– ಪುಣೆ ಎಕ್ಸ್‌ಪ್ರೆಸ್ ವೇನಲ್ಲಿ 30 ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ 8 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಉದ್ಯಮಿಯೊಬ್ಬರು ಪುಣೆ ತಲುಪಲು ಹೆದ್ದಾರಿ ಬಿಟ್ಟು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ.
ಪುಣೆ ಮೂಲದ ಉದ್ಯಮಿ ಸುಧೀರ್ ಮೆಹ್ತಾ ಎನ್ನುವವರು ಟ್ರಾಫಿಕ್‌ನಿಂದ ಪಾರಾಗಲು ಹೆಲಿಕಾಪ್ಟರ್ ಬಳಸಿದ್ದಾರೆ. ಈ ವಿಚಾರವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಎಲ್ಲೆಡೆ ಸುದ್ದಿಯಾಗಿದೆ.
ಮಂಗಳವಾರ ಸಂಜೆ ಟ್ಯಾಂಕರ್ ಅಪಘಾತದ ನಂತರ 30 ಗಂಟೆಗಳಿಗೂ ಹೆಚ್ಚು ಕಾಲ ಎಕ್ಸ್‌ಪ್ರೆಸ್‌ವೇನಲ್ಲಿ ಟ್ರಾಫಿಕ್ ಉಂಟಾಗಿತ್ತು. ವಾಹನದಿಂದ ಅನಿಲ ಸೋರಿಕೆಯಾದ ಕಾರಣ ಸುರಕ್ಷತಾ ಕಾರಣಗಳಿಗಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಹೆಲಿಕಾಪ್ಟರ್‌ನಲ್ಲಿ ಕುಳಿತಾಗ ಟ್ರಾಫಿಕ್ ಜಾಮ್ ಹೇಗೆ ಕಾಣುತ್ತದೆ ಎನ್ನುವ ಬಗ್ಗೆ ಫೋಟೊಗಳನ್ನು ಹಂಚಿಕೊಂಡಿರುವ ಅವರು, ಎಕ್ಸ್‌ಪ್ರೆಸ್ ವೇಗಳಲ್ಲಿ ಉಂಟಾಗುವ ಇಂತಹ ಕಠಿಣ ಸಂದರ್ಭಗಳಲ್ಲಿ ಪರ್ಯಾಯವಾಗಿ ತುರ್ತು ವ್ಯವಸ್ಥೆ ಇರುವುದು ಎಷ್ಟು ಅಗತ್ಯ ಎಂದು ತಿಳಿಸಿದ್ದಾರೆ.
ಸಾವಿರಾರು ಜನರು 18 ಗಂಟೆಗಳಿಂದ ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಅಂತಹ ಸ್ಥಳಗಳಿಂದ ಹೊರಬರುವ ಆಯ್ಕೆಯನ್ನು ಜನರು ಕಂಡುಕೊಳ್ಳಬೇಕು ಎಂದಿದ್ದಾರೆ.
‘₹10 ಲಕ್ಷಕ್ಕಿಂತ ಕಡಿಮೆ ವೆಚ್ಚದಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಬಹುದು. ಅಲ್ಲದೆ ಇದಕ್ಕೆ ಒಂದು ಎಕರೆಗಿಂತ ಕಡಿಮೆ ಜಾಗ ಸಾಕು. ಹೀಗಾಗಿ ಎಕ್ಸ್‌ಪ್ರೆಸ್ ವೇ ಬಳಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಿ ಇಂತಹ ತುರ್ತು ಸಂದರ್ಭಗಳಲ್ಲಿ ಹೊರಬರಲು ನೆರವಾಗುತ್ತದೆ’ ಎಂದು ಮೆಹ್ತಾ ಸಲಹೆ ನೀಡಿದ್ದಾರೆ.
ಇದೇ ವೇಳೆ ಪುಣೆಗೆ ಹಿಂತಿರುಗಲು ಸಹಾಯ ಮಾಡಿದ್ದಕ್ಕಾಗಿ ನಾಗರಿಕ ವಿಮಾನಯಾನದ ಹೆಲಿಕಾಪ್ಟರ್‌ಗಳ ಸಲಹೆಗಾರ ಮತ್ತು ವಾಯುಪಡೆಯ ನಿತಿನ್ ವೆಲ್ಡೆ ಅವರಿಗೆ ಮೆಹ್ತಾ ಧನ್ಯವಾದ ಅರ್ಪಿಸಿದರು.
ಸದ್ಯ 33 ಗಂಟೆಗಳ ಬಳಿಕ ಗುರುವಾರ ಬೆಳಿಗ್ಗೆ ಮುಂಬೈ –ಪುಣೆ ಎಕ್ಸ್‌ಪ್ರೆಸ್ ವೇನಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.