ADVERTISEMENT

ವಿಡಿಯೊ: ಅಂಗವಿಕಲ ಮುಸ್ಲಿಂ ಸಹಪಾಠಿಗೆ ನೆರವಾದ ಹಿಂದೂ ಸ್ನೇಹಿತೆಯರು, ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಏಪ್ರಿಲ್ 2022, 9:54 IST
Last Updated 8 ಏಪ್ರಿಲ್ 2022, 9:54 IST
ಅಲಿಫ್ ಮೊಹಮ್ಮದ್‌, ಆರ್ಯ ಮತ್ತು ಅರ್ಚನಾ (ಇನ್‌ಸ್ಟಾಗ್ರಾಮ್ ಚಿತ್ರ)
ಅಲಿಫ್ ಮೊಹಮ್ಮದ್‌, ಆರ್ಯ ಮತ್ತು ಅರ್ಚನಾ (ಇನ್‌ಸ್ಟಾಗ್ರಾಮ್ ಚಿತ್ರ)    

ತಿರುವನಂತಪುರ: ಅಂಗವಿಕಲಮುಸ್ಲಿಂ ವಿದ್ಯಾರ್ಥಿಯೊಬ್ಬರಿಗೆ ಆತನ ಸ್ನೇಹಿತೆಯರು ಸಹಾಯ ಮಾಡುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇವರೆಲ್ಲರೂ ಕೇರಳದ ಕೊಲ್ಲಂ ಜಿಲ್ಲೆಯ ಸಾಸ್ತಾಂಕೋಟಾದ ಡಿ.ಬಿ ಕಾಲೇಜಿನಲ್ಲಿ ಬಿಕಾಂ ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಾಗಿದ್ದಾರೆ. ಹುಟ್ಟಿನಿಂದಲೇ ಎರಡೂಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಅಲಿಫ್ ಮೊಹಮ್ಮದ್‌ಗೆ ಸ್ನೇಹಿತೆಯರಾದ ಆರ್ಯ ಮತ್ತು ಅರ್ಚನಾ ಸಹಾಯ ಮಾಡುತ್ತಿರುವ ದೃಶ್ಯ ಗಮನ ಸೆಳೆದಿದೆ. ಅಲಿಫ್‌ನನ್ನು ಸ್ನೇಹಿತೆಯರು ಹೆಗಲಿಗೆ ಹೆಗಲು ಕೊಟ್ಟು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯತ್ತಾರೆ. ಇವರ ನಡುವಿನ ಕಳಕಳಿ ಮೆಚ್ಚುಗೆಗೆ ಪಾತ್ರವಾಗಿದೆ.

ದೇಶದಲ್ಲಿ ಕೋಮು ದ್ವೇಷ ವ್ಯಾಪಿಸುತ್ತಿರುವ ಬೆನ್ನಲ್ಲೇ ಈ ಘಟನೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಎಂದರೆ ತಪ್ಪಲ್ಲ.

ADVERTISEMENT

‘ವಿಡಿಯೊ ಹಂಚಿಕೊಂಡ ಅಲಿಫ್’
ಈ ವಿಡಿಯೊವನ್ನು ಅಲಿಫ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲಿಫ್ ಮುಹಮ್ಮದ್‌ ತಂದೆ ತಾಯಿ ಇಬ್ಬರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಜೀನತ್ ಹಾಗೂ ತಂದೆ ಶಾನವಾಸ್ ವಿಡಿಯೊ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

‘ನನ್ನ ಜೀವನ ಯಾವಾಗಲೂ ನನ್ನ ಸ್ನೇಹಿತ ಜೊತೆಯಲ್ಲಿರುತ್ತದೆ. ನಾನು ನನ್ನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತೇನೆ. ಕಾಲೇಜಿನಲ್ಲಿ ಓಡಾಡಲು ಗೆಳೆಯರು –ಗೆಳತಿಯರು ನೆರವಾಗುತ್ತಾರೆ. ಇದು ನನ್ನ ಪ್ರತಿನಿತ್ಯದ ದಿನಚರಿಯಾಗಿದೆ. ಅವರು ಕೀಳರಿಮೆ ಕಾಣುವಂತೆ ಎಂದಿಗೂ ವರ್ತಿಸಿಲ್ಲ. ಸ್ನೇಹಿತರು ನನ್ನನ್ನು ಸಹಾನುಭೂತಿಯಿಂದ ನೋಡಿಲ್ಲ. ಅವರೆಲ್ಲ ನನ್ನನ್ನು ಸಾಮಾನ್ಯ ಹುಡುಗನಂತೆ ಪರಿಗಣಿಸುತ್ತಾರೆ. ನಾನು ಕೂಡ ಅದನ್ನೇ ಇಷ್ಟಪಡುತ್ತೇನೆ. ಈ ಚಿತ್ರ ನನಗೆ ತುಂಬಾ ಪ್ರಿಯವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಓದಿ...ಜನ ಏನಾದರೂ ಮಾತಾಡ್ತಾರೆ.. ಸುಪ್ರಿಯಾ ಜತೆಗಿನ ಸಂಭಾಷಣೆ ಬಗ್ಗೆ ತರೂರ್ ಹೇಳಿದ್ದೇನು?

‘ನನ್ನ ಜೀವನದಲ್ಲಿ ನಾನು ಇಷ್ಟು ಸಂತೋಷವನ್ನು ಅನುಭವಿಸಿದ್ದು ಇದೇ ಮೊದಲು. ಕಾಲೇಜ್ ಯೂನಿಯನ್ ವತಿಯಿಂದ ನಡೆದ ಕಲಾ ಉತ್ಸವಕ್ಕಾಗಿ ಅಲ್ಲಿಗೆ ಆಗಮಿಸಿದ ನನಗೆ ಮನಸಿಗೆ ತಟ್ಟುವ ದರ್ಶನವಾಯಿತು. ಇತರ ವಿದ್ಯಾರ್ಥಿಗಳಿಗೆ ಏನನ್ನೋ ತಿಳಿಸಬೇಕೆಂದು ಅಂದುಕೊಂಡಿದ್ದನ್ನು, ನಿರೀಕ್ಷಿಸಿದ್ದನ್ನು ಮೀರಿ ಇಂದು ಬಂದೆ. ಕೇರಳದ ಜನರು ತುಂಬು ಮನಸ್ಸಿನಿಂದ ಕೈಗೆತ್ತಿಕೊಂಡಾಗ, ಒಂದು ಚಿತ್ರಕ್ಕಿಂತ ಹೆಚ್ಚಾಗಿ ಬದಲಾಗುವ ಹೊಸ ಮಟ್ಟದ ಸ್ನೇಹವು ಹುಟ್ಟಿಕೊಂಡಿತು. ಇದಕ್ಕೆ ಅಂತಹ ಚಿತ್ರ ಹೇಗೆ ಸಿಕ್ಕಿತು ಮತ್ತು ಅದಕ್ಕೆ ಸ್ಫೂರ್ತಿ ಏನು ಎಂದು ಹಲವರು ಕೇಳುತ್ತಾರೆ. ಅವೆಲ್ಲದಕ್ಕೂ ಒಂದೇ ಉತ್ತರ. ನೀನೂ ನಾನೂ ಇಲ್ಲ ಅಲ್ಲವೇ?.. ಆ ಮೂರಕ್ಷರಗಳು ಕೊಟ್ಟ ಪ್ರೀತಿ, ಕಾಳಜಿ, ರಕ್ಷಣೆ ಪದಗಳಲ್ಲಿ ಹೇಳಲಾಗದು. ನನ್ನ ಒಂದು ಚಿತ್ರಕ್ಕೆ ಇಷ್ಟು ಪ್ರೀತಿ ತೋರಿದ ಎಲ್ಲರಿಗೂ ತುಂಬಾ ಧನ್ಯವಾದಗಳು’ ಎಂದು ವಿಡಿಯೊ ಚಿತ್ರೀಕರಿಸಿರುವ ಜಗತ್ ತುಳಸೀಧರನ್ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.