
ಸಾಂದರ್ಭಿಕ ಚಿತ್ರ
ಕೃಪೆ; ಜೆಮಿನಿ
ಫತೇಪುರ್: ‘ನಾಯಿ ಬೊಗಳಿದರೆ ದೇವಲೋಕ ಹಾಳಾದೀತೆ’ ಎಂಬ ಗಾದೆ ಮಾತನ್ನು ಎಲ್ಲರೂ ಕೇಳಿರುತ್ತೇವೆ. ನಿಜ, ನಾಯಿ ಬೊಗಳಿದರೆ, ಯಾರೂ ಸಹ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಇಲ್ಲೊಂದು ಪ್ರಕರಣದಲ್ಲಿ ನಾಯಿ ಬೊಗಳಿದ ಕಾರಣಕ್ಕೆ ವಿವಾಹವೇ ನಿಂತುಹೋಗಿರುವ ಘಟನೆಯೊಂದು ನಡೆದಿದೆ.
ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಸಂಭ್ರಮದ ವಿವಾಹ ಕಾರ್ಯಕ್ರಮವೊಂದು ಸಾಕುನಾಯಿ ಬೊಗಳಿದ ಕಾರಣಕ್ಕೆ ನಿಂತುಹೋಗಿದೆ. ನಾಯಿಯು ವಧು ಹಾಗೂ ವರ ಎರಡೂ ಕುಟುಂಬಗಳ ಘರ್ಷಣೆಗೆ ಕಾರಣವಾಗಿದೆ, ಈ ಘರ್ಷಣೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.
ಸುನಿಲ್ ಕುಮಾರ್ ಮತ್ತು ಸರೋಜ್ ಗುಪ್ತಾ ಎಂಬುವವರ ಮಗಳು ತಾನ್ಯಾ ಕೇಶರ್ವಾನಿ ಮತ್ತು ರಾಕೇಶ್ ಚಂದಾ ಮತ್ತು ಬಬ್ಲಿ ದೇವಿ ಅವರ ಮಗ ಸುಮಿತ್ ಇಬ್ಬರು ಪ್ರೀತಿಸಿ ಜನವರಿಯಲ್ಲಿ ವಿವಾಹವಾಗಿದ್ದರು. ಆದರೆ, ಕುಟುಂಬ ಸದಸ್ಯರು ಈ ಜೋಡಿಯ ಔಪಚಾರಿಕ ವಿವಾಹ ಕಾರ್ಯಕ್ರಮವನ್ನು ಫೆಬ್ರುವರಿ 18 ರಂದು ಫತೇಪುರ ಹಿಲ್ಲೆಯಲ್ಲಿ ಆಯೋಜನೆ ಮಾಡಿದ್ದರು.
ಆದರೆ, ಸುಗಮವಾಗಿ ನಡೆಯಬೇಕಿದ್ದ ವಿವಾಹ ಕಾರ್ಯಕ್ರಮವು ನಾಯಿಯಿಂದಾಗಿ ನಿಂತು ಹೋಗಿದೆ. ಮಾತ್ರವಲ್ಲ, ಉಭಯ ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ನಾಯಿಯಿಂದಾದ ಪ್ರಮಾದವೇನು?
ಮದುವೆ ದಿನ ಬೆಳಿಗ್ಗೆ 4 ಗಂಟೆ ಸುಮಾರಿಗೆ ಉಭಯ ಕುಟುಂಬ ಸದಸ್ಯರು ಹಾಗೂ ಬಂಧುಗಳು ಒಂದೆಡೆ ಸೇರಲು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ ವಧುವಿನ ಕುಟುಂಬದ ಸಾಕು ನಾಯಿ ಆಕ್ರಮಣಕಾರಿಯಾಗಿ ಬೊಗಳಲು ಪ್ರಾರಂಭಿಸಿದೆ. ಈ ವೇಳೆ, ವರನ ಕಡೆಯ ಯುವಕನೊಬ್ಬ ನಾಯಿಯನ್ನು ಹೊಡೆಯುತ್ತಾನೆ. ಈ ವೇಳೆ ನಾಯಿಗೆ ಹೊಡೆದಿದ್ದಕ್ಕೆ ವಧುವಿನ ಕಡೆಯವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಹೀಗೆ ಆರಂಭವಾದ ಘರ್ಷಣೆ ಮಾರಾಮಾರಿ ಹಂತ ತಲುಪುತ್ತದೆ. ಘರ್ಷಣೆಯ ವೇಳೆ, ಉಭಯ ಸಂಬಂಧಿಕರು ಸಿಕ್ಕ ಸಿಕ್ಕ ವಸ್ತುವಿನಿಂದ ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಮಹಿಳೆಯರು ಸೇರಿ ಕನಿಷ್ಠ 8 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳಿಕ ಉಭಯ ಕುಟುಂಬಸ್ಥರು ಖಾಗಾ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿ ಪೊಲೀಸರ ಸಮ್ಮುಖದಲ್ಲಿ ಮದುವೆಯನ್ನು ಅಧಿಕೃತವಾಗಿ ರದ್ದುಗೊಳಿಸಿದ್ದಾರೆ.
ಆದರೆ, ವಧು ತಾನ್ಯಾ ಅವರು ವಿವಾಹ ರದ್ಧತಿಯನ್ನು ನಿರಾಕರಿಸಿ, ಕುಟುಂಬ ಸದಸ್ಯರ ಜೊತೆ ಮಾತನಾಡಿದ ಬಳಿಕ ಪ್ರಯಾಗ್‌ರಾಜ್‌ನ ತಮ್ಮ ಮನೆಯಿಂದ ವರನ ಮನೆಗೆ ಬಂದಿದ್ದಾಳೆ. ಆ ಸಂದರ್ಭದಲ್ಲಿ, ಹುಡುಗನ ಮನೆಯವರು ಆಕೆಯನ್ನು ಮನೆಯಿಂದ ಹೊರಹೋಗುವಂತೆ ಹೇಳಿದ್ದಾರೆ. ಆದರೆ, ಯುವತಿಯು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಹರಿಬಿಟ್ಟು, ತಮ್ಮ ವಿವಾಹವು ಜನವರಿಯಲ್ಲೇ ಆಗಿರುವುದಾಗಿಯೂ, ಈಗ ನಡೆಯುತ್ತಿದ್ದದ್ದು ಔಪಚಾರಿಕ ವಿವಾಹ ಎಂಬುದಾಗಿಯೂ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.