
ಚಲಿಸುತ್ತಿದ್ದ ರೈಲಿನ ಮೇಲೇರಿ ಯುವಕನ ಹುಚ್ಚಾಟ: ನಡೆದೇ ಹೋಯಿತು ಹೈಡ್ರಾಮಾ!
ಬೆಂಗಳೂರು: ಅಪಾಯಕಾರಿ ಸಾಹಸ ಮಾಡಲು ಯುವಕನೊಬ್ಬ ಚಲಿಸುತ್ತಿದ್ದ ರೈಲು ಏರಿ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿದ್ದ ಪ್ರಸಂಗವೊಂದು ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದೆ.
ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಪ್ರತಾಪ್‌ಗಢದ ‘ಮಾ ಬೇಲ್ಹಾ ದೇವಿ ಧಾಮ್’ ರೈಲು ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ ನಿನ್ನೆ ಶನಿವಾರ ಸಂಜೆ 4.30ರ ಸುಮಾರು ನಡೆದಿದೆ.
ಆಗಿದ್ದೇನು?
ಅರೆಹುಚ್ಚ ಯುವಕನೊಬ್ಬ ಸಾಹಸ ಮಾಡುವ ಸಲುವಾಗಿ ಮಾ ಬೇಲ್ಹಾ ದೇವಿ ಧಾಮ್ ರೈಲು ನಿಲ್ದಾಣದ ಮೂಲಕ ನಿಧಾನವಾಗಿ ಸಾಗುತ್ತಿದ್ದ ಕಾಶಿ ವಿಶ್ವನಾಥ ಎಕ್ಸ್‌ಪ್ರೆಸ್ (ಲಖನೌ–ವಾರಾಣಸಿ) ರೈಲನ್ನು ಏರಿದ್ದಾನೆ. ಕೂಡಲೇ ರೈಲು ನಿಲ್ದಾಣದ ಸಿಬ್ಬಂದಿ ಎಚ್ಚೆತ್ತು ಹಾಗೂ ಅಲ್ಲಿದ್ದ ಜನ ಆತನಿಗೆ ಕೆಳಗಿಳಿಯಲು ಸೂಚಿಸಿದ್ದಾರೆ. ಆದರೆ ಆತ ಇಳಿದಿಲ್ಲ.
ಒವರ್‌ಹೆಡ್ ಹೈವೊಲ್ಟೇಜ್ ಕೇಬಲ್ ಕೆಳಗೆ ರೈಲಿನ ಮೇಲೆ ಅಡ್ಡಾಡುತ್ತಿದ್ದ ಯುವಕ ಮತ್ತೇನಾದರೂ ಅನಾಹುತ ಮಾಡುತ್ತಾನೇನೊ ಎಂದು ರೈಲ್ವೆ ಸಿಬ್ಬಂದಿ ಒವರ್‌ಹೆಡ್ ಹೈವೊಲ್ಟೇಜ್ ಕೇಬಲ್‌ನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.
ಆಗ ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ಧೈರ್ಯದಿಂದ ರೈಲು ಏರಿ, ಯುವಕನನ್ನು ಹಿಡಿಯಲು ಹೋಗಿದ್ದಾರೆ. ಆಗ ಸ್ಥಳದಲ್ಲಿ ಹೈಡ್ರಾಮಾವೇ ನಡೆದು ಹೋಗಿದೆ.
ಆ ಯುವಕನ್ನು ಹಿಡಿದು ಕೆಳಗೆ ಕರೆದೊಯ್ಯುವಾಗ ಯುವಕ ಪ್ರತಿರೋಧ ತೋರಿ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದನ್ನು ಕಂಡ ಕೆಳಗಿದ್ದ ಕೆಲವು ಜನವೂ ಸಹ ಬೋಗಿ ಮೇಲೆರಿ ಯುವಕನ್ನು ಚೆನ್ನಾಗಿ ಥಳಿಸಿ ಕೆಳಗೆ ಇಳಿಸಿದ್ದಾರೆ. ಕಡೆಗೆ ನಿತ್ರಾಣಗೊಂಡಿದ್ದ ಯುವಕನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ.
ರೈಲಿನ ಮೇಲೇರಿ ಹುಚ್ಚಾಟ ನಡೆಸಿದ ಯುವಕನ್ನು ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆ ಮೂಲದ 27 ವರ್ಷದ ಮೊಹಮ್ಮದ್ ಯೂನಸ್ ಎಂದು ಗುರುತಿಸಲಾಗಿದೆ.
ಮೊಹಮ್ಮದ್ ಯೂನಸ್ ಇತ್ತೀಚೆಗೆ ಮಾನಸಿಕವಾಗಿ ಅಸ್ವಸ್ಥನಾಗಿದ್ದಾಗಿ ಗುರುತಿಸಿಕೊಂಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ ಎಂದು ಉತ್ತರ ಪ್ರದೇಶದ ಜಿಆರ್‌ಪಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಆಜ್‌ತಕ್ ವಾಹಿನಿ ವರದಿ ಮಾಡಿದೆ. ಎಕ್ಸ್ ಹಾಗೂ ಫೇಸ್‌ಬುಕ್‌ನಲ್ಲಿ ಹಲವರು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.