ADVERTISEMENT

Tailoring: ರವಿಕೆ ಹೊಲಿಯುವವರೇ ಜೋಕೆ!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 0:30 IST
Last Updated 8 ನವೆಂಬರ್ 2025, 0:30 IST
   

‘ಟೈಮ್‌ಗೆ ಸರಿಯಾಗಿ ಬ್ಲೌಸ್‌ ಹೊಲಿದುಕೊಡುವವರು ಯಾರಾದರೂ ಇದ್ದರೆ ತಿಳಿಸಿ ಪ್ಲೀಸ್‌...’

ಹಬ್ಬ, ಮದುವೆ, ಮುಂಜಿಯಂತಹ ಸಮಾರಂಭಗಳು ಹತ್ತಿರ ಇರುವಾಗ ಹೆಣ್ಣುಮಕ್ಕಳು ಹೀಗೆ ಸ್ನೇಹಿತರು, ಸಂಬಂಧಿಕರೊಂದಿಗೆ ಅಲವತ್ತುಕೊಳ್ಳುವುದು ಸಾಮಾನ್ಯ ಸಂಗತಿ. ಹೊಸ ಸೀರೆಗೆ ಸಕಾಲದಲ್ಲಿ ಬ್ಲೌಸ್‌ ಹೊಲಿದು ಕೊಡುವವರನ್ನು ಹುಡುಕುವುದೇ ಹಲವರಿಗೆ ಒಂದು ಸವಾಲು.

‘ಮೂಗಿಗಿಂತ ಮೂಗುತಿ ಭಾರ’ ಎನ್ನುವಂತೆ, ಸೀರೆಗಿಂತ ಬ್ಲೌಸ್‌ ಹೊಲಿಸುವ ಕೂಲಿಯೇ ಹೆಚ್ಚಾಗಿರುವ ಕಾಲ ಇದು. ಆದರೂ ಹೇಳಿದಂತೆ ಹೊಲಿಯುವುದಿಲ್ಲ, ಹೇಳಿದ ಸಮಯಕ್ಕೆ ಕೊಡುವುದಿಲ್ಲ ಎಂದು ಗೊಣಗಾಡದ ಹೆಂಗಳೆಯರೇ ಇಲ್ಲವೇನೊ ಅನ್ನುವಷ್ಟರ ಮಟ್ಟಿಗೆ ನಮ್ಮ ಟೇಲರಣ್ಣಂದಿರು (ಟೇಲರಕ್ಕಂದಿರು) ಫೇಮಸ್ಸು! ಹೆಂಗಳೆಯರನ್ನು ತಮ್ಮ ಅಂಗಡಿಗೆ ಅಲೆದಾಡಿಸಿ ಕಾಡಿಸುವುದರಲ್ಲಿ ಅವರು ನಿಸ್ಸೀಮರು.

ADVERTISEMENT

ಆದರೆ ಗುಜರಾತ್‌ನ ಪೂನಂ ಬೆನ್‌ ಮಾತ್ರ, ತಮ್ಮ ಬೆನ್ನು ಅಲಂಕರಿಸಬೇಕಿದ್ದ ಬ್ಲೌಸ್‌ ಸರಿಯಾದ ಸಮಯಕ್ಕೆ ಸಿಗದೇ ಹೋದಾಗ, ಟೇಲರಣ್ಣನ ಬೆನ್ನು ಹತ್ತಿ, ಶಿಕ್ಷೆ ಕೊಡಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಅತಿ ಹತ್ತಿರದ ಬಂಧುವೊಬ್ಬರ ಮದುವೆಯಲ್ಲಿ ತೊಡಲು ಪೂನಂ ಆಸೆಯಿಂದ ಖರೀದಿಸಿದ್ದ ಸೀರೆಗೆ ಬ್ಲೌಸ್‌ ಹೊಲಿಸಲು ಡಿಸೈನರ್‌ ವೇರ್‌ ಒಂದಕ್ಕೆ ತೆರಳಿದ್ದರು. ಅಲ್ಲಿ ಅದಕ್ಕಾಗಿ ₹ 4,395 ಮುಂಗಡವನ್ನೂ ನೀಡಿದ್ದರು. ಕಡೆಗೆ ಟೇಲರ್‌ ಹೇಳಿದ್ದ ದಿನ ಬ್ಲೌಸ್‌ ಪಡೆಯಲು ಹೋದ ಅವರಿಗೆ ಆಘಾತ ಕಾದಿತ್ತು. ಆ ಬ್ಲೌಸ್‌ ಅವರು ಹೇಳಿದ ವಿನ್ಯಾಸದಲ್ಲಿ ಇರಲಿಲ್ಲ ಮಾತ್ರವಲ್ಲ, ಕೆಲವೆಡೆ ಕಲೆಯೂ ಆಗಿಹೋಗಿತ್ತು. ಆಗ ಏನೋ ಒಂದು ಸಬೂಬು ಹೇಳಿದ್ದ ಟೇಲರ್‌, ಎಲ್ಲವನ್ನೂ ಸರಿಪಡಿಸಿ ಮದುವೆಗೆ ಇನ್ನು ಹತ್ತು ದಿನ ಮುಂಚಿತವಾಗಿಯೇ ಕೊಡುವುದಾಗಿ ಹೇಳಿ ಕಳಿಸಿದ್ದರು. ಆದರೆ ಮದುವೆಯ ದಿನ ಬಂದರೂ ಆ ಬ್ಲೌಸ್‌ ಮಾತ್ರ ಪೂನಂ ಕೈಸೇರಲೇ ಇಲ್ಲ. ವಿಧಿಯಿಲ್ಲದೆ ಬೇರೆ ಸೀರೆ ತೊಟ್ಟು ಮದುವೆಯಲ್ಲಿ ಪಾಲ್ಗೊಂಡ ಆಕೆ, ನಂತರ ಬಂದು ಮುಂಗಡ ಹಣ ವಾಪಸ್‌ ಕೊಡುವಂತೆ ಕೇಳಿದ್ದರು. ಅದಕ್ಕೆ ನಿರಾಕರಿಸಿದ ಟೇಲರ್‌, ಬೇಕಿದ್ದರೆ ಹೇಗಿದೆಯೋ ಹಾಗೇ ಬ್ಲೌಸ್‌ ತೆಗೆದುಕೊಂಡು ಹೋಗಿ ಎಂದು ಖಡಕ್ಕಾಗಿ ಹೇಳಿಬಿಟ್ಟರು.

ಸಿಟ್ಟಿಗೆದ್ದ ಪೂನಂ ಸೀದಾ ಹೋಗಿ ‘ಅಹಮದಾಬಾದ್‌ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ’ದ ಬಾಗಿಲು ಬಡಿದರು. ಆರಂಭದಲ್ಲಿ ಟೇಲರ್‌ ಹಾಜರಾಗ‌ದಿದ್ದರೂ ವಿಚಾರಣೆಯನ್ನು ಮುಂದುವರಿಸಿದ ಆಯೋಗ, ಆತನ ಸೇವಾ ವೈಫಲ್ಯವನ್ನು ಗುರುತಿಸಿತು. ಅಲ್ಲದೆ ಅದಕ್ಕಾಗಿ ಪೂನಂ ಅವರಿಗೆ ಆದ ಮಾನಸಿಕ ಕಿರುಕುಳವನ್ನೂ ಪರಿಗಣಿಸಿ ಅವರ ಪರವಾಗಿ ತೀರ್ಪಿತ್ತಿತು.

4,395 ಮುಂಗಡ ಹಣವನ್ನು ವಾರ್ಷಿಕ ಶೇ 7ರಷ್ಟು ಬಡ್ಡಿಯೊಂದಿಗೆ 45 ದಿನಗಳೊಳಗೆ ಪಾವತಿಸಬೇಕು, ಮಾನಸಿಕ ಕಿರುಕುಳಕ್ಕಾಗಿ ₹ 2,000 ದಂಡ ಮತ್ತು ಆಯೋಗಕ್ಕೆ ಎಡತಾಕಲು ಮಾಡಿದ ಖರ್ಚು ₹ 2,000 ಸೇರಿ ಒಟ್ಟು 11,500 ರೂಪಾಯಿಯನ್ನು ಪೂನಂ ಅವರಿಗೆ ತೆರಬೇಕು ಎಂದು ಟೇಲರ್‌ಗೆ ಸೂಚಿಸಿತು. 

‘ಹಣ ವಸೂಲು ಮಾಡುವುದಷ್ಟೇ ನನ್ನ ಉದ್ದೇಶ ಆಗಿರಲಿಲ್ಲ, ನ್ಯಾಯವನ್ನು ಎತ್ತಿ ಹಿಡಿಯಬೇಕಿತ್ತು. ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುವುದು ಸರಿಯಲ್ಲ. ನನಗೀಗ ಸಮಾಧಾನ ಆಗಿದೆ. ಈ ಪ್ರಕರಣ ದಿಂದ ಇತರರೂ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಹೊಂದು ವಂತೆ ಆಗಬೇಕು’ ಎಂದಿದ್ದಾರೆ ಪೂನಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.