ADVERTISEMENT

'ವರ್ಕ್ ಫ್ರಮ್ ಹೋಮ್' ನಂತರದ ಹೊಸ ಸವಾಲು: ಮುಗಿಯಿತು ‘ಮನೆವಾಸ’ ಮತ್ತದೇ ಧಾವಂತ...

ಸುಶೀಲಾ ಡೋಣೂರ
Published 3 ಡಿಸೆಂಬರ್ 2021, 19:30 IST
Last Updated 3 ಡಿಸೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಒಂದೂವರೆ ವರ್ಷದ ಮನೆವಾಸ ಮುಗಿಸಿ ಮತ್ತದೇ ಧಾವಂತದ ಬದುಕಿಗೆ ಮರಳಿದ್ದಾರೆ ಮಹಿಳೆಯರು. ಅವವೇ ಸಮಸ್ಯೆಗಳು ಹೊಸ ಮುಖವಾಡ ಧರಿಸಿ ಎದುರು ನಿಂತಿವೆ. ಹಿಂದಿದ್ದಷ್ಟು ಆಯ್ಕೆ-ಅನುಕೂಲಗಳೂ ಈಗಿಲ್ಲ. ‘ವರ್ಕ್ ಫ್ರಮ್ ಹೋಮ್’ ನಂತರದ ಹೊಸ ಸವಾಲುಗಳನ್ನು ಎದುರುಗೊಳ್ಳುವ ಬಗೆ ಹೇಗೆ ಎನ್ನುವ ಕಳವಳ ಶುರುವಾಗಿದೆ...

***

ಬದಲಾವಣೆಗಳು ಎಲ್ಲಿಂದಲೇ ಆರಂಭವಾಗಲಿ, ಅವು ಮೊಟ್ಟಮೊದಲು ನಮ್ಮದೇ ಬಾಗಿಲು ತಟ್ಟುತ್ತವೇನೊ. ಸಮಾಜ, ಕುಟುಂಬ, ವ್ಯವಸ್ಥೆ... ಎಲ್ಲಾ ಬದಲಾವಣೆಗೂ ಮೊದಲು ಹೈರಾಣಾಗುವುದು ನಾವೇ, ಹೆಣ್ಣುಮಕ್ಕಳು. ಕೋವಿಡ್‌ ತಂದಿಟ್ಟ ಅವಾಂತರಗಳಿಗೆ ಅತಿಹೆಚ್ಚು ಈಡಾಗಿದ್ದೂ ನಾವೇ. ಲಾಕ್‌ಡೌನ್‌, ವರ್ಕ್‌ ಫ್ರಮ್‌ ಹೋಮ್‌ನಂತಹ ಪರ್ವಕಾಲಕ್ಕೆ ಒಗ್ಗಿಕೊಳ್ಳುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಹೇಗೊ ಆ ಜೀವನಕ್ರಮಕ್ಕೆ ಹೊಂದಿಕೊಂಡೆವು ಎನ್ನುವಾಗ ಇದೀಗ, ಮತ್ತದೇ ಧಾವಂತದ ಬದುಕಿಗೆ ಹೊರಳಬೇಕಿದೆ... ಈ ‘ನ್ಯೂ ನಾರ್ಮಲ್‌’ ಬದುಕಿನ ಮತ್ತೊಂದು ಮಜಲನ್ನು ಪರಿಚಯಿಸುತ್ತಿದೆ...

ADVERTISEMENT

ಎರಡು ನವಮಾಸಗಳನ್ನು (ಹದಿನೆಂಟು ತಿಂಗಳು) ಮನೆವಾಸದಲ್ಲಿ ಕಳೆದು, ಕಳೆದ ವಾರವಷ್ಟೇ ಮತ್ತೆ ಕಚೇರಿಗೆ ಹಿಂದಿರುಗಿದ ಬೆಂಗಳೂರಿನ ಪ್ರಜ್ಞಾ ಅವರ ದೂರು ದುಮ್ಮಾನಗಳಿವು.

ಮೊದಮೊದಲು ಕೆಲ ದಿನಗಳ ಲಾಕ್‌ಡೌನ್‌ ಎಂದಾಗ, ಕಚೇರಿ–ಮನೆಯ ನಡುವೆ ಅಡ್ಡಾಡಿ, ದುಡಿದು ಹೈರಾಣಾಗಿದ್ದ ಮನಕ್ಕೆ ಮನೆಯಲ್ಲಿಯೇ ಇರುವ ಸುಖ ಪುಳಕ ನೀಡಿತ್ತು. ಆದರೆ ವರ್ಷಗಳಾದರೂ ಈ ಮನೆವಾಸ ಮುಗಿಯದೇ ಹೋದಾಗ ದುಡಿಯುವ ಹೆಣ್ಣುಮಕ್ಕಳ ದಿನಗಳು ಭಾರವಾಗುತ್ತ ಹೋದವು.ತಮಗಿರುವ ಅದೇ ಇಪ್ಪತ್ತನಾಲ್ಕು ಗಂಟೆಗಳನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು, ಅರ್ಧ ಭಾಗವನ್ನು ಕಚೇರಿಗೂ, ಇನ್ನರ್ಧ ಭಾಗವನ್ನು ಮನೆಗೂ ಹಂಚಿ, ಈ ಎರಡರ ನಡುವೆ ತಮಗಾಗಿ ಸಿಗುವ ಅಪರೂಪದ ಕ್ಷಣಗಳಿಗಾಗಿ ಹಲಬುತ್ತ ಹೇಗೊ ನಡೆಯುತ್ತಿದ್ದರು. ತಮ್ಮ ಕಚೇರಿ, ಗಂಡನ ನೌಕರಿ, ಮಕ್ಕಳ ಶಾಲೆ ಎಲ್ಲವೂ ಮನೆಗೇ ಬಂದು ಕೂತಾಗ, ಚಿತ್ರಾನ್ನದಲ್ಲಿ ಕೇಸರಿಬಾತು ಸೇರಿಕೊಂಡಂತೆ ಗಲಿಬಿಲಿಗೊಂಡವರೇ ಹೆಚ್ಚು. ಸಮಯ ಹೊಂದಿಸಲಾರದೇ ಹತಾಶೆಗೊಳಗಾದವರೇನೂ ಕಡಿಮೆ ಇಲ್ಲ.

ಶಾಲೆ, ಆಟೋಟಗಳಿಲ್ಲದ ಮಕ್ಕಳ ಹಟ–ರಗಳೆಗಳನ್ನು, ಸಾಮಾಜಿಕ ಬದುಕಿನಿಂದ ವಂಚಿತರಾದ ಗಂಡನ ದುಗುಡ–ದುಮ್ಮಾನಗಳನ್ನು, ಕಚೇರಿ ಕೆಲಸಗಳ ಒತ್ತಡಗಳನ್ನು ಏಕಕಾಲಕ್ಕೆ ಎದುರಿಸುತ್ತ; ತಾಸಿಗೊಮ್ಮೆ ಅಡುಗೆ ಮನೆಗೂ–ಕಂಪ್ಯೂಟರ್‌ ರೂಮಿಗೂ ಓಡಾಡುತ್ತ; ಅಲ್ಲಿ ಈರುಳ್ಳಿ ಹೆಚ್ಚಿಟ್ಟು ಬಂದು ಇಲ್ಲಿ ಕೀಬೋರ್ಡ್‌ ಕುಟ್ಟುವುದು, ಇಲ್ಲಿ ಫೈಲುಗಳ ಮೇಲೆ ಕಣ್ಣಾಡಿಸುತ್ತ, ಕುಕ್ಕರ್‌ ವಿಸಿಲ್‌ಗೆ ಕಿವಿಗೊಡುವುದು, ಕೆಲಸದ ವಾಟ್ಸ್ಆ್ಯಪ್‌ ಸಂದೇಶಗಳಿಗೆ ಉತ್ತರಿಸುತ್ತ ಬೆಳ್ಳುಳ್ಳಿ ಸುಲಿಯುವುದು, ಈಮೇಲ್‌ಗಳಿಗೆ ರಿಪ್ಲೈ ಮಾಡುತ್ತ ತರಕಾರಿ ಹೆಚ್ಚಿಕೊಳ್ಳುವುದು, ಮಕ್ಕಳನ್ನು ಕಣ್ಣಲ್ಲೇ ಗದರಿಸಿ ರೂಮಿನಿಂದ ಆಚೆಗಟ್ಟುತ್ತ ಝೂಮ್‌ ಮೀಟಿಂಗ್‌ನಲ್ಲಿ ಪಾಲ್ಗೊಳ್ಳುವುದು... ಇಂತೆಲ್ಲಾ ಬದುಕಿನ ಹೊಸ ಮುಖಗಳಿಗೆ ತಕ್ಕಮಟ್ಟಿಗೆ ಪರಿಚಿತರಾಗಿ ನಿಟ್ಟುಸಿರು ಬಿಡುವ ಹೊತ್ತು ಇದೀಗ ಮತ್ತೊಂದು ಮಹಾಪರ್ವಕ್ಕೆ ಅಣಿಯಾಗಬೇಕಿದೆ.

ಹಳೇ ಸಮಸ್ಯೆ, ಹೊಸ ಸವಾಲು
ಮತ್ತೆ ಅವೇ ಸವಾಲುಗಳು ಹೊಸ ಮುಖವಾಡ ಧರಿಸಿ ಎದುರು ಬರುತ್ತಿವೆ. ಸಮಸ್ಯೆ ಅವೇ ಆದರೂ ಬಗೆಹರಿಸಿಕೊಳ್ಳುವ ಮಾರ್ಗಗಳು ಇನ್ನಷ್ಟು ಜಟಿಲವಾಗಿವೆ. ಆಯ್ಕೆಗಳೂ ಹಿಂದೆಂದಿಗಿಂತ ಕಡಿಮೆ ಇವೆ. ಸಣ್ಣಮಕ್ಕಳನ್ನು ನೋಡಿಕೊಳ್ಳಲು ಮೊದಲಾದರೆ ಬೀದಿಗೊಂದರಂತೆ ಡೇಕೇರ್‌ಗಳಿದ್ದವು. ನಮ್ಮದೇ ಮನೆಯ ಅನುಕೂಲದಲ್ಲಿ ಮಕ್ಕಳನ್ನು, ಹಿರಿಯರನ್ನು ನೋಡಿಕೊಳ್ಳಲು ಆಯಾಗಳು ಸಿಗುತ್ತಿದ್ದರು. ಮನೆ ಸಹಾಯಕರ ತಾಪತ್ರಯವೂ ಅಷ್ಟಿರಲಿಲ್ಲ. ಆದರೆ, ಈಗ ತುಟ್ಟಿಯಾದ ಡೇಕೇರ್‌ಗಳು, ಸುರಕ್ಷತೆಯ ಭಯ, ಮನೆಗೆಲಸಕ್ಕೆ ಹೆಣ್ಣುಮಕ್ಕಳು ಸಿಗುತ್ತಿಲ್ಲ, ಆಯಾಗಳೂ ದುಬಾರಿಯಾಗಿದ್ದಾರೆ. ಇಂತೆಲ್ಲಾ ಹೆಚ್ಚಿದ ಖರ್ಚುಗಳ ನಡುವೆ ಸಂಬಳ ಕಡಿತದ ಬರೆ ಬೇರೆ.

“ಹೌದು, ದೀರ್ಘಾವಧಿಯ ವರ್ಕ್‌ಫ್ರಮ್‌ ಹೋಮ್‌, ಸಂಬಳ ಕಡಿತ, ಮಕ್ಕಳ ಆನ್‌ಲೈನ್ ತರಗತಿಗಳು, ಅನಾರೋಗ್ಯ ದುಡಿಯುವ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಭಾರಿ ಪ್ರಭಾವ ಬೀರಿವೆ. ಅವರ ಜೀವನ, ಮನೆ, ಮನಸ್ಸು, ಆರೋಗ್ಯ, ದೇಹತೂಕ ಸುಸ್ಥಿತಿಗೆ ಬರಲು ಸಾಕಷ್ಟು ಸಮಯ ಬೇಕು” ಎನ್ನುತ್ತಾರೆ ಆಪ್ತಸಲಹೆಗಾರರಾದ ಡಾ. ಶಾಂತಾನಾಗರಾಜ್.

“ದುಡಿಯುವ ಮಹಿಳೆಯರ ದಿನಗಳು ಸುಲಲಿತವಾಗಲು ಜೀವನವಿಧಾನವನ್ನು ಸುಲಭಗೊಳಿಸಿಕೊಳ್ಳಬೇಕು” ಎನ್ನುವ ಅವರು ಅದಕ್ಕಾಗಿ ಕೆಲವು ಉಪಾಯಗಳನ್ನು ನೀಡುತ್ತಾರೆ–

ಜವಾಬ್ದಾರಿ ಹಂಚಿಕೊಳ್ಳಿ
ಎಲ್ಲವನ್ನೂ ಒಬ್ಬರೇ ನಿಭಾಯಿಸುತ್ತ ಸೂಪರ್ ವುಮನ್ ಆಗುವ ತರಾತುರಿ ಬೇಡ. ಮನೆಯ ಎಲ್ಲಾ ಸದಸ್ಯರಿಗೂ ಅವರವರ ಜವಾಬ್ದಾರಿಗಳ ಅರಿವು ಮಾಡಿಸಿ. ಮುಖ್ಯವಾಗಿ ಗಂಡನಿಗೆ ಅವರ ಹೊಣೆಗಾರಿಕೆಗಳ ಮನವರಿಕೆ ಮಾಡಿ. ಮಕ್ಕಳಿಗೂ ಕೆಲಸ ಕಲಿಸಿ.

ಮನೆಯವರ ನೆರವು ಪಡೆಯರಿ
ಅತ್ತೆ-ಮಾವ, ಸೋದರತ್ತೆ, ಅಕ್ಕ, ದೊಡ್ಡಮ್ಮ, ಚಿಕ್ಕಮ್ಮ... ಯಾರೇ ಆಗಿರಲಿ ನಿಮ್ಮ ನೆರವಿಗೆ ಬರಬಲ್ಲವರಾದರೆ ಬಿಗುಮಾನ ಬದಿಗಿಟ್ಟು ಅವರ ಸಹಾಯಕ್ಕೆ ಕೈಚಾಚಿ. ಅದಕ್ಕೆ ಪ್ರತಿಯಾಗಿ ಅವರಿಗೆ ಸಣ್ಣಪುಟ್ಟ ಅನುಕೂಲಗಳನ್ನು ಒದಗಿಸಿಕೊಡಿ.

ಅತೀಶಿಸ್ತು ಮುಖ್ಯವಲ್ಲ
ಮನೆ ಹೊಳೆಯುತಿರಬೇಕು ಎನ್ನುವ ಹಟ ಬೇಡ. ಮನೆಗಿಂತ ಮನಸು ಸ್ವಚ್ಚವಾಗಿರುವುದು, ಉಲ್ಲಾಸದಿಂದಿರುವುದು ಮುಖ್ಯ. ಮನೆಯನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸಿದರೂ ಆಗುತ್ತದೆ.

ಅಡುಗೆ ಸರಳವಾಗಿರಲಿ
ಪ್ರತಿದಿನ ಇಂಥದ್ದೇ ಅಡುಗೆ ಇರಬೇಕು. ಗಂಡನಿಗೆ ಚಪಾತಿ ಇಷ್ಟ, ಮಕ್ಕಳಿಗೆ ದೋಸೆ ಎಂದು ಶ್ರಮಿಸಬೇಡಿ. ಸರಳ, ಸುಲಭವಾಗಿ ತಯಾರಾಗುವ ಆಹಾರಕ್ಕೆ ಆದ್ಯತೆ ನೀಡಿ. ಈಗಂತೂ ಮಾರುಕಟ್ಟೆಯಲ್ಲಿ ಸಾಕಷ್ಟು ‘ರೆಡಿ ಟು ಈಟ್’ ಪ್ಯಾಕೇಟುಗಳು ಸಿಗುತ್ತವೆ. ಅನಿವಾರ್ಯಕ್ಕೆ, ಅವಸರಕ್ಕೆ ಅವುಗಳ ಸಹಾಯ ಪಡೆಯಬಹುದು.

ಅಮ್ಮಂದಿರ ಸಮೂಹ ಕಟ್ಟಿ
ಒಂದೇ ಕಂಪನಿಯಲ್ಲಿ ದುಡಿಯುವ ಅಥವಾ ಒಂದೇ ಸಮುಚ್ಚಯದಲ್ಲಿ ವಾಸಿಸುವ ನಾಲ್ಕೈದು ಅಮ್ಮಂದಿರು ಸೇರಿ ಮಕ್ಕಳಿಗೆ ಒಂದೇ ಕಡೆ ಪಾಲನೆಯ ವ್ಯವಸ್ಥೆ ಮಾಡಬಹುದು. ಒಬ್ಬರು ಸಹಾಯಕರನ್ನು ನೇಮಿಸಿ, ಒಂದು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಮಕ್ಕಳನ್ನು ಇರಿಸುವ ವ್ಯವಸ್ಥೆ ಮಾಡಿದರೆ ಖರ್ಚೂ ಕಡಿಮೆ, ಆತಂಕವೂ ಕಡಿಮೆ.

***

ಮಕ್ಕಳ ಪೋಷಣೆ ಸವಾಲು
ಈ ಕೊರೊನಾ ಕಾಲದಲ್ಲಿ ಮಕ್ಕಳ ಪಾಲನೆಯೂ ಅಷ್ಟೇ ಕಷ್ಟಕರವಾಗಿದೆ. 18–20 ತಿಂಗಳ ಕಾಲ ಅಮ್ಮನ ಮಡಿಲಿಗಂಟಿಕೊಂಡೇ ಕಳೆದ ಮಕ್ಕಳು, ಈಗ ಅವಳನ್ನು ಕಚೇರಿಗೆ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಅವಳಿಗೊ ಕೈಯಲ್ಲಿರುವ ಕೆಲಸವನ್ನು ಉಳಿಸಿಕೊಳ್ಳುವ ಜೊತೆಗೆ ಮಕ್ಕಳನ್ನು ನೋಡಿಕೊಳ್ಳುವುದು ಸವಾಲಾಗಿದೆ. ಆದರೆ, ಗಂಡ–ಹೆಂಡತಿ ಹಾಗೂ ಹಿರಿಯರು ಕೂಡಿ ಕಾರ್ಯತಂತ್ರ ರೂಪಿಸಿದರೆ ಇದೇನೂ ಗೆಲ್ಲಲಾರದ ಯುದ್ಧವಲ್ಲ. ಮನೆಯಲ್ಲಿ ಅಮ್ಮನಿಲ್ಲದ ವಾತಾವರಣಕ್ಕೆ ಮಕ್ಕಳನ್ನು ಮಾನಸಿಕವಾಗಿ ಸಿದ್ಧಗೊಳಿಸಿ. ನೀವು ಕೆಲಸಕ್ಕೆ ಹೋಗುವುದು ಎಷ್ಟು ಅನಿವಾರ್ಯ ಎನ್ನುವುದನ್ನು ಮಕ್ಕಳಿಗೆ ಪ್ರೀತಿಯಿಂದ ಮನದಟ್ಟು ಮಾಡಿ. ಅವಕಾಶವಿದ್ದರೆ ವಾರದಲ್ಲಿ ಒಂದೆರಡು ದಿನ ಮನೆಯಿಂದಲೇ ಕೆಲಸ ನಿರ್ವಹಿಸಿ.ರಜೆಗಳನ್ನು ಮಕ್ಕಳೊಂದಿಗೇ ಕಳೆಯಬೇಕು.
–ಡಿ. ಯಶೋಧಾ, ಆಪ್ತಸಮಾಲೋಚಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.