ಬಹುತೇಕ ದಂಪತಿ ‘ಕುಟುಂಬ ಯೋಜನೆ’ಯ ವಿಷಯದಲ್ಲಿ ಎಡವುತ್ತಾರೆ. ಕೈಗೂಸಿರುವಾಗಲೇ ಮತ್ತೊಮ್ಮೆ ಗರ್ಭ ಧರಿಸುವುದು, ಶಿಶು ‘ಕೈಗೆ ದಕ್ಕಿತು’ ಎನ್ನುವುದು ಖಾತರಿಯಾಗುವ ಮೊದಲೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ (ವ್ಯಾಸೆಕ್ಟಮಿ) ಮುಂದಾಗಿ, ಬಳಿಕ ಪರಿತಪಿಸುವಂತಹ ಸಂದರ್ಭಗಳು ಎದುರಾಗುವುದು ಸಾಮಾನ್ಯ ಎಂಬಂತಾಗಿದೆ. ಸೂಕ್ತ ಅರಿವು ಹೊಂದುವುದೇ ಇದಕ್ಕೆಲ್ಲ ಪರಿಹಾರ ಎನ್ನುತ್ತಾರೆ ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್. ಭಟ್.
ಆಹಾರ, ನಿದ್ರೆ ಹಾಗೂ ಮೈಥುನವು ಪ್ರಾಣಿ ಮತ್ತು ಮನುಷ್ಯರಿಗೆಲ್ಲರಿಗೂ ಸಾಮಾನ್ಯವಾದ ಸಂಗತಿಗಳು. ಆದರೆ ಮಾನವ ತನ್ನ ಬುದ್ಧಿವಂತಿಕೆ ಹಾಗೂ ಸಂಯಮದಿಂದ ಸಂತಾನೋತ್ಪತ್ತಿ, ಲೈಂಗಿಕ ಕ್ರಿಯೆ ಎಲ್ಲದರ ಮೇಲೂ ನಿಯಂತ್ರಣ ಸಾಧಿಸಲು ಸಾಧ್ಯವಿರುವುದರಿಂದ, ಆತನಲ್ಲಿ ಸಂತಾನೋತ್ಪತ್ತಿಯು ಆಯ್ಕೆಯ ಪ್ರಕ್ರಿಯೆ ಆಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಎಡವಿದರೆ, ಬೇಡವಾದ ಸಂದರ್ಭದಲ್ಲಿ ಗರ್ಭ ಧರಿಸುವ ಅನಿವಾರ್ಯ ಸ್ಥಿತಿ ಎದುರಾಗುತ್ತದೆ.
ಆದರೆ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಸಹಜ ಸಂತಾನೋತ್ಪತ್ತಿ ಕ್ರಿಯೆ, ನಿಯಂತ್ರಣ ಕ್ರಮಗಳು ಮತ್ತು ಈ ದಿಸೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಸೂಕ್ತ ಮಾಹಿತಿ ಮತ್ತು ಅಗತ್ಯ ಅರಿವು ಹೆಚ್ಚಿನವರಿಗೆ ಇರುವುದಿಲ್ಲ. ಎಷ್ಟೋ ಮಹಿಳೆಯರು ಒಂದು ಮಗುವಿಗೆ ಜನ್ಮ ನೀಡಿದ ಬಳಿಕ, ತಮಗೆ ಇನ್ನೊಂದು ಮಗು ಸದ್ಯಕ್ಕೆ ಬೇಡ ಎಂದುಕೊಳ್ಳುತ್ತಿರುವಾಗಲೇ ಮತ್ತೊಮ್ಮೆ ಗರ್ಭ ಧರಿಸಿಬಿಟ್ಟಿರುತ್ತಾರೆ. ಆಗ ‘ಅಯ್ಯೋ ನಮಗೆ ಬೇಡವಾಗಿತ್ತು, ನಾವು ಜಾಗರೂಕತೆಯಿಂದ ಇದ್ದರೂ ಹೇಗೋ ಗರ್ಭ ನಿಂತುಬಿಟ್ಟಿದೆ’ ಎಂದು ಹಲುಬುತ್ತಾರೆ. ಇಂತಹ ಸಂದರ್ಭದಲ್ಲಿ, ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಎಡತಾಕಿ, ಗರ್ಭಪಾತ ಮಾಡಿಸುವಂತೆ ವೈದ್ಯರಿಗೆ ದುಂಬಾಲು ಬೀಳುವುದು ಸಾಮಾನ್ಯ ಸಂಗತಿಯೇ ಆಗಿದೆ.
ಈ ಆಧುನಿಕ ಯುಗದಲ್ಲಿ ಸಂತಾನ ನಿಯಂತ್ರಣಕ್ಕೆ ಸಂಬಂಧಿಸಿದ ಹಲವಾರು ವಿಧಾನಗಳ ‘ಆಯ್ಕೆಯ ಬುಟ್ಟಿ’ಯೇ ಇಂದು ನಮ್ಮೆದುರಿಗಿದೆ. ಆದರೆ ಲಿಂಗಾಧಾರಿತ ಅಡೆತಡೆಗಳು, ಸೂಕ್ತ ವಿಧಾನದ ಆಯ್ಕೆಯಲ್ಲಿ ಹಿನ್ನಡೆ, ಸೇವೆಯ ಅಲಭ್ಯತೆ, ಅರಿವಿನ ಕೊರತೆಯಂತಹ ಕಾರಣಗಳಿಂದ ಇಂದು ವಿಶ್ವದಲ್ಲಿ 25 ಕೋಟಿಗೂ ಹೆಚ್ಚು ಮಹಿಳೆಯರು ತೊಂದರೆಗೆ ಒಳಗಾಗುತ್ತಿದ್ದಾರೆ. ಇದು ಮಾತೃಮರಣ ಹಾಗೂ ಶಿಶುಮರಣ ಪ್ರಮಾಣದ ಹೆಚ್ಚಳಕ್ಕೂ ಕಾರಣವಾಗುತ್ತಿದೆ.
ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಸ್ತ್ರೀ-ಪುರುಷ ಇಬ್ಬರ ಪಾತ್ರವೂ ಇರುತ್ತದಾದರೂ ಸಂತಾನನಿಯಂತ್ರಣ ಕ್ರಮಗಳನ್ನು ಅನುಸರಿಸುವಲ್ಲಿ ಇಂತಹ ಭಾಗವಹಿಸುವಿಕೆ ನಿರೀಕ್ಷಿತ ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಅರಿವಿನ ಕೊರತೆಯಿಂದಲೋ ಪುರುಷಪ್ರಧಾನ ವ್ಯವಸ್ಥೆಯ ಭಾಗವಾಗಿಯೋ ಮಹಿಳೆಯರೇ ಸಂತಾನನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗುತ್ತದೆ. ಈ ಬಗ್ಗೆ ಅರಿವು ಮೂಡಿಸಲು ‘ವಿಶ್ವ ಸಂತಾನ ನಿಯಂತ್ರಣ ಜಾಗೃತಿ ದಿನ’ವನ್ನು ವರ್ಷಂಪ್ರತಿ ಸೆಪ್ಟೆಂಬರ್ 26ರಂದು ಆಚರಿಸಲಾಗುತ್ತದೆ. ಆದರೂ ಸುರಕ್ಷಿತ ಗರ್ಭನಿರೋಧಕ ಕ್ರಮಗಳನ್ನು ಅನುಸರಿಸುವಲ್ಲಿ ಬಹುತೇಕರು ವಿಫಲರಾಗುತ್ತಿದ್ದಾರೆ. ಇದರಿಂದ ಗರ್ಭಪಾತ, ಎರಡು ಗರ್ಭಧಾರಣೆಗಳ ನಡುವೆ ಅಗತ್ಯ ಅಂತರ ಇಲ್ಲದಿರುವುದು ಕಂಡುಬರುತ್ತದೆ. ಇದರ ಫಲವಾಗಿ ತಾಯಿಯಲ್ಲಿ ರಕ್ತಹೀನತೆ, ಅಕಾಲಿಕ ಶಿಶುಜನನ, ಸ್ತನ್ಯಪಾನ ಮಾಡಿಸುವಲ್ಲಿ ವೈಫಲ್ಯದಂತಹವು ಸಾಮಾನ್ಯವಾಗಿ ಕಾಡುವ ಪಿಡುಗುಗಳಾಗಿಯೇ ಮುಂದುವರಿದಿವೆ.
ಸಿಸೇರಿಯನ್ ಹೆರಿಗೆಯು ಇತ್ತೀಚಿನ ದಿನಗಳಲ್ಲಿ ಸಹಜ ಮತ್ತು ಅನಿವಾರ್ಯ ಎಂಬಂತಾಗಿದೆ. ಇಂತಹ ಸ್ಥಿತಿಯಲ್ಲಿ, ಸಿಸೇರಿಯನ್ ಮೂಲಕ ಆಗುವ ಎರಡನೇ ಹೆರಿಗೆಯ ಜೊತೆಯಲ್ಲೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನೂ (ಟ್ಯುಬೆಕ್ಟಮಿ) ಮಾಡಿಬಿಡುವಂತೆ ವೈದ್ಯರನ್ನು ಒತ್ತಾಯಿಸುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಕೆಲವರು, ಮೊದಲನೆಯದು ನಾರ್ಮಲ್ ಹೆರಿಗೆಯಾಗಿದ್ದರೂ ಎರಡನೆಯ ಹೆರಿಗೆಗೆ ‘ಸಿಸೇರಿಯನ್ ಮಾಡಿ, ಜೊತೆಗೆ ಮಕ್ಕಳಾಗದ ಹಾಗೆ ಆಪರೇಷನ್ ಅನ್ನೂ ತಕ್ಷಣವೇ ಮಾಡಿಬಿಡಿ. ಇಲ್ಲದಿದ್ದರೆ ಟ್ಯುಬೆಕ್ಟಮಿ ಮಾಡಿಸಿಕೊಂಡಾಗ ಮತ್ತೆ ವಿಶ್ರಾಂತಿ ಪಡೆಯಬೇಕಾಗುತ್ತದೆ. ಅದಕ್ಕೆಲ್ಲಾ ಸಮಯ ಇರುವುದಿಲ್ಲ. ಬಾಂಣತನದಲ್ಲಿಯೇ ಒಟ್ಟಿಗೆ ಎಲ್ಲಾ ಮುಗಿದುಹೋದರೆ ರೆಸ್ಟ್‌ನಲ್ಲಿ ರೆಸ್ಟ್ ಆಗಿಹೋಗುತ್ತದೆ’ ಎಂದು ಕೇಳಿಕೊಳ್ಳುತ್ತಾರೆ.
ಕೆಲವು ಹೆಣ್ಣುಮಕ್ಕಳಿಗಂತೂ ಮೊದಲನೇ ಮಗು ಒಂದೆರಡು ವರ್ಷದ ಒಳಗಿದ್ದಾಗಲೇ ಇನ್ನೊಂದು ಮಗು ಆಗಿರುತ್ತದೆ. ಒಂದುವೇಳೆ ಎರಡನೇ ಮಗುವಿಗೆ ಹೃದ್ರೋಗದಂಥ ಜನ್ಮಜಾತ ಕಾಯಿಲೆ ಇದ್ದರೆ ಅಥವಾ ಚಯಾಪಚಯಕ್ಕೆ ಸಂಬಂಧಿಸಿದ ಸಮಸ್ಯೆಯೇನಾದರೂ ಇದ್ದರೆ, ಹೆರಿಗೆಯಾದ ಆರಂಭದ ದಿನಗಳಲ್ಲೇ ಅದನ್ನು ಪತ್ತೆ ಹಚ್ಚುವುದು ಅಸಾಧ್ಯ. ತಾಯಿಗೆ ವ್ಯಾಸೆಕ್ಟಮಿ ಆದ ನಂತರ ಶ್ವಾಸಕೋಶದ ಸೋಂಕು, ಕರುಳಿನ ಸೋಂಕಿನಂತಹ ಕಾರಣಗಳಿಂದ ಮಗು ತೀರಿಹೋದ ಎಷ್ಟೋ ಪ್ರಕರಣಗಳಿವೆ. ಆಗ ಮತ್ತೆ ಮಗು ಹೊಂದಲು ಸಾಧ್ಯವಾಗುವಂತೆ ಗರ್ಭನಾಳ ಮರುಜೋಡಣೆಯ ಶಸ್ತ್ರಚಿಕಿತ್ಸೆ ಮಾಡುವಂತೆ ಕೇಳಿಕೊಳ್ಳುವವರೂ ಇದ್ದಾರೆ.
ಕೆಲವೊಮ್ಮೆ ಹೆರಿಗೆಯಾದ ತಕ್ಷಣ ಮಗು ಚೆನ್ನಾಗಿ ಅಳದೇ ಇದ್ದಾಗ ಅಥವಾ ಗರ್ಭದೊಳಗೆ ಮಲವನ್ನು ತಿಂದಿದ್ದಾಗ ಮುಂದೆ ಮಗುವಿಗೆ ಆಗಬಹುದಾದ ತೊಂದರೆಗಳ ಬಗ್ಗೆ ತಕ್ಷಣವೇ ಹೇಳುವುದು ವೈದ್ಯರಿಗೂ ಕಷ್ಟದ ಸಂಗತಿಯೇ ಆಗಿರುತ್ತದೆ. ಹೀಗಾಗಿ, ಸಿಸೇರಿಯನ್ ಹೆರಿಗೆಯೊಟ್ಟಿಗೆ ಟ್ಯುಬೆಕ್ಟಮಿಯನ್ನೂ ಮಾಡಿಬಿಡುವಂತೆ ವೈದ್ಯರನ್ನು ಒತ್ತಾಯಿಸುವುದು, ವ್ಯೆದ್ಯರು ಕೂಡ ಒತ್ತಾಯಕ್ಕೆ ಮಣಿದು ತತ್‍ಕ್ಷಣವೇ ಎರಡೂ ಶಸ್ತ್ರಚಿಕಿತ್ಸೆಗಳನ್ನು ಒಟ್ಟಿಗೇ ಮಾಡಿ ಆಮೇಲೆ ಪಶ್ಚಾತ್ತಾಪ ಪಡುವುದೂ ಇದೆ.
ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ತಂದುಕೊಳ್ಳುವ ಬದಲು, ತಾತ್ಕಾಲಿಕವಾಗಿ ಸೂಕ್ತ ಸಂತಾನ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು. ನಂತರ ನಿಧಾನವಾಗಿ, ಅಂದರೆ ಮಗುವಿಗೆ ಒಂದೆರಡು ವರ್ಷಗಳಾದ ಬಳಿಕ, ಶಾಶ್ವತ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇಲ್ಲವೇ ಪುರುಷರಲ್ಲಿ ಕಾಂಡೋಮ್ ಬಳಕೆ ಅಥವಾ ಶಾಶ್ವತ ಸಂತಾನಶಕ್ತಿ ನಿಯಂತ್ರಣ ಕ್ರಮವಾದ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಉತ್ತೇಜಿಸುವಂತಹ ಕಾರ್ಯಗಳು ಆಗಬೇಕು.
ಹೀಗೆ ಮಾಡುವ ಬದಲು ‘ಗುಂಪಿನಲ್ಲಿ ಗೋವಿಂದ’ ಎನ್ನುವಂತೆ, ಬಾಣಂತನದ ವಿಶ್ರಾಂತಿಯಲ್ಲಿಯೇ ಟ್ಯುಬೆಕ್ಟಮಿಯ ವಿಶ್ರಾಂತಿಯೂ ಸೇರಿಹೋಗಲಿ ಎಂದುಕೊಂಡು ವೈದ್ಯರ ಮೇಲೆ ಒತ್ತಡ ಹೇರುವುದು, ತಾವೂ ಒತ್ತಡಕ್ಕೆ ಒಳಗಾಗುವುದು ಸರಿಯಲ್ಲ. ಸೂಕ್ತ ಸಂತಾನಶಕ್ತಿ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡಾಗ ಮಾತೃಮರಣ, ಶಿಶುಮರಣ ಪ್ರಮಾಣ ಎರಡೂ ಕಡಿಮೆಯಾಗಿ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ.
ಪ್ರತಿ ವ್ಯಕ್ತಿಯೂ ತನ್ನ ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ತನ್ನ ಕುಟುಂಬ ನಿಯಂತ್ರಣ ವ್ಯವಸ್ಥೆಯನ್ನು ಯೋಜಿಸಲು ಸ್ವಾತಂತ್ರ್ಯ ಹೊಂದಿರಬೇಕು. ಆರೋಗ್ಯಕರ ಕುಟುಂಬವು ಆಯ್ಕೆಯಿಂದಾಗಿಯೇ ವಿನಾ ಆಕಸ್ಮಿಕವಾಗಿ ಅಲ್ಲ ಎಂಬುದನ್ನು ಅರಿಯಬೇಕು.
ಸದಾ ಮಹಿಳೆಯರೇ ಸಂತಾನನಿಯಂತ್ರಣ ಕ್ರಮಕ್ಕೆ ಒಳಗಾಗುವ ಬದಲು, ಪುರುಷರು ಸಾಧ್ಯವಾದಷ್ಟೂ ಕಾಂಡೋಮ್ ಬಳಕೆ ಅಥವಾ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲು ಮುಂದಾಗಬೇಕು
ಪುರುಷರಲ್ಲಿ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಯು ಅತ್ಯಂತ ಸರಳ, ಸುರಕ್ಷಿತ ಹಾಗೂ ಹೊರರೋಗಿಯಾಗಿಯೇ ಮಾಡಿಸಿಕೊಳ್ಳಬಹುದಾದ ಸಂತಾನನಿಯಂತ್ರಣ ವಿಧಾನ. ಆದರೂ ಶೇ 2ಕ್ಕಿಂತ ಕಡಿಮೆ ಪುರುಷರು ಈ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಏಕೆಂದರೆ, ಇದರಿಂದ ಪುರುಷತ್ವವೇ ಕಡಿಮೆಯಾಗುತ್ತದೆ ಎಂಬ ತಪ್ಪುಕಲ್ಪನೆ ಹಲವರಲ್ಲಿ ಇದೆ ಮತ್ತು ಮಹಿಳೆಯರಲ್ಲಿ ಇಂತಹ ಭಾವನೆ ಇನ್ನೂ ಹೆಚ್ಚಾಗಿಯೇ ಬೇರೂರಿದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ.
ತಾತ್ಕಾಲಿಕ ಸಂತಾನನಿಯಂತ್ರಣ-ಹೀಗೆಲ್ಲಾ ಸಾಧ್ಯ
ತಾತ್ಕಾಲಿಕ ಸಂತಾನನಿಯಂತ್ರಣ ಕ್ರಮವಾಗಿ ಬಳಸಬಹುದಾದ ಅತ್ಯುತ್ತಮ ಸಾಧನ ಕಾಪರ್– ಟಿ. ಇದನ್ನು ಗರ್ಭಕೋಶದ ಒಳಗೆ ಅಳವಡಿಸುತ್ತಾರೆ. ಹೆರಿಗೆಯಾದ ತಕ್ಷಣ ಅಥವಾ ನಾಲ್ಕಾರು ವಾರಗಳ ನಂತರ ಅಳವಡಿಸಬಹುದು. ಇದು ಅತ್ಯಂತ ಸುರಕ್ಷಿತ ವಿಧಾನವಾದರೂ ಕಾಪರ್– ಟಿ ಎದೆಗೇರುತ್ತದೆ, ಹೊಟ್ಟೆಯೊಳಗೆ ಹೋಗಿಬಿಡುತ್ತದೆ ಎಂಬಂತಹ ತಪ್ಪುಕಲ್ಪನೆ ಹಲವರಲ್ಲಿ ಇದೆ.
ಮೂರು ತಿಂಗಳಿಗೊಮ್ಮೆ ಹಾಕಬಹುದಾದ, ಸರ್ಕಾರದಿಂದ ಉಚಿತವಾಗಿ ಕೊಡಲಾಗುವ ಪ್ರೊಜೆಸ್ಟಿರಾನ್ ಡಿಪೋಟ್ ಇಂಜೆಕ್ಷನ್ ಇಲ್ಲವೇ ಅತ್ಯಾಧುನಿಕ ವಿಧಾನವಾದ, ಚರ್ಮದ ಕೆಳಗೆ ಅಳವಡಿಸುವ ‘ಹಾರ್ಮೋನ್ ಪ್ಯಾಚ್’ನಂತಹ ವಿಧಾನಗಳು ಗರ್ಭಧಾರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಸೂಕ್ತ ವಿಧಾನಗಳಾಗಿವೆ. ಸಂತಾನ ನಿಯಂತ್ರಣ ಗುಳಿಗೆಗಳೂ ಸರ್ಕಾರದಿಂದ ಉಚಿತವಾಗಿ ಸಿಗುತ್ತವೆ. ವೈದ್ಯರ ಸಲಹೆಯ ಮೇರೆಗೆ ಇವುಗಳನ್ನು ಬಳಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.